ಶತ್ರುರಾಷ್ಟ್ರಗಳ ಬೇಹುಗಾರಿಕೆ 
ದೇಶ

ಈಶಾನ್ಯ ಭಾರತದಲ್ಲಿ ಚೀನಾ, ಪಾಕ್​ನ ಡಬಲ್ ಗೇಮ್

ಚೀನಾ, ಬಾಂಗ್ಲಾದೇಶದೊಂದಿಗಿನ ಗಡಿಭಾಗದ ಬಹುಪಾಲನ್ನು ಈಶಾನ್ಯ ಭಾರತದ ರಾಜ್ಯಗಳು ಹಂಚಿಕೊಂಡಿವೆ. ಆದ್ದರಿಂದ, ಆಂತರಿಕ ಭದ್ರತೆಯ ನಿಟ್ಟಿನಲ್ಲಿ ಇವು ಬಹು ಸೂಕ್ಷ್ಮವಾದ ರಾಜ್ಯಗಳು. ಚೀನಾ ಮತ್ತು ಪಾಕಿಸ್ತಾನ ದೇಶಗಳು ಗಡಿಪ್ರದೇಶದಲ್ಲಿ ಒಂದಿಲ್ಲ ಒಂದು ಉದ್ಧಟತನ ಮಾಡುತ್ತಲೇ ಇರುತ್ತವೆ. ಅರುಣಾಚಲ ಪ್ರದೇಶದಲ್ಲಿ ಬೇಹುಗಾರಿಕಾ ಜಾಲಗಳು ಪತ್ತೆಯಾಗಿರುವುದು ಸದ್ಯದ ವಿದ್ಯಮಾನ. ಈ ಕುರಿತಾದ ವಿವರ ಇಲ್ಲಿದೆ.

ಈಶಾನ್ಯ ಭಾರತದ ಪ್ರಮುಖ ರಾಜ್ಯ ಅರುಣಾಚಲ ಪ್ರದೇಶ. ಇತ್ತೀಚೆಗೆ ಅಭಿವೃದ್ಧಿಯಲ್ಲಿ ಹೊಸ ಮೈಲಿಗಲ್ಲುಗಳನ್ನು ಕಾಣುತ್ತಿರುವ ರಾಜ್ಯ. ಮೂಲಸೌಕರ್ಯಗಳು ವಿಸ್ತರಣೆಗೊಂಡು, ಭವಿಷ್ಯಕ್ಕಾಗಿ ಹೊಸ ಕನಸುಗಳನ್ನು ಕಟ್ಟಿಕೊಳ್ಳುತ್ತಿದೆ. ಪ್ರವಾಸೋದ್ಯಮಕ್ಕೂ ತೆರೆದುಕೊಂಡಿದೆ. ಆದರೆ, ಈ ಅರುಣಾಚಲದ ಮೇಲೆ ಡ್ರ್ಯಾಗನ್​ ರಾಷ್ಟ್ರ ಚೀನಾದ ಕೆಂಗಣ್ಣು ಸದಾ ಇದ್ದದ್ದೇ. ಚೀನಾದ ಈ ಕಿತಾಪತಿಗೆ ಪಾಕಿಸ್ತಾನದ ಬೆಂಬಲ ಬೇರೆ. ಈ ಎರಡೂ ರಾಷ್ಟ್ರಗಳ ಕರಾಳತನಕ್ಕೆ ಮತ್ತೆ ಮತ್ತೆ ಸಾಕ್ಷ್ಯಗಳು ಸಿಗುತ್ತಲೇ ಇವೆ. ಅರುಣಾಚಲ ಪ್ರದೇಶದಲ್ಲಿ ಬೇಹುಗಾರಿಕೆಯ ಜಾಲಗಳನ್ನು ಭದ್ರತಾ ಪಡೆಗಳು ಭೇದಿಸಿವೆ. 

ಪೊಲೀಸರು ಕಳೆದ 11 ದಿನಗಳಲ್ಲೇ ಪ್ರತ್ಯೇಕ ಪ್ರಕರಣಗಳಲ್ಲಿ ಪಾಕಿಸ್ತಾನದಿಂದ ಬಂದ ಬೇಹುಗಾರಿಕಾ ಜಾಲದ ನಾಲ್ವರನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ಪಾಕ್​ನಿಂದ ಬೇಹುಗಾರಿಕೆಯ ಹಲವು ಜಾಲಗಳು ಈಶಾನ್ಯ ರಾಜ್ಯಗಳಲ್ಲಿ, ಅದರಲ್ಲೂ, ಅಸ್ಸಾಂ, ಅರುಣಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಹಿತಿಯು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಮಾತ್ರವಲ್ಲ, ಈ ಬಂಧಿತ ವ್ಯಕ್ತಿಗಳು ಸೇನೆಯ ಚಲನವಲನ ಮತ್ತು ಗಡಿಪ್ರದೇಶ ಬಳಿಯ ಸೂಕ್ಷ್ಮ ಮಾಹಿತಿಗಳನ್ನು ಪಾಕ್ ಹ್ಯಾಂಡ್ಲರ್ಗಳಿಗೆ ಕಳುಹಿಸುತ್ತಿರುವ ಆತಂಕಕಾರಿ ಸಂಗತಿ ಬಯಲಾಗಿದೆ. 

