ಸಿಎಂ ಭಗವಂತ್ ಸಿಂಗ್ ಮಾನ್ 
ದೇಶ

ಪಂಜಾಬ್ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆಯಲ್ಲಿ ಗೆದ್ದ ಸಿಎಂ ಭಗವಂತ್ ಮಾನ್ | CM Bhagwant Mann

ಚಂಢೀಗಡ: ಶುಕ್ರವಾರ(ಮೇ 01) ಪಂಜಾಬ್ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಸಿಎಂ ಭಗವಂತ್ ಸಿಂಗ್ ಮಾನ್(CM Bhagwant Mann) ನೇತೃತ್ವದ ಆಪ್​ ಸರ್ಕಾರ ನಿರ್ಣಾಯಕ ಗೆಲುವು ಸಾಧಿಸಿದೆ. ಗೆಲುವು ಪಕ್ಷದೊಳಗಿನ ಅಸ್ಥಿರತೆಯ ಬಗ್ಗೆ ಇದ್ದ ಊಹಾಪೋಹಗಳಿಗೆ ಅಂತ್ಯ ಹಾಡಿದೆ.
ರಾಜ್ಯಸಭೆಯಲ್ಲಿ ಏಳು ಎಎಪಿ ಸದಸ್ಯರು ಭಾರತೀಯ ಜನತಾ ಪಕ್ಷಕ್ಕೆ ಪಕ್ಷಾಂತರಗೊಂಡು ಹಿನ್ನಡೆ ಅನುಭವಿಸಿದ ಕೆಲವು ದಿನಗಳ ನಂತರ, ಇಂದು ಒಂದು ದಿನದ ವಿಶೇಷ ಅಧಿವೇಶನದಲ್ಲಿ ಸಿಎಂ ವಿಶ್ವಾಸಮತಯಾಚನೆಯ ನಿರ್ಣಯವನ್ನು ಮಂಡಿಸಿದ್ದರು. ಮತ್ತು ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಪ್ರಸ್ತಾವನೆಯನ್ನು ಮಂಡಿಸಿ ಮಾತನಾಡಿರುವ ಸಿಎಂ ಮಾನ್, ಪಕ್ಷದಲ್ಲಿ ಆಂತರಿಕ ಬಿರುಕುಗಳಿವೆ ಎಂಬ ಹೇಳಿಕೆಗಳನ್ನು ತಿರಸ್ಕರಿಸಿದ್ದು, ಅವು ದಾರಿತಪ್ಪಿಸುವಂತಿವೆ. ಮತ್ತು ಸಾರ್ವಜನಿಕರಲ್ಲಿ ಗೊಂದಲವನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ. ಪಂಜಾಬ್, ದೆಹಲಿ, ಗುಜರಾತ್, ಗೋವಾ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ಪಕ್ಷ ಬೆಳೆಯುತ್ತಿದೆ. ಇದಲ್ಲದೆ,​ ವಿವಿಧ ಸ್ಥಳಗಳಲ್ಲಿ ಮೇಯರ್‌ಗಳು, ಕೌನ್ಸಿಲರ್‌ಗಳು, ಸರಪಂಚರಿದ್ದಾರೆ. ಜೊತೆಗೆ ಪಕ್ಷವು ರಾಷ್ಟ್ರೀಯ ಅಸ್ತಿತ್ವವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ಆಡಳಿತ ಪಕ್ಷವು ಎಲ್ಲಾ ಶಾಸಕರಿಗೆ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಭಾಗವಹಿಸುವಂತೆ ವಿಪ್ ಜಾರಿ ಮಾಡಿತ್ತು. 117 ಸದಸ್ಯ ಬಲದ ವಿಧಾನಸಭೆಯಲ್ಲಿ ಎಎಪಿ 94 ಶಾಸಕರಿಂದ ಬಲವಾದ ಬಹುಮತವನ್ನು ಹೊಂದಿದ್ರೆ, ಕಾಂಗ್ರೆಸ್ 16 ಸ್ಥಾನಗಳನ್ನು, ಶಿರೋಮಣಿ ಅಕಾಲಿ ದಳ ಮೂರು, ಬಿಜೆಪಿ ಎರಡು, ಬಿಎಸ್ಪಿ ಒಂದು ಹಾಗೂ ಓರ್ವ ಪಕ್ಷೇತರ ಶಾಸಕರಿದ್ದಾರೆ.
ಏಪ್ರಿಲ್ 24 ರಂದು ಎಎಪಿಯ 10 ರಾಜ್ಯಸಭಾ ಸಂಸದರಲ್ಲಿ ಏಳು ಮಂದಿ ರಾಘವ್ ಛಡ್ಡಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್, ಹರ್ಭಜನ್ ಸಿಂಗ್, ರಾಜೇಂದ್ರ ಗುಪ್ತಾ, ವಿಕ್ರಮಜಿತ್ ಸಹ್ನಿ ಮತ್ತು ಸ್ವಾತಿ ಮಲಿವಾಲ್ - ಪಕ್ಷವನ್ನು ತೊರೆದು ಬಿಜೆಪಿಯೊಂದಿಗೆ ವಿಲೀನಗೊಂಡಾಗ ಪಕ್ಷದಲ್ಲಿ ಆಂತರಿಕವಾಗಿ ಏನೂ ಸರಿಯಿಲ್ಲ, ಹಲವು ಶಾಸಕರು ಬಿಜೆಪಿ ಸೇರಲಿದ್ದಾರೆ ಎನ್ನಲಾಗಿತ್ತು (ಏಜೆನ್ಸೀಸ್).