ನೆನಪುಗಳೇ ನಮ್ಮ ಆಸ್ತಿ: ಯೂನಿಫಾರ್ಮ್ ಧರಿಸಿ ಶಾಲಾ ದಿನಗಳನ್ನು ಮರುಸೃಷ್ಟಿಸಿ ನಕ್ಕು-ನಲಿದ 1976ರ ಬ್ಯಾಚ್ನ ಗೆಳೆಯರು! Childhood Friends
- 1976ರ ಬ್ಯಾಚ್ ಸ್ನೇಹಿತರಿಂದ ಶಾಲಾ ದಿನಗಳ ಅಪೂರ್ವ ಮರುಸೃಷ್ಟಿ
- ಐವತ್ತು ವರ್ಷಗಳ ಬಳಿಕ ಯೂನಿಫಾರ್ಮ್ ಧರಿಸಿ ಬಾಲ್ಯಕ್ಕೆ ಮರಳಿದ ಗೆಳೆಯರು
- ರೈಲು ನೃತ್ಯ ಮಾಡುವ ಮೂಲಕ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ ವೃದ್ಧರು
- ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸ್ನೇಹಿತರ ಹೃದಯಸ್ಪರ್ಶಿ ವಿಡಿಯೋ
Childhood Friends : ಕಾಲ ಕಳೆದಂತೆ ಮನುಷ್ಯನು ಕೂಡ ಬೆಳೆಯುತ್ತಾ ಹೋಗುತ್ತಾನೆ. ಕಾಲದ ಜತೆ ಸಾಗುವ ಮನುಷ್ಯ ಶಾಶ್ವತವಾಗಿ ಕಣ್ಣು ಮುಚ್ಚುವಷ್ಟರಲ್ಲಿ ಜೀವನದ ವಿವಿಧ ಹಂತಗಳನ್ನು ದಾಟಿ ಬರುತ್ತಾನೆ. ಮುಗ್ಧ ಮನಸ್ಸಿನ ಬಾಲ್ಯ, ಮೋಜು-ಮಸ್ತಿಯ ಯೌವ್ವನ, ಜವಾಬ್ದಾರಿ ಎಂಬ ಮಧ್ಯ ವಯಸ್ಸು ಹಾಗೂ ಸಾವಿನ ಕೊನೆಯ ದಿನಗಳು ಮನುಷ್ಯ ಜೀವನದ ವಿವಿಧ ಮೆಟ್ಟಿಲುಗಳನ್ನು ದಾಟಿ ಬರುತ್ತಾನೆ. ಆದರೆ, ಕೊನೆಯಲ್ಲಿ ಮನುಷ್ಯನಲ್ಲಿ ಉಳಿಯುವುದು ಕೇವಲ ಸುಂದರ ನೆನಪುಗಳು ಮಾತ್ರ. ಇದಿಷ್ಟೂ ಹಂತದಲ್ಲಿ ನಿಮ್ಮ ನೆಚ್ಚಿನ ಕ್ಷಣ ಯಾವುದು ಅಂತಾ ಯಾರನ್ನಾದರೂ ಕೇಳಿದರೆ ಎಲ್ಲರೂ ಹೇಳುವುದು ಒಂದೇ ಮಾತು ಅದುವೇ ಬಾಲ್ಯದ ಜೀವನ. ಮನಸ್ಸಿನಲ್ಲಿ ಯಾವುದೇ ಕಲ್ಮಶವಿರದೇ, ಜವಾಬ್ದಾರಿಗಳೆಂಬ ಭಾರವಿರದೇ ನಿರ್ಮಲವಾಗಿ ಹಾಗೂ ಸ್ವಚ್ಛಂದದಿಂದ ಇರುವ ಈ ಕಾಲ ಯಾರಿಗೂ ತಾನೇ ಇಷ್ಟವಿಲ್ಲ ಹೇಳಿ. ಮನುಷ್ಯನಿಗೆ ಎಷ್ಟೇ ವಯಸ್ಸಾದರೂ ಒಂದು ಕ್ಷಣ ತನ್ನ ಬಾಲ್ಯಕ್ಕೆ ಹಿಂದಿರುಗಬೇಕೆಂದು ಬಯಸುತ್ತಾನೆ. ಅದರಲ್ಲೂ ಸ್ನೇಹಿತರ ಗುಂಪು, ಆಟ-ಪಾಠ ಅನ್ನೋ ಶಾಲಾ ದಿನಗಳನ್ನು ಮತ್ತೆ ಸವಿಯಲು ಹಾತೊರೆಯುತ್ತಾನೆ. ಆದರೆ, ಬದುಕು ಎಷ್ಟೇ ಬಿಜಿಯಾಗಿದ್ದರೂ ಹಳೆಯ ಸ್ನೇಹಿತರೊಂದಿಗೆ ಕಳೆದ ಆ ದಿನಗಳನ್ನು ಮೆಲುಕು ಹಾಕುವ ಭಾಗ್ಯ ಕೆಲವರಿಗೆ ಮಾತ್ರ ಸಿಗುತ್ತದೆ. ಅಂತಹ ಅಪರೂಪದ ಹಾಗೂ ಮನಸ್ಸಿಗೆ ಮುದಾ ನೀಡುವ ಹೃದಯಸ್ಪರ್ಶಿ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ಭಾರೀ ವೈರಲ್ ಆಗಿದ್ದು, ವೃದ್ಧಾಪ್ಯದಲ್ಲೂ ಬಾಲ್ಯದ ತುಂಟಾಟವನ್ನು ಮರೆಯದ 1976ರ ಬ್ಯಾಚ್ನ ಗೆಳೆಯರ ಗುಂಪೊಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ಸ್ಟಾಗ್ರಾಂ ಬಳಕೆದಾರರಾದ ರಾಕೇಶ್ ನಗರ ಎಂಬುವವರು ಈ ಅಪರೂಪದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸುಮಾರು ಐದು ದಶಕಗಳ ಹಿಂದೆ ತಾವು ವಿದ್ಯಾಭ್ಯಾಸ ಮಾಡಿದ ಹಳೆಯ ಶಾಲೆಗೆ 1976ರ ಬ್ಯಾಚ್ನ ಗೆಳೆಯರೆಲ್ಲರೂ ಒಟ್ಟಾಗಿ ಮರಳಿದ್ದಾರೆ. ವಿಶೇಷವೆಂದರೆ, ತಾವು ಹಿಂದೆ ಧರಿಸುತ್ತಿದ್ದ ಶಾಲಾ ಸಮವಸ್ತ್ರದಂತೆಯೇ ಫಾರ್ಮಲ್ ಶರ್ಟ್ ಹಾಗೂ ಪ್ಯಾಂಟ್ ಧರಿಸಿ, ಬೆನ್ನಿಗೆ ಬ್ಯಾಗ್ ತಗಲುಹಾಕಿಕೊಂಡು, ಕುತ್ತಿಗೆಗೆ ಚಿಕ್ಕ ಮಕ್ಕಳ ವರ್ಣರಂಜಿತ ನೀರಿನ ಬಾಟಲಿಗಳನ್ನು ನೇತುಹಾಕಿಕೊಂಡು ಈ ವೃದ್ಧರು ಅಚ್ಚರಿ ಮೂಡಿಸಿದ್ದಾರೆ.
ದಶಕಗಳ ಹಿಂದೆ ತಾವು ಬಿಟ್ಟುಬಂದ ಅದೇ ಶಾಲೆಯ ಗೇಟ್ನ ಒಳಗೆ ಹೆಜ್ಜೆ ಇಡುತ್ತಿದ್ದಂತೆ, ಇಷ್ಟು ವರ್ಷಗಳ ವಯಸ್ಸಿನ ಅಂತರವೇ ಮಾಯವಾದಂತೆ ಈ ಗೆಳೆಯರು ಹರ್ಷೋದ್ಗಾರದಿಂದ ಒಳಗೆ ಓಡಿದ್ದಾರೆ. ಮುಖದಲ್ಲಿ ಮಂದಸ್ಮಿತೆ ಹಾಗೂ ಬಾಲ್ಯದ ಉತ್ಸಾಹದೊಂದಿಗೆ ಒಟ್ಟಾಗಿ ಸೇರಿದ್ದ ಈ ಗೆಳೆಯರ ಸಂಭ್ರಮವು ನೋಡುಗರ ಮೊಗದಲ್ಲೂ ನಗು ಮೂಡಿಸುವಂತಿತ್ತು. ಐದು ದಶಕಗಳ ನಂತರ ತಾವು ಕಳೆದುಹೋದ ಸುವರ್ಣ ಕಾಲಕ್ಕೆ ಮರಳಿದಂತೆ ಭಾಸವಾಯಿತು ಎಂದು ಅವರು ಆ ಕ್ಷಣಗಳನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ.
ಬರೀ ಶಾಲಾ ಸಮವಸ್ತ್ರ ಧರಿಸುವುದಕ್ಕೆ ಮಾತ್ರ ಸೀಮಿತವಾಗದೆ, ತಾವು ಚಿಕ್ಕವರಿದ್ದಾಗ ಶಾಲಾ ಮೈದಾನದಲ್ಲಿ ಆಡುತ್ತಿದ್ದ ಹಳೆಯ ಆಟಗಳನ್ನು ಹಾಗೂ ಚಟುವಟಿಕೆಗಳನ್ನು ಈ ಗೆಳೆಯರು ಮತ್ತೆ ಮರುಸೃಷ್ಟಿಸಿದರು. ವಿಶೇಷವಾಗಿ, ಗುಂಪಾಗಿ ಸೇರಿ ಗಿಲ್ಲಿ ದಾಂಡು ಹಾಗೂ ಲಗೋರಿ ಆಟವನ್ನು ಆಡುವ ಮೂಲಕ ತಮ್ಮ ಬಾಲ್ಯದ ದಿನಗಳ ಅಮೋಘ ಕ್ಷಣಗಳನ್ನು ಇವರು ಮರುಕಳಿಸಿದರು. ಅದೆಷ್ಟೋ ವರ್ಷಗಳ ನಂತರ ಮತ್ತೆ ಕೈಯಲ್ಲಿ ಚೆಂಡು ಹಿಡಿದು ಆಟವಾಡುತ್ತಿದ್ದ ಈ ಗೆಳೆಯರ ಮುಖದಲ್ಲಿ ಮಕ್ಕಳಂತೆ ಮುಗ್ಧ ನಗು ರಾರಾಜಿಸುತ್ತಿತ್ತು.
