ದೇಶ

ಪೊಲೀಸರ ಮನವಿ ತಿರಸ್ಕೃತ, ತಿಹಾರ್ ಜೈಲಿನಿಂದ ದಾಸ್, ರಾಂಕಾ ಬಿಡುಗಡೆ!...ನ್ಯಾಯಾಲಯಕ್ಕೆ ಜಿರಳೆಗಳು ನೀಡಿದ ಭರವಸೆ ಏನು...? | CJP Leaders Released

ನವದೆಹಲಿ: ಇಲ್ಲಿನ ನ್ಯಾಯಾಲಯದ ಆದೇಶದ ಮೇರೆಗೆ, ಕಾಕ್ರೋಚ್​ ಜನತಾ ಪಕ್ಷದ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಸಾರ್ವಜನಿಕ ಶಾಂತಿ ಕಾಪಾಡುವ ಹಾಗೂ ಕಾನೂನನ್ನು ಗೌರವಿಸುವ ಕುರಿತು ಲಿಖಿತ ಭರವಸೆ ನೀಡಿ ತಿಹಾರ್ ಜೈಲಿನಿಂದ (CJP Leaders Released) ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಇವರ 7 ದಿನಗಳ ನ್ಯಾಯಾಂಗ ಬಂಧನದ ಅವಧಿ ಅಧಿಕೃತವಾಗಿ ಅಂತ್ಯಗೊಂಡಿದೆ.

ನವದೆಹಲಿ: ಇಲ್ಲಿನ ನ್ಯಾಯಾಲಯದ ಆದೇಶದ ಮೇರೆಗೆ, ಕಾಕ್ರೋಚ್​ ಜನತಾ ಪಕ್ಷದ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಸಾರ್ವಜನಿಕ ಶಾಂತಿ ಕಾಪಾಡುವ ಹಾಗೂ ಕಾನೂನನ್ನು ಗೌರವಿಸುವ ಕುರಿತು ಲಿಖಿತ ಭರವಸೆ ನೀಡಿ ತಿಹಾರ್ ಜೈಲಿನಿಂದ (CJP Leaders Released) ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಇವರ 7 ದಿನಗಳ ನ್ಯಾಯಾಂಗ ಬಂಧನದ ಅವಧಿ ಅಧಿಕೃತವಾಗಿ ಅಂತ್ಯಗೊಂಡಿದೆ.

ಜೈಲು ಸಂಖ್ಯೆ 4ರಲ್ಲಿ ಅಶುತೋಷ್ ರಾಂಕಾ ಹಾಗೂ ಜೈಲು ಸಂಖ್ಯೆ 2ರಲ್ಲಿ ಸೌರವ್ ದಾಸ್ ಅವರನ್ನು ಬಂಧನದಲ್ಲಿಡಲಾಗಿತ್ತು. ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರು ಪೊಲೀಸರ ಮೂರು ದಿನಗಳ ಹೆಚ್ಚುವರಿ ಬಂಧನದ ಕೋರಿಕೆಯನ್ನು ತಿರಸ್ಕರಿಸಿ, ತಲಾ 50,000 ರೂ.ಗಳ ವೈಯಕ್ತಿಕ ಹಾಗೂ ಶ್ಯೂರಿಟಿ ಬಾಂಡ್‌ಗಳ ಮೇಲೆ ಬಿಡುಗಡೆಗೆ ಆದೇಶಿಸಿದರು.