ಬೇಹು ಗಾರಿಕೆ ನಡೆಸುತ್ತಿರುವ ವ್ಯಕ್ತಿಗಳು ಪಾಕ್ ಮೂಲದವರಾದರೂ, ಇವರು ಚೀನಾದ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ವಿಚಾರಣೆಯ ವೇಳೆ ತಿಳಿದು ಬಂದಿದೆ. ಅಲ್ಲದೆ, ಗಡಿ ವಾಸ್ತವ ರೇಖೆ ಬಳಿ ಚೀನಾ ಸೇನೆ ನಿಯೋಜನೆಯ ಬಗ್ಗೆ ಸ್ಥಳೀಯರು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ, ಅರುಣಾಚಲ ಪ್ರದೇಶದ ಗಡಿ ವಾಸ್ತವ ರೇಖೆಯ ಬಳಿ ಚೀನಾ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳು ಕಿತಾಪತಿ ನಡೆಸುತ್ತಿರುವುದು ಸಾಬೀತಾಗಿದೆ.

ಎಲ್​ಎಸಿ ಬಳಿ ಚೀನಾ ಚಟುವಟಿಕೆ

ಚೀನಾದ ಸೇನೆ 2024ರ ಸೆಪ್ಟೆಂಬರ್​ನಲ್ಲಿ ಅಂಜಾವ್ ಜಿಲ್ಲೆಯ ಕಪಾವು ಕ್ಷೇತ್ರದಲ್ಲಿ ಸುಮಾರು 60 ಕಿ.ಮೀ.ವರೆಗೆ ಕ್ಯಾಂಪ್​ಗಳನ್ನು ನಿರ್ವಿುಸಿದೆ ಎಂದು ಸ್ಥಳೀಯರು ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಪ್ರಕಾರ, ಪರಿಸ್ಥಿತಿ 2022ರಂತೆ ಇದ್ದು, ಚೀನಾ ಸೇನೆಯ ಚಟುವಟಿಕೆ ಹೆಚ್ಚುತ್ತಿದೆ ಎಂದು ತಿಳಿಸಿದ್ದಾರೆ. ಸ್ಥಳೀಯರ ಮಾಹಿತಿ ಹಿನ್ನೆಲೆಯಲ್ಲಿ ಭಾರತೀಯ ಸುರಕ್ಷಾ ಏಜೆನ್ಸಿಗಳು ಕಟ್ಟೆಚ್ಚರ ವಹಿಸಿದ್ದು, ಚೀನಾ ಸೈನಿಕರ ಚಲನವಲನದ ಮೇಲೆ ಸೂಕ್ಷ್ಮ ನಿಗಾ ಇರಿಸಿವೆ.

ಕರಾಳ ಕೃತ್ಯಗಳು

  • ಬೇಹುಗಾರಿಕಾ ಜಾಲದಲ್ಲಿ ಸಕ್ರಿಯರಾಗಿದ್ದ ಪಾಕ್ ಮೂಲದ ವ್ಯಕ್ತಿಗಳು ಸ್ಲಿಪರ್ ಸೆಲ್ ಸೃಷ್ಟಿಸುವ ಪ್ರಯತ್ನದಲ್ಲಿ ತೊಡಗಿದ್ದರು.
  • ಬಂಧಿತರು ಅನುಮಾನಕ್ಕೆ ಆಸ್ಪದ ಬರದಂತೆ ಸ್ಥಳೀಯ ಮುಸ್ಲಿಂ ಸಮುದಾಯದ ಜನರೊಂದಿಗೆ ಬೆರೆತು, ಕಾರ್ಯತಂತ್ರ ಹೆಣೆ ಯುತ್ತಿದ್ದರು. ಬೇಹುಗಾರಿಕಾ ಜಾಲಕ್ಕೆ ಸ್ಥಳೀಯ ಯುವಕರನ್ನು ಸೆಳೆಯಲು ಮತ್ತು ಸ್ಲಿಪರ್ ಸೆಲ್​ನಲ್ಲಿ ತೊಡಗಿಸಲು ಇವರು ಯತ್ನಿಸಿದ್ದರು.
  • ಈ ಜಾಲದಲ್ಲಿ ಬಾಂಗ್ಲಾದೇಶದ ಕೆಲ ಯುವಕರು ತೊಡಗಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
  • ಚೀನಾದಿಂದ ನಿರ್ದೇಶಿತ ಪಾಕ್ ಮೂಲದ ವ್ಯಕ್ತಿಗಳ ಬೇಹುಗಾರಿಕಾ ಜಾಲ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಸಕ್ರಿಯವಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಈಶಾನ್ಯ ಭಾಗದ ಇತರ ರಾಜ್ಯಗಳಲ್ಲೂ ಕಾರ್ಯನಿರ್ವಹಿಸುತ್ತಿವೆಯೇ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ವೆಸ್ಟ್ ಸಿಯಾಂಗ್​ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್​ಪಿ) ಹೇಳಿದ್ದಾರೆ.

