ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ನೀಟ್ ಪರೀಕ್ಷೆ ಅಕ್ರಮದ ಹೊಣೆಗಾರಿಕೆ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಿಜೆಪಿಯ ಆಯೋಜಿಸಿರುವ ಚಲೋ ಸಂಸತ್ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್, ಹೋರಾಟಗಾರರ ಮೇಲೆ ಪೊಲೀಸರು ಮಾಡಿದ ಲಾಠಿ ಚಾರ್ಜ್ ಅನ್ನು ಖಂಡಿಸಿದೆ.
ರಾಜ್ಯಸಭೆಯಲ್ಲಿ ಲಾಠಿ ಚಾರ್ಜ್ ವಿಷಯವನ್ನು ಎತ್ತಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಜೆಪಿ ಪ್ರತಿಭಟನೆಯನ್ನು ಹತ್ತಿಕ್ಕಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದರು. ನಾನು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದೇನೆ. ಅದಕ್ಕಾಗಿ ಸಾವಿರಾರು ಮಕ್ಕಳು ಜಂತರ್ ಮಂತರ್‌ಗೆ ಬಂದಿದ್ದಾರೆ. ಲಾಠಿ ಚಾರ್ಜ್ ಮಾಡಲಾಗಿದೆ. ಸರ್ಕಾರ ಅವರನ್ನು ನೋಯಿಸಲು ಪ್ರಯತ್ನಿಸುತ್ತಿದೆ. ಅವರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಸಂಸತ್ ಹೊರಗೆ ಮಾತನಾಡಿದ ಅವರು, ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಈ ಸರ್ಕಾರವು ಅಧಿಕಾರದಲ್ಲಿ ಮುಂದುವರಿಯಲು ಅರ್ಹತೆಹೊಂದಿಲ್ಲ. ನಾವು ಅಯೋಧ್ಯೆ ರಾಮಮಂದಿರದ ದೇಣಿಗೆಯ ಕಳ್ಳತನದ ವಿಷಯವನ್ನೂ ಪ್ರಸ್ತಾಪಿಸಿದ್ದೇವೆ. ಮೋದಿ ಸಾಹೇಬರೇ ಇದಕ್ಕೆ ಹೊಣೆಗಾರಿಕೆಯನ್ನು ಹೊರಬೇಕು, ಏಕೆಂದರೆ ಟ್ರಸ್ಟ್ ಅನ್ನು ರಚಿಸಿದವರೇ ಅವರು ಎಂದು ವಾಗ್ದಾಳಿ ನಡೆಸಿದ್ದಾರೆ.
ಅಶ್ರುವಾಯು ಪ್ರಯೋಗ
ಧರ್ಮೇಂಧ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಸಂಸತ್ ಚಲೋ ನಡೆಸಿದ ವೇಳೆ, ಸಂಸತ್ತಿನ ಸುತ್ತಮುತ್ತಲಿನ ಹೈ-ಸೆಕ್ಯುರಿಟಿ ವಲಯದಲ್ಲಿ ಭಾರೀ ಭದ್ರತಾ ವ್ಯವಸ್ಥೆಗಳ ನಡುವೆ ಸಾವಿರಾರು ಪ್ರತಿಭಟನಾಕಾರರು ಜಮಾಯಿಸಿದ್ದರಿಂದ, ಜಂತರ್ ಮಂತರ್, ಕನ್ನಾಟ್ ಪ್ಲೇಸ್, ರೈಲ್ ಭವನ, ಶಾಸ್ತ್ರಿ ಭವನ ಮತ್ತು ಜನಪಥ್‌ನ ಕೆಲವು ಭಾಗಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು.
ಬ್ಯಾರಿಕೇಡ್‌ಗಳನ್ನು ಪ್ರತಿಭಟನಾಕಾರರು ಭೇದಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಹಲವಾರು ಪ್ರತಿಭಟನಾಕಾರರು ಮತ್ತು ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ವೇಳೆ ಗುಂಪು ಚದುರಿಸಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮತ್ತು ಅಶ್ರುಪ್ರಯೋಗ ಮಾಡಿದ್ದಾರೆ (ಏಜೆನ್ಸೀಸ್).