ಆದರೆ, ಅಷ್ಟರಲ್ಲೇ ಕೆಲವು ವಾಹನ ಚಾಲಕರು, ಬೈಕ್ ಸವಾರರು ಅವಸರದಿಂದ ರಸ್ತೆಯಲ್ಲಿ ಮುಂದೆ ಸಾಗಿ ಬಂದ ಕಾರಣ ಅನಾವಶ್ಯಕವಾಗಿ ಟ್ರಾಫಿಕ್ ಜಾಮ್ ಆಗಿತ್ತು. ಆ ಇಕ್ಕಟ್ಟಿನ ಪರಿಸ್ಥಿತಿಯಿಂದ ಪಾರಾಗಿ ಬರಲು ಅರ್ಧ ಗಂಟೆಯೇ ಬೇಕಾಯಿತು. ಈ ಘಟನೆಗೆ ಮೂಲಕಾರಣ ಚಾಲಕನೊಬ್ಬ ರಸ್ತೆಯಲ್ಲಿಯೇ ವಾಹನ ನಿಲ್ಲಿಸಿ ಹೋಟೇಲ್ಗೆ ಚಹಾ ಕುಡಿಯಲು ಹೋಗಿದ್ದ. ಅದರ ಪಕ್ಕದಲ್ಲಿದ್ದ ವಾಹನ ತೆಗೆಯಲು ಸಾಧ್ಯವಾಗದ ಕಾರಣ ಜಗಳ ಏರ್ಪಟ್ಟು ಒಂದಷ್ಟು ಜನರಿಗೆ ಅನನುಕೂಲವಾಯಿತು. ನನಗಂತೂ ಸರಿಯಾದ ಸಮಯಕ್ಕೆ ಕಾರ್ಯಕ್ರಮಕ್ಕೆ ತಲುಪಲಾಗದೆ ಬಹಳಷ್ಟು ಬೇಸರವಾಯಿತು. ನನ್ನ ಹಾಗೆಯೇ ಅನೇಕರಿಗೆ ಸಮಸ್ಯೆಯಾಗಿದ್ದು ಸುಳ್ಳಲ್ಲ.
ನಾನು ಗಮನಿಸಿದಂತೆ ಇಂದಿನ ದಿನಗಳಲ್ಲಿ ಅನೇಕರು ತಮ್ಮ ಅನುಕೂಲ, ಇಷ್ಟ, ಕೆಲಸಗಳ ಬಗ್ಗೆ ಮಾತ್ರ ಗಮನ ವಹಿಸುತ್ತಾರೆ ಹೊರತು ಅದರಿಂದ ಇತರರಿಗೆ ತೊಂದರೆ ಆಗುತ್ತದೆಯೇ, ಏನಾದರೂ ಸಮಸ್ಯೆ ಉಂಟಾಗಬಹುದೇ ಎಂದು ಒಂಚೂರು ಯೋಚಿಸುವುದಿಲ್ಲ ಎಂದೆನಿಸುತ್ತದೆ. ಹೇಗೆಂದರೆ ತಮ್ಮ ಮನೆ ಅಂಗಳದ ಕಸವನ್ನು ಪಕ್ಕದ ಮನೆಯ ಕಾಂಪೌಂಡ್ ಒಳಗೆ ಸುರಿದಂತೆ. ನನ್ನ ಮನೆ, ಅಂಗಳ ಸ್ವಚ್ಛವಾಗಿದ್ದರೆ ಸಾಕು ಎಂಬ ಮನೋಭಾವದ ರೀತಿ. ಹೀಗೆ ಎಲ್ಲರೂ ನಾನು ಚೆನ್ನಾಗಿದ್ದರೆ ಸಾಕು, ನನ್ನ ಮನೆ, ಕಾರು, ಕುಟುಂಬ ಚೆನ್ನಾಗಿದ್ದರೆ ಸಾಕು ಎಂದು ಆಲೋಚಿಸಿದಾಗ ಅಲ್ಲಿ ಸ್ವಾರ್ಥ ಮಾತ್ರ ಹೊರತು ಬೇರೇನೂ ಉಳಿಯುವುದಿಲ್ಲ. ಇಂತಹ ಸ್ವಾರ್ಥದಿಂದ ಯಾವೊಂದು ಪ್ರಯೋಜನವೂ ಆಗುವುದಿಲ್ಲ.
