Vijay Astrologer | ಸಿಎಂ ವಿಜಯ್ ಜ್ಯೋತಿಷಿ 
ದೇಶ

ಹೃದಯಾಘಾತಕ್ಕೆ ಮಂತ್ರವೇ ಮದ್ದು!...ಓಂ ಸುರಚಾರಿ ನಮಃ ಅಂದ್ರೆ ಸಾವು ಬರಲ್ವಂತೆ; ಸಿಎಂ ವಿಜಯ್ ಜ್ಯೋತಿಷಿಯ ವಿಡಿಯೋ ವೈರಲ್ | Vijay Astrologer

Vijay Astrologer: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್​​ರ ವಿಶೇಷ ಕರ್ತವ್ಯ ಅಧಿಕಾರಿಯಾಗಿ (OSD) ನೇಮಕಗೊಂಡಿದ್ದ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ನೀಡಿದ್ದ ಕೆಲ ವಿವಾದಾತ್ಮಕ ಹೇಳಿಕೆಗಳು ಈಗ ಹೊಸ ಸರ್ಕಾರದ ವಿರುದ್ಧ ಟೀಕೆಗೆ ಬಳಕೆಯಾಗುತ್ತಿವೆ.
ವೈರಲ್​ ಆಗಿರುವ ವಿಡಿಯೋದಲ್ಲಿ ರಾಧನ್​ ಪಂಡಿತ್​ ತಮ್ಮ ಅನುಯಾಯಿಗಳಿಗೆ ಹೃದಯಾಘಾತದಂತಹ ಗಂಭೀರ ಆರೋಗ್ಯ ಸಮಸ್ಯೆಗಳ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆಗಿಂತ ಹೆಚ್ಚಾಗಿ ಮಂತ್ರಗಳನ್ನು ಪಠಿಸಲು ಸಲಹೆ ನೀಡಿದ್ದು ಮತ್ತು ಜ್ಯೋತಿಷ್ಯದ ಮೂಲಕ ಸಾವು ಹಾಗೂ ಅನಾರೋಗ್ಯವನ್ನು ಜಯಿಸಬಹುದು ಎಂದು ಪ್ರತಿಪಾದಿಸಿರುವುದು ಈ ವಿವಾದದ ಕೇಂದ್ರಬಿಂದುವಾಗಿದೆ.
ವೈದ್ಯರು ಹೃದಯಾಘಾತದ ಎಚ್ಚರಿಕೆ ನೀಡಿದರೂ ಭಯಪಡದೆ ಓಂ ಸುರಚಾರಿ ನಮಃ ಎಂಬ ಮಂತ್ರ ಜಪಿಸುವಂತೆ ರಾಧನ್​ ಪಂಡಿತ್​ ತಿಳಿಸಿದ್ದು, ಸಾವು ಮತ್ತು ರೋಗಗಳಿಗೆ ನಿರ್ದಿಷ್ಟ ಸಮಯವಿರುತ್ತದೆ ಹಾಗೂ ಆ ಸಮಯವನ್ನು ಜ್ಯೋತಿಷ್ಯದ ಮೂಲಕ ಹೇಗೆ ಜಯಿಸಬಹುದು ಎಂಬುದು ತಮಗೆ ತಿಳಿದಿದೆ ಎಂದು ಅವರು ಹೇಳಿಕೊಂಡಿದ್ದರು. ಸದ್ಯ ಈ ಹೇಳಿಕೆಗಳು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಮುಖ್ಯಮಂತ್ರಿ ಕಚೇರಿಯಲ್ಲೇ ಇದ್ದ ವ್ಯಕ್ತಿಯೊಬ್ಬರು ಇಂತಹ ಮೂಢನಂಬಿಕೆಯನ್ನು ಉತ್ತೇಜಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಹೊಸದಾಗಿ ರಚನೆಯಾದ ಸರ್ಕಾರವು ವೈಜ್ಞಾನಿಕ ಮನೋಭಾವದ ಬದಲಿಗೆ ಅಂಧಶ್ರದ್ಧೆಗೆ ಮನ್ನಣೆ ನೀಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಕವಾಗಿದ್ದ ರಾಧನ್​!...

