ದೇಶ

ಅರುಣಾಚಲದಲ್ಲಿ ಚೀನಾ ಕುತಂತ್ರ: ಡ್ರ್ಯಾಗನ್​ಗೆ ಎದುರೇಟು ನೀಡಿದ ಶೌರ್ಯ ಕಮಾಂಡೋ!

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮಹಾನಿರ್ದೇಶಕ (ಡಿಜಿ) ಶತ್ರುಜೀತ್ ಕಪೂರ್ ಅವರು ಹೇಳಿದ ಮಹತ್ವದ ಮಾತುಗಳು ಚೀನಾದ ಕುತಂತ್ರವನ್ನು ಬಯಲು ಮಾಡಿವೆ. ‘ಇತ್ತೀಚೆಗೆ ಅರುಣಾಚಲ ಪ್ರದೇಶದ ಹಲವು ಸ್ಥಳಗಳಲ್ಲಿ ಮುಖಾಮುಖಿ ಸಂಘರ್ಷ ಉಂಟಾಗಿದ್ದು, ಅದು ಈಗಲೂ ಮುಂದುವರಿದಿದೆ. ಅಲ್ಲಿ ನಮ್ಮ ಹೊಸ ಶೌರ್ಯ ಕಮಾಂಡೋ ತಂಡಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿವೆ’ ಎಂದು ಕಪೂರ್ ಅಕ್ಟೋಬರ್ 22ರಂದು ಹೇಳಿದರು.

ಎತ್ತರದ ಹಿಮಾವೃತ ಪ್ರದೇಶಗಳಲ್ಲಿ ಗುಪ್ತಚರ ಮಾಹಿತಿ ಸಂಗ್ರಹಿಸುವುದು ಮತ್ತು ಅಗತ್ಯ ಬಿದ್ದಾಗ ಗೆರಿಲ್ಲಾ ಯುದ್ಧತಂತ್ರ, ಅಂದರೆ ಶತ್ರು ಪಡೆಗಳ ಮೇಲೆ ಹಠಾತ್ ದಾಳಿ ನಡೆಸುವುದು ಶೌರ್ಯ ಕಮಾಂಡೋಗಳ ಮುಖ್ಯ ಕೆಲಸ. ಈ ಶೌರ್ಯ ಕಮಾಂಡೋಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ಅರುಣಾಚಲ ಪ್ರದೇಶದಲ್ಲಿ ಚೀನಾ ಹೊಸ ಸಂಕಷ್ಟ ಸೃಷ್ಟಿಸುತ್ತಿದೆಯೇ ಮತ್ತು ಭಾರತ ಇದನ್ನು ಹೇಗೆ ಎದುರಿಸಲಿದೆ? ಈ ಕುರಿತಾದ ಅವಲೋಕನ ಇಲ್ಲಿದೆ.

ಅರುಣಾಚಲ ಪ್ರದೇಶದ ಭೂಪ್ರದೇಶವನ್ನು ಡ್ರಾ್ಯಗನ್ ರಾಷ್ಟ್ರ ಚೀನಾ ತನ್ನದೆಂದು ಪ್ರತಿಪಾದಿಸುತ್ತದೆ ಮತ್ತು ಅದನ್ನು ದಕ್ಷಿಣ ಟಿಬೆಟ್ ಅಥವಾ ಜಾಂಗ್ನಾನ್ ಎಂದು ಕರೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ 3 ರೀತಿಯ ಚಟುವಟಿಕೆಗಳು ವರದಿಯಾಗಿವೆ.

1. ಭಾರತೀಯ ಪ್ರದೇಶದಲ್ಲಿ ಚೀನೀ ಸೈನಿಕರ ಟೆಂಟ್!

