MK Stalin | ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ 
ದೇಶ

ಹೆಸರಿಗಿಂತ ಮನಸ್ಥಿತಿ ಬದಲಾವಣೆ ಮುಖ್ಯ! ರಾಜ್ಯಪಾಲ ಆರ್.ಎನ್. ರವಿಗೆ ಸಿಎಂ ಸ್ಟಾಲಿನ್​ ಕೌಂಟರ್​ | MK Stalin

ಚೆನ್ನೈ: ದೇಶದಾದ್ಯಂತ ಇರುವ ಎಲ್ಲ ರಾಜಭವನಗಳ ಹೆಸರನ್ನು, ಲೋಕಭವನ ಎಂದು ಬದಲಾವಣೆಗೆ ಕೇಂದ್ರ ಗೃಹ ಸಚಿವಾಲಯ ಅನುಮೋದಿಸಿದೆ ಎಂಬ ವರದಿಗಳಿಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಹೆಸರುಗಳನ್ನು ಬದಲಾಯಿಸುವುದಕ್ಕಿಂತ, ಮನಸ್ಥಿತಿಯಲ್ಲಿನ ಬದಲಾವಣೆ ಮುಖ್ಯ ಎಂದಿದ್ದಾರೆ.
ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಸಿಎಂ ಸ್ಟಾಲಿನ್, ಕೇಂದ್ರ ಸರ್ಕಾರದ ನಿರ್ದೇಶನಗಳ ಪ್ರಕಾರ ರಾಜ್ಯಪಾಲ ಆರ್.ಎನ್. ರವಿ ಈ ಕ್ರಮವನ್ನು ಶಿಫಾರಸು ಮಾಡಿದ್ದಾರೆ. ಚಿಂತನೆ ಮತ್ತು ಕಾರ್ಯದಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೆ ಇದು ಅನಗತ್ಯ ಎಂದಿದ್ದು, ಜನರಿಂದ ಚುನಾಯಿತರಾದ ಪ್ರತಿನಿಧಿಗಳ ಅಧಿಕಾರವನ್ನು ಗೌರವಿಸುವುದರಲ್ಲಿ ನಿಜವಾದ ಹೊಣೆಗಾರಿಕೆ ಅಡಗಿದೆ ಎಂದು ಹೇಳಿದರು.
ಹೆಸರು ಬದಲಾಯಿಸುವುದಕ್ಕಿಂತ, ಮನಸ್ಥಿತಿಯನ್ನು ಬದಲಾಯಿಸುವುದು ತುಂಬಾ ಮುಖ್ಯವಾಗಿದೆ, ಶಾಸಕಾಂಗ ಸಭೆ ಎಂದರೆ, ಅದು ಜನರ ಸಭೆ ಇದ್ದ ಹಾಗೆ. ಜನರಿಂದ ಆಯ್ಕೆಯಾದ ಸರ್ಕಾರಗಳನ್ನು ಮತ್ತು ಜನರ ಇಚ್ಛೆಯನ್ನು ಪೂರೈಸುವ ಸಾರ್ವಭೌಮ ಶಾಸಕಾಂಗ ಸಭೆಯನ್ನು ಗೌರವಿಸುವುದು ಇಂದಿನ ಅಗತ್ಯವಾಗಿದೆ. ಈ ಸಭೆಯನ್ನು ಗೌರವಿಸದವರಿಗೆ, ಲೋಕಭವನ ಎಂದು ಹೆಸರನ್ನು ಬದಲಾಯಿಸುವುದು ಕೇವಲ ಮೇಲ್ನೋಟಕ್ಕೆ ಚಂದ. ಇದು ಪ್ರಜಾಪ್ರಭುತ್ವದ ತತ್ವಗಳ ಕಣ್ಣಿಗೆ ಮಣ್ಣೆರೆಚುವ ಕ್ರಮವಾಗಿದೆ ಎಂದು ಬರೆದುಕೊಂಡಿದ್ದಾರೆ.

ಬಂಗಾಳ ರಾಜಭವನ ಈಗ ಲೋಕಭವನ...

ಪಶ್ಚಿಮ ಬಂಗಾಳ ರಾಜಭವನವನ್ನು ಲೋಕಭವನ ಎಂದು ಮರುನಾಮಕರಣ ಮಾಡಲಾಗಿದೆ ಎಂದು ರಾಜ್ಯಪಾಲ ಸಿ.ವಿ. ಆನಂದ ಬೋಸ್ ತಿಳಿಸಿದ್ದು, ಕೇಂದ್ರ ಸರ್ಕಾರದ ಒಪ್ಪಿಗೆಯ ಬಳಿಕ ಅಧಿಕೃತ ಘೋಷಣೆ ಹೊರಬಿದ್ದಿದೆ.
ಲೋಕಭವನದ ಅಧಿಕೃತ ಎಕ್ಸ್​ ಖಾತೆಯ ಮೂಲಕ ಜನರ ಆತಂಕ ದೂರ ಮಾಡುವ ಭರವಸೆ ನೀಡಿರುವ ರಾಜ್ಯಪಾಲರು, ಕಳೆದ ಮೂರು ವರ್ಷಗಳಲ್ಲಿ, ಜನರಾಜ್ ಭವನವು ಜನರಿಗಾಗಿ ಹಲವಾರು ಅಭಿವೃದ್ದಿ ಆಧಾರಿತ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಜನರ ಅಗತ್ಯದ ಸಮಯದಲ್ಲಿ ಅವರ ಬೆಂಬಲಕ್ಕೆ ನಿಲ್ಲುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ರಾಜ್ಯದ ಯಾವುದೇ ಮೂಲೆಯಲ್ಲಿ ಹಿಂಸಾಚಾರ, ನೈಸರ್ಗಿಕ ವಿಕೋಪಗಳು ಅಥವಾ ದೌರ್ಜನ್ಯಗಳ ಆರೋಪ ಕೇಳಿ ಬಂದರೆ ಜನರಾಜ್ ಭವನವು ಜನರ ಮನೆ ಬಾಗಿಲಿಗೆ ತಲುಪಿ ಸಹಾಯ ಹಸ್ತ ಚಾಚಿದೆ ಎಂದು ಬರೆದುಕೊಂಡಿದ್ದಾರೆ(ಏಜೆನ್ಸೀಸ್​).