ಪಿಯೂಷ್ ಗೋಯಲ್ ಮತ್ತು ನಟ ವಿಜಯ್
ನವದೆಹಲಿ: ತಮಿಳುನಾಡು ವಿಧಾನಸಭೆ ಚುನಾವಣೆ ಕಾಳಗ ಶುರುವಾಗಿದ್ದು, ಕೇಂದ್ರ ಸಚಿವ ಮತ್ತು ಬಿಜೆಪಿ ತಮಿಳುನಾಡು ಉಸ್ತುವಾರಿ ಪಿಯೂಷ್ ಗೋಯಲ್, ಹೊಸ ಪಕ್ಷ ಟಿವಿಕೆ ಕಟ್ಟಿರುವ ನಟ ದಳಪತಿ ವಿಜಯ್, ಮುಂಬರುವ ಚುನಾವಣೆಯಲ್ಲಿ ಯಾವುದೇ ರೀತಿಯಲ್ಲಿ ಪ್ರಭಾವ ಬೀರಲ್ಲ ಎಂದಿದ್ದಾರೆ.
ಈ ಕುರಿತು ಪಿಟಿಐ ಜೊತೆ ಮಾತನಾಡಿರುವ ಅವರು, ನಟ ವಿಜಯ್ ಚುನಾವಣೆ ಮೇಲೆ ಪ್ರಭಾವ ಬೀರುತ್ತಾರೆ ಎಂದು ನನಗೆ ಅನ್ನಿಸಲ್ಲ. ನಾವು ಅನೇಕ ಚಲನಚಿತ್ರ ತಾರೆಯರು ಬಂದು ಹೋಗುವುದನ್ನು ನೋಡಿದ್ದೇವೆ. ಅಭಿಮಾನಿಗಳನ್ನು ಹೊಂದುವುದು. ಅವರನ್ನು ಮತಗಳಾಗಿ ಪರಿವರ್ತಿಸುವುದು ಸಂಪೂರ್ಣವಾಗಿ ವಿಭಿನ್ನ ಕಥೆ ಎಂದು ಹೇಳಿದ್ದಾರೆ.
ನಟರನ್ನು ಓಲೈಸುವ ಅಗತ್ಯವಿಲ್ಲ, ನಮಗೆ ಸಂಘಟನಾತ್ಮಕ ಆಡಳಿತಗಾರನಾಗಿ ಜನರ ವಿಶ್ವಾಸ ಗಳಿಸುವವರಾಗಿದ್ರೆ ಸಾಕು. ಅನೇಕ ನಟರನ್ನು ನೋಡಿದ್ದೇವೆ. ಕಮಲ್ ಹಾಸನ್ ಅವರು ಚುನಾವಣೆಯಲ್ಲಿ ಯಾವುದೇ ಪ್ರಭಾವ ಬೀರಲಿಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಡಿಎಂಕೆ ಸರ್ಕಾರದ ವಿರುದ್ಧ ಭಾರಿ ಆಡಳಿತ ವಿರೋಧಿ ಅಲೆ ಇದೆ. ಅದು ಅಸಮರ್ಥ ಮತ್ತು ಭಾರಿ ದೊಡ್ಡ ಭ್ರಷ್ಟ ಸರ್ಕಾರ. ಉದಯನಿಧಿ ಸ್ಟಾಲಿನ್ ಸಂಪೂರ್ಣವಾಗಿ ತಮಿಳು ಸಂಸ್ಕೃತಿ ವಿರೋಧಿ ಮತ್ತು ಭಾರತ ವಿರೋಧಿ ನಿಲುವನ್ನು ಹೊಂದಿದ್ದಾರೆ. ಅವರ ಭಾಷೆಯಲ್ಲಿ ಎಂದಿಗೂ ತಮಿಳು ಸಂಸ್ಕೃತಿಯಲ್ಲಿ ಮಾತನಾಡಿಲ್ಲ ಎಂದು ಕಿಡಿಕಾರಿದ್ದಾರೆ.
ತಮಿಳು ಸಂಸ್ಕೃತಿ ನಮಗೆ ಸಹಿಷ್ಣುತೆಯನ್ನು ಕಲಿಸುತ್ತದೆ. ಅದು ವಿಭಿನ್ನ ದೃಷ್ಟಿಕೋನಗಳು, ವಿಭಿನ್ನ ಚಿಂತನೆ, ವಿಭಿನ್ನ ಸಿದ್ಧಾಂತಗಳು ಮತ್ತು ವಿಭಿನ್ನ ಧರ್ಮಗಳನ್ನು ಆಚರಿಸಲು ನಮಗೆ ಕಲಿಸುತ್ತದೆ. ಅದೇ ರೀತಿ ಪ್ರಧಾನಿ ಮೋದಿ ಎಂದಿಗೂ ಜನರ ನಡುವೆ ತಾರತಮ್ಯ ಮಾಡಿಲ್ಲ. ವರ್ಷದ ಸಮಯ ಅಥವಾ ಚುನಾವಣಾ ಅವಧಿಯನ್ನು ಲೆಕ್ಕಿಸದೆ ಎಲ್ಲರಿಗೂ ಪ್ರಯೋಜನಗಳನ್ನು ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಾಲುದಾರನಾಗಿರುವ ಎಐಎಡಿಎಂಕೆ ನೇತೃತ್ವದ ಎನ್ಡಿಎ ಕೂಟ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).