ಗಂಗಾ ನದಿ ಡಾಲ್ಫಿನ್ ಜೊತೆ ಮಕ್ಕಳ ಚೆಲ್ಲಾಟ
- ಗಂಗಾ ನದಿ ಡಾಲ್ಫಿನ್ ಜೊತೆ ಮಕ್ಕಳ ಚೆಲ್ಲಾಟ
- ಬಿಹಾರದ ಛಪ್ರಾದಲ್ಲಿ ನಡೆದಿರುವ ಘಟನೆ
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್; ನೆಟ್ಟಿಗರ ಆಕ್ರೋಶ
ಬಿಹಾರ: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ಹರಿದಾಡುತ್ತವೆ. ಆದರೆ ಬಿಹಾರದ ಛಪ್ರಾದಿಂದ ಹೊರಬಂದಿರುವ ಒಂದು ವಿಡಿಯೋ ಮಾತ್ರ ಈಗ ಇಡೀ ದೇಶದ ಗಮನ ಸೆಳೆದಿದೆ. ಅಷ್ಟೇ ಅಲ್ಲ, ಪ್ರತಿಯೊಬ್ಬ ಪ್ರಾಣಿ ಪ್ರೇಮಿಯ ರಕ್ತ ಕುದಿಯುವಂತೆ ಮಾಡಿದೆ.
ಅಳಿವಿನಂಚಿನಲ್ಲಿರುವ, ಭಾರತದ ಹೆಮ್ಮೆಯ 'ಗಂಗಾ ನದಿ ಡಾಲ್ಫಿನ್' (Gangetic Dolphin) ಆಳವಿಲ್ಲದ ನೀರಿನಲ್ಲಿ ಸಿಲುಕಿ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ, ಅಲ್ಲಿನ ಮಕ್ಕಳು ಅದರ ಜೊತೆ ಚೆಂಡಿನಂತೆ ಆಟವಾಡುತ್ತಾ ವಿಕೃತ ಸಂತೋಷ ಪಡುತ್ತಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ನಡೆದಿದ್ದೇನು?
ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಬಿಹಾರದ ಛಪ್ರಾ ಜಿಲ್ಲೆಯದ್ದು ಎನ್ನಲಾಗಿದೆ. ಗಂಗಾ ನದಿಯ ಒಡಲಲ್ಲಿ ಬೆಳೆಯಬೇಕಾದ ಡಾಲ್ಫಿನ್ ಆಕಸ್ಮಿಕವಾಗಿ ದಡಕ್ಕೆ ಬಂದು ಆಳವಿಲ್ಲದ ನೀರಿನಲ್ಲಿ ಸಿಲುಕಿಕೊಂಡಿದೆ. ನೀರು ಕಡಿಮೆಯಾದ ಕಾರಣ ಆ ಮೂಕ ಪ್ರಾಣಿ ಉಸಿರಾಡಲು ಪರದಾಡುತ್ತಾ ಒದ್ದಾಡುತ್ತಿದೆ.
ಇಂತಹ ಸಮಯದಲ್ಲಿ ಅದಕ್ಕೆ ಸಹಾಯ ಮಾಡಿ ಮರಳಿ ನದಿಗೆ ಬಿಡಬೇಕಾದ ಅಲ್ಲಿನ ಮಕ್ಕಳು, ಅದನ್ನು ಒಂದು ಆಟದ ವಸ್ತುವಿನಂತೆ ನಡೆಸಿಕೊಂಡಿದ್ದಾರೆ. ಡಾಲ್ಫಿನ್ ಅನ್ನು ಎಳೆಯುವುದು, ಅದರ ಮೇಲೆ ಕೈ ಹಾಕುವುದು ಮತ್ತು ಅದು ಒದ್ದಾಡುತ್ತಿದ್ದರೆ ನಗುತ್ತಾ ಆಟವಾಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ರಾಷ್ಟ್ರೀಯ ಜಲಚರ ಪ್ರಾಣಿಗೆ ಈ ಸ್ಥಿತಿಯೇ?
