ನಿಮ್ಮ ಕಾನೂನನ್ನು ಬದಲಿಸಿ: ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತದ ವಿಷಯದಲ್ಲಿ ಕೇಂದ್ರಕ್ಕೆ ಸುಪ್ರೀಂ ಚಾಟಿ!  
ದೇಶ

ನಿಮ್ಮ ಕಾನೂನನ್ನು ಬದಲಿಸಿ: ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತದ ವಿಷಯದಲ್ಲಿ ಕೇಂದ್ರಕ್ಕೆ ಸುಪ್ರೀಂ ಚಾಟಿ! Supreme Court

ನವದೆಹಲಿ: ನಾವು ವ್ಯಕ್ತಿಗಳ ಆಯ್ಕೆಯನ್ನು ಗೌರವಿಸುತ್ತೇವೆ, ನೀವೂ ಅದನ್ನೇ ಮಾಡಬೇಕು ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್(Supreme Court) ಇಂದು ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ. 15 ವರ್ಷದ ಅತ್ಯಾಚಾರ ಸಂತ್ರಸ್ತೆಯ 31 ವಾರಗಳ ಗರ್ಭಪಾತಕ್ಕೆ ಅನುಮತಿ ನೀಡಿದ್ದ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಸರ್ಕಾರದ ನಿಲುವನ್ನು ತೀವ್ರವಾಗಿ ಖಂಡಿಸಿದೆ.
ಮಹಿಳೆಯರ ತಮ್ಮ ದೇಹದ ಮೇಲಿನ ಹಕ್ಕಿನ ಹೋರಾಟದಲ್ಲಿ ಇದೊಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಲಾಗಿದ್ದು, ಸಂತ್ರಸ್ತ ಬಾಲಕಿ ಮತ್ತು ಆಕೆಯ ಕುಟುಂಬದ ನಿರ್ಧಾರಕ್ಕೆ ಸರ್ಕಾರ ಬೆಲೆ ಕೊಡಬೇಕು ಎಂದು ನ್ಯಾಯಾಲಯ ತಾಕೀತು ಮಾಡಿದೆ.

ಅವಧಿಯ ಮಿತಿ ಇರಬಾರದು: ಕಾನೂನಿನ ಬದಲಾವಣೆಗೆ ಆಗ್ರಹ

ಅಪ್ರಾಪ್ತ ವಯಸ್ಸಿನ ಬಾಲಕಿ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದಾಗ, ಗರ್ಭಪಾತಕ್ಕೆ ಸಮಯದ ಮಿತಿ ಹೇರುವುದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅತ್ಯಾಚಾರದಿಂದ ಗರ್ಭಧಾರಣೆಯಾದಾಗ ಅಲ್ಲಿ ಯಾವುದೇ ಕಾಲಮಿತಿ ಇರಬಾರದು. ಕಾನೂನು ಎಂಬುದು ಸಮಾಜದ ವಿಕಾಸಕ್ಕೆ ತಕ್ಕಂತೆ ಬದಲಾಗುತ್ತಿರಬೇಕು ಮತ್ತು ಜೀವಂತವಾಗಿರಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅತ್ಯಾಚಾರದ ನಂತರ ಆ ಬಾಲಕಿ ಅನುಭವಿಸಿದ ಯಾತನೆಯನ್ನು ಯಾವುದರಿಂದಲೂ ಸರಿದೂಗಿಸಲು ಸಾಧ್ಯವಿಲ್ಲ. ದೇಶದ ನಾಗರಿಕರಿಗೆ ಗೌರವ ನೀಡಿ. ಈ ಗರ್ಭಪಾತದ ಆದೇಶವನ್ನು ಪ್ರಶ್ನಿಸಲು ನಿಮಗೆ ಯಾವುದೇ ಹಕ್ಕಿಲ್ಲ. ಇದನ್ನು ಕೇವಲ ಸಂತ್ರಸ್ತೆ ಅಥವಾ ಆಕೆಯ ಕುಟುಂಬ ಮಾತ್ರ ಪ್ರಶ್ನಿಸಬಹುದು ಎಂದು ಗುಡುಗಿದ್ದಾರೆ.

