ಬೆಂಗಳೂರು: ದೇಶದ ಯುವಜನರಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ವ್ಯಂಗ್ಯಚಿತ್ರಾತ್ಮಕ (Satirical) ರಾಜಕೀಯ ಚಳವಳಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ಈಗ ಸರಣಿ ಸೈಬರ್ ದಾಳಿ ಹಾಗೂ ನಿರ್ಬಂಧಗಳಿಗೆ ಒಳಗಾಗಿದೆ. ಭಾರತದಲ್ಲಿ ಈ ಪಕ್ಷದ ಅಧಿಕೃತ 'ಎಕ್ಸ್' (ಟ್ವಿಟರ್) ಖಾತೆಯನ್ನು ಕಾನೂನು ಕಾರಣಗಳ ಅಡಿಯಲ್ಲಿ ನಿರ್ಬಂಧಿಸಿದ (Withheld) ಕೆಲವೇ ಗಂಟೆಗಳಲ್ಲಿ, ಈಗ ಅದರ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲು ಯತ್ನಿಸಲಾಗುತ್ತಿದೆ ಎಂದು ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಗಂಭೀರ ಆರೋಪ ಮಾಡಿದ್ದಾರೆ.
ಏನಿದು ಹ್ಯಾಕಿಂಗ್ ಆರೋಪ?
ಟ್ವಿಟರ್‌ನಲ್ಲಿ ಖಾತೆ ಬ್ಲಾಕ್ ಆದ ಬೆನ್ನಲ್ಲೇ ಇನ್‌ಸ್ಟಾಗ್ರಾಮ್ ಖಾತೆಯನ್ನೂ ಹ್ಯಾಕ್ ಮಾಡುವ ಯತ್ನಗಳು ನಡೆದಿವೆ ಎಂದು ಡಿಜಿಟಲ್ ಹೋರಾಟಗಾರ ಅಭಿಜೀತ್ ದಿಪ್ಕೆ ತಿಳಿಸಿದ್ದಾರೆ. ಮೆಟಾ (Meta) ಸಂಸ್ಥೆಯಿಂದ ತಮಗೆ ಬಂದಿರುವ ಲಾಗಿನ್ ಸಮಸ್ಯೆಯ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಅವರು, "ಪಾಸ್‌ವರ್ಡ್ ಮರೆತುಹೋಗಿದೆ ಎಂದು ಯಾರೋ ಲಾಗಿನ್ ಮಾಡಲು ಯತ್ನಿಸುತ್ತಿದ್ದಾರೆ. ನಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ" ಎಂದು ಟ್ವೀಟ್ ಮಾಡಿದ್ದಾರೆ. ಕೇವಲ 20-21 ವರ್ಷದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಈ ರೀತಿಯ ಹೇಡಿತನದ ಕೆಲಸ ಮಾಡಲಾಗುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಮೋದಿ ಯುವಕರಿಗೆ ಹೆದರುತ್ತಿದ್ದಾರೆಯೇ?
ಈ ಕುರಿತು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅಭಿಜೀತ್ ದಿಪ್ಕೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ತಮ್ಮನ್ನು 'ವಿಶ್ವಗುರು' ಎಂದು ಕರೆದುಕೊಳ್ಳುವವರು ಕೇವಲ ಜೋಕ್ ಮಾಡುವ ಯುವಕರಿಗೆ ಯಾಕೆ ಹೆದರುತ್ತಿದ್ದಾರೆ? ಚೀನಾ ನಮ್ಮ ಗಡಿಯೊಳಗೆ ನುಗ್ಗಿದಾಗ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ, ಕೇವಲ ಹಾಸ್ಯ ಮಾಡುವ ಯುವಕರ ಅಕೌಂಟ್‌ಗಳನ್ನು ಹ್ಯಾಕ್ ಮಾಡಲು ಮತ್ತು ನಿರ್ಬಂಧಿಸಲು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ" ಎಂದು ಅವರು ಆರೋಪಿಸಿದ್ದಾರೆ. ಈ ಚಳವಳಿ ಕೇವಲ ಒಂದು ಸಾಮಾಜಿಕ ಜಾಲತಾಣದ ಖಾತೆಗೆ ಸೀಮಿತವಾಗಿಲ್ಲ, ಇದು ಲಕ್ಷಾಂತರ ಯುವಕರ ಧ್ವನಿಯಾಗಿದೆ ಎಂದು ಅವರು ಗುಡುಗಿದ್ದಾರೆ.
