ನವದೆಹಲಿ: ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ 'ಕಾಕ್ರೋಚ್ ಜನತಾ ಪಾರ್ಟಿ' (CJP)ಯ ನಾಯಕರ ಬಂಧನ ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಂಡಿದೆ. ಸಿಜೆಪಿಯ ಪ್ರಮುಖ ನಾಯಕ ಅಶುತೋಷ್ ರಂಕಾ ( Ashutosh Ranka ) ತನ್ನ ಹುಟ್ಟುಹಬ್ಬವನ್ನು ಇದೀಗ ಜೈಲಿನ ನಾಲ್ಕು ಗೋಡೆಗಳ ನಡುವೆ ಆಚರಿಸುವಂತಾಗಿದೆ.
ದೆಹಲಿಯ ಜಂತರ್ ಮಂತರ್ ಪ್ರದೇಶವನ್ನು ಪ್ರತಿಭಟನೆಗೆ ಮೀಸಲಾದ ಸ್ಥಳವಲ್ಲ ಎಂದು ಅಧಿಕೃತ ಘೋಷಣೆ ಮಾಡಲಾಗಿದ್ದರೂ, ಅದನ್ನು ಲೆಕ್ಕಿಸದೆ ಅಲ್ಲಿಗೆ ನುಗ್ಗಿ ಪ್ರತಿಭಟನೆ ನಡೆಸಲು ಯತ್ನಿಸಿದ ಕಾಕ್ರೋಚ್ ಜನತಾ ಪಾರ್ಟಿಯ (CJP) ಪ್ರಮುಖ ನಾಯಕರಾದ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಶಾಂತಿಭಂಗ ಹಾಗೂ ನಿಷೇಧಾಜ್ಞೆ ಉಲ್ಲಂಘನೆ ಆರೋಪದಡಿ ಬಂಧಿತರಾದ ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ ಐದು ದಿನಗಳ ನ್ಯಾಯಾಂಗ ಬಂಧನ ವಿಧಿಸಿ ತಿಹಾರ್ ಜೈಲಿಗೆ ಕಳುಹಿಸಿದೆ. ಇದರಿಂದಾಗಿ ಸಿಜೆಪಿ ನಾಯಕ ಅಶುತೋಷ್ ರಂಕಾ ಅವರು ತಮ್ಮ ಹುಟ್ಟುಹಬ್ಬದ ವಿಶೇಷ ದಿನವನ್ನು ಬಂಧನದಲ್ಲಿದ್ದುಕೊಂಡೇ ಕಳೆಯುವಂತಾಗಿದೆ.
ತಮ್ಮ ಆಪ್ತ ಗೆಳೆಯರು ಹಾಗೂ ಪಕ್ಷದ ನಾಯಕರು ಜೈಲು ಸೇರಿರುವ ಕುರಿತು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಭಾವುಕರಾಗಿದ್ದಾರೆ. ಯಾವುದೇ ಕಷ್ಟದ ಪರಿಸ್ಥಿತಿಯಲ್ಲೂ ಅಶುತೋಷ್ ರಂಕಾ ಅವರ ಧೈರ್ಯ ಮತ್ತು ಶಾಂತ ಸ್ವಭಾವ ತಮಗೆ ದೊಡ್ಡ ಸ್ಪೂರ್ತಿ ಎಂದು ಸ್ಮರಿಸಿಕೊಂಡಿರುವ ಅವರು, ಸೆರೆವಾಸದಲ್ಲೂ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಾಗಿ ಬಂದಿರುವುದು ತನ್ನ ಎದೆ ಒಡೆಯುವಂತೆ ಮಾಡಿದೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಯಾವುದೇ ನಾಯಕತ್ವ ಅಥವಾ ಸ್ವಾರ್ಥವಿಲ್ಲದೆ ಜನರಿಗಾಗಿ ನಿಲ್ಲುವ ಇಂತಹ ಗೆಳೆಯರು ಸಿಗಲು ಭಾಗ್ಯ ಮಾಡಿರಬೇಕು ಎಂದು ಕೊಂಡಾಡಿದ್ದಾರೆ.
ತಿರಂಗ ಧ್ವಜ ಹಿಡಿದು 'ಭಾರತ ಮಾತಾ ಕೀ ಜೈ' ಘೋಷಣೆ ಕೂಗಿದ CJP ನಾಯಕರಾದ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರನ್ನು ಜೈಲಿಗೆ ಕಳುಹಿಸಿರುವುದು ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯಾಗಿದ್ದು, ಅಶುತೋಷ್ ಹುಟ್ಟುಹಬ್ಬದಂದೇ ಈ ಅನ್ಯಾಯ ನಡೆದಿರುವುದು ಮೂಲಭೂತ ಹಕ್ಕುಗಳ ಧಮನವಾಗಿದೆ ಎಂದು CJP ನಾಯಕ ಅಜಿಂಕ್ಯ ಶಿಂಡೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ದಬ್ಬಳಿಕೆಗೆ ನಾವೆಂದಿಗೂ ಹೆದರುವುದಿಲ್ಲ, ನಮ್ಮ ನಾಯಕರು ತಲೆ ಎತ್ತಿ ಜೈಲಿಗೆ ಪ್ರವೇಶಿಸಿದ್ದು, ಈ ಸರ್ವಾಧಿಕಾರಿ ಸರ್ಕಾರದ ವಿರುದ್ಧ ಹೋರಾಡಲು ದೇಶದ ಜನರೆಲ್ಲರೂ ಒಂದಾಗಬೇಕೆಂದು ಅವರು ಕರೆ ನೀಡಿದ್ದಾರೆ.
ಸರ್ಕಾರದ ದಮನಕಾರಿ ನೀತಿಗಳ ವಿರುದ್ಧ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ತಮ್ಮ ನಾಯಕರನ್ನು ಅನ್ಯಾಯವಾಗಿ ಬಂಧಿಸಲಾಗಿದೆ ಎಂದು CJP ಪಕ್ಷ ಗಂಭೀರವಾಗಿ ಆರೋಪಿಸಿದೆ. ಜಂತರ್ ಮಂತರ್ನಲ್ಲಿ ಧ್ವಜ ಹಿಡಿದು ಪ್ರತಿಭಟಿಸಲು ಹೋದರೆ ಇಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕಿಡಿಕಾರಿರುವ ಪಕ್ಷದ ನಾಯಕರು, ಪ್ರಜಾಪ್ರಭುತ್ವದಲ್ಲಿ ಧ್ವನಿಯನ್ನು ಅಡಗಿಸಲು ನೋಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಂಧನವು ರಾಷ್ಟ್ರ ರಾಜಕಾರಣದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ, (ಏಜೆನ್ಸೀಸ್).