ಆಯ್ಕೆ ಮಾಡುವ ಹಕ್ಕು ಸಂತ್ರಸ್ತೆಯದು"

ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರು ಮಾತನಾಡಿ, ಗರ್ಭಪಾತದಿಂದ ಸಂಭವಿಸಬಹುದಾದ ಆರೋಗ್ಯದ ಸಮಸ್ಯೆಗಳ ಬಗ್ಗೆ ಪೋಷಕರಿಗೆ ಡೇಟಾ ತೋರಿಸಿ. ಆ ಡೇಟಾ ನೋಡಿದ ನಂತರವೂ ಅವರು ಗರ್ಭವನ್ನು ಉಳಿಸಿಕೊಳ್ಳಲು ನಿರ್ಧರಿಸಿದರೆ ಅದು ಅವರಿಗೆ ಬಿಟ್ಟಿದ್ದು. ಆದರೆ, ತಮ್ಮ ಮಗುವಿನ ಮಾನಸಿಕ ಆರೋಗ್ಯವು ಅಪಾಯದಲ್ಲಿದೆ ಎಂದು ಅವರಿಗೆ ಅನಿಸಿದರೆ, ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ದಯವಿಟ್ಟು ಈ ವಿಷಯದಲ್ಲಿ ನಿಮ್ಮ ಕ್ಯುರೇಟಿವ್ ಅರ್ಜಿಯನ್ನು ಒತ್ತಾಯಿಸಬೇಡಿ ಎಂದು ಸರ್ಕಾರಕ್ಕೆ ತಿಳಿಸಿದರು.
ಇದು ರಾಜ್ಯ ಸರ್ಕಾರ ಮತ್ತು ನಾಗರಿಕರ ನಡುವಿನ ಯುದ್ಧವಾಗುವುದು ಬೇಡ. ಸಂತ್ರಸ್ತೆಯ ಸಹಾಯಕ್ಕೆ ಮನಶ್ಶಾಸ್ತ್ರಜ್ಞರನ್ನು ಮತ್ತು ಆಪ್ತ ಸಮಾಲೋಚಕರನ್ನು ತನ್ನಿ. ಆಯ್ಕೆ ಮಾಡುವ ಸಾಮರ್ಥ್ಯ ಇರುವವರ ಪರವಾಗಿ ನಾವು ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದು ನ್ಯಾಯಾಲಯ ಹೇಳಿದೆ.

ಸರ್ಕಾರದ ವಾದವೇನಿತ್ತು..?

ಸರ್ಕಾರದ ಪರವಾಗಿ ಐಶ್ವರ್ಯಾ ಭಾಟಿ ಅವರು ವಾದ ಮಂಡಿಸಿ, ಈ ಹಂತದಲ್ಲಿ ಗರ್ಭಪಾತ ಮಾಡುವುದು ಸಾಧ್ಯವಿಲ್ಲ ಎಂದು ಎಐಐಎಂಎಸ್ (AIIMS) ವೈದ್ಯರು ತಿಳಿಸಿದ್ದಾರೆ ಎಂದರು. ಗರ್ಭಪಾತ ಮಾಡಿದರೆ ಮಗುವು ಅಂಗವೈಕಲ್ಯದೊಂದಿಗೆ ಹುಟ್ಟುವ ಸಾಧ್ಯತೆಯಿದೆ ಮತ್ತು ಅಪ್ರಾಪ್ತ ತಾಯಿಯ ಆರೋಗ್ಯಕ್ಕೂ ತೊಂದರೆಯಾಗಬಹುದು. ಹಾಗಾಗಿ ಮಗುವಿಗೆ ಜನ್ಮ ನೀಡಿ ನಂತರ ಅದನ್ನು ದತ್ತು ನೀಡುವುದು ಮಗುವಿನ ಹಿತದೃಷ್ಟಿಯಿಂದ ಒಳ್ಳೆಯದು. ಇದು ಕೇವಲ ನಾಲ್ಕು ವಾರಗಳ ವಿಷಯವಷ್ಟೇ ಎಂದು ವಾದಿಸಿದರು.