ಬೇಹುಗಾರಿಕೆಯಲ್ಲಿ ತೊಡಗಿರುವ ಜಾಲಗಳು ಮತ್ತು ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ತನಿಖಾ ಏಜೆನ್ಸಿಗಳು ಬೇಹುಗಾರಿಕೆಯಲ್ಲಿ ತೊಡಗಿದ್ದ ವ್ಯಕ್ತಿಗಳನ್ನು ಬಂಧಿಸಿದ್ದು, ಈ ಜಾಲದ ಇತರರ ಮೇಲೂ ಕ್ರಮ ಕೈಗೊಳ್ಳಲಾಗುವುದು.

| ಮಾಮಾ ನಾತುಂಗ್ ಗೃಹ ಸಚಿವರು, ಅರುಣಾಚಲ ಪ್ರದೇಶ

ಡ್ರ್ಯಾಗನ್ ಕಿತಾಪತಿ

ದೇಶದ ಈಶಾನ್ಯ ಪ್ರದೇಶದ ರಾಜ್ಯಗಳಲ್ಲಿ ಅದರಲ್ಲೂ ಅರುಣಾಚಲ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಮೂಲಸೌಕರ್ಯಗಳ ವಿಸ್ತಾರ ಚೀನಾದ ಕಣ್ಣನ್ನು ಕೆಂಪಾಗಿಸಿದೆ. ಹಿಂದೆ ಭಾರತ ಗಡಿಪ್ರದೇಶಗಳ ಅಭಿವೃದ್ಧಿಯತ್ತ ಅಷ್ಟೊಂದು ಗಮನ ನೀಡದೆ ಇದ್ದದ್ದು ಡ್ರಾ್ಯಗನ್ ರಾಷ್ಟ್ರಕ್ಕೆ ಅನುಕೂಲಕರವಾಗಿ ಪರಿಣಮಿಸಿತ್ತು. ಅದು ರಾತ್ರೋರಾತ್ರಿ ಅರುಣಾಚಲದ ಹಳ್ಳಿಗಳನ್ನು, ಇತರ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು, ಅಟ್ಟಹಾಸ ಮೆರೆಯುತ್ತಿತ್ತು. ಆದರೆ ಈಗ, ಭಾರತ ಮುಂಚಿನಂತಿಲ್ಲ ಎಂಬ ವಾಸ್ತವಕ್ಕೆ ಜಾಣಕುರುಡು ಪ್ರದರ್ಶಿಸುತ್ತಿರುವ ಅದು, ಅನಗತ್ಯ ಕ್ಯಾತೆಯನ್ನು ಮುಂದುವರಿಸಿದೆ. ತನ್ನದಲ್ಲದ ಭೌಗೋಳಿಕ ಪ್ರದೇಶದ ಮೇಲೆ ಹಕ್ಕು ಸಾಧಿಸಲು ಹವಣಿಸುವುದು ಚೀನಾದ ಧೋರಣೆಯೇ ಆಗಿಬಿಟ್ಟಿದೆ. ಆದರೆ, ಸಣ್ಣರಾಷ್ಟ್ರಗಳಿಗೆ ಬೆದರಿಸಿ ಅಥವಾ ಸಾಲದ ಆಮಿಷ ಒಡ್ಡಿ ಅಲ್ಲಿನ ಪ್ರದೇಶಗಳ ಮೇಲೆ ಹಕ್ಕು ಸಾಧಿಸುವಂತೆ ಭಾರತದಲ್ಲಿ ಮಾಡಲು ಸಾಧ್ಯವಿಲ್ಲ. ಅರುಣಾಚಲ ಪ್ರದೇಶ ತನ್ನ ಅವಿಭಾಜ್ಯ ಅಂಗ ಎಂದು ಭಾರತ ಹಲವು ಬಾರಿ ಸ್ಪಷ್ಟಪಡಿಸಿದೆ ಮತ್ತು ಅಲ್ಲಿನ ನಾಗರಿಕರ ಹಿತಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. 