ಅರುಣಾಚಲ ಪ್ರದೇಶದ ಅಪ್ಪರ್ ಸುಬನ್ಸಿರಿ ಜಿಲ್ಲೆಯಲ್ಲಿ 2026ರ ಜುಲೈ ಕೊನೆಯಿಂದ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ಆಂಗ್ಲ ಪತ್ರಿಕೆಯೊಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ, ತಿಳಿಸಿದೆ. ತಕ್ಸಿಂಗ್ ಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ವಿು (ಪಿಎಲ್​ಎ) ಸೈನಿಕರು ಮುಖಾಮುಖಿಯಾಗಿದ್ದಾರೆ. ವರದಿಯ ಪ್ರಕಾರ, ಜುಲೈನಲ್ಲಿ ಉಭಯ ಸೇನೆಗಳ ನಡುವೆ ಸಣ್ಣ ಘರ್ಷಣೆ ನಡೆದಿದೆ. ಇದರ ನಂತರ ಸೈನಿಕರು ಹಿಂತಿರುಗಿದ್ದಾರೆ, ಆದರೆ ಕೆಲವೇ ದಿನಗಳಲ್ಲಿ ಚೀನೀ ಸೈನಿಕರು ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದಿರುಗಿ, ಎಲ್​ಎಸಿಯಿಂದ 6 ರಿಂದ 7 ಕಿ.ಮೀ. ಒಳಗೆ ಭಾರತೀಯ ಭೂಪ್ರದೇಶದಲ್ಲಿ ತಮ್ಮ ಟೆಂಟ್​ಗಳನ್ನು ಹಾಕಿದರು.

ಇದಕ್ಕೆ ಪ್ರತಿಯಾಗಿ ಭಾರತವೂ ತನ್ನ ಸೈನಿಕರ ನಿಯೋಜನೆಯನ್ನು ಹೆಚ್ಚಿಸಿದೆ. ಅರುಣಾಚಲ ಪ್ರದೇಶದ ತಾಗಿನ್ ಸಮುದಾಯದ ವಿದ್ಯಾರ್ಥಿ ಸಂಘಟನೆ ಆಲ್ ತಾಗಿನ್ ಸ್ಟೂಡೆಂಟ್ಸ್ ಯೂನಿಯನ್​ಪ್ರಕಾರ, ಇಂತಹ ಚೀನೀ ಒಳನುಸುಳುವಿಕೆ ಹಿಂದೆಂದೂ ಕಂಡುಬಂದಿರಲಿಲ್ಲ. ಗಡಿ ಗ್ರಾಮಗಳಲ್ಲಿ ಭಯದ ವಾತಾವರಣವಿದೆ. ಸೆಪ್ಟೆಂಬರ್ 6ರಂದು ಉಭಯ ಸೇನೆಗಳ ನಡುವೆ ಕೋರ್ ಕಮಾಂಡರ್ ಮಟ್ಟದ ಸಭೆಯೂ ನಡೆಯಿತು, ಆದರೆ ಸದ್ಯಕ್ಕೆ ಪರಿಸ್ಥಿತಿ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಿಲ್ಲ.

