CJP Ends Protests > ಜಂತರ್ ಮಂತರ್ ಪ್ರತಿಭಟನೆ ಅಂತ್ಯ!
ನವದೆಹಲಿ: ನೀಟ್ ಪರೀಕ್ಷಾ ಅಕ್ರಮಗಳ ಹಿನ್ನೆಲೆಯಲ್ಲಿ ಧರ್ಮೇಂದ್ರ ಪ್ರಧಾನ್ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಸರ್ಕಾರವು ವಿದ್ಯಾರ್ಥಿಗಳ ಎಲ್ಲಾ ಬೇಡಿಕೆಗಳನ್ನು ಸ್ವೀಕರಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕಾಕ್ರೋಚ್ ಜನತಾ ಪಾರ್ಟಿ ಶನಿವಾರ ತನ್ನ ಹೋರಾಟವನ್ನು ಹಿಂಪಡೆಯುವುದಾಗಿ (CJP Ends Protests) ಘೋಷಿಸಿದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ನೆರೆದಿದ್ದ ಪ್ರತಿಭಟನಾಕಾರರು ಶಾಂತಿಯುತವಾಗಿ ಜಾಗ ಖಾಲಿ ಮಾಡುವಂತೆ ಮನವಿ ಮಾಡಿದೆ.
ವಿದ್ಯಾರ್ಥಿ ಪಡೆಯ ನಿರಂತರ ಹೋರಾಟ ಹಾಗೂ ಕೇಂದ್ರ ಶಿಕ್ಷಣ ಸಚಿವರ ನಿರ್ಗಮನದ ನಂತರ, ಸರ್ಕಾರವು ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸಂಪೂರ್ಣ ಸಮ್ಮತಿ ಸೂಚಿಸಿದೆ. ಇದರಿಂದಾಗಿ ಹಲವು ವಾರಗಳಿಂದ ದೆಹಲಿಯಲ್ಲಿ ನಡೆಯುತ್ತಿದ್ದ ಬೃಹತ್ ವಿದ್ಯಾರ್ಥಿ ಆಂದೋಲನಕ್ಕೆ ಸುಖಾಂತ್ಯ ಸಿಕ್ಕಂತಾಗಿದೆ.
ರಾಷ್ಟ್ರ ರಾಜಧಾನಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ಕೇಂದ್ರ ಸಚಿವರಾದ ಜೆ ಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಕ್ರೋಚ್ ಜನತಾ ಪಾರ್ಟಿ ಮುಖ್ಯ ವಕ್ತಾರ ಸೌರವ್ ದಾಸ್, ದೆಹಲಿ ಸೇರಿದಂತೆ ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ಹಿಂಪಡೆಯಲು ಸರ್ಕಾರ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ. ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳ ಪ್ರತಿಗಳನ್ನು ಸರ್ಕಾರವು CJP ಯೊಂದಿಗೆ ಹಂಚಿಕೊಳ್ಳಲಿದೆ ಎಂದು ಸೌರವ್ ದಾಸ್ ತಿಳಿಸಿದರು.
ನಾವು ಸರ್ಕಾರದೊಂದಿಗೆ ಲಿಖಿತ ಅಭಯ ನೀಡುವ ಕರಡು ಪ್ರತಿಯನ್ನು ಹಂಚಿಕೊಂಡಿದ್ದೇವೆ. ಮಂಗಳವಾರದೊಳಗೆ ಇದನ್ನು ನಮ್ಮೊಂದಿಗೆ ಹಂಚಿಕೊಳ್ಳುವುದಾಗಿ ಸರ್ಕಾರ ಹೇಳಿದೆ. ಈ ಎಫ್‌ಐಆರ್‌ಗಳು ಮತ್ತು ಯಾವುದೇ ಮುಂದಿನ ಕ್ರಮಗಳಿಗೆ ಸಂಬಂಧಿಸಿದಂತೆ ಮಂಗಳವಾರದ ವೇಳೆಗೆ ಸರ್ಕಾರದ ಗ್ಯಾರಂಟಿ ನಮಗೆ ಸಿಗಲಿದೆ ಎಂಬ ಭರವಸೆಯಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ನೀಟ್ ಅಕ್ರಮದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂಬ ಮೂರನೇ ಪ್ರಮುಖ ಬೇಡಿಕೆಯ ಬಗ್ಗೆ ಮಾತನಾಡಿದ ಸಿಜೆಪಿ ರಾಷ್ಟ್ರೀಯ ವಕ್ತಾರ ಆಶುತೋಷ್ ರಾಂಕಾ, ಸರ್ಕಾರವು ಈ ಬೇಡಿಕೆಗೆ ಸಮ್ಮತಿಸಿದ್ದು, ನಿಯಮಗಳು ಮತ್ತು ನಿಬಂಧನೆಗಳು ಅನುಮತಿಸುವ ಆಧಾರದ ಮೇಲೆ ಗೌರವಯುತ ಪರಿಹಾರವನ್ನು ನೀಡಲಾಗುವುದು ಎಂದಿದ್ದಾರೆ. ಅಲ್ಲದೆ, ಶಿಕ್ಷಣ ಕ್ಷೇತ್ರದ ಸಮಗ್ರ ಸುಧಾರಣೆಗಳ ಬೇಡಿಕೆಗಳ ಕುರಿತು ಚರ್ಚಿಸಲು ಸಿಜೆಪಿ ಮತ್ತು ಸರ್ಕಾರದ ನಡುವೆ ಸುಮಾರು ನಾಲ್ಕು ವಾರಗಳಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ರಾಂಕಾ ತಿಳಿಸಿದ್ದಾರೆ(ಏಜೆನ್ಸೀಸ್).