ಹೋರಾಟಕ್ಕಿಳಿದ ಅಖಿಲೇಶ್ ಯಾದವ್ ಪತ್ನಿ, ಸಂಸದೆ ಡಿಂಪಲ್ ಯಾದವ್ ರನ್ನ ವಶಕ್ಕೆ ಪಡೆದ ಪೊಲೀಸರು
- ಪರೀಕ್ಷಾ ಅಕ್ರಮ ಖಂಡಿಸಿ ದೆಹಲಿಯಲ್ಲಿ ಕಾಕ್ರೋಜ್ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ‘ಚಲೋ ಸಂಸತ್’ ರ‍್ಯಾಲಿ
- ಪ್ರತಿಭಟನೆ ಬೆಂಬಲಿಸಿದ್ದ ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಬಂಧನ
- ಹೋರಾಟಕ್ಕಿಳಿದ ಅಖಿಲೇಶ್ ಯಾದವ್ ಪತ್ನಿ, ಸಂಸದೆ ಡಿಂಪಲ್ ಯಾದವ್ ರನ್ನ ವಶಕ್ಕೆ ಪಡೆದ ಪೊಲೀಸರು
ನವದೆಹಲಿ: ನೀಟ್ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ ಸೋಮವಾರ (ಜು.20) ಜಂತರ್ ಮಂತರ್ನಿಂದ ಸಂಸತ್ ಭವನದವರೆಗೆ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಂಡಿದೆ.
ಈ ಪ್ರತಿಭಟನೆಯನ್ನು ಬೆಂಬಲಿಸಿ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ, ಸಮಾಜವಾದಿ ಪಕ್ಷದ ಸಂಸದೆ, ಮಾಜಿ ಸಿಎಂ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ (Dimple Yadav Arrest) ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಹೇಳಲಾಗುತ್ತಿದೆ.
ಮಕ್ಕಳ ಭವಿಷ್ಯಕ್ಕಾಗಿ ಹೋರಾಡುತ್ತಿರುವ, ಪ್ರತಿಭಟನಾಕಾರರಿಗೆ ಬೆಂಬಲ ನೀಡಿದ್ದಕ್ಕಾಗಿ ನಮ್ಮ ನಾಯಕಿ ಡಿಂಪಲ್ ಯಾದವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ.
ಈ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ, ಪರಿಸರವಾದ ಸೋನಮ್ ವಾಂಗ್ಚುಕ್ 20 ದಿನಗಳವರೆಗೆ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದರು. ನಂತರ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನಲೆ ದೆಹಲಿ ಪೊಲೀಸರು ಶನಿವಾರ ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿತ್ತು.
ಈ ಘಟನೆ ಬಳಿಕ ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ ಅನಿರ್ದಿಷ್ಟಾವಧಿ ಉಪವಾಸವನ್ನು ಕೈಗೊಳ್ಳುವುದಾಗಿ ಘೋಷಿಸಿದ್ದರು. ಇಂದು ಪ್ರತಿಭಟನಾ ರ‍್ಯಾಲಿ ಆರಂಭಗೊಳ್ಳುತ್ತಲೇ ಸರ್ಕಾರದಿಂದ ಮಾತುಕತೆ ಭರವಸೆ ದೊರೆತ ಹಿನ್ನಲೆ ದೀಪ್ಕೆ ತಮ್ಮ ಉಪವಾಸವನ್ನು ಮೊಟಕು ಗೊಳಿಸಿದ್ದಾರೆ.
ನಡ್ಡಾ ಜೊತೆ ಮಾತುಕತೆ!
ಇಂದಿನಿಂದ ರಾಷ್ಟ್ರ ರಾಜಧಾನಿಯಲ್ಲಿ ಮಳೆಗಾಲದ ಸಂಸತ್ ಅಧಿವೇಶನ ಆರಂಭವಾಗುತ್ತಿದ್ದು, ಇದೇ ಸಂದರ್ಭದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರು ಸಂಸತ್ಗೆ ಮುತ್ತಿಗೆ ಹಾಕಲು ಮುಂದಾಗಿದ್ದರೆಂದು ತಿಳಿದು ಬಂದಿದೆ.
ಈಗ ಸರ್ಕಾರದ ವತಿಯಿಂದ ಕೇಂದ್ರ ಸಚಿವ ಜೆ.ಪಿ. ನಡ್ಡಾ ಮಾತುಕತೆಗೆ ಮುಂದಾಗಿದ್ದಾರೆಂದು ಮಾಹಿತಿ ಲಭ್ಯವಾಗಿದೆ. ಈ ಕುರಿತು ಕಾಕ್ರೋಚ್ ಜನತಾ ಪಾರ್ಟಿ ವಕ್ತಾರ, ಸೌರವ್ ದಾಸ್, ಎಕ್ಸ್ ಪೋಸ್ಟ್ವೊಂದರಲ್ಲಿ, ಸೋಮವಾರ ಕಾಕ್ರೋಚ್ ಜನತಾ ಪಾರ್ಟಿಯ ನಾಯಕರು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರನ್ನು ಬೇಟಿಯಾಗಲು ಹೋಗುತ್ತಿದ್ದಾರೆ. ಸರ್ಕಾರ ನಮ್ಮನ್ನು ಸಂಪರ್ಕಿಸಿದೆ ಹೀಗಾಗಿ ಆಶುತೋಷ್ ರಾಂಕಾ ನೇತೃತ್ವದಲ್ಲಿ ನಾವು ನಮ್ಮ ಬೇಡಿಕೆಯನ್ನು ಸಚಿವರಿಗೆ ಮನವರಿಕೆ ಮಾಡಿಕೊಡಲಿದ್ದು, ನಮಗೆ ಈ ಬಾರಿ ಜಯ ಸಿಗಲಿದೆ ಎಂದು ಬರೆದುಕೊಂಡಿದ್ದಾರೆ, (ಏಜನ್ಸೀಸ್).