CJP | ಸೆಪ್ಟೆಂಬರ್ 5ರ ಬೃಹತ್ ಪ್ರತಿಭಟನಾ ಮೆರವಣಿಗೆ ರದ್ದುಗೊಳಿಸಿದ ಸಿಜೆಪಿ
ನವದೆಹಲಿ: ಇಲ್ಲಿನ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಹೋರಾಟಗಾರರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 5 ರಂದು ಇಂಡಿಯಾ ಗೇಟ್‌ನಿಂದ ದೆಹಲಿ ಪೊಲೀಸ್ ಪ್ರಧಾನ ಕಚೇರಿಯವರೆಗೆ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ಕಾಕ್ರೋಚ್ ಜನತಾ ಪಾರ್ಟಿ (CJP) ರದ್ದುಗೊಳಿಸಿದೆ.
ಈ ಕುರಿತು ಮಾತನಾಡಿದ ಸಿಜೆಪಿ ಸಹ-ಸಂಚಾಲಕ ಸೌರವ್ ದಾಸ್, ಭಾರತ ಸರ್ಕಾರದ ಧನಾತ್ಮಕ ಭರವಸೆಗಳು, ನ್ಯಾಯಾಂಗದ ಪವಿತ್ರತೆ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪರಿಗಣಿಸಿ, ಸೆಪ್ಟೆಂಬರ್ 5 ರಂದು ನಿಗದಿಯಾಗಿದ್ದ ಮೆರವಣಿಗೆಯ ಕರೆಯನ್ನು ಹಿಂಪಡೆಯುವುದು ಸೂಕ್ತವೆಂದು ಪಕ್ಷ ಭಾವಿಸುತ್ತದೆ. ಅಲ್ಲದೆ ಇಂದಿನ ನ್ಯಾಯಾಲಯದ ಆದೇಶ ಸಂಪೂರ್ಣವಾಗಿ ಪಾಲನೆಯಾಗಲಿದೆ ಎಂದು ನಿರೀಕ್ಷಿಸುತ್ತದೆ ಎಂದು ತಿಳಿಸಿದ್ದಾರೆ.
ಸಿಜೆಪಿ ಕೈಗೊಂಡ ಈ ನಿರ್ಧಾರವನ್ನು ಶ್ಲಾಘಿಸಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ಎರಡೂ ಕಡೆಯವರು ಪರಸ್ಪರ ನಂಬಿಕೆಯಿಂದ ನಡೆದುಕೊಂಡರೆ ಎಲ್ಲಾ ಸಮಸ್ಯೆಗಳನ್ನು ಒಂದೊಂದಾಗಿ ಪರಿಹರಿಸಬಹುದು. ಮುಕ್ತ ಮನಸ್ಸಿನಿಂದ ಚರ್ಚಿಸಿದರೆ ಜಗತ್ತಿನಲ್ಲಿ ಬಗೆಹರಿಯದ ವಿಷಯ ಯಾವುದು ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಫ್‌ಐಆರ್ ರದ್ದುಗೊಳಿಸಲು ನಿರ್ಧಾರ!
ವಿದ್ಯಾರ್ಥಿ ಪ್ರತಿಭಟನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ಹಾಗೂ ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ರಾಜ್ಯಗಳು ಅರ್ಜಿ ಸಲ್ಲಿಸಿವೆ ಎಂದು ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪೀಠಕ್ಕೆ ತಿಳಿಸಿದ್ದಾರೆ. ಜುಲೈ 20 ರಿಂದ ಜುಲೈ 25 ರವರೆಗೆ ನಡೆದ ಪ್ರತಿಭಟನಾ ಘಟನೆಗಳಿಗೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಯಾವುದೇ ಹೊಸ ಎಫ್‌ಐಆರ್ ದಾಖಲಿಸುವುದಿಲ್ಲ ಎಂದು ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ.
ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಮೂರು ತಿಂಗಳೊಳಗೆ ನೀತಿಯೊಂದನ್ನು ರೂಪಿಸಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಜುಲೈ 25 ರಂದು ನೀಡಿದ್ದ ಭರವಸೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸಿಜೆಪಿ ಈ ಹಿಂದೆ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿತ್ತು. ದೆಹಲಿ ಮತ್ತು ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳಲ್ಲಿ ಪ್ರತಿಭಟನಾಕಾರರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯಲು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡ ನೀಟ್ ಅಭ್ಯರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡಲು ಸರ್ಕಾರ ಒಪ್ಪಿಕೊಂಡಿತ್ತು. ಆದರೆ ಸರ್ಕಾರ ಈ ಭರವಸೆಗಳನ್ನು ಈಡೇರಿಸಿಲ್ಲ ಎಂದು ಪಕ್ಷ ಆರೋಪಿಸಿತ್ತು.