2. ಮಿಲಿಟರಿ ಮೂಲಸೌಕರ್ಯ

ಬ್ರಿಟಿಷ್ ಪತ್ರಿಕೆ ‘ದಿ ಇಂಡಿಪೆಂಡೆಂಟ್ 2026ರ ಸೆಪ್ಟೆಂಬರ್ 12ರಂದು ಉಪಗ್ರಹ ಚಿತ್ರಗಳ ಆಧಾರದ ಮೇಲೆ, ಅರುಣಾಚಲ ಪ್ರದೇಶದ ಸುತ್ತಮುತ್ತ ಚೀನಾ ವೇಗವಾಗಿ ಮೂಲಸೌಕರ್ಯ ಗಳನ್ನು ವಿಸ್ತರಿಸುತ್ತಿದೆ ಎಂದು ಹೇಳಿದೆ. ಇದರಲ್ಲಿ ಹೊಸ ರಸ್ತೆಗಳು, ಕಟ್ಟಡಗಳು ಮತ್ತು ಹೆಲಿಪ್ಯಾಡ್​ಗಳು ಕೂಡ ಸೇರಿವೆ. ಓಪನ್ ಸೋರ್ಸ್ ಗುಪ್ತಚರ ಸಂಸ್ಥೆ ಜೇನ್ಸ್ ಪ್ರಕಾರ, ಟಿಬೆಟ್​ನ ಲ್ಹುಂಟ್ಸೆ ಕೌಂಟಿಯ ಉತ್ತರದ ಭಾಗದಲ್ಲಿರುವ ಹಲವು ವಿವಾದಿತ ಪ್ರದೇಶಗಳಲ್ಲಿ ಹೊಸ ಮೂಲಸೌಕರ್ಯಗಳನ್ನು ನಿರ್ವಿುಸಲಾಗಿದೆ. ಇದರ ದಕ್ಷಿಣಕ್ಕೆ ಭಾರತದ ಅಪ್ಪರ್ ಸುಬನ್ಸಿರಿ ಜಿಲ್ಲೆ ಇದೆ. ಇಲ್ಲಿ 2019ರ ಆರಂಭದಲ್ಲೂ ಹೊಸ ಕಟ್ಟಡಗಳು ಕಂಡುಬಂದಿದ್ದವು.

ಈಗ ಇಲ್ಲಿ ಸಮತಟ್ಟಾದ ಭೂಮಿ, ಹೊಸ ಮೂಲಸೌಕರ್ಯ, ಇಂಜಿನಿಯರಿಂಗ್ ಕಾಮಗಾರಿಗೆ ಸಂಬಂಧಿಸಿದ ವಾಹನಗಳು ಮತ್ತು ಸಿಮೆಂಟ್ ಸ್ಥಾವರ ಇರುವುದು ಕಾಣಿಸುತ್ತಿದೆ. 2026ರ ಆಗಸ್ಟ್​ನಲ್ಲಿ ಅಮೆರಿಕದ ಉಪಗ್ರಹ ಕಂಪನಿ ವ್ಯಾಂಟೋರ್ ಬಿಡುಗಡೆ ಮಾಡಿದ ಕೆಲವು ಹೊಸ ಚಿತ್ರಗಳು ಈ ನಿರ್ಮಾಣ ಕಾರ್ಯ ಇನ್ನೂ ಮುಂದುವರಿದಿದೆ ಎಂಬುದನ್ನು ತೋರಿಸಿವೆ. ತಜ್ಞರ ಪ್ರಕಾರ, ಈ ಮೂಲಸೌಕರ್ಯವು ಮಿಲಿಟರಿ ಬೇಸ್​ನಂತೆ ಕಾಣುತ್ತಿದೆ.

3. ಏಕಪಕ್ಷೀಯ ಘೊಷಣೆ

ಅರುಣಾಚಲ ಪ್ರದೇಶದ ಹಲವು ಪ್ರದೇಶಗಳ ಹೆಸರು ಗಳನ್ನು ಚೀನಾ ಏಕಪಕ್ಷೀಯವಾಗಿ ಬದಲಾಯಿಸುತ್ತಲೇ ಇರು ತ್ತದೆ. ಚೀನಾ 2017ರಲ್ಲಿ 6, 2021ರಲ್ಲಿ 15 ಮತ್ತು 2023ರಲ್ಲಿ 11 ಸ್ಥಳಗಳ ಹೊಸ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಭಾರತವು ಪ್ರತಿ ಬಾರಿಯೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರತಿಯಾಗಿ 2026ರ ಆಗಸ್ಟ್​ನಲ್ಲಿ 27 ಸ್ಥಳಗಳ ಹೆಸರುಗಳು ಮತ್ತು ಅವುಗಳ ವೈಶಿಷ್ಟ್ಯಗಳನ್ನು ಅಧಿಕೃತ ನಕ್ಷೆಯಲ್ಲಿ ಗುರುತು ಮಾಡಿದೆ. ಆದಾಗ್ಯೂ, ‘ಚೀನೀ ಸೇನೆಯು ನಿಗದಿತ ಗಸ್ತು ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸಿದಾಗ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್​ಎಸಿ) ಕಾಲಕಾಲಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತದೆ. ಗಡಿ ನಿರ್ವಹಣೆಯನ್ನು ಉತ್ತಮಪಡಿಸಲು ಎಲ್​ಎಸಿ ಬಗೆಗಿನ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಲು ಉಭಯ ದೇಶಗಳು ಸಮ್ಮತಿಸಿವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಅಕ್ಟೋಬರ್ 23ರಂದು ಹೇಳಿದ್ದಾರೆ.