ಈ ವಿಡಿಯೋದಲ್ಲಿರುವ ಪ್ರಾಣಿ ಸಾಮಾನ್ಯ ಮೀನಲ್ಲ. ಇದು ಗಂಗಾ ನದಿ ಡಾಲ್ಫಿನ್,ಇದು ಭಾರತದ ರಾಷ್ಟ್ರೀಯ ಜಲಚರವಾಗಿದ್ದು ಇವುಗಳಿಗೆ ಕಣ್ಣು ಕಾಣಿಸುವುದಿಲ್ಲ, ಕೇವಲ ಶಬ್ದದ ಮೂಲಕವೇ ಸಂವಹನ ನಡೆಸುತ್ತವೆ.
ಇಡೀ ವಿಶ್ವದಲ್ಲಿ ಕೇವಲ 2,500 ರಿಂದ 5,000 ಡಾಲ್ಫಿನ್‌ಗಳು ಮಾತ್ರ ಉಳಿದುಕೊಂಡಿವೆ ಎಂದು ಅಂದಾಜಿಸಲಾಗಿದೆ. ಇವುಗಳ ಚರ್ಮ ಎಷ್ಟು ಸೂಕ್ಷ್ಮ ಎಂದರೆ, ಮನುಷ್ಯರು ಪದೇ ಪದೇ ಮುಟ್ಟಿದರೆ ಅಥವಾ ನೀರಿನಿಂದ ಹೊರಗಿದ್ದರೆ ಇವುಗಳಿಗೆ ತೀವ್ರವಾದ ಗಾಯಗಳಾಗಿ ಪ್ರಾಣವೇ ಹೋಗಬಹುದು ಎಂದು ಹೇಳಲಾಗುತ್ತದೆ.
ನೆಟ್ಟಿಗರ ಆಕ್ರೋಶ: ಇದು ಕರುಣೆಯಿಲ್ಲದ ಸಮಾಜ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪೋಷಕರ ಮತ್ತು ಸಮಾಜದ ವಿರುದ್ಧ ಕಿಡಿಕಾರಿದ್ದಾರೆ. ಒಬ್ಬ ಬಳಕೆದಾರರು, ಪೋಷಕರು ಮಕ್ಕಳಿಗೆ ಪ್ರಾಣಿಗಳ ಮೇಲಿನ ದೌರ್ಜನ್ಯದ ಬಗ್ಗೆ ಶಿಕ್ಷಣ ನೀಡಬೇಕು. ಡಾಲ್ಫಿನ್ ಅಲ್ಲಿ ಉಸಿರುಗಟ್ಟುತ್ತಿದೆ, ಇವರು ಆಟವಾಡುತ್ತಿದ್ದಾರೆ. ಇದು ಅತ್ಯಂತ ದುಃಖಕರ ಸಂಗತಿ ಎಂದು ಬರೆದಿದ್ದಾರೆ. ಇನ್ನೊಬ್ಬರು, ನಮ್ಮ ಸಮಾಜದಲ್ಲಿ ಮಕ್ಕಳಿಗೆ ದಯೆ, ಕರುಣೆ ಕಲಿಸದಿದ್ದರೆ ಇಂತಹ ದೃಶ್ಯಗಳೇ ಮರುಕಳಿಸುತ್ತವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವನ್ಯಜೀವಿ ತಜ್ಞರ ಎಚ್ಚರಿಕೆ
ವನ್ಯಜೀವಿ ತಜ್ಞರ ಪ್ರಕಾರ, ಆಳವಿಲ್ಲದ ನೀರಿನಲ್ಲಿ ಸಿಲುಕಿದಾಗ ಡಾಲ್ಫಿನ್‌ಗಳು ತೀವ್ರವಾದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತವೆ. ಈ ಹಂತದಲ್ಲಿ ಮನುಷ್ಯರು ಅವುಗಳನ್ನು ಮುಟ್ಟುವುದು ಅಥವಾ ಎಳೆಯುವುದು ಮಾಡಿದರೆ ಅವುಗಳ ಹೃದಯಾಘಾತ ಸಂಭವಿಸುವ ಸಾಧ್ಯತೆಯೂ ಇರುತ್ತದೆ. ಬಿಹಾರದ ಈ ಘಟನೆಯು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಗಂಭೀರ ಅಪರಾಧವಾಗಿದೆ ಎನ್ನುವುದು ತಜ್ಞರ ಮಾತಾಗಿದೆ, (ಏಜನ್ಸೀಸ್).