ರಕ್ಷಣಾ ಕ್ಷೇತ್ರದಲ್ಲಿ ವ್ಯೂಹಾತ್ಮಕ ಮಹತ್ವ ಹೊಂದಿರುವ, ತವಾಂಗ್​ಗೆ ಸರ್ವಋತು ಸಂಪರ್ಕ ಕಲ್ಪಿಸುವ ಸೇಲಾ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ 2024ರ ಮಾರ್ಚ್ 9ರಂದು ಅರುಣಾಚಲ ಪ್ರದೇಶದಲ್ಲಿ ಲೋಕಾರ್ಪಣೆ ಮಾಡುವ ಮೂಲಕ, ಭಾರತ ಯಾವುದೇ ಒತ್ತಡಗಳಿಗೆ ಮಣಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದರು. ಈ ಸುರಂಗದಿಂದ ಮಿಲಿಟರಿ ಸರಕುಗಳನ್ನು ತ್ವರಿತವಾಗಿ ಸಾಗಿಸಲು ಸೇನಾಪಡೆಗಳಿಗೆ ನೆರವಾಗಲಿರುವುದು, ಚೀನಾದ ಅಸಮಾಧಾನಕ್ಕೆ ಕಾರಣ. ಗಡಿ ವಿವಾದವನ್ನು ಜೀವಂತವಾಗಿ ಇಡಲು ಸದಾ ಒಂದಲ್ಲ ಒಂದು ತಂಟೆ ತೆಗೆಯುವುದು ಚೀನಾದ ನೀತಿಯೇ ಆಗಿಹೋಗಿದೆ. ಅರುಣಾಚಲ ವಿಷಯದಲ್ಲಿ ಅಮೆರಿಕ ಕೂಡ ಬಹಿರಂಗವಾಗಿಯೇ ಭಾರತದ ಬೆಂಬಲಕ್ಕೆ ನಿಂತಿದೆ ಎಂಬುದು ಗಮನಾರ್ಹ.

ಹೈಬ್ರಿಡ್ ವಾರ್

ಈಶಾನ್ಯ ರಾಜ್ಯಗಳಲ್ಲಿ ನುಸುಳಲು, ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆ ಮಾಡಲು ಮತ್ತು ಗಡಿ ಪ್ರದೇಶದಲ್ಲಿ ಅಕ್ರಮವಾಗಿ ಮೂಲಸೌಕರ್ಯ ಸೃಷ್ಟಿಸಲು ಹಾಗೂ ಸೇನಾ ಸೌಲಭ್ಯ ಹೆಚ್ಚಿಸಲು ಚೀನಾ ಮತ್ತು ಪಾಕಿಸ್ತಾನ ನಿರಂತರವಾಗಿ ಹವಣಿಸುತ್ತಿವೆ. ಈ ಹಿಂದೆ ಭಾರತೀಯ ಸೇನೆ ಇಂಥ ಹಲವು ಪ್ರಯತ್ನಗಳನ್ನು ವಿಫಲಗೊಳಿಸಿದ್ದಲ್ಲದೆ, ಚೀನಾಗೆ ಸ್ಪಷ್ಟ ಎಚ್ಚರಿಕೆಯನ್ನೂ ನೀಡಿದೆ. ಆದರೆ, ಸುರಕ್ಷಾ ತಜ್ಞರ ಪ್ರಕಾರ ಈಗ ಚೀನಾ ಮತ್ತು ಪಾಕಿಸ್ತಾನ ಎರಡೂ ಸೇರಿ ಹೈಬ್ರೀಡ್ ವಾರ್ ನಡೆಸುತ್ತಿವೆ. ಅಂದರೆ, ಇದು ನೇರ ಯುದ್ಧವಲ್ಲ. ಕಪಟತನ, ಮೋಸದಿಂದ ಗಡಿ ಪ್ರದೇಶದಲ್ಲಿನ ಸೇನಾ ಚಟುವಟಿಕೆಗಳ ಮಾಹಿತಿ ಪಡೆಯುವುದು, ಅದಕ್ಕೆ ಪ್ರತಿಯಾಗಿ ಅವು ತಂತ್ರಗಾರಿಕೆ ರೂಪಿಸುವುದು ಅಥವಾ ಗಡಿಯಲ್ಲಿ ನುಸುಳುವಿಕೆ ಹೆಚ್ಚಿಸುವ ಪ್ರಯತ್ನಗಳು. ಚೀನಾ ಮೇಲಿಂದ ಮೇಲೆ ಇಂಥ ಕೃತ್ಯಗಳನ್ನು ಮಾಡುತ್ತಿದೆಯಾದರೂ, ಈಗ ಪಾಕಿಸ್ತಾನದ ಸಹಕಾರದಿಂದ ಅದನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಹೈಬ್ರಿಡ್ ವಾರ್​ನ ಸ್ವರೂಪ ಬದಲಾಗಿದೆ ಎನ್ನುತ್ತಾರೆ ಸುರಕ್ಷಾ ತಜ್ಞರು.