ಚೀನಾ ಎದುರಿಸಲು ಭಾರತದ ಸಿದ್ಧತೆಗಳು

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮಹಾನಿರ್ದೇಶಕ (ಡಿಜಿ) ಶತ್ರುಜೀತ್ ಕಪೂರ್ ಅವರು ಮುಖ್ಯವಾಗಿ 4 ಅಗತ್ಯತೆಗಳನ್ನು ತಿಳಿಸಿದ್ದಾರೆ.

ವಿಶೇಷ ಪಡೆ: ಇಂದಿನ ಯುಗದಲ್ಲಿ ನಮಗೆ ಗೆರಿಲ್ಲಾ ಯುದ್ಧದ ಅಗತ್ಯವಿಲ್ಲ. ಸೇನೆಗಿಂತ ಭಿನ್ನವಾದ, ಎತ್ತರದ ಪರ್ವತ ಪ್ರದೇಶಗಳಲ್ಲಿ ಯುದ್ಧ ಮಾಡಬಲ್ಲ ವಿಶೇಷ ತರಬೇತಿ ಪಡೆದ ಪರ್ವತ ಯುದ್ಧಪಡೆಯನ್ನು (ಹೈ-ಆಲ್ಟಿಟ್ಯೂಡ್ ಮೌಂಟೇನ್ ಫೈಟಿಂಗ್ ಫೋರ್ಸ್) ಸಿದ್ಧಪಡಿಸಲಾಗುತ್ತಿದೆ.

ಆಧುನಿಕ ಶಸ್ತ್ರಾಸ್ತ್ರಗಳು: ಐವತ್ತು ವರ್ಷಕ್ಕಿಂತ ಮೇಲ್ಪಟ್ಟ ಐಟಿಬಿಪಿ ಯೋಧರಿಗೆ ತಿಳಿದಿರುವಂತೆ, ಅವರು ಪಡೆಗೆ ಸೇರಿದಾಗ ಯಾವ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದರೋ, ಇಂದಿಗೂ ಹೆಚ್ಚಾಗಿ ಅವನ್ನೇ ಬಳಸುತ್ತಿದ್ದಾರೆ. ಶಸ್ತ್ರಾಸ್ತ್ರಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳಾಗಿದ್ದರೂ, ಬಹುತೇಕ ಹಳೆಯ ರೀತಿಯವೇ ಇವೆ. ಆಧುನೀಕರಣ ಅತ್ಯಗತ್ಯವಾಗಿದ್ದು, ಇದಕ್ಕಾಗಿ ನಾವು ದೊಡ್ಡ ಮಟ್ಟದ ಅನುದಾನ/ವ್ಯವಸ್ಥೆಗಳನ್ನು ಮಾಡಿದ್ದೇವೆ.

ಭೂಗತ ಆಶ್ರಯಗಳು: ಆಧುನಿಕ ಯುದ್ಧ ಪದ್ಧತಿಯಲ್ಲಿ ಭೂಮಿಯ ಮೇಲಿರುವ ಯಾರನ್ನಾದರೂ ಸುಲಭವಾಗಿ ಗುರಿಯಾಗಿಸಬಹುದು. ವೇಗವಾಗಿ ಬದಲಾಗುವ ಯುದ್ಧ ಸಂದರ್ಭಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಗತ ಆಶ್ರಯಗಳನ್ನು ನಿರ್ವಿುಸುವುದು ಅನಿವಾರ್ಯವಾಗಿದೆ. ಪ್ರಾಯೋಗಿಕ ಯೋಜನೆಯಡಿ ಐಟಿಬಿಪಿ ಪಡೆಗಳು ತಮ್ಮ ಗಡಿ ಠಾಣೆಗಳಲ್ಲಿ ಭೂಗತ ರಚನೆಗಳನ್ನು ನಿರ್ವಿುಸಲು ಆರಂಭಿಸಿವೆ.

ಡ್ರೋನ್ ಯುದ್ಧತಂತ್ರ: ರಷ್ಯಾದಂತಹ ಪ್ರಬಲ ದೇಶಕ್ಕೆ ಯೂಕ್ರೇನ್ ಸವಾಲೊಡ್ಡಿತು. ರಷ್ಯಾದ 10-15 ಸಾವಿರ ಸೈನಿಕರು ಪ್ರಾಣ ಕಳೆದುಕೊಂಡರು. ಇರಾನ್ ಕೂಡ ಡ್ರೋನ್​ಗಳ ಮೂಲಕ ಅಮೆರಿಕಕ್ಕೆ ಸವಾಲು ಒಡ್ಡಿದೆ. ನಾವು ಡ್ರೋನ್ ಮತ್ತು ಆಂಟಿ-ಡ್ರೋನ್ ವ್ಯವಸ್ಥೆಗಳ ಕಡೆಗೆ ಮುನ್ನಡೆಯಬೇಕಿದೆ. ನಮ್ಮ -ಠಿ;4,000 ಕೋಟಿ ರೂಪಾಯಿಗಳ ಯೋಜನೆಯಲ್ಲಿ -ಠಿ;1,000 ಕೋಟಿ ರೂಪಾಯಿಗಳನ್ನು ಡ್ರೋನ್​ಗಳಿಗಾಗಿಯೇ ಮೀಸಲಿಟ್ಟಿದ್ದೇವೆ.

ಗಡಿಯಲ್ಲಿ ಶೌರ್ಯ ಕಮಾಂಡೋಗಳ ಸಾಹಸ

‘ಶೌರ್ಯ ಕಮಾಂಡೋಗಳು’ ಭಾರತ-ಚೀನಾ ಗಡಿಯಲ್ಲಿ ಭದ್ರತೆಯನ್ನು ನಿರ್ವಹಿಸುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್, ಅಂದರೆ ಐಟಿಬಿಪಿಯ ವಿಶೇಷ ಯುದ್ಧ ಘಟಕವಾಗಿದೆ (ಸ್ಪೆಷಲ್ ಕಾಂಬ್ಯಾಟ್ ಯೂನಿಟ್). ವಾಸ್ತವವಾಗಿ, 1962ರ ಅಕ್ಟೋಬರ್ 20ರಂದು ಭಾರತ-ಚೀನಾ ಯುದ್ಧ ಪ್ರಾರಂಭವಾದ 4 ದಿನಗಳ ನಂತರ ಐಟಿಬಿಪಿಯನ್ನು ರಚಿಸಲಾಯಿತು. ಎತ್ತರದ ಹಿಮಾವೃತ ಪ್ರದೇಶಗಳಲ್ಲಿ ಗುಪ್ತಚರ ಮಾಹಿತಿ ಸಂಗ್ರಹಿಸುವುದು ಮತ್ತು ಅಗತ್ಯ ಬಿದ್ದಾಗ ಗೆರಿಲ್ಲಾ ಯುದ್ಧತಂತ್ರ, ಅಂದರೆ ಶತ್ರು ಸೈನ್ಯದ ತುಕಡಿಯ ಮೇಲೆ ಹಠಾತ್ ದಾಳಿ ನಡೆಸುವುದು ಇದರ ಮುಖ್ಯ ಕೆಲಸವಾಗಿತ್ತು.