ನಾವು ಸಮಾಜಜೀವಿಗಳು. ಏಕಾಂಗಿಯಾಗಿ ಬದುಕು ನಡೆಸಲು ನಮ್ಮಿಂದ ಸಾಧ್ಯವಿಲ್ಲ. ಕುಟುಂಬ, ಬಂಧು-ಬಳಗ, ಸ್ನೇಹಿತರು ಮತ್ತು ಸಮಾಜದಲ್ಲಿರುವ ಎಲ್ಲರ ಸಹಕಾರದಿಂದ ಜೀವನ ನಡೆಸಬೇಕು. ನಮ್ಮಲ್ಲಿ ಎಷ್ಟೇ ಹಣ, ಅಂತಸ್ತು, ಪ್ರತಿಭೆ, ಅಧಿಕಾರ ಇದ್ದರೂ ಸಮಾಜದ ಬೆಂಬಲವಿಲ್ಲದೆ ಸಂಪೂರ್ಣ ಜೀವನ ನಡೆಸಲಾಗದು. ನಮ್ಮ ಅಭಿವೃದ್ಧಿ ಅಥವಾ ಅವನತಿಯಲ್ಲಿ ಸಮಾಜದ ಪಾತ್ರವೂ ಇದೆ ಎಂಬುದನ್ನು ಮರೆಯಬಾರದು. ಹಾಗಾಗಿ ನಾನು ಎಂದು ಮಾತ್ರ ಯೋಚಿಸದೆ ನಾವು ಎಂದು ಚಿಂತನೆ ಮಾಡಬೇಕು. ಸಮಾಜದಲ್ಲಿ ಪರಸ್ಪರ ಗೌರವ, ಸಹಕಾರ, ಪ್ರೀತಿ, ಕರುಣೆ ಮತ್ತು ಮಾನವೀಯ ಮೌಲ್ಯ, ನಾಗರಿಕ ಪ್ರಜ್ಞೆಗಳನ್ನು ಬೆಳೆಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ನಮ್ಮ ಕ್ಷೇತ್ರದಲ್ಲಿ ಉಚಿತ ಶೌಚಗೃಹಗಳು, ಉಚಿತ ವಾಹನ ರ್ಪಾಂಗ್, ನೀರಿನ ಸೌಲಭ್ಯಗಳಿವೆ. ಭಕ್ತರು, ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇವುಗಳ ಪ್ರಯೋಜನ ಪಡೆಯುತ್ತಾರೆ. ಆದರೆ ಕೆಲವೇ ಕೆಲವು ಜನರು ಮಾಡುವ ಉಪದ್ರಕಾರಿ ವರ್ತನೆಗಳಿಂದ ಉಳಿದ ಜನರಿಗೆ ಕಿರಿ-ಕಿರಿಯಾಗುವುದಂತೂ ಸತ್ಯ. ವಾಹನ ರ್ಪಾಂಗ್ ಮಾಡುವಾಗ ಅಡ್ಡಾದಿಡ್ಡಿಯಾಗಿ, ಬೇಕಾ-ಬಿಟ್ಟಿಯಾಗಿ ಪಾರ್ಕ್ ಮಾಡುವುದು, ಶೌಚಗೃಹವನ್ನು ಬಳಸಿ ನೀರು ಹಾಕದೇ ಹೋಗುವುದು, ಪ್ಲಾಸ್ಟಿಕ್ ಬಾಟಲಿ, ಕಸ, ಉಳಿದ ಆಹಾರ ಇತ್ಯಾದಿಗಳನ್ನು ದಾರಿ ಬದಿಯಲ್ಲಿ ಎಸೆಯುವುದು, ಬಟ್ಟೆ, ಚಪ್ಪಲಿಗಳನ್ನು ನದಿಗೆ ಎಸೆಯುವುದು ಹೀಗೆ ಅನೇಕ ರೀತಿಯ ಕೆಟ್ಟ ವರ್ತನೆಗಳು ಸ್ವಚ್ಛ ಪರಿಸರ ಹಾಳಾಗಲು ಕಾರಣವಾಗುತ್ತದೆ ಮತ್ತು ಇದರಿಂದಾಗಿ ಉಳಿದ ಯಾತ್ರಿಕರಿಗೂ ತೊಂದರೆಯಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದು ನಮ್ಮಲ್ಲಿ ಮಾತ್ರವಲ್ಲ ಸಾರ್ವಜನಿಕ ಪ್ರದೇಶ, ಬಸ್ ನಿಲ್ದಾಣ ಎಲ್ಲ ಕಡೆಗಳಲ್ಲೂ ಇಂತಹ ನಡವಳಿಕೆಗಳನ್ನು ಹೆಚ್ಚಾಗಿ ಕಾಣಬಹುದು.
ವಾಹನಗಳಲ್ಲಿ ಹೋಗುವಾಗ ಕೆಲವರು ಕಸವನ್ನು ಕಿಟಕಿಯಿಂದ ಹೊರಗೆ, ರಸ್ತೆ ಬದಿಗೆ ಬೀಸಿ ಎಸೆಯುತ್ತಾರೆ. ಅದು ಎಲ್ಲಿ ಬೀಳುತ್ತದೋ ಅಥವಾ ಹಿಂದಿನಿಂದ ಬರುವ ಸವಾರರಿಗೆ ತಗಲುತ್ತದೋ ತಿಳಿಯುವುದಿಲ್ಲ. ಇತ್ತೀಚೆಗಷ್ಟೇ ಗುಟ್ಕಾ ತಿಂದಿದ್ದ ಯುವಕನೊಬ್ಬ ಉಗುಳಲು ಬಸ್ನ ಕಿಟಿಕಿಯಿಂದ ತಲೆ ಹೊರಹಾಕಿದಾಗ ಟಿಪ್ಪರ್ ವಾಹನ ತಲೆಗೆ ತಾಗಿ ಆತ ಸ್ಥಳದಲ್ಲೇ ಪ್ರಾಣ ಬಿಟ್ಟ ಸಂಗತಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆತ ಗುಟ್ಕಾ ಜಗಿಯದೇ ಇದ್ದಿದ್ದರೆ ಈ ದುರ್ಘಟನೆ ಸಂಭವಿಸುತ್ತಿರಲಿಲ್ಲ ಅಲ್ಲವೇ.
ಇಂದು ಬಹುತೇಕ ಜನರೆಲ್ಲರೂ ಶಿಕ್ಷಣ ಪಡೆದವರೇ ಆಗಿದ್ದಾರೆ. ಆದರೆ ಶಿಕ್ಷಣದ ಜೊತೆಗೆ ಸೂಕ್ಷ ್ಮ್ರಜ್ಞೆ, ಶಿಸ್ತು, ಸಾಮಾಜಿಕ ಜವಾಬ್ದಾರಿ ಮತ್ತು ಸಣ್ಣ-ಪುಟ್ಟ ವಿಷಯಗಳತ್ತ ಗಮನ ಕೊಡುವ ಮನೋಭಾವ ಅನೇಕ ಸಂದರ್ಭಗಳಲ್ಲಿ ಕಡಿಮೆಯಾಗುತ್ತಿರುವಂತೆ ಕಾಣುತ್ತದೆ. ಶಿಕ್ಷಣ ಪಡೆಯುವುದೆಂದರೆ ಕೇವಲ ಪದವಿ ಗಳಿಸುವುದಲ್ಲ. ನಮ್ಮ ನಿತ್ಯ ಬದುಕಿನಲ್ಲಿ ಸಣ್ಣ ವಿಷಯಗಳಿಗೂ ಮಹತ್ವ ನೀಡಿ, ಸಮಾಜದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳುವುದು ಕೂಡ ಹೌದು.