ಜೈಲು ಶಿಕ್ಷೆ ವಿಧಿಸಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆಯಿಂದ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ಘನತೆಗೆ ಧಕ್ಕೆಯಾಗಿದೆ ಎಂಬ ಆರೋಪವಿತ್ತು. ಇದಕ್ಕೆ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಬೇಷರತ್ತಾಗಿ ಮೌಖಿಕ ಕ್ಷಮೆ ಕೋರಿದರು. ಜೊತೆಗೆ, ಇನ್ನು ಮುಂದೆ ಸಾರ್ವಜನಿಕ ಶಾಂತಿಗೆ ಭಂಗ ತರುವ ಯಾವುದೇ ಕೆಲಸ ಮಾಡುವುದಿಲ್ಲವೆಂದು ಸ್ವಯಂಪ್ರೇರಿತರಾಗಿ ಲಿಖಿತ ಮುಚ್ಚಳಿಕೆ ನೀಡಿದರು. ತಾವು ನ್ಯಾಯಾಂಗವನ್ನು ಸಂಪೂರ್ಣವಾಗಿ ಗೌರವಿಸುವುದಾಗಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದಾಗಿ ಕೋರ್ಟ್‌ಗೆ ಭರವಸೆ ನೀಡಿದರು.

ಕಾನೂನು ಪ್ರಕ್ರಿಯೆಯ ಮೂಲಕ ಜಂತರ್ ಮಂತರ್ ಪ್ರದೇಶವನ್ನು ಸೂಚಿತ ಪಟ್ಟಿಯಿಂದ ತೆಗೆದುಹಾಕುವವರೆಗೆ ಅಲ್ಲಿ ಯಾವುದೇ ಪ್ರತಿಭಟನೆಗಳಿಗೆ ಕರೆ ನೀಡುವುದಿಲ್ಲ ಎಂದು ಅವರು ತಿಳಿಸಿದರು. ಅಲ್ಲದೆ, ಭವಿಷ್ಯದ ಎಲ್ಲಾ ಪ್ರತಿಭಟನೆಗಳು ಸಂವಿಧಾನಿಕ ಚೌಕಟ್ಟಿನೊಳಗೆಯೇ ಇರುತ್ತವೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ:ಪ್ರತಿಭಟನೆ ಹಿಂಸೆಯ ರೂಪಕ್ಕೆ ತಿರುಗಿದರೆ ಹೀಗೇ ಆಗೋದು: ಸಿಜೆಪಿ ವಿಚಾರಣೆ ವೇಳೆ ಫ್ರಾನ್ಸ್ ಗಲಭೆ ಉಲ್ಲೇಖಿಸಿದ ದೆಹಲಿ ಹೈಕೋರ್ಟ್! | Delhi High Court

ಪೊಲೀಸ್ ಮನವಿ ತಿರಸ್ಕೃತ

ಎಲ್ಲಾ ವಾದ-ಪ್ರತಿವಾದಗಳನ್ನು ಪರಿಗಣಿಸಿದ ಮ್ಯಾಜಿಸ್ಟ್ರೇಟ್, ಈ ಹಂತದಲ್ಲಿ ಅವರನ್ನು ಹೆಚ್ಚಿನ ನ್ಯಾಯಾಂಗ ಬಂಧನದಲ್ಲಿಡುವುದು ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 135(3) ರ ಅಡಿಯಲ್ಲಿ ಬಾಂಡ್‌ಗಳು ಮತ್ತು ಲಿಖಿತ ಭರವಸೆಗಳ ಮೂಲಕ ಮುನ್ನೆಚ್ಚರಿಕಾ ಉದ್ದೇಶವನ್ನು ಈಡೇರಿಸಿಕೊಳ್ಳಬಹುದು ಎಂದು ನ್ಯಾಯಾಲಯ ತಿಳಿಸಿತು. ಅದರಂತೆ ಪೊಲೀಸರ ಮನವಿಯನ್ನು ತಿರಸ್ಕರಿಸಲಾಯಿತು.