2004ರಿಂದ ಭಾರತ ಮತ್ತು ಚೀನಾ ನಡುವಿನ ಸಂಪೂರ್ಣ 3,488 ಕಿಲೋಮೀಟರ್ ಉದ್ದದ ಗಡಿ, ಅಂದರೆ ವಾಸ್ತವ ನಿಯಂತ್ರಣ ರೇಖೆಯ ಭದ್ರತೆಯ ಜವಾಬ್ದಾರಿಯನ್ನು ಐಟಿಬಿಪಿಗೆ ವಹಿಸಲಾಗಿದೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲೂ ಐಟಿಬಿಪಿಯೇ ಗಡಿ ಕಣ್ಗಾವಲು ನಿರ್ವಹಿಸುತ್ತದೆ. ಪ್ರಸ್ತುತ ಐಟಿಬಿಪಿಯಲ್ಲಿ ಒಂದು ಲಕ್ಷ ಸೈನಿಕರಿದ್ದಾರೆ. 2020ರ ಜೂನ್​ನಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಭೀಕರ ಘರ್ಷಣೆ ನಡೆಯಿತು. ಇದರಲ್ಲಿ 20 ಭಾರತೀಯ ಯೋಧರು ಹುತಾತ್ಮರಾದರು. ಆ ನಂತರ ಚೀನಾ ಗಡಿಯಲ್ಲಿ ನೇರ ಮುಖಾಮುಖಿ ಸಂಘರ್ಷದ ಅಪಾಯ ಸದಾ ಇತ್ತು. ಗಡಿಯಲ್ಲಿ ನಿಯಮಿತವಾಗಿ ಗಸ್ತು ತಿರುಗುವ ಬೆಟಾಲಿಯಲ್ ಸಾಕಾಗುವುದಿಲ್ಲ ಎಂದು ಐಟಿಬಿಪಿಗೆ ಅರಿವಾಯಿತು.

ಎತ್ತರದ ಪ್ರದೇಶಗಳಲ್ಲಿ ಚೀನೀ ಸೇನೆಯನ್ನು ಎದುರಿಸಲು ವಿಶೇಷ ತರಬೇತಿ ಪಡೆದ ಪಡೆಯ ಅಗತ್ಯವಿತ್ತು. ಹಿಮಾವೃತ ಪ್ರದೇಶಗಳ ಕಠಿಣ ಚಳಿಯಲ್ಲಿ ಕಾರ್ಯನಿರ್ವಹಿಸಬಲ್ಲ ಚುರುಕಾದ ಯೋಧರನ್ನು ಆಯ್ಕೆ ಮಾಡಿ ಐಟಿಬಿಪಿ ಅವರಿಗೆ ವಿಶೇಷ ತರಬೇತಿಯನ್ನು ನೀಡಿತು. ಈ ಯೋಧರ ಘಟಕಕ್ಕೆ ಶೌರ್ಯ ಕಮಾಂಡೋಸ್ ಎಂದು ಹೆಸರಿಸಲಾಯಿತು. ಪ್ರಸ್ತುತ ಐಟಿಬಿಪಿಯ ಪ್ರತಿಯೊಂದು ಬೆಟಾಲಿಯನ್​ನಲ್ಲೂ ಒಂದು ಶೌರ್ಯ ತಂಡವನ್ನು ನಿಯೋಜಿಸಲಾಗಿದೆ. ಇನ್ನು ಎರಡು ಹೊಸ ತಂಡಗಳನ್ನು ಸಿದ್ಧಪಡಿಸಲಾಗುತ್ತಿದೆ.

