ಸಾಂದರ್ಭಿಕ ಚಿತ್ರ  
ದೇಶ

ಕ್ರಿಸ್​ಮಸ್​ ಹೆಸರಲ್ಲಿ ವಾಟ್ಸ್​ಆ್ಯಪ್​ನಲ್ಲಿ ನಡೆಯುತ್ತಿದೆ ಈ ಸ್ಕ್ಯಾಮ್: ಲಿಂಕ್​ ಕ್ಲಿಕ್​ ಮಾಡಿದ್ರೆ ನಿಮ್ಮ ಹಣ ಮಾಯ!​ Christmas WhatsApp Scam

ಪ್ರಮುಖ ಮುಖ್ಯಾಂಶಗಳು

  • ಕ್ರಿಸ್​ಮಸ್​ ಆಚರಿಸಲು ಒಗ್ಗೂಡಿರುವ ಸಮಯದಲ್ಲೇ ಸೈಬರ್​ ಖದೀಮರು ಸಜ್ಜು
  • ವಾಟ್ಸ್​ಆ್ಯಪ್​ ಮೂಲಕ ಅಮಾಯಕರಿಗೆ ಗಾಳ ಬೀಸಿ, ಹಣ ಎಗರಿಸುವ ದುಷ್ಕೃತ್ಯ
  • ಅಪರಿಚಿತ ಲಿಂಕ್​ಗಳನ್ನು ಕ್ಲಿಕ್​ ಮಾಡಿದರೆ ಕ್ಷಣಾರ್ಧದಲ್ಲೇ ನಿಮ್ಮ ಬ್ಯಾಂಕ್​ ಖಾತೆಯಿಂದ ಹಣ ಮಾಯ
ನವದೆಹಲಿ: ಇಡೀ ಭಾರತ ವರ್ಷದ ಕೊನೆಯ ಹಬ್ಬ ಕ್ರಿಸ್​ಮಸ್​ ಆಚರಿಸಲು ಒಗ್ಗೂಡಿರುವ ಸಮಯದಲ್ಲೇ ಸೈಬರ್​ ಖದೀಮರು ( Christmas WhatsApp Scam ) ತಮ್ಮ ಕೈಚಳಕ ತೋರಿಸಲು ಆರಂಭಿಸಿದ್ದಾರೆ. ವಾಟ್ಸ್​ಆ್ಯಪ್​ ಮೂಲಕ ಅಮಾಯಕರಿಗೆ ಗಾಳ ಬೀಸಿ, ಹಣ ಎಗರಿಸುವ ದುಷ್ಕೃತ್ಯಕ್ಕೆ ವಂಚಕರು ಕೈಹಾಕಿದ್ದಾರೆ. ವಾಟ್ಸ್​ಆ್ಯಪ್​ನಲ್ಲಿ ಬರುವ ಅಪರಿಚಿತ ಲಿಂಕ್​ಗಳನ್ನು ಕ್ಲಿಕ್​ ಮಾಡಿದರೆ ಕ್ಷಣಾರ್ಧದಲ್ಲೇ ನಿಮ್ಮ ಬ್ಯಾಂಕ್​ ಖಾತೆಯಿಂದ ಹಣ ಮಾಯವಾಗಲಿದೆ.
ಹೌದು, ಕ್ರಿಸ್​ಮಸ್ ಹಬ್ಬದ​ ಹಿನ್ನೆಲೆ ಸಕ್ರಿಯರಾಗಿರುವ ಸೈಬರ್​ ಖದೀಮರು ಹಬ್ಬದ ಗ್ರೀಟಿಂಗ್​ ಮತ್ತು ಅನಿರೀಕ್ಷಿತ ಉಡುಗೊರೆಗಳ ನೆಪದಲ್ಲಿ ಅಮಾಯಕರಿಗೆ ಗಾಳ ಹಾಕುತ್ತಿದ್ದಾರೆ. ನೀವು ಈ ಲಿಂಕ್​ ಕ್ಲಿಕ್​ ಮಾಡಿದರೆ ನಿಮಗೆ ಕ್ರಿಸ್​ಮಸ್​ ಉಡುಗೊರೆ ದೊರೆಯಲಿದೆ ಎಂಬ ಸಂದೇಶವುಳ್ಳ ಹಾನಿಕಾರಕ ಲಿಂಕ್​ಗಳನ್ನು ವಾಟ್ಸ್​ಆ್ಯಪ್​ಗಳ ಮೂಲಕ ಹರಿಬಿಡುತ್ತಿದ್ದಾರೆ. ಅಪ್ಪಿತಪ್ಪಿ ಆ ಲಿಂಕ್​ಗಳನ್ನು ಕ್ಲಿಕ್​ ಮಾಡಿದರೆ, ನಿಮ್ಮ ಮೊಬೈಲ್​ಗೆ ವೈರಸ್​ ಅಟ್ಯಾಕ್​ ಆಗಿ, ನಿಮ್ಮ ಬ್ಯಾಂಕ್​ ಖಾತೆಯಿಂದ ಸುಲಭವಾಗಿ ಹಣ ಎಗರಿಸಲಿದ್ದಾರೆ.