ಕೋರ್ಟ್‌ನ ಕಟು ಪ್ರತಿಕ್ರಿಯೆ

ಸರ್ಕಾರದ ವಾದಕ್ಕೆ ಉತ್ತರಿಸಿದ ಮುಖ್ಯ ನ್ಯಾಯಮೂರ್ತಿಗಳು, ಇದು ಬಾಲಕಿಯ ಮೇಲೆ ನಡೆದ ಅತ್ಯಾಚಾರದ ಪ್ರಕರಣ. ಅವಳು ಪ್ರತಿ ನಿಮಿಷವೂ ಆ ಗರ್ಭವನ್ನು ಹೊರುವುದು ಎಷ್ಟು ಯಾತನಾದಾಯಕ ಎಂಬುದನ್ನು ಊಹಿಸಿ. ಇದು ವಯಸ್ಕ ಮಹಿಳೆಯಾಗಿದ್ದರೆ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು. ಆದರೆ ಇದು 15 ವರ್ಷದ ಮಗು ಎಂದರು. ಒಂದು ವೇಳೆ ಇದು ಬಾಲಕಿ ಮತ್ತು ಭ್ರೂಣದ ನಡುವಿನ ಹೋರಾಟವಾಗಿದ್ದರೆ, ಬಾಲಕಿಯು ಘನತೆಯಿಂದ ಬದುಕಲು ಅವಕಾಶ ನೀಡಬೇಕು. ನ್ಯಾಯಕ್ಕಾಗಿ ಕಾನೂನು ಕ್ರೂರವಾಗಬೇಕಾದರೂ ಸರಿ ಎಂದು ನ್ಯಾಯಾಲಯ ಹೇಳಿದೆ.
ಈ ವಯಸ್ಸಿನಲ್ಲಿ ಅವಳು ತನ್ನದೇ ಆದ ಕನಸುಗಳು, ಆಸೆಗಳನ್ನು ಹೊಂದಿರಬೇಕು. ಆದರೆ ನಾವು ಅವಳನ್ನು ತಾಯಿಯನ್ನಾಗಿ ಮಾಡಲು ಹೊರಟಿದ್ದೇವೆಯೇ ಎಂದು ಪ್ರಶ್ನೆಇಸಿದೆ. ಅಲ್ಲದೆ, ಅವಳು ಈಗಾಗಲೇ ಸಾಕಷ್ಟು ನೋವು ಮತ್ತು ಅವಮಾನವನ್ನು ಅನುಭವಿಸಿದ್ದಾಳೆ ಎಂದು ನ್ಯಾಯಾಲಯ ಮಮ್ಮಲ ಮರುಗಿತು.

ಬದುಕುವ ಹಕ್ಕಿನ ಉಲ್ಲಂಘನೆ

ಕಳೆದ ವಾರವಷ್ಟೇ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಪೀಠವು ಗರ್ಭಪಾತಕ್ಕೆ ಅನುಮತಿ ನೀಡಿತ್ತು. ಮಗುವನ್ನು ಹೆರುವಂತೆ ಒತ್ತಾಯಿಸುವುದು ಸಂತ್ರಸ್ತೆಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಮತ್ತು ಮಹಿಳೆಯ ಪ್ರಜನನ ಸ್ವಾಯತ್ತತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ನ್ಯಾಯಾಲಯ ಹೇಳಿತ್ತು. ಸಂತ್ರಸ್ತೆಯು ಈಗಾಗಲೇ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿರುವುದನ್ನು ಗಮನಿಸಿದ ಕೋರ್ಟ್, ಗರ್ಭವನ್ನು ಮುಂದುವರಿಸಲು ಒತ್ತಾಯಿಸುವುದು ಅವಳ ಘನತೆಯ ಬದುಕಿನ ಹಕ್ಕಿನ ಮೇಲಿನ ನೇರ ದಾಳಿಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಸ್ತುತ ಕಾನೂನಿನ ಪ್ರಕಾರ 24 ವಾರಗಳ ನಂತರ ಗರ್ಭಪಾತಕ್ಕೆ ಅವಕಾಶವಿಲ್ಲದಿದ್ದರೂ, ಇಂತಹ ವಿಶೇಷ ಸಂದರ್ಭಗಳಲ್ಲಿ ಮಾನವೀಯತೆ ಮತ್ತು ಸಂತ್ರಸ್ತೆಯ ಹಿತದೃಷ್ಟಿಯೇ ಮುಖ್ಯ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ,(ಏಜೆನ್ಸೀಸ್​).