ಅಭಿಜಿತ್ ದೀಪ್ಕೆ ನೇತೃತ್ವದ ಸಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯ ನಂತರ ಈ ಮೆರವಣಿಗೆಯನ್ನು ಘೋಷಿಸಲಾಗಿತ್ತು. ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಸ್ಥರು ಈ ಮೆರವಣಿಗೆಯ ನೇತೃತ್ವ ವಹಿಸಲು ಯೋಜನೆ ರೂಪಿಸಲಾಗಿತ್ತು.
ಸಿಜೆಪಿ ನಾಯಕರಿಗೆ ರಾಜಕೀಯ ಆಸೆ ಇರಬಹುದು ಎಂದಿದ್ದ: ಸೋನಮ್ ವಾಂಗ್ಚುಕ್
ಪ್ರಖರ್ ಗುಪ್ತಾ ಅವರ ದಿ ಪ್ರಖರ್ ಗುಪ್ತಾ ಎಕ್ಸ್‌ಪೀರಿಯನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸೋನಮ್ ವಾಂಗ್ಚುಕ್, ಅಭಿಜೀತ್ ದೀಪ್ಕೆ, ಕಾಕ್ರೋಚ್ ಜನತಾ ಪಾರ್ಟಿ ಮತ್ತು ತಮ್ಮ ಉಪವಾಸ ಸತ್ಯಾಗ್ರಹದ ಸಮಯದಲ್ಲಿ ರಾಹುಲ್ ಗಾಂಧಿ ವಹಿಸಬಹುದಾಗಿದ್ದ ಪಾತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ದೀಪ್ಕೆ ಮತ್ತು ಚಳವಳಿಯೊಂದಿಗೆ ಸಂಬಂಧ ಹೊಂದಿರುವ ಇತರ ಯುವಕರ ಬಗ್ಗೆ ಮಾತನಾಡಿದ ವಾಂಗ್ಚುಕ್, ಅವರ ಹಿಂದಿನ ರಾಜಕೀಯ ನಂಟನ್ನು ತಾವು ಒಂದು ಸಮಸ್ಯೆಯಾಗಿ ನೋಡುವುದಿಲ್ಲ ಎಂದು ಹೇಳಿದರು. ಹಿಂದೆ ಯಾವುದಾದರೂ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿರುವುದು ತಪ್ಪೇನೂ ಅಲ್ಲ ಎಂದರು.
ರಾಜಕೀಯವಾಗಿ ಹೇಳುವುದಾದರೆ, ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದು ತಪ್ಪು ಎಂದು ನಾನು ಭಾವಿಸುವುದಿಲ್ಲ. ಅವರು ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂದು ಜನರು ಮಾತನಾಡುವ ವಿಷಯಕ್ಕೆ ಬಂದರೆ, ಅವರಿಗೆ ರಾಜಕೀಯ ಆಸೆಗಳಿವೆ ಎಂದೇ ನಾನು ಭಾವಿಸುತ್ತೇನೆ. ನಾನು ಅವರನ್ನು ಅತ್ಯಂತ ಎಚ್ಚರಿಕೆಯಿಂದ ಗಮನಿಸಿದ್ದೇನೆ. ಅವರಿಗೆ ಖಂಡಿತವಾಗಿಯೂ ರಾಜಕೀಯ ಮಹತ್ವಾಕಾಂಕ್ಷೆಗಳು ಇರುತ್ತವೆ ಮತ್ತು ಇರಬೇಕು ಕೂಡ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ವಾಂಗ್ಚುಕ್ ಹೇಳಿದ್ದಾರೆ.
ಯುವ ನಾಯಕರಿಂದ ಯಾವುದೇ ರಾಜಕೀಯ ಆಸೆಗಳಿರಬಾರದು ಎಂದು ನಿರೀಕ್ಷಿಸಬಾರದು ಎಂದಿರುವ ವಾಂಗ್ಚುಕ್, ತಮಗಾಗಿ ಏನನ್ನೂ ಬಯಸದಿರಲು ಅವರೇನು ಸಂತರಲ್ಲ, ಖಂಡಿತವಾಗಿಯೂ ಅವರಿಗೆ ರಾಜಕೀಯ ಮಹತ್ವಾಕಾಂಕ್ಷೆಗಳಿರುತ್ತವೆ ಮತ್ತು ಇರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ(ಏಜೆನ್ಸೀಸ್).