ಈ ಸ್ಕ್ಯಾಮ್​ ಹೇಗೆ ಕೆಲಸ ಮಾಡುತ್ತೆ?

ಆಯ್ದ ವಾಟ್ಸ್​ಆ್ಯಪ್​ ನಂಬರ್​ಗಳನ್ನು ಗುರಿಯಾಗಿಸಿಕೊಂಡು "ಮೆರ್ರಿ ಕ್ರಿಸ್‌ಮಸ್! ನಿಮಗೆ ಉಡುಗೊರೆಯೊಂದು ಸಿಕ್ಕಿದೆ" ಅಥವಾ "ಕ್ರಿಸ್‌ಮಸ್ ಬೋನಸ್ ನಿಮಗಾಗಿ ಕಾಯುತ್ತಿದೆ" ಎಂಬ ಹಬ್ಬದ ಸಂದೇಶದೊಂದಿಗೆ ಸೈಬರ್ ಖದೀಮರು ಸಂದೇಶವನ್ನು ಲಿಂಕ್ ಜತೆಗೆ ವಾಟ್ಸ್​ಆ್ಯಪ್​ನಲ್ಲಿ ಹರಿಬಿಡುತ್ತಿದ್ದಾರೆ. ಲಿಂಕ್​ ಕ್ಲಿಕ್​ ಮಾಡಿದರೆ ನಿಮಗೆ ಕ್ರಿಸ್‌ಮಸ್ ಕ್ಯಾಶ್‌ಬ್ಯಾಕ್, ಉಡುಗೊರೆಯ ವೋಚರ್‌ಗಳು, ಶಾಪಿಂಗ್ ಕೂಪನ್‌ಗಳು ಅಥವಾ ನಗದು ಬಹುಮಾನಗಳ ದೊರೆಯುತ್ತವೆ ಎಂದು ಆಮಿಷಗಳನ್ನು ಒಡ್ಡಲಾಗುತ್ತದೆ.

ಲಿಂಕ್​ ಕ್ಲಿಕ್​ ಮಾಡಿದರೆ ಏನಾಗುತ್ತದೆ?