ಪ್ರಕ್ರಿಯೆಗಳ ಪೂರ್ಣಗೊಳಿಸುವಿಕೆಗೆ ಒಳಪಟ್ಟು, ತಲಾ 50,000 ರೂ.ಗಳ ವೈಯಕ್ತಿಕ ಹಾಗೂ ಶ್ಯೂರಿಟಿ ಬಾಂಡ್‌ಗಳ ಮೇಲೆ ಬಿಡುಗಡೆ ಮಾಡಲು ಆದೇಶಿಸಲಾಯಿತು. ಜಾಮೀನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಜೈಲು ಅಧೀಕ್ಷಕರಿಗೆ ಬಿಡುಗಡೆ ವಾರಂಟ್ ನೀಡುವಂತೆ ಸೂಚಿಸಲಾಯಿತು. ಮುಂದಿನ ವಿಚಾರಣೆಯು ಶುಕ್ರವಾರ (ಅಕ್ಟೋಬರ್ 23) ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಶ್ಯೂರಿಟಿಗಳ ದಾಖಲೆಗಳ ಪರಿಶೀಲನಾ ವರದಿಯನ್ನು ತನಿಖಾಧಿಕಾರಿಗಳು ಸಲ್ಲಿಸಬೇಕು ಹಾಗೂ ಸಿಜೆಪಿ ನಾಯಕರು ಮತ್ತು ಶ್ಯೂರಿಟಿಗಳು ತಪ್ಪದೆ ಪ್ರತಿ ವಿಚಾರಣೆಗೆ ಹಾಜರಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಬಂಧನದ ಹಿನ್ನೆಲೆ ಏನು...?

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಗೂ ಮುನ್ನ ಅಕ್ಟೋಬರ್ 10 ರಂದು ಸೌರವ್ ದಾಸ್, ಅಶುತೋಷ್ ರಾಂಕಾ ಹಾಗೂ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಒಂದು ವರ್ಷದವರೆಗೆ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು.

ಆದರೆ, ಅಕ್ಟೋಬರ್ 13 ರಂದು ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರು ಪ್ರತಿಭಟನಾ ಸ್ಥಳವಾಗಿ ರದ್ದುಪಡಿಸಲಾಗಿದ್ದ ಜಂತರ್ ಮಂತರ್‌ನ ಲಾಕ್ ಮಾಡಲಿದ್ದ ಗೇಟ್ ಅನ್ನು ಹತ್ತಿ ಒಳನುಗ್ಗಲು ಯತ್ನಿಸಿದರು. ರಾಷ್ಟ್ರಧ್ವಜ ಹಾರಿಸಿ ಘೋಷಣೆ ಕೂಗಿದ ಇವರನ್ನು ಮತ್ತೆ ಬಂಧಿಸಿ ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಅಕ್ಟೋಬರ್ 19 ರಂದು ಇವರ ಬಂಧನಾವಧಿಯನ್ನು ಅಕ್ಟೋಬರ್ 21 ರವರೆಗೆ ವಿಸ್ತರಿಸಲಾಗಿತ್ತು.

ಬಂಧನ ವಿಸ್ತರಣೆಯನ್ನು ವಿರೋಧಿಸಿ ಮಂಗಳವಾರ ತಡರಾತ್ರಿಯೇ ತುರ್ತು ವಿಚಾರಣೆ ಕೋರಿ ಸಿಜೆಪಿ ನಾಯಕರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಸೌರವ್ ಮತ್ತು ಅಶುತೋಷ್ ಕೇವಲ ರಾಜಕೀಯ ಕಾರಣಗಳಿಗಾಗಿ ಜೈಲಿನಲ್ಲಿ ಕಾಲ ಕಳೆಯುವಂತಾಗಬಾರದು ಎಂದು ಸಿಜೆಪಿ ಕಾನೂನು ಘಟಕದ ಮುಖ್ಯಸ್ಥೆ ರತ್ನ ಸಿಂಗ್ ಎಕ್ಸ್ ತಮ್ಮ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ನ್ಯಾಯಾಲಯದ ಸೂಚನೆಯಂತೆ ರಾಂಕಾ ಮತ್ತು ದಾಸ್​ ತಮ್ಮ ಅರ್ಜಿಯನ್ನು ಹಿಂಪಡೆದಿದ್ದಾರೆ(ಏಜೆನ್ಸೀಸ್).