ಶಿಷ್ಯನ ಕೈಯಲ್ಲೇ ಗುರುವಿಗೆ ಚೆಕ್ ಮೇಟ್! ಶೂನ್ಯಕ್ಕೆ ಔಟ್ ಆದ ವಿರಾಟ್! ಆ ಯುವ ವೇಗಿ ಹೇಳಿದ ಆ ಒಂದು ಮಾತು ಕೇಳಿದ್ರೆ ಶಾಕ್ ಆಗ್ತೀರಾ!
ಲಖನೌ: ಐಪಿಎಲ್ 2026ರ ಕ್ರೀಡಾಂಗಣದಲ್ಲಿ ನಿನ್ನೆ ಸಂಭವಿಸಿದ ಆ ಒಂದು ಘಟನೆ ಇಡೀ ಕ್ರಿಕೆಟ್ ಲೋಕವನ್ನೇ ಸ್ತಬ್ಧಗೊಳಿಸಿದೆ. ಲಖನೌದ ಏಕಾನಾ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಲಖನೌ ಸೂಪರ್ ಜೈಂಟ್ಸ್ (LSG) ನಡುವಿನ ರೋಚಕ ಹಣಾಹಣಿಯಲ್ಲಿ, ಯುವ ವೇಗಿ ಪ್ರಿನ್ಸ್ ಯಾದವ್ ಅಕ್ಷರಶಃ ಇತಿಹಾಸ ಸೃಷ್ಟಿಸಿದ್ದಾರೆ. ಆಧುನಿಕ ಕ್ರಿಕೆಟ್‌ನ ದಿಗ್ಗಜ ವಿರಾಟ್ ಕೊಹ್ಲಿ(Virat Kohli Falls For Duck) ಅವರನ್ನು ಕೇವಲ ಎರಡು ಎಸೆತಗಳಲ್ಲಿ ಶೂನ್ಯಕ್ಕೆ ಔಟ್ ಮಾಡುವ ಮೂಲಕ ಪ್ರಿನ್ಸ್ ಎಲ್ಲರ ಗಮನ ಸೆಳೆದಿದ್ದಾರೆ.
ಕ್ಷಣಾರ್ಧದಲ್ಲಿ ಬದಲಾದ ಅದೃಷ್ಟ: ಫೀಲ್ಡಿಂಗ್ ವೈಫಲ್ಯದಿಂದ ವಿಕೆಟ್ ಬೇಟೆಯವರೆಗೆ!
ಈ ಪಂದ್ಯದ ಆರಂಭ ಪ್ರಿನ್ಸ್ ಯಾದವ್ ಪಾಲಿಗೆ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಮೊದಲ ಓವರ್‌ನಲ್ಲಿ ಡೀಪ್ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಅವರು ಬೌಂಡರಿಯೊಂದನ್ನು ಬಿಟ್ಟುಕೊಟ್ಟಿದ್ದರು. ಇದರಿಂದ ಇಡೀ ಕ್ರೀಡಾಂಗಣ ಅವರ ಮೇಲೆ ಅಸಮಾಧಾನ ವ್ಯಕ್ತಪಡಿಸಿತ್ತು. ಆದರೆ, ಎರಡನೇ ಓವರ್‌ನಲ್ಲಿ ಚೆಂಡು ಕೈಗೆತ್ತಿಕೊಂಡ ಪ್ರಿನ್ಸ್, ಮೊದಲ ಎಸೆತದಲ್ಲೇ ಔಟ್‌ಸ್ವಿಂಗರ್ ಮೂಲಕ ವಿರಾಟ್ ಅವರನ್ನು ಪರೀಕ್ಷಿಸಿದರು.
ತಮ್ಮ ಎರಡನೇ ಎಸೆತವನ್ನು 140.4 ಕಿ.ಮೀ ವೇಗದಲ್ಲಿ ಇನ್-ಸ್ವಿಂಗರ್ ಆಗಿ ಎಸೆದ ಪ್ರಿನ್ಸ್, ಕೊಹ್ಲಿಯ ರಕ್ಷಣಾತ್ಮಕ ಆಟವನ್ನು ಸೀಳಿ ಆಫ್-ಸ್ಟಂಪ್ ಅನ್ನು ಉರುಳಿಸಿದರು. ಈ ಒಂದು ವಿಕೆಟ್ ಲಖನೌ ಅಭಿಮಾನಿಗಳಲ್ಲಿ ಹೊಸ ಚೈತನ್ಯ ತುಂಬಿತು.
ವಿರಾಟ್ ಕಲಿಸಿದ ಪಾಠವೇ ವಿರಾಟ್‌ಗೆ ಮುಳುವಾಯ್ತು!