ಶೌರ್ಯ ಕಮಾಂಡೋಗಳು ಸೇನೆಯ ಘಾತಕ್ ಪ್ಲಟೂನ್​ಗಿಂತ ಹೇಗೆ ಭಿನ್ನ?

ಭಾರತೀಯ ಸೇನೆಯಲ್ಲಿ ಘಾತಕ್ ಪ್ಲಟೂನ್ ಎಂಬ ಗಣ್ಯ ತುಕಡಿ (ಎಲೈಟ್ ಫೋರ್ಸ್ ಯೂನಿಟ್) ಇದೆ. ಇದೇ ಮಾದರಿಯಲ್ಲಿ ಐಟಿಬಿಪಿಯಲ್ಲಿ ಶೌರ್ಯ ಕಮಾಂಡೋಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಘಾತಕ್ ಪ್ಲಟೂನ್​ನ ಒಂದು ತುಕಡಿಯಲ್ಲಿ 20 ಸೈನಿಕರಿರುತ್ತಾರೆ. ಇವರನ್ನು ಒಂದೂವರೆ ತಿಂಗಳ ಕಾಲ ಕರ್ನಾಟಕದ ಬೆಳಗಾವಿಯಲ್ಲಿರುವ ಕಮಾಂಡೋ ತರಬೇತಿ ಶಾಲೆಗೆ ಕಳುಹಿಸಲಾಗುತ್ತದೆ. ನಂತರ ಅತಿ ಎತ್ತರದ ಪ್ರದೇಶಗಳ ಯುದ್ಧತಂತ್ರಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಹೈ-ಆಲ್ಟಿ ಟ್ಯೂಡ್ ವಾರ್​ಫೇರ್ ಸ್ಕೂಲ್ ಹಾಗೂ ಉಗ್ರವಾದ ಪೀಡಿತ ಅಥವಾ ದಟ್ಟ ಅರಣ್ಯ ಪ್ರದೇಶಗಳಲ್ಲಿ ಸೇನಾ ಕಾರ್ಯಾಚರಣೆ ನಡೆಸಲು ಸಿಕ್ಕಿಂನ ಕೌಂಟರ್ ಇನ್ಸರ್ಜೆನ್ಸಿ ಆಂಡ್ ಜಂಗಲ್ ವಾರ್​ಫೇರ್ ಸ್ಕೂಲ್​ನಲ್ಲಿ ತರಬೇತಿ ನೀಡಲಾಗುತ್ತದೆ.

ಘಾತಕ್ ಪ್ಲಟೂನ್​ನ ಕೆಲಸ ಬಯಲು ಸೀಮೆ ಅಥವಾ ಹಿಮಾವೃತ ಪ್ರದೇಶ ಹೀಗೆ ಯಾವುದೇ ರೀತಿಯ ಭೂಪ್ರದೇಶದಲ್ಲೂ ಸೇನಾ ಮುಂಚೂಣಿಯಲ್ಲಿದ್ದು, ಶತ್ರುವಿನ ಚಲನವಲನಗಳನ್ನು ಪತ್ತೆಹಚ್ಚಿ ದಾಳಿ ಮಾಡು ವುದಾಗಿದೆ. ಆದರೆ, ಶೌರ್ಯ ಕಮಾಂಡೋಗಳ ಮುಖ್ಯ ಕಾರ್ಯ ವಿಶೇಷವಾಗಿ ಅತ್ಯಂತ ಶೀತ ಪ್ರದೇಶಗಳಲ್ಲಿ ಸೇನಾ ಕಾರ್ಯಾಚರಣೆಯ ಮುಂಚೂಣಿಯನ್ನು ವಹಿಸಿಕೊಳ್ಳು ವುದು ಮತ್ತು ರಕ್ಷಣಾತ್ಮಕವಾಗಿ ಪ್ರತ್ಯುತ್ತರ ನೀಡುವುದಾಗಿದೆ.