ದಲೈ ಲಾಮಾ ಗ್ರ್ಯಾಮಿ ಸಂಭ್ರಮಕ್ಕೆ ಚೀನಾ ಕ್ಯಾತೆ..! ಇದು ಧರ್ಮದ ಹೆಸರಲ್ಲಿ ನಡೆಯುತ್ತಿರುವ ಪ್ರತ್ಯೇಕತಾವಾದ ಎಂದು ಬೀಜಿಂಗ್ ಕಿಡಿ 
ದೇಶ

ದಲೈ ಲಾಮಾ ಗ್ರ್ಯಾಮಿ ಸಂಭ್ರಮಕ್ಕೆ ಚೀನಾ ಕ್ಯಾತೆ..! ಇದು ಧರ್ಮದ ಹೆಸರಲ್ಲಿ ನಡೆಯುತ್ತಿರುವ ಪ್ರತ್ಯೇಕತಾವಾದ ಎಂದು ಬೀಜಿಂಗ್ ಕಿಡಿ | Dalai Lama

ಬೀಜಿಂಗ್: ಟಿಬೆಟ್‌ನ ಅಧ್ಯಾತ್ಮಿಕ ಗುರು 90 ವರ್ಷದ ದಲೈ ಲಾಮಾ(Dalai Lama) ಅವರಿಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಲಭಿಸಿರುವುದಕ್ಕೆ ಚೀನಾ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಅಂತಾರಾಷ್ಟ್ರೀಯ ಮನ್ನಣೆಯನ್ನು ದಲೈ ಲಾಮಾ ಅವರು ಚೀನಾ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಬೀಜಿಂಗ್ ನೇರ ಆರೋಪ ಮಾಡಿದೆ.

ಘಟನೆಯ ಹಿನ್ನೆಲೆ

ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಫೆಬ್ರವರಿ 1ರಂದು ನಡೆದ 68ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಲೈ ಲಾಮಾ ಅವರ 'Meditations: The Reflections of His Holiness the Dalai Lama ಎಂಬ ಅಲ್ಬಮ್‌ಗೆ 'ಅತ್ಯುತ್ತಮ ಆಡಿಯೋ ಬುಕ್, ನರೇಷನ್ ಮತ್ತು ಸ್ಟೋರಿಟೆಲ್ಲಿಂಗ್ ರೆಕಾರ್ಡಿಂಗ್ ವಿಭಾಗದಲ್ಲಿ ಪ್ರಶಸ್ತಿ ಒಲಿದಿದೆ. ಸರೋದ್ ವಾದಕ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರ ಸಹಯೋಗದಲ್ಲಿ ಮೂಡಿಬಂದ ಈ ಅಲ್ಬಮ್ ಶಾಂತಿ ಮತ್ತು ಕರುಣೆಯ ಸಂದೇಶವನ್ನು ಸಾರುತ್ತದೆ.

ಚೀನಾದ ಆಕ್ಷೇಪವೇನು..?

ಈ ಬಗ್ಗೆ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ದಲೈ ಲಾಮಾ ಅವರ ಸಾಧನೆಯನ್ನು ಹೀಗೆ ಟೀಕಿಸಿದ್ದಾರೆ.

ಪ್ರತ್ಯೇಕತಾವಾದಿ ಹಣೆಪಟ್ಟಿ

ಚೀನಾವು 90 ವರ್ಷದ ದಲೈ ಲಾಮಾ ಅವರನ್ನು ಕೇವಲ ಧಾರ್ಮಿಕ ನಾಯಕ ಎಂದು ಒಪ್ಪಲು ಸಿದ್ಧವಿಲ್ಲ. ಬದಲಿಗೆ, ಅವರನ್ನು ಧರ್ಮದ ಸೋಗಿನಲ್ಲಿ ಚೀನಾ ವಿರೋಧಿ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ನಡೆಸುತ್ತಿರುವ ರಾಜಕೀಯ ದೇಶಭ್ರಷ್ಟ ಎಂದು ಚೀನಾ ಬಣ್ಣಿಸಿದೆ.

ಪ್ರಶಸ್ತಿಯ ವಿರೋಧ

ದಲೈ ಲಾಮಾ ಅವರಿಗೆ ಈ ಗೌರವ ನೀಡಿರುವುದನ್ನು ಚೀನಾ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ, ಅಂತಾರಾಷ್ಟ್ರೀಯ ವೇದಿಕೆಗಳು ಅಥವಾ ಪ್ರಶಸ್ತಿಗಳನ್ನು ದಲೈ ಲಾಮಾ ಅವರು ತಮ್ಮ ಚೀನಾ ವಿರೋಧಿ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.

