Narendra Modi | ಪ್ರಧಾನಿ ನರೇಂದ್ರ ಮೋದಿ
ತಿರುವನಂತಪುರಂ: ಕೇರಳದಲ್ಲಿ ಬದಲಾವಣೆ ಅನಿವಾರ್ಯವಾಗಿದ್ದು, ಎಲ್‌ಡಿಎಫ್ ಮತ್ತು ಯುಡಿಎಫ್‌ನ ಭ್ರಷ್ಟಾಚಾರವನ್ನು ಬಿಜೆಪಿ ಕೊನೆಗೊಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ತಿರುವನಂತಪುರಂ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮುಂಬರುವ ಚುನಾವಣೆಗಳು ಕೇರಳದ ಪರಿಸ್ಥಿತಿ ಮತ್ತು ದಿಕ್ಕನ್ನು ಬದಲಾಯಿಸುತ್ತವೆ, ಇಲ್ಲಿಯವರೆಗೆ ನೀವು ರಾಜ್ಯದಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ಎಂಬ ಎರಡು ಬದಿಗಳನ್ನು ನೋಡಿದ್ದೀರಿ, ಅವರೆಡು ಸರತಿ ಸಾಲಿನಲ್ಲಿ ಕೇರಳವನ್ನು ನಾಶಮಾಡಿವೆ. ಆದರೆ ಇಲ್ಲಿ ಬಿಜೆಪಿ ಎಂಬ ಮೂರನೇ ಬದಿಯೂ ಇದ್ದು, ಅದರ ಗುರಿ ಅಭಿವೃದ್ಧಿ ಮತ್ತು ಉತ್ತಮ ಆಡಳಿತ ಮಾತ್ರ ಎಂದರು.
ಎಲ್‌ಡಿಎಫ್ ಮತ್ತು ಯುಡಿಎಫ್ ಭ್ರಷ್ಟಾಚಾರ, ದುರಾಡಳಿತ ಮತ್ತು ತುಷ್ಟೀಕರಣ ರಾಜಕೀಯವನ್ನು ನಡೆಸುತ್ತಿದ್ದು, ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೇರಳದಲ್ಲಿ ಎರಡು ಪ್ರಮುಖ ಮೈತ್ರಿಕೂಟಗಳಾಗಿದ್ದು, ತಳಮಟ್ಟದಲ್ಲಿ ಬಿಜೆಪಿ ಮೂರನೇ ಪರ್ಯಾಯವಾಗಿ ಹೊರಹೊಮ್ಮುತ್ತಿದೆ ಎಂದರು.
ಎಲ್‌ಡಿಎಫ್ ಮತ್ತು ಯುಡಿಎಫ್ ವಿಭಿನ್ನ ಧ್ವಜಗಳನ್ನು ಹೊಂದಿದ್ದರು, ಅವುಗಳ ಕಾರ್ಯಸೂಚಿ ಒಂದೇ ಆಗಿದೆ. ಐದು ಅಥವಾ ಹತ್ತು ವರ್ಷಗಳ ಬಳಿಕ ಅವರು ಅಧಿಕಾರಕ್ಕೆ ಬರುತ್ತಾರೆ ಎನ್ನುವುದು ಅವರಿಗೆ ತಿಳಿದಿದೆ. ಆದ್ದರಿಂದ ಸರ್ಕಾರ ಬದಲಾಗುತ್ತದೆ, ಆದರೆ ವ್ಯವಸ್ಥೆ ಬದಲಾಗುವುದಿಲ್ಲ. ಈಗ ನೀವು ಜನಪರ ಮತ್ತು ಅಭಿವೃದ್ಧಿ ಪರ ಸರ್ಕಾರವನ್ನು ರಚಿಸಬೇಕಾಗಿದೆ. ಆ ಕೆಲಸವನ್ನು ಬಿಜೆಪಿ ಮತ್ತು ಎನ್‌ಡಿಎ ಮಾಡುತ್ತವೆ ಎಂದು ಹೇಳಿದರು.
ಕೇರಳದ ಆಕಾಂಕ್ಷೆಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ರಾಜ್ಯದ ಜನರಿಗೆ ಬಿಜೆಪಿಯ ಮೇಲೆ ವಿಶ್ವಾಸವಿದೆ ಎಂದಿರುವ ಪ್ರಧಾನಿ ಮೋದಿ, ರಾಜ್ಯ ರಾಜಧಾನಿಯಾದ ತಿರುವನಂತಪುರಂ ನಗರವನ್ನು ಭಾರತದ ಅತ್ಯುತ್ತಮ ನಗರಗಳಲ್ಲಿ ಒಂದನ್ನಾಗಿ ಮಾಡಲು ನಾನು ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ. ತಿರುವನಂತಪುರಂನ ಬಿಜೆಪಿಯ ಗೆಲುವು ಸಾಮಾನ್ಯವಲ್ಲ, ಇದು ಐತಿಹಾಸಿಕ ಮತ್ತು ಅಭೂತಪೂರ್ವವಾಗಿದೆ, ಈ ನಗರ ಕೇರಳದಲ್ಲಿ ಬಿಜೆಪಿಗೆ ಅಡಿಪಾಯ ಹಾಕಿದ್ದು, ಇಲ್ಲಿನ ಜನ ಬಿಜೆಪಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಾರೆ ಎಂದರು.
ಕೇರಳದ ಯುವಕರಿಗೆ ಕಾಂಗ್ರೆಸ್ ಪಕ್ಷ ದ್ರೋಹ ಬಗೆದಿದೆ ಎಂದು ಆರೋಪಿಸಿದ ಮೋದಿ, ಇಲ್ಲಿಯೂ ಡಬಲ್ ಎಂಜಿನ್ ಸರ್ಕಾರವಿದ್ದರೆ ರಾಜ್ಯಕ್ಕೆ ಲಾಭವಾಗುವ ದೊಡ್ಡ ಒಪ್ಪಂದಗಳನ್ನು ಭಾರತ ವಿಶ್ವಾದ್ಯಂತ ಮಾಡುತ್ತಿದೆ. ಮಾವೋವಾದಿ, ಕಮ್ಯುನಿಸ್ಟ್ ಮತ್ತು ಮುಸ್ಲಿಂ ಲೀಗ್‌ಗಿಂತ ಕಾಂಗ್ರೆಸ್ ಪಕ್ಷವೇ ಹೆಚ್ಚು ಕೋಮುವಾದಿಯಾಗಿದ್ದು, ಈ ಪವಿತ್ರ ಭೂಮಿಯನ್ನು ನಾವು ಅವರಿಂದ ರಕ್ಷಿಸಬೇಕಿದೆ ಎಂದು ಹೇಳಿದರು.
ಕೇರಳಕ್ಕೆ ಹೊಸ ರಾಜಕೀಯದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಪ್ರಧಾನಿ ಮೋದಿ, ಮುಂದಿನ 25 ವರ್ಷಗಳಲ್ಲಿ, ಅಭಿವೃದ್ಧಿ ಹೊಂದಿದ ಕೇರಳವನ್ನು ನಿರ್ಮಿಸಲು ಬಿಜೆಪಿಗೆ ನಿರ್ಣಾಯಕ ಜನಾದೇಶದ ಅಗತ್ಯವಿದ್ದು, ಈಗ ವಿಕಸಿತ ಕೇರಳದ ಸಮಯ. ಈಗ ಎನ್‌ಡಿಎ ಸರ್ಕಾರದ ಸಮಯ ಎಂದು ಹೇಳಿದರು(ಏಜೆನ್ಸೀಸ್).