ಒಂದು ವೇಳೆ ಆಮಿಷಕ್ಕೆ ಒಳಗಾಗಿ ಲಿಂಕ್ ಕ್ಲಿಕ್ ಮಾಡಿದರೆ ಮಾಲ್‌ವೇರ್ ಅಥವಾ ವೈರಸ್​ ನಿಮ್ಮ ಮೊಬೈಲ್​ ಮೇಲೆ ದಾಳಿ ಮಾಡುತ್ತದೆ. ವೈರಸ್​ ದಾಳಿಯಾದ ಕೂಡಲೇ ನಿಮ್ಮ ಮೊಬೈಲ್​ ಸಂಪೂರ್ಣ ವಂಚಕರ ಫೋನ್‌ ಕಂಟ್ರೋಲ್​ಗೆ ಬರುತ್ತದೆ. ಇದರಿಂದ ವಂಚಕರು ನಿಮ್ಮ OTP ಗಳನ್ನು ತಿಳಿದುಕೊಳ್ಳಲು, ನಿಮ್ಮ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಓಪನ್​ ಮಾಡಲು ಮತ್ತು ಅನಧಿಕೃತ ವಹಿವಾಟುಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ.
ಅಂದಹಾಗೆ, ಸೈಬರ್​ ಖದೀಮರ ಪ್ರಮುಖ ಟಾರ್ಗೆಟ್​ ಹಬ್ಬಗಳು ಎಂದು ಸೈಬರ್ ತಜ್ಞರು ಹೇಳುತ್ತಾರೆ. ಏಕೆಂದರೆ, ಹಬ್ಬದ ಸಮಯದಲ್ಲಿ ಜನರ ಮೂಡ್​ ಹೆಚ್ಚು ನಿರಾಳರಾಗಿರುತ್ತಾರೆ, ವಿಚಲಿತರಾಗುತ್ತಾರೆ ಮತ್ತು ಭಾವನಾತ್ಮಕವಾಗಿ ಇರುತ್ತಾರೆ. ಈ ಸಮಯದಲ್ಲಿ ಅನುಮಾನಾಸ್ಪದ ಸಂದೇಶಗಳ ಬಗ್ಗೆ ಹೆಚ್ಚು ತೆಲೆಕಡಿಸಿಕೊಳ್ಳುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಳ್ಳುವ ವಂಚಕರು ನಿಮ್ಮ ಆಫರ್ ಇಂದೇ ಮುಕ್ತಾಯಗೊಳ್ಳುತ್ತದೆ ಅಥವಾ ನಿಮ್ಮ ಕ್ರಿಸ್‌ಮಸ್ ಬಹುಮಾನವನ್ನು ಪಡೆಯಲು ತಕ್ಷಣವೇ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಎಂದು ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಂದೇಶವನ್ನು ಕಳುಹಿಸಿಕೊಡುತ್ತಾರೆ. ಈ ಬಗ್ಗೆ ಅರಿಯದೆ ಲಿಂಕ್​ ಕ್ಲಿಕ್​ ಮಾಡುವ ಮೂಲಕ ಎಷ್ಟೋ ಮಂದಿ ಹಣ ಕಳೆದುಕೊಂಡಿದ್ದಾರೆ. ನಿಮಗೆನಾದರೂ ವಂಚನೆಯ ಬಗ್ಗೆ ಅನುಮಾನ ಬಂದರೆ, ತಕ್ಷಣವೇ ನಿಮ್ಮ ಬ್ಯಾಂಕ್‌ಗೆ ವರದಿ ಮಾಡಿ ಮತ್ತು ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930 ಅನ್ನು ಡಯಲ್ ಮಾಡಿ.
cybercrime.gov.in ನಲ್ಲಿರುವ ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿಯೂ ದೂರುಗಳನ್ನು ಸಲ್ಲಿಸಬಹುದು. ತ್ವರಿತ ವರದಿ ಮಾಡುವುದರಿಂದ ಮೋಸದ ವಹಿವಾಟುಗಳನ್ನು ಸ್ಥಗಿತಗೊಳಿಸುವ ಮತ್ತು ಆರ್ಥಿಕ ನಷ್ಟವನ್ನು ತಪ್ಪಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸೈಬರ್ ಪೊಲೀಸರು ಒತ್ತಿ ಹೇಳುತ್ತಾರೆ.

ಅಲರ್ಟ್​ ಆಗಿರಿ

ವಿಶೇಷವಾಗಿ ಹಬ್ಬದ ಸಮಯದಲ್ಲಿ ಅನುಮಾನಾಸ್ಪದ ಸಂದೇಶಗಳ ಬಗ್ಗೆ ಬಳಕೆದಾರರು ಜಾಗರೂಕರಾಗಿರಿ ಎಂದು ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ. ಒಂದು ಕ್ಷಣ ಎಚ್ಚರಿಕೆ ವಹಿಸಿದರೆ ಕ್ರಿಸ್‌ಮಸ್ ಸಂದೇಶವು ದುಬಾರಿಯಾಗುವುದನ್ನು ತಡೆಯಬಹುದು, (ಏಜೆನ್ಸೀಸ್​).