ನಾನು ಅನೇಕ ದೇಶಗಳಿಗೆ ಪ್ರವಾಸ ಮುಂತಾದ ಕಾರಣಗಳಿಗಾಗಿ ಭೇಟಿ ನೀಡಿದ್ದೇನೆ. ಸ್ವಚ್ಛತೆ ಮತ್ತು ನಾಗರಿಕ ಪ್ರಜ್ಞೆಯ ವಿಷಯದಲ್ಲಿ ಅಲ್ಲಿಗೂ, ಇಲ್ಲಿಗೂ ಸಾಕಷ್ಟು ವ್ಯತ್ಯಾಸವಿದೆ. ಸಿಂಗಾಪುರದ ವಾಸಿಗಳು ತಮ್ಮ ವೈಯಕ್ತಿಕ ಜೀವನ ಮಾತ್ರವಲ್ಲದೆ ಸಾರ್ವಜನಿಕ ಜೀವನಕ್ಕೂ ಬಹಳಷ್ಟು ಪ್ರಾಶಸ್ಱ ಕೊಡುತ್ತಾರೆ. ಸ್ವಚ್ಛತೆ, ಕಾನೂನು ಪಾಲನೆ ಎಲ್ಲವೂ ಅಚ್ಚುಕಟ್ಟಾಗಿರುತ್ತದೆ. ಕಸವನ್ನು ಎಲ್ಲೆಂದರಲ್ಲಿ ಹಾಕದೆ ಕಸದ ಬುಟ್ಟಿಗೆ ಹಾಕುವುದು, ಟಿಕೆಟ್ಗಳಿಗಾಗಿ ಸರದಿಯಲ್ಲಿ ನಿಲ್ಲುವುದು, ವೃದ್ಧರಿಗೆ ನೆರವಾಗುವುದು ಇವೆಲ್ಲವನ್ನು ಅಲ್ಲಿನವರು ಕಾನೂನಿನ ಭಯಕ್ಕಾಗಿ ಮಾಡುವುದಲ್ಲ. ಬದಲಾಗಿ ನಮ್ಮ ದೇಶ, ನಮ್ಮ ನೆಲ, ನಮ್ಮ ಪರಿಸರ ಎಂಬ ಅಭಿಮಾನ, ಗೌರವದಿಂದ ಕಾಳಜಿ ತೋರಿಸುತ್ತಾರೆ. ತಮ್ಮ ಮಕ್ಕಳಿಗೂ ಇದನ್ನೇ ಹೇಳಿಕೊಡುತ್ತಾರೆ. ಆದರೆ ನಮ್ಮಲ್ಲಿ ಕೆಲವರು ಮಗುವಿಗೆ ಮೂತ್ರ ಬಂತೆಂದು ಮನೆಯ ಎದುರು, ರಸ್ತೆ ಬದಿ, ಸಾರ್ವಜನಿಕ ಸ್ಥಳ ಎಂದು ನೋಡದೆ ಎಲ್ಲೆಂದರಲ್ಲಿ ಉಚ್ಚೆ ಮಾಡಿಸುತ್ತಾರೆ. ಹೀಗೆ ಬೆಳೆದ ಮಗು ದೊಡ್ಡವನಾದ ಮೇಲೂ ಮರದ ಅಡ್ಡದಲ್ಲೋ, ಕಂಪೌಂಡ್ ಬದಿಯಲ್ಲೋ ಮೂತ್ರ ಹೊಯ್ಯುವುದನ್ನೇ ಚಾಳಿ ಮಾಡಿಕೊಳ್ಳುತ್ತಾನೆ ಹೊರತು ಶೌಚಗೃಹವನ್ನು ಬಳಸುವುದಿಲ್ಲ. ಬಾಲ್ಯದಿಂದಲೇ ಮಕ್ಕಳಿಗೆ ನಾಗರಿಕ ಪ್ರಜ್ಞೆಯ ಸಂಗತಿಗಳನ್ನು ತಿಳಿಸಿಕೊಟ್ಟಾಗ ಮಾತ್ರ ದೊಡ್ಡವರಾದ ಮೇಲೂ ಅವನ್ನು ಪಾಲಿಸುತ್ತಾರೆ.
