BRICS 2026  
ದೇಶ

ಬ್ರಿಕ್ಸ್​​ನಿಂದ ಪ್ರಯೋಜನವಿಲ್ಲ ಎಂದ ಚಿದಂಬರಂ: ಕಾಂಗ್ರೆಸ್‌ನಿಂದ ಲಾಭವಿಲ್ಲ ಅಂದ್ರೆ ಪಕ್ಷ ಮುಚ್ಚುತ್ತೀರಾ..? ಎಂದು ಬಿಜೆಪಿ ತಿರುಗೇಟು! | BRICS 2026

ನವದೆಹಲಿ: ಇಲ್ಲಿ ನಡೆಯಲಿರುವ 2026ರ ಬ್ರಿಕ್ಸ್ (BRICS 2026) ಶೃಂಗಸಭೆಯ ಹಿನ್ನೆಲೆಯಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಸಮರ ಶುರುವಾಗಿದ್ದು, ಇತ್ತೀಚಿನ ಶೃಂಗಸಭೆಗಳಿಂದ ಭಾರತಕ್ಕೆ ಏನು ಸಿಕ್ಕಿದೆ ಎಂದು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಪ್ರಶ್ನಿಸಿದ್ದಾರೆ.
ಬ್ರಿಕ್ಸ್ ಶೃಂಗಸಭೆಯ ಕುರಿತಾಗಿ ಎಎನ್​ಐ ಜೊತೆ ಮಾತನಾಡಿದ ಚಿದಂಬರಂ, ಭಾರತವು ಬ್ರಿಕ್ಸ್, ಶಾಂಘೈ ಸಹಕಾರ ಸಂಸ್ಥೆ (SCO), ಜಿ20 (G20) ಮತ್ತು ಕ್ವಾಡ್ (QUAD) ನಂತಹ ಹಲವು ಬಹುಪಕ್ಷೀಯ ಒಕ್ಕೂಟಗಳ ಭಾಗವಾಗಿದೆ, ಆದರೆ ಇವುಗಳಿಂದ ದೇಶಕ್ಕೆ ಸಿಕ್ಕಿರುವ ಪ್ರಯೋಜನಗಳೇನು ಎಂದು ಪ್ರಶ್ನಿಸಿದ್ದಾರೆ. ಎಷ್ಟು ಮಂದಿ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿಗಳು ಬರುತ್ತಿದ್ದಾರೋ ನನಗೆ ಗೊತ್ತಿಲ್ಲ. ಕಳೆದ ಎರಡ್ಮೂರು ಶೃಂಗಸಭೆಗಳು ಯಾವುದೇ ಸ್ಪಷ್ಟ ಫಲಿತಾಂಶಗಳನ್ನು ನೀಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ತಿರುಗೇಟು

ಭಾರತವು ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸುತ್ತಿರುವ ಕುರಿತು ಚಿದಂಬರಂ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ಕಾಂಗ್ರೆಸ್‌ಗೆ ರಾಜತಾಂತ್ರಿಕತೆಯ ತಿಳುವಳಿಕೆ ಇದೆಯೇ ಎಂದು ಪ್ರಶ್ನಿಸಿದೆ ಮತ್ತು ವಿದೇಶಾಂಗ ನೀತಿಯನ್ನು ವ್ಯಾಪಾರಿ ದೃಷ್ಟಿಕೋನದಿಂದ ನೋಡುತ್ತಿದೆ ಎಂದು ಆರೋಪಿಸಿದೆ. ಅನೇಕ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಸರ್ಕಾರಿ ಮುಖ್ಯಸ್ಥರು ದೇಶಕ್ಕೆ ಆಗಮಿಸುತ್ತಿರುವ ಇಂತಹ ಪ್ರಮುಖ ಅಂತಾರಾಷ್ಟ್ರೀಯ ಕಾರ್ಯಕ್ರಮವನ್ನು ಭಾರತ ಆಯೋಜಿಸುತ್ತಿರುವಾಗ, ಚಿದಂಬರಂ ಮತ್ತು ಕಾಂಗ್ರೆಸ್ ಶೃಂಗಸಭೆಯ ಮಹತ್ವವನ್ನು ಪ್ರಶ್ನಿಸುತ್ತಿರುವುದು ಆಶ್ಚರ್ಯಕರವಾಗಿದೆ ಎಂದು ಬಿಜೆಪಿ ಸಂಸದ ನಲಿನ್ ಕೊಹ್ಲಿ ಹೇಳಿದ್ದಾರೆ.
ಕಾಂಗ್ರೆಸ್‌ನ ಉದ್ದೇಶವನ್ನು ಪ್ರಶ್ನಿಸಿದ ಕೊಹ್ಲಿ, ಆ ಪಕ್ಷದ ಉದ್ದೇಶವೇನು..? ರಾಜತಾಂತ್ರಿಕತೆಯನ್ನು ಕೇವಲ ಒಂದು ವ್ಯವಹಾರ/ವ್ಯಾಪಾರವಾಗಿ ನೋಡಬೇಕೇ..? ನಾನು ನಿನಗೆ ಏನು ಮಾಡಿದೆ..? ನೀನು ನನಗೇನು ಮಾಡುತ್ತೀಯ ಎನ್ನುವಂತಹ ಧೋರಣೆಯೇ..? ಸ್ಪಷ್ಟ ಫಲಿತಾಂಶಗಳು ಅಂದರೆ ಏನು..? ಸ್ಪಷ್ಟ ಫಲಿತಾಂಶಗಳ ಬಗ್ಗೆಯೇ ಮಾತನಾಡುವುದಾದರೆ, 1947 ರಿಂದ 2014 ರವರೆಗೆ ರಾಜತಾಂತ್ರಿಕತೆಯ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ಸಂಪೂರ್ಣ ಧೋರಣೆ ಏನೆಂಬುದನ್ನೇ ನಾವು ಪ್ರಶ್ನಿಸಬೇಕಾಗುತ್ತದೆ ಎಂದಿದ್ದಾರೆ.
ಮುಂದುವರಿದು ಮಾತನಾಡಿದ ಕೊಹ್ಲಿ, ಚಿದಂಬರಂ ಅವರು ಯಾವುದೇ ವಿಷಯವಿಲ್ಲದಿದ್ದರೂ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯನ್ನು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ತನ್ನ ಮೇಲೆಯೇ ಪ್ರಶ್ನೆಗಳನ್ನು ಎಬ್ಬಿಸಿಕೊಳ್ಳುತ್ತಿದೆ. ಆ ಪಕ್ಷವು ಅನೇಕ ವಿಷಯಗಳಿಗೆ ಉತ್ತರ ನೀಡಬೇಕಿದೆ. ಚಿದಂಬರಂ ಅವರ ವಿಚಿತ್ರ ತರ್ಕದಂತೆ ಯಾವುದೇ ಲಾಭವಿಲ್ಲ ಎಂದಾದರೆ, ನಾಳೆ ಯಾರಾದರೂ ಕಾಂಗ್ರೆಸ್ ಪಕ್ಷದಿಂದ ಯಾವುದೇ ಲಾಭವಿಲ್ಲ ಎಂದರೆ, ಕಾಂಗ್ರೆಸ್ ತನ್ನ ಪಕ್ಷವನ್ನೇ ಮುಚ್ಚಿಬಿಡುತ್ತದೆಯೇ..? ಹಾಗಾಗಿ, ಯಾವುದೇ ವಿಚಾರವಿಲ್ಲದಿದ್ದರೂ ಚಿದಂಬರಂ ರಾಜಕೀಯ ಮಾಡಲು ನೋಡುತ್ತಿದ್ದಾರೆ. ಪ್ರಧಾನಿ ಮೋದಿ ಸರ್ಕಾರ ಮಾಡುವ ಪ್ರತಿಯೊಂದನ್ನೂ ಯಾವುದೇ ಆಧಾರವಿಲ್ಲದೆ ಟೀಕಿಸುವ ಮತ್ತೊಂದು ಪ್ರಯತ್ನವಷ್ಟೇ ಇದು ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ಬ್ರಿಕ್ಸ್ ಶೃಂಗಸಭೆ 2026

ಸೆಪ್ಟೆಂಬರ್ 12 ಮತ್ತು 13 ರಂದು ನವದೆಹಲಿಯ ಭಾರತ್ ಮಂಟಪಂನಲ್ಲಿ ಭಾರತವು 18 ನೇ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸಲಿದೆ. ಈ ಶೃಂಗಸಭೆಯು ಬ್ರಿಕ್ಸ್​​ನ ಸದಸ್ಯ ದೇಶಗಳು, ಪಾಲುದಾರ ದೇಶಗಳ ನಾಯಕರು ಮತ್ತು ಆಹ್ವಾನಿತರನ್ನು ಒಂದೆಡೆ ತರಲಿದೆ. ಮೊದಲ ದಿನ ಸದಸ್ಯರ ಮುಚ್ಚಿದ ಬಾಗಿಲ ಸಭೆ, ಭಾರತ್ ಇನ್ನೋವೇಟ್ಸ್ ಪ್ರದರ್ಶನ, ನಾಯಕರ ಫೋಟೋಶೂಟ್, ಜಂಟಿ ಸಸಿ ನೆಡುವ ಕಾರ್ಯಕ್ರಮ ಮತ್ತು ಪ್ರಧಾನಿ ನರೇಂದ್ರ ಮೋದಿ ಆಯೋಜಿಸುವ ವಿಶೇಷ ಔತಣಕೂಟ ಇರಲಿದೆ. ಎರಡನೇ ದಿನ ಪಾಲುದಾರ ದೇಶಗಳ ನಾಯಕರ ಆಗಮನದ ನಂತರ ಚೇತರಿಕೆ (resilience), ನಾವೀನ್ಯತೆ (innovation), ಸಹಕಾರ (cooperation) ಮತ್ತು ಸುಸ್ಥಿರತೆ (sustainability) ವಿಷಯಗಳ ಮೇಲೆ ಮುಕ್ತ ಸಭೆ ನಡೆಯಲಿದೆ(ಏಜೆನ್ಸೀಸ್​).