ರಾಧನ್​ ಪಂಡಿತ್​​ ವೆಟ್ರಿವೇಲ್​ರನ್ನು ಮಂಗಳವಾರವಷ್ಟೇ ಮುಖ್ಯಮಂತ್ರಿ ಕಚೇರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಿಸಿ ಸರ್ಕಾರಿ ಆದೇಶ ಹೊರಡಿಸಲಾಗಿತ್ತು. ವಿಶೇಷ ಯೋಜನೆಗಳು ಮತ್ತು ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸುವ ಈ ಪ್ರಮುಖ ಹುದ್ದೆಗೆ ಸಾರ್ವಜನಿಕ ಖಜಾನೆಯಿಂದ ಸಂಬಳ ನೀಡಲಾಗುವುದರಿಂದ, ಮುಖ್ಯಮಂತ್ರಿಯವರ ವೈಯಕ್ತಿಕ ಜ್ಯೋತಿಷಿಯನ್ನು ಈ ಸ್ಥಾನಕ್ಕೆ ನೇಮಿಸಿರುವುದು ತೆರಿಗೆದಾರರ ಹಣದ ದುರುಪಯೋಗ ಎಂದು ಅನೇಕರು ಟೀಕಿಸಿದ್ದರು. ಈ ಬೆಳವಣಿಗೆಯಿಂದ ತೀವ್ರ ಮುಜುಗರಕ್ಕೊಳಗಾದ ಟಿವಿಕೆ ಸರ್ಕಾರವು, ನೇಮಕಾತಿ ಆದೇಶವನ್ನು ರದ್ದುಗೊಳಿಸಿದೆ.
ಬುಧವಾರ ವಿಧಾನಸಭೆಯಲ್ಲಿ ಟಿವಿಕೆ ಸರ್ಕಾರವು ವಿಶ್ವಾಸಮತ ಯಾಚನೆಯಲ್ಲಿ ಗೆದ್ದಿದ್ದರೂ, ಮೈತ್ರಿಕೂಟದ ಒಳಗಡೆಯೇ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಇಂತಹ ನೇಮಕಾತಿಗಳು ಸರ್ಕಾರದ ವಿಶ್ವಾಸಾರ್ಹತೆಯನ್ನು ಹಾಳುಮಾಡುತ್ತವೆ ಎಂದು ಕೆಲವು ಮಿತ್ರಪಕ್ಷಗಳು ಆಕ್ಷೇಪಿಸಿವೆ. ಆದರೆ ಟಿವಿಕೆ ಸಚಿವ ನಿರ್ಮಲ್ ಕುಮಾರ್ ಈ ನೇಮಕಾತಿಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದು, ವೆಟ್ರಿವೇಲ್​ರನ್ನು ಮಾಧ್ಯಮ ವಕ್ತಾರರಾಗಿ ನೇಮಿಸಲಾಗಿತ್ತು ಮತ್ತು ಜ್ಯೋತಿಷ್ಯ ಅವರ ವೈಯಕ್ತಿಕ ಜೀವನ ಎಂದು ಹೇಳಿದ್ದಾರೆ. ವಿಜಯ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆರಳೆಣಿಕೆ ದಿನಗಳಲ್ಲಿ ಈ ಬೆಳವಣಿಗೆಗಳು ನಡೆದಿರುವುದು ಸಿಎಂ ವಿಜಯ್​ಗೆ ಮೊದಲ ಹಿನ್ನಡೆಯಾಗಿ ಪರಿಣಮಿಸಿದ್ದು, ವಿರೋಧ ಪಕ್ಷಗಳಿಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಪ್ರಬಲ ಅಸ್ತ್ರವನ್ನು ನೀಡಿದೆ(ಏಜೆನ್ಸೀಸ್​​).