Tamil Nadu Elections | ತಮಿಳುನಾಡು ಚುನಾವಣಾ ಕಣದಲ್ಲಿ ತಂದೆ-ಮಗನ ಫೈಟ್  
ದೇಶ

ತಮಿಳುನಾಡು ಚುನಾವಣಾ ಕಣದಲ್ಲಿ ತಂದೆ-ಮಗನ ಫೈಟ್..ಅನ್ಬುಮಣಿ ಬಣಕ್ಕೆ ಬಿಗ್ ರಿಲೀಫ್ ನೀಡಿದ ಚೆನ್ನೈ ನ್ಯಾಯಾಲಯ! | Tamil Nadu Elections

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ (Tamil Nadu Elections) ಹೊಸ್ತಿಲಲ್ಲಿ ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ಪಕ್ಷದ ಆಂತರಿಕ ಕಲಹ ಸ್ಫೋಟಗೊಂಡಿದ್ದು, ಸಂಸ್ಥಾಪಕ ಡಾ. ರಾಮದಾಸ್​ಗೆ ನ್ಯಾಯಾಲಯದಲ್ಲಿ ದೊಡ್ಡ ಹಿನ್ನಡೆಯುಂಟಾಗಿದ್ದು, ಪಕ್ಷದ ಅಧಿಕೃತ ಮಾವಿನ ಹಣ್ಣು ಚಿಹ್ನೆಯ ಬಳಸುವುದನ್ನು ತಡೆಯುವಂತೆ ಕೋರಿ ರಾಮದಾಸ್ ಸಲ್ಲಿಸಿದ್ದ ಅರ್ಜಿಯನ್ನು ಚೆನ್ನೈನ ಸಿವಿಲ್ ನ್ಯಾಯಾಲಯವು ವಜಾಗೊಳಿಸಿದೆ.
ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಎತ್ತಿ ಹಿಡಿದಿರುವ ನ್ಯಾಯಾಲಯವು, ಒಮ್ಮೆ ಚುನಾವಣೆ ಪ್ರಕ್ರಿಯೆ ಆರಂಭವಾದ ಬಳಿಕ ನ್ಯಾಯಾಂಗವು ಹಸ್ತಕ್ಷೇಪ ಮಾಡುವುದು ಸರಿಯಲ್ಲ ಮತ್ತು ಅಂತಹ ಆದೇಶಗಳು ಮತದಾರರಲ್ಲಿ ಗೊಂದಲ ಮೂಡಿಸುವುದಲ್ಲದೆ ಅಭ್ಯರ್ಥಿಗಳ ನಡುವಿನ ಸಮಾನ ಅವಕಾಶದ ಸ್ಪರ್ಧೆಯನ್ನು ಹಾಳುಗೆಡವಬಹುದು ಎಂದಿದೆ.
ಈ ಮೂಲಕ ತಮ್ಮ ಪುತ್ರ ಅನ್ಬುಮಣಿ ವಿರುದ್ಧ ಕಾನೂನು ಸಮರ ಸಾರಿದ್ದ ರಾಮದಾಸ್​ಗೆ ಆಘಾತ ಎದುರಾಗಿದ್ದು, ಅನ್ಬುಮಣಿ ಬಣಕ್ಕೆ ದೊಡ್ಡ ಮಟ್ಟದ ರಾಜಕೀಯ ಬಲ ಸಿಕ್ಕಂತಾಗಿದೆ. 2025ರಲ್ಲಿ ಡಾ. ರಾಮದಾಸ್ ತಮ್ಮ ಪುತ್ರನನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿ ತಾವೇ ಆ ಸ್ಥಾನವನ್ನು ಅಲಂಕರಿಸುವುದಾಗಿ ಘೋಷಿಸಿದ್ದರು. ಆದರೆ, ಈ ಕ್ರಮವನ್ನು ಕಾನೂನುಬಾಹಿರ ಎಂದು ಕರೆದಿದ್ದ ಅನ್ಬುಮಣಿ, ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯು ತಮ್ಮನ್ನು ನೇಮಿಸಿರುವುದರಿಂದ ತಾವೇ ಅಧಿಕೃತ ಮುಖ್ಯಸ್ಥ ಎಂದು ವಾದಿಸಿದ್ದರು.
ಈ ಹಿನ್ನೆಲೆಯಲ್ಲಿ ಪಕ್ಷದ ಚಿಹ್ನೆಯನ್ನು ಸ್ಥಗಿತಗೊಳಿಸಬೇಕೆಂದು ರಾಮದಾಸ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಮಾತ್ರ ತಾವು ಕಾರ್ಯನಿರ್ವಹಿಸುವುದಾಗಿ ಮತ್ತು ಪಕ್ಷದ ಆಂತರಿಕ ವಿವಾದಗಳನ್ನು ಈ ಹಂತದಲ್ಲಿ ನಿರ್ಣಯಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ. ರಾಮದಾಸ್ ಪ್ರಾಥಮಿಕವಾಗಿ ತಮ್ಮ ವಾದವನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದ್ದು, ಈ ವಿಷಯವಾಗಿ ಆಯೋಗವನ್ನು ಸಂಪರ್ಕಿಸುವ ಅವಕಾಶ ನೀಡಿದೆ.
ನ್ಯಾಯಾಲಯದ ಈ ತೀರ್ಪಿನ ಬೆನ್ನಲ್ಲೇ ಆಕ್ರೋಶ ವ್ಯಕ್ತಪಡಿಸಿರುವ ಡಾ. ರಾಮದಾಸ್, ಅನ್ಬುಮಣಿ ಬಣಕ್ಕೆ ಮಾವಿನ ಚಿಹ್ನೆ ಮಂಜೂರು ಮಾಡಿರುವುದು ಪಕ್ಷಪಾತದ ಮತ್ತು ಪ್ರಜಾಪ್ರಭುತ್ವ ವಿರೋಧಿ ನಿರ್ಧಾರ ಎಂದು ಅಸಮಾಧಾನ ಹೊರಹಾಕಿದ್ದಾರೆ. ರಾಜಕೀಯವಾಗಿ ಈ ಸಂಘರ್ಷ ತಮಿಳುನಾಡಿನ ಮೈತ್ರಿಕೂಟಗಳ ಮೇಲೂ ಪರಿಣಾಮ ಬೀರಿದೆ.
ಅನ್ಬುಮಣಿ ರಾಮದಾಸ್ ಅವರು ಎನ್‌ಡಿಎ ಮೈತ್ರಿಕೂಟವನ್ನು ಸೇರಿದ್ದರೆ, ಅವರ ತಂದೆ ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ಶಶಿಕಲಾ ಅವರೊಂದಿಗೆ ಕೈಜೋಡಿಸಿದ್ದಾರೆ. ಶಶಿಕಲಾ ಬಣವು ಇನ್ನೂ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿದ್ದರೂ, ತೇವರ್ ಮತ್ತು ವನ್ನಿಯಾರ್ ಸಮುದಾಯದ ಮತಗಳನ್ನು ವಿಭಜಿಸುವ ಮೂಲಕ ಎನ್‌ಡಿಎಗೆ ಪೆಟ್ಟು ನೀಡುವ ತಂತ್ರ ಹೂಡಿದೆ. ಆದರೆ, ಇಂತಹ ನಡೆಗಳು ತಮ್ಮ ಚುನಾವಣಾ ಭವಿಷ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಎನ್‌ಡಿಎ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ(ಏಜೆನ್ಸೀಸ್).