ತಿರಂಗಾ ಯಾತ್ರಾ ಪ್ರತಿಭಟನೆಗೂ ಮುನ್ನ ನೇಹಾ ಬೋರಾ, ದೀಪ್ಕೆ ಬಂಧನ.
ಶನಿವಾರ ಮುಂಜಾನೆ ನೇಹಾ ಬೋರಾರನ್ನು ರಿಲೀಸ್ ಮಾಡಿದ ಪೊಲೀಸರು.
ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಜನರನ್ನು ಅಪರಾಧಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ನೇಹಾ ಆರೋಪ.
AISA Chief Neha Bora Released Over Protests In Delhi: 'ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜನ ಸಾಮಾನ್ಯರನ್ನು ಘೋರ ಅಪರಾಧಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಹಿಂದಿನಿಂದಲೂ ಬಂದಿರುವ ದುಸ್ಥಿತಿ ಇದಾಗಿದೆ' ಎಂದು ಅಖಿಲ ದೆಹಲಿ ಪೊಲೀಸರಿಂದ ಬಿಡುಗಡೆಗೊಂಡ ಬಳಿಕ ಭಾರತ ವಿದ್ಯಾರ್ಥಿ ಸಂಘಟನೆ ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ ಶನಿವಾರ ಆರೋಪಿಸಿದರು.
ದೆಹಲಿಯ ಕನ್ನಾಟ್ ಪ್ಲೇಸ್ನಲ್ಲಿ ಶುಕ್ರವಾರ ನಿಗದಿಯಾಗಿದ್ದ ತಿರಂಗಾ ಯಾತ್ರಾ ಪ್ರತಿಭಟನೆಗೂ ಮುನ್ನ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ, ನೇಹಾ ಬೋರಾ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡಿಸಿಕೊಂಡರು. ಅಭಿಜಿತ್ ದೀಪ್ಕೆ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿ ಪೊಲೀಸ್ ವಶದಲ್ಲಿಡಲಾಗಿದೆ. ಇಂದು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್ಇಎಂ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ದೆಹಲಿ ಪೊಲೀಸ್ ಕಾಯಿದೆಯ ಸೆಕ್ಷನ್ 65ರ ಅಡಿಯಲ್ಲಿ ವಶಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ನೇಹಾ ಬೋರಾ ಅವರನ್ನು ಇಂದು ಮುಂಜಾನೆ ಬಿಡುಗಡೆಗೊಳಿಸಲಾಯಿತು. ಆನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನೇಹಾ ಬೋರಾ, 'ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನನ್ನ ವಕೀಲರನ್ನು ಭೇಟಿ ಮಾಡಲು ಬಿಡಲಿಲ್ಲ. ಜನರನ್ನು ಮನಬಂದಂತೆ ಬಂಧಿಸಿ, ಮುಂಜಾನೆ ಬಿಡುಗಡೆ ಮಾಡುವ ಅಧಿಕಾರ ಇವರಿಗೆ ಕೊಟ್ಟಿದ್ಯಾರು' ಎಂದು ನೇಹಾ ಬೋರಾ ಗುಡುಗಿದರು.
'ಪ್ರತಿಭಟನಾಕಾರರನ್ನು ಯಾವುದೇ ಸಮರ್ಥನೀಯ ಕಾರಣವಿಲ್ಲದೆ ಗಂಟೆಗಟ್ಟಲೆ ವಶದಲ್ಲಿಟ್ಟುಕೊಳ್ಳುವ ಪ್ರಕ್ರಿಯೆ ದೇಶದಲ್ಲಿ ದೀರ್ಘಕಾಲದಿಂದ ನಡೆಯುತ್ತಿದೆ ಎಂದು ಕಿಡಿಕಾರಿದರು. ಸಾಮಾನ್ಯ ನಾಗರಿಕರಲ್ಲಿ ಭಯದ ವಾತಾವರಣ ಸೃಷ್ಟಿಸಲು ಇಂತಹ ಅಕ್ರಮ ಬಂಧನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದು ಇಂದು ನನಗೆ ಸ್ಪಷ್ಟವಾಯಿತು. ಮತದಾನದ ಹಕ್ಕು ಮತ್ತು ಸರ್ಕಾರದ ಉತ್ತಮವಾದ ಜವಾಬ್ದಾರಿಯನ್ನು ಪ್ರಶ್ನಿಸುವ ಸರಳ ನಾಗರಿಕರನ್ನು ಈ ರೀತಿ ರಾತ್ರಿ ಪೂರ್ತಿ ಪೊಲೀಸ್ ಠಾಣೆಯಲ್ಲಿ ಬಂಧಿಸಿಡುವುದಕ್ಕೆ ಯಾವುದೇ ಸಮರ್ಥನೆಯಿಲ್ಲ' ಎಂದು ಕಿಡಿಕಾರಿದರು.
