Chirag Paswan | ಮಾಧ್ಯಮಗಳೊಂದಿಗೆ ಮಾತನಾಡಿದ ಚಿರಾಗ್ ಪಾಸ್ವಾನ್​ ( ಕೃಪೆ-ಪಿಟಿಐ) 
ದೇಶ

ನನಗಿಂತ ದುರಾಸೆಯ ವ್ಯಕ್ತಿ ಇನ್ನೊಬ್ಬನಿಲ್ಲ ಎಂದ ಚಿರಾಗ್​ ಪಾಸ್ವಾನ್​; ಈ ಹೇಳಿಕೆಗೆ ಕಾರಣವೇನು..? | Chirag Paswan

ಪಟನಾ: ಬಿಹಾರ ಸರ್ಕಾರದಲ್ಲಿನ ಉಪಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಮೌನ ಮುರಿದಿರುವ ಕೇಂದ್ರ ಸಚಿವ ಚಿರಾಗ್​ ಪಾಸ್ವಾನ್​, ಎನ್‌ಡಿಎ ತೆಗೆದುಕೊಂಡ ನಿರ್ಧಾರದ ಬಗ್ಗೆ ತಮಗೆ ಯಾವುದೇ ವಿಷಾದವಿಲ್ಲ ಎಂದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಚಿರಾಗ್​, ತಮ್ಮ ಪಕ್ಷಕ್ಕೆ ಡಿಸಿಎಂ ಸ್ಥಾನ ಸಿಗದಿದ್ದಕ್ಕೆ ಅಸಮಧಾನವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪಾಸ್ವಾನ್, ಚಿರಾಗ್ ಪಾಸ್ವಾನ್ ಕಿತ್ನಾ ಅಥವಾ ಲಾಲ್ಚಿ ಹೋ ಸ್ಕತಾ ಹೈ?" (ಚಿರಾಗ್ ಪಾಸ್ವಾನ್ ಎಷ್ಟು ದುರಾಸೆಯವರಾಗಿರಬಹುದು?) ಎಂದಿದ್ದಾರೆ.
ನಮ್ಮ ಎನ್​ಡಿಎ ಮೈತ್ರಿಕೂಟವು ನನ್ನ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದೆ, ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್​​ಜೆಪಿಗೆ 29 ಸ್ಥಾನಗಳಲ್ಲಿ ನೀಡಿದೆ, ನೂತನ ಸರ್ಕಾರದಲ್ಲಿ ಇಬ್ಬರು ಶಾಸಕರನ್ನು ಸಚಿವರನ್ನಾಗಿಸಿದೆ, ನಾನು ಎಲ್ಲಿಂದ ಬಂದಿದ್ದೇನೆ ಎನ್ನುವುದನ್ನು ನೀವೆಲ್ಲಾ ಯೋಚಿಸಬೇಕು, 2021 ರಲ್ಲಿ ನನ್ನ ಸುತ್ತ ಒಬ್ಬ ವ್ಯಕ್ತಿಯೂ ಇರಲಿಲ್ಲ, ನಮ್ಮ ಪಕ್ಷವು ವಿಭಜನೆಯಾಯಿತು. 2024 ರಲ್ಲಿ ಪ್ರಧಾನಿಯವರು ಪಕ್ಷದ ಮೇಲೆ ನಂಬಿಕೆ ಇಟ್ಟು ಐದು ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದರು ಎಂದು ತಿಳಿಸಿದರು.
ಚುನಾವಣೆಗೆ ಸ್ಪರ್ಧೆ ಮಾಡಲು ಐದು ಸ್ಥಾನಗಳನ್ನು ನೀಡುವ ಮೂಲಕ ಪ್ರಧಾನಿ ಮೋದಿ ಪಕ್ಷದ ಮೇಲೆ ತೋರಿಸಿದ ನಂಬಿಕೆ ತುಂಬಾ ಮುಖ್ಯ, ನಾನು ಅವರ ನಂಬಿಕೆಗೆ ಸದಾ ಬದ್ಧನಾಗಿದ್ದೇನೆ ಎಂದು ಹೇಳಿದರು. ಕಳೆದ ಸಲ ಸೋತ ಕ್ಷೇತ್ರಗಳಲ್ಲಿ ಎಲ್‌ಜೆಪಿ ಸ್ಪರ್ಧಿಸುತ್ತಿದೆ ಎಂಬ ಚರ್ಚೆಗೆ ಪ್ರತಿಕ್ರಿಯೆ ನೀಡಿದ ಚಿರಾಗ್​, ನಮ್ಮ ಪಕ್ಷವು ಈಗ 19 ಸ್ಥಾನಗಳನ್ನು ಗೆದ್ದಿದೆ, ನನ್ನ 29 ಅಭ್ಯರ್ಥಿಗಳಲ್ಲಿ 26 ಅಭ್ಯರ್ಥಿಗಳು ಸೋತ ಸ್ಥಾನಗಳಲ್ಲಿ ಸ್ಪರ್ಧಿಸಿದ್ದು ಸತ್ಯ ಎಂದರು.
ಪಕ್ಷ ಇಷ್ಟೆಲ್ಲಾ ನೀಡಿದ ಮೇಲೂ ನಾನು ಏನನ್ನಾದರು ಕೇಳಿದರೆ, ನನಗಿಂತ ದುರಾಸೆಯ ವ್ಯಕ್ತಿ ಇನ್ನೊಬ್ಬ ಇರಲು ಸಾಧ್ಯವಿಲ್ಲ, ಇದಾದ ನಂತರವೂ ನಾನು ಪಶ್ಚಾತ್ತಾಪ ಪಟ್ಟರೆ, ಖುಷಿ ಹೇಗೆ ಆಚರಿಸಬೇಕೆಂದು ನನಗೆ ತಿಳಿದಿಲ್ಲ ಎಂದು ಹೇಳಿದರು. ಇತ್ತೀಚಿನ ಸಂಪುಟ ರಚನೆಯಲ್ಲಿ ಇಬ್ಬರು ಎಲ್​ಜೆಪಿ ಶಾಸಕರನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಂಡಿದ್ದರ ಬಗ್ಗೆ ಮಾತನಾಡಿದ್ದ ಚಿರಾಗ್, ಇದು ಅವರ ತಂದೆ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಕನಸ್ಸು ಮತ್ತು ಪ್ರಮುಖ ಗೆಲುವು ಎಂದು ಹೇಳಿದ್ದಾರೆ.
ನಮ್ಮ ಪಕ್ಷದ ಈ ಸಾಧನೆಯನ್ನು ತಂದೆ ರಾಮ್ ವಿಲಾಸ್ ಪಾಸ್ವಾನ್ ಮೇಲಿನಿಂದಲೇ ನೋಡಿ ಸಂತೋಷಪಡುತ್ತಾರೆ, ಎಲ್​ಜೆಪಿಯ ಇಬ್ಬರು ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪಕ್ಷವು ಖಂಡಿತವಾಗಿಯೂ ದೊಡ್ಡ ವಿಜಯವನ್ನು ಸಾಧಿಸಿದೆ. ಈ ರೀತಿಯ ದೊಡ್ಡ ಗೆಲುವುಗಳು, ಹೆಚ್ಚಿನ ಜವಾಬ್ದಾರಿಗಳನ್ನು ನೀಡುತ್ತವೆ, ಆ ಜವಾಬ್ದಾರಿಗಳ ಬಗ್ಗೆ ನನಗೆ ಅರಿವಿದೆ ಎಂದರು(ಏಜೆನ್ಸೀಸ್​).