ರಾಜಕೀಯ ಕುತಂತ್ರ

ಈ ಪ್ರಶಸ್ತಿಯು ಕೇವಲ ಕಲೆ ಅಥವಾ ಸಾಹಿತ್ಯಕ್ಕೆ ಸೀಮಿತವಾಗಿಲ್ಲ, ಬದಲಿಗೆ ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಮತ್ತು ಚೀನಾದ ಪ್ರತಿಷ್ಠೆಗೆ ಧಕ್ಕೆ ತರಲು ಬಳಸಿಕೊಳ್ಳಲಾಗುತ್ತಿರುವ ರಾಜಕೀಯ ಸಾಧನ ಎಂದು ಬೀಜಿಂಗ್ ಟೀಕಿಸಿದೆ.

ಧಾರ್ಮಿಕ ಸೋಗು

ದಲೈ ಲಾಮಾ ಅವರು ಅಧ್ಯಾತ್ಮದ ಹೆಸರಿನಲ್ಲಿ ಟಿಬೆಟ್ ಅನ್ನು ಚೀನಾದಿಂದ ಬೇರ್ಪಡಿಸುವ ಸಂಚು ನಡೆಸುತ್ತಿದ್ದಾರೆ ಎಂಬುದು ಚೀನಾದ ಹಳೆಯ ಮತ್ತು ಸ್ಥಿರವಾದ ಆರೋಪವಾಗಿದ್ದು, ಗ್ರ್ಯಾಮಿ ಪ್ರಶಸ್ತಿಯ ಸಂದರ್ಭದಲ್ಲೂ ಅದನ್ನು ಪುನರುಚ್ಚರಿಸಿದೆ.

ದಲೈ ಲಾಮಾ ಅವರ ವಿನಮ್ರ ಪ್ರತಿಕ್ರಿಯೆ

ಪ್ರಶಸ್ತಿ ಘೋಷಣೆಯಾದ ನಂತರ ಪ್ರತಿಕ್ರಿಯಿಸಿದ ದಲೈ ಲಾಮಾ, ಈ ಗೌರವವನ್ನು ನಾನು ಕೃತಜ್ಞತೆ ಮತ್ತು ನಮ್ರತೆಯಿಂದ ಸ್ವೀಕರಿಸುತ್ತೇನೆ. ಇದನ್ನು ನಾನು ವೈಯಕ್ತಿಕ ಸಾಧನೆ ಎಂದು ಭಾವಿಸುವುದಿಲ್ಲ, ಬದಲಿಗೆ ಎಂಟು ಶತಕೋಟಿ ಮಾನವರ ಹಿತದೃಷ್ಟಿಯಿಂದ ನಾವು ಹಂಚಿಕೊಳ್ಳಬೇಕಾದ ಜಾಗತಿಕ ಜವಾಬ್ದಾರಿಯ ಗುರುತಿಸುವಿಕೆ ಎಂದು ಭಾವಿಸುತ್ತೇನೆ ಎಂದಿದ್ದಾರೆ. ಅವರ ಪರವಾಗಿ ಸಂಗೀತಗಾರ ರೂಫಸ್ ವೈನ್ ರೈಟ್ ಪ್ರಶಸ್ತಿ ಸ್ವೀಕರಿಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ

ದಲೈ ಲಾಮಾ ಅವರು ಅಮೆರಿಕದ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಕೇತಾಂಜಿ ಬ್ರೌನ್ ಜಾಕ್ಸನ್ ಮತ್ತು ಜನಪ್ರಿಯ ನಿರೂಪಕ ಟ್ರೆವರ್ ನೋವಾ ಅವರಂತಹ ಪ್ರಭಾವಿಗಳನ್ನು ಹಿಂದಿಕ್ಕಿ ಈ ಪ್ರಶಸ್ತಿ ಗೆದ್ದಿದ್ದಾರೆ. ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಲಾಮಾ ಅವರಿಗೆ ಬೆಂಬಲ ಸೂಚಿಸುತ್ತಿದ್ದರೆ, ಚೀನಾದ ಈ ಖಂಡನೆಯು ರಾಜತಾಂತ್ರಿಕ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದೆ,(ಏಜೆನ್ಸೀಸ್).