ಡಿಸಿಎಂ ಪವನ್ ಕಲ್ಯಾಣ್ ಮತ್ತು ಸಿಎಂ ವಿಜಯ್
ಅಮರಾವತಿ: ತಮಿಳುನಾಡು ಚುನಾವಣೆಯಲ್ಲಿ ಸೂಪರ್ ಸ್ಟಾರ್ ದಳಪತಿ ವಿಜಯ್ ನೇತೃತ್ವದ ಟಿವಿಕೆ ಮೊದಲ ಚುನಾವಣೆಯಲ್ಲಿಯೇ 108 ಸ್ಥಾನ ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದ್ದಂತೆ, ಪಕ್ಕದ ಆಂಧ್ರ ಪ್ರದೇಶದಲ್ಲಿ ಸೂಪರ್ ಸ್ಟಾರ್ ಮತ್ತು ಡಿಸಿಎಂ ಪವನ್ ಕಲ್ಯಾಣ್ ಟ್ರೋಲ್ಗೆ ಗುರಿಯಾಗಿದ್ದರು.
ಆಂಧ್ರದ ಪ್ರಮುಖ ವಿಪಕ್ಷ ವೈಎಸ್ಆರ್ ಕಾಂಗ್ರೆಸ್ ನಾಯಕರು ಸೇರಿ ಹಲವರು, ನೋಡಿ, ತಮಿಳುನಾಡಿನಲ್ಲಿ ವಿಜಯ್ ಮೊದಲ ಯತ್ನದಲ್ಲೇ ಸಿಎಂ ಆದರು, ಆದರೆ ಪವನ್ ಕಲ್ಯಾಣ್ ಇಷ್ಟು ವರ್ಷ ಕಷ್ಟಪಟ್ಟರೂ ಕೇವಲ ಡಿಸಿಎಂ ಆದರು ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದರು. ಇದಕ್ಕೆ ಪವನ್ ಕಲ್ಯಾಣ್ ಖಡಕ್ ತಿರುಗೇಟು ನೀಡಿದ್ದಾರೆ.
ಮಂಗಳಗಿರಿಯಲ್ಲಿ ನಿನ್ನೆ(ಮೇ 15) ನಡೆದ ಜನಸೇನಾ ಪಕ್ಷದ ಸಭೆಯಲ್ಲಿ ಮಾತನಾಡಿರುವ ಅವರು, ತಮ್ಮ ರಾಜಕೀಯ ಪ್ರಯಾಣವನ್ನು ತಮಿಳುನಾಡಿನ ಚುನಾವಣೆಯಲ್ಲಿ ಗೆದ್ದು ಸಿಎಂ ಆಗಿರುವ ಟಿವಿಕೆ ಮುಖ್ಯಸ್ಥ ವಿಜಯ್ ಅವರೊಂದಿಗೆ ಹೋಲಿಕೆ ಮಾಡಬೇಡ ಎಂದಿರುವ ಅವರು, ಎರಡು ರಾಜ್ಯಗಳ ರಾಜಕೀಯವನ್ನು ಒಂದೇ ತಕ್ಕಡಿಯಲ್ಲಿ ತೂಗಬೇಡಿ ಎಂದಿದ್ದಾರೆ.
ತಮಿಳುನಾಡು ಮತ್ತು ಆಂಧ್ರಪ್ರದೇಶದ ರಾಜಕೀಯ ಪರಿಸ್ಥಿತಿ ಸಂಪೂರ್ಣವಾಗಿ ವಿಭಿನ್ನವಾಗಿದೆ ಎಂದು ಸ್ಪಷ್ಟಪಡಿಸಿರುವ ಅವರು, ನಾನು ಪಕ್ಷವನ್ನು ಸ್ಥಾಪಿಸಿದಾಗ ಅನೇಕ ಸವಾಲುಗಳನ್ನು ಎದುರಿಸಿದ್ದಾಗಿ ನೆನಪಿಸಿಕೊಂಡರು. ಎಲ್ಲರೂ ಪಕ್ಷವನ್ನೂ ಬಿಟ್ಟಾಗಲೂ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಜನಸೇನಾ ಯಾವುದೇ ಒಂದು ಸಿದ್ಧಾಂತಕ್ಕೆ ಸೀಮಿತವಾಗಿಲ್ಲ ಎಂದು ಹೇಳಿದ್ದಾರೆ.
ಜನ ಸೇನಾ ಒಂದೇ ಬಾರಿಗೆ ತೆಗೆದುಕೊಂಡ ನಿರ್ಧಾರವಲ್ಲ, ಸುಮಾರು ಅರ್ಧ ಶತಮಾನದಿಂದ ನನ್ನಲ್ಲಿ ಬೆಳೆದ ವಿಚಾರಗಳ ಸಾಕಾರವಾಗಿದೆ. ಮುಖ್ಯಮಂತ್ರಿಯಾಗುವ ಅಥವಾ ಸ್ಥಾನಮಾನಕ್ಕಾಗಿ ನಾನು ಪಕ್ಷವನ್ನು ರಚಿಸಿಲ್ಲ. ಜನರಿಗೆ ಪರ್ಯಾಯ ರಾಜಕೀಯ ವೇದಿಕೆಯ ಅಗತ್ಯವಿದೆ ಎಂಬ ಉದ್ದೇಶದಿಂದ ನಾನು ಈ ಪ್ರಯಾಣವನ್ನು ಪ್ರಾರಂಭಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ (ಏಜೆನ್ಸೀಸ್).