ಪ್ರೇಯಸಿಗೆ ದುಬಾರಿ ಐಫೋನ್ ಗಿಫ್ಟ್ ಕೊಡಲು ಸರಗಳ್ಳತನ: ಜೀಬ್ರಾ ಡಿಸೈನ್ ಶರ್ಟ್ ಧರಿಸಿ ಸಿಕ್ಕಿಬಿದ್ದ ರೋಮಿಯೋ ಕಳ್ಳ! Chain Snatching
- ಲವರ್‌ಗೆ ಐಫೋನ್ ಗಿಫ್ಟ್ ಕೊಡಲು ಹೋಗಿ ಜೈಲಿನ ಕಂಬಿ ಎಣಿಸುತ್ತಿದ್ದಾನೆ ರೋಮಿಯೋ ಕಳ್ಳ
- ನಾಲ್ಕನೇ ಯತ್ನದಲ್ಲಿ ಸರಗಳ್ಳತನ ಯಶಸ್ವಿ ಆದರೆ ಪೊಲೀಸರ ಬಲೆಯಲ್ಲಿ ಬಿದ್ದ ‘ಐಫೋನ್’ ಪ್ರೇಮಿ.
- ಪ್ರೇಯಸಿ ಜೊತೆ ಬರ್ತ್‌ಡೇ ಆಚರಿಸುವ ಬದಲು ಜೈಲು ಪಾಲಾದ ಶರವಣನ್
- ತನ್ನ ಗುರುತು ಸಿಗದಂತೆ ಮುಖ ಮುಚ್ಚಿದರು ಕೂಡ ಕೈಕೊಟ್ಟ ‘ಜೀಬ್ರಾ ಶರ್ಟ್
Chain Snatching : ತಮಿಳುನಾಡು ರಾಜಧಾನಿ ಚೆನ್ನೈನ ಅಮಿಂದಕರೈ ಮೂಲದ ಶರವಣನ್ ಎಂಬ ಯುವಕ ತನ್ನ ಪ್ರೇಯಸಿಯ ಹುಟ್ಟುಹಬ್ಬಕ್ಕೆ ಅತ್ಯಂತ ದುಬಾರಿ ಐಫೋನ್ ಉಡುಗೊರೆಯಾಗಿ ನೀಡಬೇಕೆಂಬ ಹುಚ್ಚು ಹಠಕ್ಕೆ ಬಿದ್ದು ಕೊನೆಗೆ ಜೈಲು ಪಾಲಾಗಿದ್ದಾನೆ.
ಪ್ರೇಯಸಿಯನ್ನು ಮೆಚ್ಚಿಸಲು ಐಫೋನ್ ಖರೀದಿಸಲು ಹಣವಿಲ್ಲದ ಕಾರಣ ಈತ ಸರಗಳ್ಳತನದ ಹಾದಿ ಹಿಡಿದು, ನಗರದಲ್ಲಿ ಸರಣಿ ಸರಗಳ್ಳತನ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಈ ಕಳ್ಳತನದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೆತ್ತಿಕೊಂಡ ಚೆನ್ನೈ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಕೊನೆಗೂ ರೋಮಿಯೋ ಕಳ್ಳನನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಪ್ರೇಯಸಿಗೆ ಐಫೋನ್ ಕೊಡಿಸಲು ಹಣ ಹೊಂದಿಸಲು ಶರವಣನ್ ನಂಬರ್ ಪ್ಲೇಟ್ ಇಲ್ಲದ ಬೈಕ್ ಬಳಸಿ ಸರಗಳ್ಳತನ ಮಾಡಲು ಸಂಚು ರೂಪಿಸಿದ್ದ. ಪೊಲೀಸರ ಕಣ್ಣಿಗೆ ಬೀಳದಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾಧವರಂ ಮತ್ತು ಅಣ್ಣಾನಗರ ಪ್ರದೇಶಗಳಲ್ಲಿ ಮೂರು ಬಾರಿ ಕಳ್ಳತನಕ್ಕೆ ಯತ್ನಿಸಿ ವಿಫಲನಾಗಿದ್ದ.
ಕೊನೆಗೆ ನಾಲ್ಕನೇ ಪ್ರಯತ್ನದಲ್ಲಿ ಅಮಿಂದಕರೈನಲ್ಲಿ ಮಹಿಳೆಯೊಬ್ಬರ ಕೊರಳಿನಿಂದ ಚಿನ್ನದ ಸರವನ್ನು ಅಪಹರಿಸಿ ಪರಾರಿಯಾಗಿದ್ದ. ಆದರೆ, ಕಳ್ಳತನದ ನಂತರ ತನಿಖೆ ಆರಂಭಿಸಿದ ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆರೋಪಿ ಧರಿಸಿದ್ದ ವಿಶಿಷ್ಟವಾದ 'ಜೀಬ್ರಾ ಡಿಸೈನ್' (ಕಪ್ಪು-ಬಿಳುಪು ಪಟ್ಟೆಗಳ) ಶರ್ಟ್ ಆತನನ್ನು ಪತ್ತೆಹಚ್ಚಲು ಪೊಲೀಸರಿಗೆ ಪ್ರಮುಖ ಸುಳಿವಾಯಿತು.
ಆ ವಿಶಿಷ್ಟ 'ಜೀಬ್ರಾ ಡಿಸೈನ್' ಶರ್ಟ್ ಆಧಾರದ ಮೇಲೆ ತೀವ್ರ ತನಿಖೆ ನಡೆಸಿದ ಅಮಿಂದಕರೈ ಪೊಲೀಸರು, ಕೊನೆಗೂ ಶರವಣನ್‌ನನ್ನು ಗುರುತಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ಪ್ರೇಯಸಿಯ ಹುಟ್ಟುಹಬ್ಬದಂದು ಆಕೆಯ ಕಣ್ಣುಗಳಲ್ಲಿ ಸಂತೋಷವನ್ನು ನೋಡಲು ಐಫೋನ್ ಉಡುಗೊರೆ ನೀಡಬೇಕೆಂಬ ಆಸೆಯಿಂದ ಮಾಡಿದ ಈ ಕಳ್ಳತನ, ಅಂತಿಮವಾಗಿ ಆತನನ್ನು ಕಂಬಿ ಎಣಿಸುವಂತೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೀತಿಯನ್ನು ವ್ಯಕ್ತಪಡಿಸಲು ಕಾನೂನು ಬಾಹಿರ ಹಾದಿ ಹಿಡಿದ ಈ ಯುವಕ, ಈಗ ಪ್ರೇಯಸಿಯ ಜೊತೆ ಹುಟ್ಟುಹಬ್ಬ ಆಚರಿಸುವ ಬದಲು ಜೈಲಿನ ಕತ್ತಲಕೋಣೆಯಲ್ಲಿ ದಿನ ದೂಡುವಂತಾಗಿದೆ, (ಏಜೆನ್ಸೀಸ್).