ಬಿಜೆಪಿ ಹಿಂದಿಕ್ಕಿದ 'ಕಾಕ್ರೋಚ್' ವೇಗ
ಕೇವಲ ನಾಲ್ಕೇ ದಿನಗಳ ಹಿಂದೆ ಆರಂಭವಾದ ಕಾಕ್ರೋಚ್ ಜನತಾ ಪಾರ್ಟಿ ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ಅಲೆ ಎಬ್ಬಿಸಿದೆ. ಕೆಲವೇ ದಿನಗಳಲ್ಲಿ ಈ ಖಾತೆಯು ಕೋಟಿಗೂ ಅಧಿಕ (10 ಮಿಲಿಯನ್) ಫಾಲೋವರ್ಸ್ ಹೊಂದುವ ಮೂಲಕ ಭಾರತೀಯ ಜನತಾ ಪಕ್ಷದ (BJP) ಅಧಿಕೃತ ಇನ್‌ಸ್ಟಾಗ್ರಾಮ್ ಫಾಲೋವರ್ಸ್ (8.7 ಮಿಲಿಯನ್) ಸಂಖ್ಯೆಯನ್ನು ದಾಟಿ ಮುನ್ನಡೆದಿತ್ತು. ಈ ಭಾರಿ ಜನಪ್ರಿಯತೆಯೇ ಡಿಜಿಟಲ್ ದಾಳಿಗಳಿಗೆ ಕಾರಣ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತದಲ್ಲಿ ಎಕ್ಸ್ ಖಾತೆ ಬ್ಲಾಕ್ ಆದ ತಕ್ಷಣ ಅಭಿಜೀತ್ "ಓನ್ ಗೋಲ್" (ಸ್ವಂತ ಗೋಲು) ಎಂದು ಲೇವಡಿ ಮಾಡಿದ್ದಾರಲ್ಲದೆ, 'ಕಾಕ್ರೋಚ್ ಈಸ್ ಬ್ಯಾಕ್' ಎಂಬ ಹೊಸ ಖಾತೆಯನ್ನು ತೆರೆದಿದ್ದಾರೆ. "ಜಿರಳೆಗಳು ಎಂದಿಗೂ ಸಾಯುವುದಿಲ್ಲ" ಎಂಬ ಸ್ಲೋಗನ್‌ನೊಂದಿಗೆ ಆರಂಭವಾದ ಈ ಹೊಸ ಖಾತೆಗೆ ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರು ಫಾಲೋ ಮಾಡಿದ್ದಾರೆ.
ಚಳವಳಿಯ ಹಿನ್ನೆಲೆ ಏನು?
ಸುಪ್ರೀಂ ಕೋರ್ಟ್ ವಿಚಾರಣೆಯೊಂದರಲ್ಲಿ ಮುಖ್ಯ ನ್ಯಾಯಮೂರ್ತಿಗಳು ನಿರುದ್ಯೋಗಿ ಯುವಕರನ್ನು ವ್ಯವಸ್ಥೆಗೆ ಮುತ್ತಿಕೊಳ್ಳುವ 'ಜಿರಳೆಗಳು' (ಕಾಕ್ರೋಚ್) ಮತ್ತು 'ಪರಾವಲಂಬಿಗಳು' ಎಂದು ಹೋಲಿಸಿದ್ದರು ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಡಿಜಿಟಲ್ ಪ್ರತಿಭಟನೆ ಶುರುವಾಗಿತ್ತು. ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಪೇಪರ್ ಲೀಕ್ ಹಗರಣಗಳು ಮತ್ತು ಯುವಕರ ಆಕ್ರೋಶವನ್ನು ವ್ಯಂಗ್ಯಚಿತ್ರ (Memes) ಹಾಗೂ ಹಾಸ್ಯದ ಮೂಲಕ ವ್ಯಕ್ತಪಡಿಸಲು ಅಭಿಜೀತ್ ದಿಪ್ಕೆ ಈ 'ಕಾಕ್ರೋಚ್ ಜನತಾ ಪಾರ್ಟಿ'ಯನ್ನು ಹುಟ್ಟುಹಾಕಿದರು. "ಯುವಕರಿಂದ, ಯುವಕರಿಗಾಗಿ, ಯುವಕರಿಗೋಸ್ಕರ" ಇರುವ ಈ ಪಕ್ಷವು ಧರ್ಮನಿರಪೇಕ್ಷ, ಸಮಾಜವಾದಿ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಹಾಸ್ಯದ ಧಾಟಿಯಲ್ಲಿ ಪ್ರತಿಪಾದಿಸುತ್ತಿದೆ. ಸದ್ಯಕ್ಕಂತೂ ಈ ಡಿಜಿಟಲ್ ಜಿರೆಳೆಗಳ ಆರ್ಭಟಕ್ಕೆ ಇಡೀ ದೇಶದ ರಾಜಕೀಯ ವಲಯ ಬೆರಗಾಗಿದೆ,(ಏಜೆನ್ಸೀಸ್).