ಸಂಚು ಬಯಲಿಗೆ

  • ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನಜೀರ್ ಅಹ್ಮದ್ ಮಲಿಕ್ ಹಾಗೂ ಸಬೀರ್ ಅಹ್ಮದ್ ಮೀರ್​ನನ್ನು ಇಟಾನಗರದಲ್ಲಿ ಡಿಸೆಂಬರ್ 11ರಂದು ಬಂಧಿಸಲಾಯಿತು. ಈ ಇಬ್ಬರೂ ಕಂಬಳಿ ಮಾರಾಟಗಾರರಂತೆ ಸೋಗು ಹಾಕಿ ಸಂಚರಿಸುತ್ತಿದ್ದರು ಮತ್ತು ಎಲ್​ಎಸಿ ಬಳಿ ಭಾರತೀಯ ಸೇನೆಯ ಚಲನವಲನ ಹಾಗೂ ಇತರ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಿ ಟೆಲಿಗ್ರಾಮ್ ಆಪ್ ಮೂಲಕ ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್​ಗಳಿಗೆ ರವಾನಿಸುತ್ತಿದ್ದರು. ಅಕ್ರಮ ನುನುಳುವಿಕೆಗೆ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಾಣಿಕೆಗೆ ಸಹಕರಿಸುವಂತೆ ಬೇಹುಗಾರಿಕಾ ಜಾಲದ ವ್ಯಕ್ತಿಗಳಿಗೆ ಸೂಚಿಸಲಾಗಿತ್ತು.
  • ಡಿಸೆಂಬರ್ 13ರಂದು ಕಾಶ್ಮೀರದ ಇನ್ನಿಬ್ಬರು ಯುವಕರನ್ನು ಅರುಣಾಚಲ ಪ್ರದೇಶದಲ್ಲಿ ಬಂಧಿಸಲಾಯಿತು. ಈ ಯುವಕರ ಹೆಸರುಗಳನ್ನು ಪೊಲೀಸ್ ಇಲಾಖೆ ಬಹಿರಂಗಪಡಿಸಿಲ್ಲ. ಆದರೆ, ಈ ಜಾಲ ಅರುಣಾಚಲಕ್ಕೆ ಸೀಮಿತವಾಗಿರದೆ, ಅಸ್ಸಾಂವರೆಗೂ ಹಬ್ಬಿರುವುದು ಇವರ ಬಂಧನ ಮತ್ತು ವಿಚಾರಣೆಯ ಮೂಲಕ ಸ್ಪಷ್ಟಗೊಂಡಿದೆ.
  • ಭಾರತವು ಸಿಕ್ಕಿಂ, ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ 1.20 ಲಕ್ಷ ಸೈನಿಕರನ್ನು ನಿಯೋಜಿಸಿದೆ. ಆದರೂ, ಶತ್ರುರಾಷ್ಟ್ರಗಳ ಬೇಹುಗಾರಿಕಾ ಜಾಲ ಬೆಳೆಯುತ್ತಿರುವುದು ಭದ್ರತೆ ನಿಟ್ಟಿನಲ್ಲಿ ಗಂಭೀರ ಸವಾಲಾಗಿದೆ ಎನ್ನುತ್ತಾರೆ ರಕ್ಷಣಾ ತಜ್ಞರು.
  • ಬೇಹುಗಾರಿಕಾ ಜಾಲದ ಹಲವು ವ್ಯಕ್ತಿಗಳ ಬಂಧನದ ನಂತರ ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ಇತರ ರಾಜ್ಯಗಳಲ್ಲಿಯೂ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಇದನ್ನು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಹತ್ವದ ಅಲರ್ಟ್ ಎಂದು ಪರಿಗಣಿಸಿ ತನಿಖಾ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿವೆ.