Amit Shah | ಗೃಹ ಸಚಿವ ಅಮಿತ್ ಷಾ
ರಾಯ್ಪುರ್: ಛತ್ತೀಸ್‌ಗಢದಲ್ಲಿ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ಹತ್ತಿಕ್ಕುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದ್ದು, ರಾಜ್ಯವು ಈಗ ನಕ್ಸಲ್ ಮುಕ್ತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಸೋಮವಾರ ಅಧಿಕೃತವಾಗಿ ಘೋಷಿಸಿದ್ದಾರೆ. ಜಗದಲ್‌ಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಷಾ, ಎಡಪಂಥೀಯ ಉಗ್ರಗಾಮಿತ್ವದ ವಿರುದ್ಧದ ಸರ್ಕಾರದ ಸುದೀರ್ಘ ಹೋರಾಟವು ಈಗ ನಿರ್ಣಾಯಕ ಮೈಲಿಗಲ್ಲನ್ನು ತಲುಪಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ಸುಮಾರು ಎರಡುವರೆ ವರ್ಷಗಳ ಹಿಂದೆ ನಡೆದ ಆಂತರಿಕ ಸಭೆಯಲ್ಲಿ 2026ರ ಮಾರ್ಚ್ 31 ರೊಳಗೆ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಲಾಗಿತ್ತು. ಹಲವು ವಲಯಗಳಿಂದ ಈ ಬಗ್ಗೆ ಆರಂಭದಲ್ಲಿ ಅನುಮಾನಗಳು ವ್ಯಕ್ತವಾಗಿದ್ದರೂ, ಈಗ ಆ ಗುರಿಯನ್ನು ಯಶಸ್ವಿಯಾಗಿ ತಲುಪಲಾಗಿದೆ ಎಂದು ಷಾ ನೆನಪಿಸಿಕೊಂಡಿದ್ದಾರೆ.
ನಾಲ್ಕು ಗೋಡೆಗಳ ಮಧ್ಯೆ ನಡೆದಿತ್ತು ಚರ್ಚೆ!
2024 ಜನವರಿ 21 ರಂದು ನಾವು ಮುಚ್ಚಿದ ಕೋಣೆಯೊಳಗೆ ನಕ್ಸಲಿಸಂ ಕೊನೆಗೊಳಿಸಲು ನಿರ್ಧರಿಸಿದ್ದೆವು. ವೈಯಕ್ತಿಕ ಚರ್ಚೆಗಳಲ್ಲೂ ಇದು ಸಾಧ್ಯವಿಲ್ಲ ಎಂದು ಹಲವರು ನಮಗೆ ಎಚ್ಚರಿಸಿದ್ದರು. ಆದರೆ ನಾವು ಸ್ಪಷ್ಟವಾದ ಯೋಜನೆಯನ್ನು ರೂಪಿಸಿ, ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದೆವು. ದಂತೇಶ್ವರಿ ತಾಯಿಯ ಕೃಪೆಯಿಂದ ಇಂದು ನಾವು ಕೊನೆಗೂ ನಕ್ಸಲ್ ಮುಕ್ತ ಬಸ್ತಾರ್ ದಿನವನ್ನು ತಲುಪಿದ್ದೇವೆ ಎಂದು ಷಾ ತಿಳಿಸಿದ್ದಾರೆ.
ನಕ್ಸಲಿಸಂ ಕೇವಲ ಛತ್ತೀಸ್‌ಗಢಕ್ಕೆ ಮಾತ್ರ ಸೀಮಿತವಾಗಿರದೆ ದೇಶದ ವಿವಿಧ ಭಾಗಗಳಿಗೂ ಹರಡಿಕೊಂಡಿತ್ತು. ಎಡಪಂಥೀಯ ಉಗ್ರಗಾಮಿತ್ವದ ವಿರುದ್ಧದ ಈ ಸುದೀರ್ಘ ಹೋರಾಟದಲ್ಲಿ ದೇಶದ ಹಲವಾರು ಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಆದರೆ ಈಗ ಈ ಪಿಡುಗನ್ನು ಕೊನೆಗಾಣಿಸುವ ಮಿಷನ್ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.
ನಕ್ಸಲಿಸಂ ವಿರುದ್ಧದ ಹೋರಾಟದಲ್ಲಿ ನಮ್ಮ ದೇಶದ ಯೋಧರು ಬಲಿದಾನ ಮಾಡದ ಯಾವುದೇ ಭಾಗ ಇರಲಿಕ್ಕಿಲ್ಲ. 1971 ರಿಂದ 2026 ಮಾರ್ಚ್ 31 ರವರೆಗಿನ ಈ ಸುದೀರ್ಘ ಅವಧಿಯನ್ನು ದೇಶದ ಜನರು ಒಂದು ದುಸ್ವಪ್ನದಂತೆ ಕಳೆದಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳ ಜನರಿಗೆ ಇದು ತೀವ್ರ ರಕ್ತಪಾತ, ಅಭಿವೃದ್ಧಿಯ ಶೂನ್ಯತೆ ಮತ್ತು ಯುವಕರ ಕತ್ತಲೆಯ ಭವಿಷ್ಯವನ್ನು ತಂದೊಡ್ಡಿತ್ತು. ಎಂದು ಅಮಿತ್ ಷಾ ವಿವರಿಸಿದ್ದಾರೆ.
ನಕ್ಸಲಿಸಂ ಕೇವಲ ಸ್ಥಳೀಯ ಸಮಸ್ಯೆಯಾಗಿರಲಿಲ್ಲ, ನನ್ನ ತವರು ರಾಜ್ಯವಾದ ಗುಜರಾತ್ ಸೇರಿದಂತೆ ಇತರ ಹಲವು ರಾಜ್ಯಗಳು ಇದನ್ನು ತೀವ್ರ ಕಳಕಳಿ ಮತ್ತು ಸೂಕ್ಷ್ಮತೆಯಿಂದ ಗಮನಿಸುತ್ತಿದ್ದವು. ಇದು ಸಣ್ಣ ಅವಧಿಯಲ್ಲ, ಮೂರು ತಲೆಮಾರುಗಳು ಇದರ ನೆರಳಿನಲ್ಲಿಯೇ ಬದುಕಿವೆ. ಆದರೆ, ಇಡೀ ಜೀವಿತಾವಧಿಯಲ್ಲಿ ಸಾಧಿಸಲು ಅಸಾಧ್ಯವೆಂದು ಭಾವಿಸಲಾಗಿದ್ದ ಗುರಿಯನ್ನು ಇಂದು ಯಶಸ್ವಿಯಾಗಿ ಸಾಧಿಸಿರುವುದಕ್ಕೆ ನನಗೆ ಅತ್ಯಂತ ಸಂತೋಷವಾಗಿದೆ ಎಂದು ಷಾ ಹರ್ಷ ವ್ಯಕ್ತಪಡಿಸಿದ್ದಾರೆ(ಏಜೆನ್ಸೀಸ್).