‘ಏಯ್ ಹುಡುಗ... ಏನು ಎರಾ›ಬಿರ್ರಿ ಗಾಡಿ ಓಡಿಸುತ್ತಿ. ಶಾಲಾ ಮಕ್ಕಳು ಓಡಾಡುವ ರಸ್ತೆ. ಹೆಚ್ಚು-ಕಮ್ಮಿಯಾದರೆ ಯಾರು ಹೊಣೆ? ಏನು ಮೈ ಮೇಲೆ ಪ್ರಜ್ಞೆ ಇಲ್ಲವೇ?’ ಎಂದು ಆಗಷ್ಟೇ ಮೀಸೆ ಮೂಡಿದ ಹುಡುಗನಿಗೆ ಹಿರಿಯರೊಬ್ಬರು ಜೋರು ಮಾಡುತ್ತಿದ್ದರು. ಪ್ರಜ್ಞೆ ಎಂದರೆ ಅರಿವು, ಜಾಗೃತಿ, ವಿವೇಕ ಮತ್ತು ಜವಾಬ್ದಾರಿಯುತ ಚಿಂತನೆ ಎನ್ನಬಹುದು. ಅಪಘಾತವಾಗಂತೆ, ಇತರರಿಗೆ ತೊಂದರೆಯಾಗದಂತೆ ವಾಹನವನ್ನು ಚಲಾಯಿಸಬೇಕಾದುದು ಚಾಲಕನ ಕರ್ತವ್ಯ. ಅಂತೆಯೇ ಸಾರ್ವಜನಿಕ ವಸ್ತುಗಳನ್ನು ಹಾಳು ಮಾಡದಿರುವುದು, ಸ್ವಚ್ಛತೆ ಕಾಪಾಡುವುದು, ಕಾನೂನು ಪಾಲಿಸುವುದು ಇತ್ಯಾದಿ ನಾಗರಿಕ ಪ್ರಜ್ಞೆಯನ್ನು ಪಾಲಿಸಿದಾಗ ಸಮಾಜ ತನ್ನಿಂದ ತಾನೇ ಅಭಿವೃದ್ಧಿಯಾಗುವುದು.
ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಸಮಾಜ ಅಭಿವೃದ್ಧಿಯಾಗಿಲ್ಲ, ಅದಿಲ್ಲ, ಇದಿಲ್ಲ ಎನ್ನುವ ನಾವು ದೇಶದ ಅಭಿವೃದ್ಧಿಗಾಗಿ ಏನು ಮಾಡಿದ್ದೇವೆ? ನಮ್ಮ ಕೊಡುಗೆ ಎಷ್ಟಿದೆ ಎಂದು ನಮ್ಮನ್ನು ನಾವೇ ವಿಮರ್ಶೆ ಮಾಡಿಕೊಳ್ಳಬೇಕಿದೆ. ರಾಷ್ಟ್ರದ ನಾಯಕರು ಮಾತ್ರ ಉತ್ತಮ ಆಡಳಿತಗಾರರಾಗಿದ್ದರೆ ಸಾಲದು. ಅವರೊಂದಿಗೆ ಸರ್ಕಾರದ ಎಲ್ಲ ಇಲಾಖೆಗಳು, ಅಧಿಕಾರಿಗಳು, ಸಿಬ್ಬಂದಿ ಕೂಡ ಕಾರ್ಯನಿರ್ವಹಿಸಿದಾಗ ಉತ್ತಮ ಆಡಳಿತ ಯಶಸ್ವಿಯಾಗಲು ಸಾಧ್ಯ. ಅದೇ ರೀತಿ ಪ್ರತಿಯೊಬ್ಬ ನಾಗರಿಕನೂ ಇದು ನನ್ನ ದೇಶ, ನನ್ನ ನೆಲ-ಜಲ ಎಂಬ ಭಾವನೆ ತಳೆದು, ನಾಗರಿಕ ಪ್ರಜ್ಞೆಯಿಂದ ವರ್ತಿಸಿದರೆ ಅದೇ ದೇಶಕ್ಕೆ ದೊಡ್ಡ ಕೊಡುಗೆಯಾಗುತ್ತದೆ. ವಾಹನದ ಇಂಜಿನ್ ಮಾತ್ರ ದಕ್ಷತೆ, ಕಾರ್ಯಕ್ಷಮತೆ ಹೊಂದಿದ್ದರೆ ಸಾಲದು. ಅದರ ಸಣ್ಣ-ಪುಟ್ಟ ಬಿಡಿ ಭಾಗಗಳೂ ಅಷ್ಟೇ ದಕ್ಷತೆ ಹೊಂದಿರಬೇಕಾಗುತ್ತದೆ. ಒಂದೇ ಒಂದು ಸ್ಕ್ರೂ ಕದಲಿದರೂ ವಾಹನ ಅಪಘಾತಕ್ಕೀಡಾಗಬಹುದು. ಆಡಳಿತಗಾರರು ವಾಹನದ ಇಂಜಿನ್ನಂತೆ ಕಾರ್ಯ ನಿರ್ವಹಿಸಿದರೆ ನಾವು ಸಣ್ಣಪುಟ್ಟ ಬಿಡಿಭಾಗಗಳ ರೀತಿಯಲ್ಲಿ ನಮ್ಮ ನಮ್ಮ ಕೆಲಸ, ಕರ್ತವ್ಯವನ್ನು ಯಾವುದೇ ಲೋಪವಿಲ್ಲದೆ ನಿಷ್ಠೆಯಿಂದ ಮಾಡಬೇಕು.
ನಾನು, ನನ್ನದು ಎಂಬ ಸ್ವಾರ್ಥ ಚಿಂತನೆಯನ್ನು ಬಿಟ್ಟು ನಾವು, ನಮ್ಮದು ಎಂಬ ಸಮಷ್ಟಿ ಮನೋಭಾವವನ್ನು ಅಳವಡಿಸಿಕೊಳ್ಳುವುದು ಇಂದಿನ ಸಮಾಜದ ಅಗತ್ಯವಾಗಿದೆ. ಪರಸ್ಪರ ಸಹಕಾರ, ಪ್ರೀತಿ, ವಿಶ್ವಾಸ ಮತ್ತು ಜವಾಬ್ದಾರಿಯೊಂದಿಗೆ ಬದುಕಿದಾಗ ಕುಟುಂಬ, ಸಮಾಜ ಹಾಗೂ ದೇಶ ಬಲಿಷ್ಠವಾಗುತ್ತದೆ. ವೈಯಕ್ತಿಕ ಹಿತಕ್ಕಿಂತ ಸಾಮೂಹಿಕ ಹಿತಕ್ಕೆ ಆದ್ಯತೆ ನೀಡಿದಾಗಲೇ ನಿಜವಾದ ಪ್ರಗತಿಯಾಗಿ, ಶಾಂತಿ, ಸೌಹಾರ್ದ ಮತ್ತು ಮಾನವೀಯ ಮೌಲ್ಯಗಳು ಸಮಾಜದಲ್ಲಿ ನೆಲೆಸುತ್ತವೆ. ಆ ನಿಟ್ಟಿನಲ್ಲಿ ನಮ್ಮ ಪ್ರಜ್ಞೆಯು ಜಾಗೃತಗೊಳ್ಳಲಿ.
-(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)