ಆಟದ ನಂತರ ಸಾಲಾಗಿ ನಿಂತು ಶಾಲಾ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಮಾಡುತ್ತಿದ್ದ ಪರಿಚಿತ 'ರೈಲು' (Train Dance) ನೃತ್ಯವನ್ನು ಪ್ರದರ್ಶಿಸುವ ಮೂಲಕ ಈ ಗೆಳೆಯರು ಮೈದಾನದಲ್ಲಿ ಹೆಜ್ಜೆ ಹಾಕಿದರು. ಪರಸ್ಪರ ನಗುತ್ತಾ, ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಾ ಒಟ್ಟಾಗಿ ಚಲಿಸಿದ ಈ ಕ್ಷಣಗಳು ಇಡೀ ವಾತಾವರಣವನ್ನೇ ತೀವ್ರ ಭಾವುಕ ಹಾಗೂ ಖುಷಿಯ ಕ್ಷಣಗಳನ್ನಾಗಿ ಬದಲಾಯಿಸಿದವು. ಈ ಸುವರ್ಣ ನೆನಪುಗಳನ್ನು ಹೇಗಾದರೂ ಮಾಡಿ ಮರುಕಳಿಸಬೇಕು ಎಂಬ ತಮ್ಮ ಬಹುಕಾಲದ ಕನಸು ಇಂದು ನನಸಾಗಿದೆ ಎಂದು ರಾಕೇಶ್ ನಗರ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಲಕ್ಷಾಂತರ ವೀಕ್ಷಕರನ್ನು ಆಕರ್ಷಿಸಿದ್ದು, ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ತಮ್ಮ ಸ್ವಂತ ಶಾಲಾ ಸ್ನೇಹಿತರನ್ನು ಭೇಟಿಯಾಗಲು ಇನ್ನೂ ಸಾಧ್ಯವಾಗದ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದರೆ, ಇನ್ನು ಕೆಲವರು ಈ ಗೆಳೆಯರ ಗೆಳೆತನದ ಬಂಧವನ್ನು ಕೊಂಡಾಡುತ್ತಾ ಜೀವನವನ್ನು ಹೀಗೆಯೇ ಸದಾ ಆನಂದದಿಂದ ಕಳೆಯುವಂತೆ ಪ್ರೋತ್ಸಾಹಿಸಿದ್ದಾರೆ. ಈ ವಿಡಿಯೋ ನೋಡುಗರಲ್ಲೂ ತಮ್ಮ ಬಾಲ್ಯದ ದಿನಗಳನ್ನು ಒಮ್ಮೆ ನೆನಪಿಸಿಕೊಳ್ಳುವಂತೆ ಮಾಡಿದೆ.
ಅಂತಿಮವಾಗಿ 1976ರ ಬ್ಯಾಚ್ನ ಈ ಸ್ನೇಹಿತರಿಗೆ ಇದು ಕೇವಲ ಒಂದು ಸಾಮಾನ್ಯ ಸಮಾವೇಶವಾಗಿರದೆ, ತಾವೆಲ್ಲರೂ ನಕ್ಕು, ಆಡಿ, ಜೊತೆಯಾಗಿ ಬೆಳೆದ ಮಣ್ಣಿಗೆ ಮರಳಿದ ಪರಮ ಪವಿತ್ರ ಕ್ಷಣವಾಗಿತ್ತು. ಕೇವಲ ಕೆಲವೇ ಗಂಟೆಗಳ ಕಾಲ ಅಂದಿನ ಅದೇ ಗೇಟ್ ಒಳಗೆ ನಡೆದಾಡಿ, ಅದೇ ಹಳೆಯ ಆಟಗಳನ್ನು ಆಡಿ, 50 ವರ್ಷಗಳ ನೆನಪುಗಳೊಂದಿಗೆ ಮತ್ತೆ ಹಳೆಯ ಗೆಳೆಯರಾಗಿ ಬದಲಾದ ಇವರ ಈ ವಿಡಿಯೋ ಇಂದಿನ ಯುವ ಪೀಳಿಗೆಗೆ ಸ್ನೇಹದ ನಿಜವಾದ ಅರ್ಥವನ್ನು ಸಾರುತ್ತಿದೆ, (ಏಜೆನ್ಸೀಸ್).