Wimbledon 2026: 2026ರ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ವಿಶ್ವ ನಂ. 1 ಮತ್ತು ಹಾಲಿ ಚಾಂಪಿಯನ್ ಇಟಲಿಯ ಯಾನಿಕ್ ಸಿನ್ನರ್, ಫ್ರೆಂಚ್ ಓಪನ್ ಹಾಲಿ ಚಾಂಪಿಯನ್ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಅವರನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಭಾನುವಾರ(ಜು. 12) ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಯಾನಿಕ್ ಸಿನ್ನರ್ 6-7 (7), 7-6 (2), 6-3, 6-4 ಸೆಟ್‌ಗಳಿಂದ ಜ್ವೆರೇವ್ ಅವರನ್ನು ಸೋಲಿಸಿ ಸತತ ಎರಡನೇ ವಿಂಬಲ್ಡನ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಸುಮಾರು 3 ಗಂಟೆ 46 ನಿಮಿಷಗಳ ಕಾಲ ಪಂದ್ಯ ನಡೆದಿದ್ದು, ಮೊದಲ ಸೆಟ್ ಸೋತರೂ ಅದ್ಭುತವಾಗಿ ಪುನರಾಗಮನ ಮಾಡಿದ ಯಾನಿಕ್ ಸಿನ್ನರ್, ಜ್ವೆರೇವ್ ವಿರುದ್ಧ ಸತತ 10ನೇ ಗೆಲುವು ದಾಖಲಿಸಿದರು. ಈ ಗೆಲುವಿನ ಮೂಲಕ ಸಿನ್ನರ್ ವಿಂಬಲ್ಡನ್ ಇತಿಹಾಸದಲ್ಲಿ ಸತತವಾಗಿ ಎರಡು ಬಾರಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದ 10ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಮೊದಲು ಅವರು 2025ರಲ್ಲೂ ಚಾಂಪಿಯನ್ ಆಗಿದ್ದರು. ಇನ್ನೂ ಇದು ಸಿನ್ನರ್ ವೃತ್ತಿಜೀವನದ 5ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿಯಾಗಿದ್ದು, 2026ರ ಸಾಲಿನ ಅವರ ಮೊದಲ ಮೇಜರ್ ಪ್ರಶಸ್ತಿಯಾಗಿದೆ. ಮತ್ತು ಗ್ರಾಂಡ್ ಸ್ಲಾಮ್ನಲ್ಲಿ ತಮ್ಮ ವೃತ್ತಿಜೀವನದ ಇತಿಹಾಸದಲ್ಲಿ 100ನೇ ಪಂದ್ಯದ ಗೆಲುವಾಗಿದೆ.
ಜ್ವೆರೆವ್ಗೆ ಗಾಯ
ಮೂರನೇ ಸೆಟ್‌ನಲ್ಲಿ ಜ್ವೆರೆವ್ 2 ಗಂಟೆ 42 ನಿಮಿಷಗಳ ಆಟದ ನಂತರ 3-3 ಅಂಕಗಳಿಂದ ಪಂದ್ಯದ ಮೊದಲ ಬ್ರೇಕ್ ಪಾಯಿಂಟ್ ಗಳಿಸುವವರೆಗೂ ಫೈನಲ್ ಸಮತೋಲಿತವಾಗಿತ್ತು. ಪಾಯಿಂಟ್ ಸಮಯದಲ್ಲಿ ಸಿನ್ನರ್ ಡ್ರಾಪ್ ಶಾಟ್ ಆಡಿದರು ಮತ್ತು ಅದನ್ನು ಬೆನ್ನಟ್ಟುವಾಗ ಜ್ವೆರೆವ್ ಹುಲ್ಲಿನ ಮೇಲೆ ಜಾರಿಬಿದ್ದರು. ಅವರ ಬಲ ಮೊಣಕಾಲಿಗೆ ಏಟು ಬಿದ್ದಿತ್ತು (ಏಜೆನ್ಸೀಸ್).