ಮೃತ ಬಾಲಕಿ ಸಾಯಿಪ್ರಿಯಾ (16)
- ತಾಳ್ಮೆಯಿಂದ ಕಾಯದ ಬಾಲಕಿ ದುರಂತ ಅಂತ್ಯ
- ಎಲ್ಲಿ ಫೇಲಾಗ್ತಿನೋ ಎಂದು ಹೆದರಿ ಆತ್ಮಹತ್ಯೆಗೆ ಶರಣು
- 10ನೇ ತರಗತಿ ಫಲಿತಾಂಶಕ್ಕೆ ಒಂದು ವಾರ ಇರುವಂತೆ ಬದುಕಿಗೆ ಫುಲ್ಸ್ಟಾಪ್ ಹಾಕಿದ ಬಾಲಕಿ
ತೆಲಂಗಾಣ: ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿದ್ದರೂ ಕೆಲವು ವಿದ್ಯಾರ್ಥಿಗಳಿಗೆ ಭಯದ ಭೀತಿ ತಾರಕಕ್ಕೇರಿರುತ್ತದೆ. ಎಲ್ಲಿ ನಾವು ಫೇಲ್ ಆಗಿ ಬಿಡ್ತೀವೋ? ಅನುತ್ತೀರ್ಣರಾದರೆ ಹೆತ್ತವರಿಗೆ ಏನು ಹೇಳೋದು? ಹೇಗೆ ಮುಖ ತೋರಿಸುವುದು ಎಂಬ ಭಯ ತಮ್ಮಲ್ಲೇ ಕಾಡುತ್ತಿರುತ್ತದೆ. ಬಹುತೇಕರು ಇದಕ್ಕೆಲ್ಲ ಕ್ಯಾರೇ ಎನ್ನದೆ, ಫಲಿತಾಂಶ ಬಂದ ಮೇಲೆ ನೋಡಿಕೊಳ್ಳೋಣ ಎಂದು ಸಮ್ಮನಾಗುತ್ತಾರೆ. ಆದರೆ, ಕೆಲವು ಕೆಲವು ವಿದ್ಯಾರ್ಥಿಗಳು ಪೋಷಕರು ಮತ್ತು ಸಮಾಜಕ್ಕೆ ಹೆದರಿ ತಮ್ಮ ಜೀವವನ್ನೇ ಅಂತ್ಯಗೊಳಿಸುವ ಕೆಟ್ಟ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಇಲ್ಲೊಬ್ಬಳು ಬಾಲಕಿ ಕೂಡ ಅದೇ ತಪ್ಪನ್ನು ಮಾಡಿದ್ದಾಳೆ.
ತನ್ನ ಪೋಷಕರು ಮತ್ತು ಸಂಬಂಧಿಕರನ್ನು ಎದುರಿಸಲಾಗದ ಈ ಬಾಲಕಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಬರುವ ಮುನ್ನವೇ ದುಡುಕಿ ಸಾಯುವ ನಿರ್ಧಾರ ಕೈಗೊಂಡಿದ್ದು, ಸದ್ಯ ಹೆತ್ತವರನ್ನು ಕಣ್ಣೀರಿನಲ್ಲಿ ಕೈತೊಳೆಸುತ್ತಿದೆ. ಈ ದುರಂತ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ವರದಿಯಾಗಿದೆ. ರಿಸಲ್ಟ್ ಪ್ರಕಟವಾಗುವ ಮೊದಲು, ಎಲ್ಲಿ ತಾನು ಫೇಲ್ ಆಗುತ್ತೇನೋ ಎಂಬ ಭಯದಿಂದ ಬಾಲಕಿ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸಾವಿಗೆ ಶರಣಾಗಿದ್ದಾಳೆ.
ಇಲ್ಲಿ ಅತ್ಯಂತ ದುಃಖಕರ ವಿಷಯವೆಂದರೆ, ನಿನ್ನೆ (ಏ.29) ಪ್ರಕಟವಾದ ತೆಲಂಗಾಣದ 10ನೇ ತರಗತಿಯ ಫಲಿತಾಂಶದಲ್ಲಿ ಅದೇ ಸಾವಿಗೀಡಾದ ಬಾಲಕಿ, ಬರೋಬ್ಬರಿ 480 ಅಂಕಗಳನ್ನು ಪಡೆದು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ. ಈ ವಿಷಯ ತಿಳಿದ ಬಾಲಕಿಯ ಪೋಷಕರು, ಸ್ವಲ್ಪ ಸಮಯ ತಾಳ್ಮೆಯಿಂದ ಕಾದಿದ್ದರೆ, ಈ ದುರಂತ ಸಂಭವಿಸುತ್ತಿರಲಿಲ್ಲ ಎಂದು ಗೋಳಾಡುತ್ತಿದ್ದಾರೆ.
ಬಾಲಕಿಯನ್ನು ಥಾಂಡಾದ ಬನೋತ್ ಸಾಯಿಪ್ರಿಯಾ (16) ಎಂದು ಗುರುತಿಸಲಾಗಿದೆ. ತನ್ನ 10ನೇ ತರಗತಿ ಪರೀಕ್ಷೆಗಳನ್ನು ಬರೆದು, ಎಲ್ಲ ವಿದ್ಯಾರ್ಥಿಗಳಂತೆಯೇ ತಾನು ಫಲಿತಾಂಶಕ್ಕಾಗಿ ಕಾಯುತ್ತಿದ್ದಳು. ಆದರೆ, ಕೆಲವು ಪರೀಕ್ಷೆಗಳನ್ನು ಸರಿಯಾಗಿ ಬರೆಯದ ಕಾರಣ ಅವಳಲ್ಲಿ ಫೇಲ್ ಆಗುವ ಬಗ್ಗೆ ಚಿಂತೆ ಕಾಡತೊಡಗಿತು. ಈ ನಿಟ್ಟಿನಲ್ಲಿ, ಎಲ್ಲಿ ತಾನು ಅನುತ್ತೀರ್ಣಳಾದರೆ, ಹೆತ್ತವರಿಗೆ ಮುಖ ತೋರಿಸುವುದು ಹೇಗೆ ಎಂದು ಹೆದರಿ ಸಾಯಿಪ್ರಿಯಾ ಕೆಟ್ಟ ನಿರ್ಧಾರ ಕೈಗೊಂಡಿದ್ದು ನಿಜಕ್ಕೂ ದುಃಖಕರ ಸಂಗತಿ,(ಏಜೆನ್ಸೀಸ್).