ಪಂಜಾಬ್ ಸಿಎಂ ಭಗವಂತ್ ಮಾನ್ ಮತ್ತು ಪ್ರಧಾನಿ ಮೋದಿ 
ದೇಶ

ಚಂಡೀಗಢ ಮಸೂದೆ ವಿವಾದ; ಇನ್ನೂ ಯಾವುದೇ ಅಂತಿಮ ನಿರ್ಧಾರ ಮಾಡಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ | Central government clarifies

ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢವನ್ನು ಸಂವಿಧಾನದ 240ನೇ ವಿಧಿಯ ವ್ಯಾಪ್ತಿಗೆ ತರಲು ನಡೆಸಿರುವ ಮಸೂದೆ ಬಗ್ಗೆ ಪಂಜಾಬ್​ನಾದ್ಯಂತ ರಾಜಕೀಯ ಬಿರುಗಾಳಿ ಎದ್ದೇಳುತ್ತಿದ್ದಂತೆ, ಈ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಭಾನುವಾರ(ನ. 23) ಕೇಂದ್ರ ಸರ್ಕಾರ ಸ್ಪಷ್ಟನೆ( Central government clarifies) ನೀಡಿದೆ.
ಮಸೂದೆ ಕುರಿತು ಎಕ್ಸ್​ನಲ್ಲಿ ಸ್ಪಷ್ಟೀಕರಣ ನೀಡಿರುವ ಕೇಂದ್ರ ಗೃಹಸಚಿವಾಲಯ, ಚಂಡೀಗಢವನ್ನು ರಾಷ್ಟ್ರಪತಿಗಳ ನೇರ ನಿಯಂತ್ರಣಕ್ಕೆ ತರುವ ಸಂವಿಧಾನ ತಿದ್ದುಪಡಿ ಮಸೂದೆ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯದ ಕುರಿತು ಮಸೂದೆಯನ್ನು ಮಂಡಿಸುವ ಯೋಜನೆ ಇಲ್ಲ. ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದೆ.
ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢಕ್ಕೆ ಕಾನೂನು ರಚನೆಯನ್ನು ಸರಾಗಗೊಳಿಸುವ ಪ್ರಸ್ತಾಪ ಕೇಂದ್ರ ಸರ್ಕಾರದ ಪರಿಗಣನೆಯಲ್ಲಿದೆ. ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ. ಈ ಪ್ರಸ್ತಾವನೆಯು ಚಂಡೀಗಢದ ಆಡಳಿತ ಅಥವಾ ಪಂಜಾಬ್ ಅಥವಾ ಹರಿಯಾಣದೊಂದಿಗಿನ ಅದರ ಸಾಂಪ್ರದಾಯಿಕ ಸಂಬಂಧಗಳ ಬಗ್ಗೆ ಏನನ್ನೂ ಒಳಗೊಂಡಿಲ್ಲ. ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ ಮತ್ತು ಚಂಡೀಗಢದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮಾತ್ರ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದೆ.
ಇದಕ್ಕೂ ಮೊದಲು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ಡಿಯುಗಳಂತಹ ಇತರ ಕೇಂದ್ರಾಡಳಿತ ಪ್ರದೇಶಗಳಂತೆ, ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢವನ್ನು ಸಂವಿಧಾನದ 240ನೇ ವಿಧಿಯ ಅಡಿ ವ್ಯಾಪ್ತಿಗೆ ತರಲು ನಡೆಸಿರುವ ಕೇಂದ್ರ ಸರ್ಕಾರ ಮಸೂದೆ ಮಂಡಿಸಲು ಸಜ್ಜಾಗಿದೆ ಎಂದು ವರದಿಯಾಗಿತ್ತು. ಈ ವಿಧಿ ನೇರವಾಗಿ ರಾಷ್ಟ್ರಪತಿಗಳಿಗೆ ಕೇಂದ್ರಾಡಳಿತ ಪ್ರದೇಶದ ನಿಯಮಗಳನ್ನು ರೂಪಿಸುವ ಅಧಿಕಾರ ನೀಡುತ್ತದೆ. ಪ್ರಸ್ತುತ ಪಂಜಾಬ್ ಮತ್ತು ಹರಿಯಾಣದ ಜಂಟಿ ರಾಜಧಾನಿಯಾಗಿರುವ ಚಂಡೀಗಢಕ್ಕೆ ಪಂಜಾಬ್ ರಾಜ್ಯಪಾಲರು ಆಡಳಿತಾಧಿಕಾರಿಯಾಗಿದ್ದಾರೆ.
ಇನ್ನೂ ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಪಂಜಾಬ್​ನ ಆಡಳಿತರೂಢ ಎಎಪಿಯಿಂದ ಹಿಡಿದು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ ಆಕ್ರೋಶ ವ್ಯಕ್ತಪಡಿಸಿ, ಇದನ್ನು ಪಂಜಾಬ್ ವಿರೋಧಿ ನಿಲುವು ಎಂದು ಕರೆದಿದ್ದವು.
ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಪಂಜಾಬ್ ಸಿಎಂ ಭಗವಂತ್ ಮಾನ್, ಈ ತಿದ್ದುಪಡಿ ಪಂಜಾಬ್‌ನ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ನಾವು ಇದನ್ನು ಬಲವಾಗಿ ವಿರೋಧಿಸುತ್ತೇವೆ ಮತ್ತು ಕೇಂದ್ರ ಸರ್ಕಾರವು ಪಂಜಾಬ್ ವಿರುದ್ಧ ಹೂಡಿರುವ ಈ ಪಿತೂರಿ ಯಶಸ್ವಿಯಾಗಲು ಬಿಡುವುದಿಲ್ಲ. ನಮ್ಮ ಪಂಜಾಬ್‌ನ ಹಳ್ಳಿಗಳನ್ನು ನಾಶಮಾಡಿ ನಿರ್ಮಿಸಲಾದ ಚಂಡೀಗಢದ ಮೇಲೆ ಪಂಜಾಬ್‌ಗೆ ಮಾತ್ರ ಹಕ್ಕಿದೆ. ನಾವು ನಮ್ಮ ಹಕ್ಕುಗಳನ್ನು ಬಿಟ್ಟುಕೊಡುವುದಿಲ್ಲ. ಅದಕ್ಕಾಗಿ ಅಗತ್ಯವಿರುವ ಯಾವುದೇ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು (ಏಜೆನ್ಸೀಸ್).