ಪಂದ್ಯದ ನಂತರ ಮಾತನಾಡಿದ ಪ್ರಿನ್ಸ್ ಯಾದವ್ ಬಿಚ್ಚಿಟ್ಟ ಸತ್ಯ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ. ಹಿಂದಿನ ಪಂದ್ಯದ ನಂತರ ನಾನು ವಿರಾಟ್ ಭೈಯಾ ಜೊತೆ ಮಾತನಾಡುತ್ತಿದ್ದೆ. ಚೆಂಡು ಮೂವ್ ಆಗುತ್ತಿರುವಾಗ ಆಫ್-ಲೆಂಗ್ತ್ ಮೇಲೆ ಹೇಗೆ ನಿಯಂತ್ರಣ ಸಾಧಿಸಬೇಕು ಎಂದು ಅವರೇ ನನಗೆ ಹೇಳಿಕೊಟ್ಟಿದ್ದರು. ಅದೇ ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡುವಂತೆ ಅವರು ಸಲಹೆ ನೀಡಿದ್ದರು. ಇಂದು ನಾನು ಅದನ್ನೇ ಪಾಲಿಸಿದೆ ಮತ್ತು ಅವರ ವಿಕೆಟ್ ಪಡೆಯಲು ಸಾಧ್ಯವಾಯಿತು ಎಂದು ಪ್ರಿನ್ಸ್ ಹೇಳಿದ್ದಾರೆ.
ತಮ್ಮ ಬೆಳವಣಿಗೆಯಲ್ಲಿ ವಿರಾಟ್ ಕೊಹ್ಲಿ ಮತ್ತು ತಂಡದ ಹಿರಿಯ ಆಟಗಾರ ಮೊಹಮ್ಮದ್ ಶಮಿ ಅವರ ಪಾತ್ರ ದೊಡ್ಡದಿದೆ ಎಂದು ಯಾದವ್ ಈ ಸಂದರ್ಭದಲ್ಲಿ ಸ್ಮರಿಸಿದರು.
ಲಕ್ನೋದ ಪ್ಲೇ-ಆಫ್ ಕನಸು ಜೀವಂತ
210 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ವಿರಾಟ್ ವಿಕೆಟ್ ದೊಡ್ಡ ಆಘಾತ ನೀಡಿತು. ಮಳೆಯಿಂದಾಗಿ 19 ಓವರ್‌ಗಳಿಗೆ ಕಡಿತಗೊಂಡ ಪಂದ್ಯದಲ್ಲಿ ರಜತ್ ಪಾಟೀದಾರ್ (61 ರನ್) ಹೋರಾಟ ನಡೆಸಿದರೂ, ಆರ್‌ಸಿಬಿ ಡಿಎಲ್‌ಎಸ್ ನಿಯಮದಡಿ 9 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಪ್ರಿನ್ಸ್ ಯಾದವ್ 33 ರನ್ ನೀಡಿ 3 ವಿಕೆಟ್ (ಕೊಹ್ಲಿ, ಪಡಿಕ್ಕಲ್ ಮತ್ತು ಜಿತೇಶ್ ಶರ್ಮಾ) ಪಡೆಯುವ ಮೂಲಕ ಲಖನೌದ ಸತತ ಎಂಟು ಪಂದ್ಯಗಳ ಸೋಲಿನ ಸರಪಳಿಯನ್ನು ಕತ್ತರಿಸಿದ್ದಾರೆ. ಈ ಗೆಲುವಿನೊಂದಿಗೆ ಲಖನೌ ಸೂಪರ್ ಜೈಂಟ್ಸ್ ಪ್ಲೇ-ಆಫ್ ರೇಸ್‌ನಲ್ಲಿ ಇನ್ನೂ ಜೀವಂತವಾಗಿದೆ.
ಐಪಿಎಲ್ ಇತಿಹಾಸದ ಶ್ರೇಷ್ಠ ಎಸೆತ..?
ವಿರಾಟ್ ಕೊಹ್ಲಿ ಅವರಂತಹ ಬ್ಯಾಟರ್ ಅನ್ನು ಕ್ಲೀನ್ ಬೌಲ್ಡ್ ಮಾಡಿದ ಆ ಎಸೆತವನ್ನು ಕ್ರಿಕೆಟ್ ವಿಶ್ಲೇಷಕರು ಐಪಿಎಲ್ ಇತಿಹಾಸದ ಅತ್ಯುತ್ತಮ ಎಸೆತಗಳಲ್ಲಿ ಒಂದು ಎಂದು ಬಣ್ಣಿಸಿದ್ದಾರೆ. ವೇಗ ಮತ್ತು ಸ್ವಿಂಗ್‌ನ ಅದ್ಭುತ ಸಮ್ಮಿಲನವು ಕ್ರಿಕೆಟ್ ಜಗತ್ತಿಗೆ ಹೊಸ ಪ್ರಿನ್ಸ್ ಉದಯವಾಗಿದ್ದನ್ನು ಸಾರಿ ಹೇಳಿದೆ,(ಏಜೆನ್ಸೀಸ್).