ಕಾನೂನಿನ ಪ್ರಕಾರ ರಾತ್ರಿ ವೇಳೆ ಮಹಿಳೆಯರನ್ನು ಪೊಲೀಸರ ವಶದಲ್ಲಿರುವಂತಿಲ್ಲ. ಆದರೆ ಇಲ್ಲಿ ನನ್ನನ್ನು ರಾತ್ರಿಯಿಡೀ ಇರಿಸಿಕೊಂಡಿದ್ದಾರೆ. ದೆಹಲಿ ಪೊಲೀಸರು ಬಹಿರಂಗವಾಗಿ ಕಾನೂನು ಉಲ್ಲಂಘಿಸಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ. ಜನ ಸಾಮಾನ್ಯ ನೆಮ್ಮದಿಯಾಗಿ ಬದುಕಲಾಗುತ್ತಿಲ್ಲ. ಯಾವ ಮಾರ್ಗದಲ್ಲಿ ಹೋದರು ಬಂದ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ನನ್ನನ್ನು ವಶಕ್ಕೆ ಪಡೆದುಕೊಂಡ ಬಳಿಕ ದೆಹಲಿ ಪೊಲೀಸರು ನನ್ನಿಂದ ಒತ್ತಾಯ ಪೂರ್ವಕವಾಗಿ ನನ್ನ ಹೆಸರು, ವಿಳಾಸ ಸೇರಿದಂತೆ ಇತರೆ ವಿವರಗಳನ್ನು ತೆಗೆದುಕೊಂಡರು. ವಕೀಲರ ಜೊತೆ ಮಾತನಾಡಲು ಬಿಡಲಿಲ್ಲ. 5-6 ಗಂಟೆಗಳ ಕಾಲ ಯತ್ನಿಸಿದ ಬಳಿಕವಷ್ಟೇ ಭೇಟಿಗೆ ಅವಕಾಶ ಸಿಕ್ಕಿತು ಎಂದಿದ್ದಾರೆ
ಅಭಿಜಿತ್ ದೀಪ್ಕೆ ಅವರ ಇರುವಿಕೆಯ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲವೆಂದೂ, ಅವರನ್ನು ಅಪರಿಚಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದೂ ಸಿಜೆಪಿ ಕಾನೂನು ಮುಖ್ಯಸ್ಥೆ ರತ್ನಾ ಸಿಂಗ್ ಆರೋಪಿಸಿದ್ದಾರೆ. ವಕೀಲರಿಗೂ ಅವರನ್ನು ಭೇಟಿಯಾಗಲು ಬಿಡುತ್ತಿಲ್ಲ ಎಂದು ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಆರಂಭದಲ್ಲಿ ಸಿಜೆಪಿಯು ದೀಪ್ಕೆ ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ದೂರಿದ್ದರೆ, ಎಐಎಸ್ಎ ಸಂಸ್ಥೆಯು ನೇಹಾ ಬೋರಾ ಅವರನ್ನು ಮಂಗಳಪುರಿಯ ಮಾದಕವಸ್ತು ನಿಗ್ರಹ ದಳದ ಕಚೇರಿಯಲ್ಲಿ ಏಕಾಂಗಿಯಾಗಿ ಬಂಧಿಸಿಡಲಾಗಿತ್ತು ಎಂದು ಆರೋಪಿಸಿತ್ತು, (ಏಜೆನ್ಸೀಸ್)