ಭಾರತದಲ್ಲಿನ ಕ್ವಿಕ್ ಕಾಮರ್ಸ್ ಕಂಪನಿಗಳು ತಮ್ಮ ಕಾರ್ಯತಂತ್ರ ಬದಲಿಸಿಕೊಳ್ಳದಿದ್ದರೆ, ಅವು ನೀರಿನ ಮೇಲಿನ ಗುಳ್ಳೆಯಂತೆ ಮರೆಯಾಗಲಿವೆ ಎಂದಿದ್ದಾರೆ ಬ್ಲಿಂಕಿಟ್ ಸಿಇಒ ಅಲ್ಬಿಂದರ್ ಧಿಂಡ್ಸಾ. ಮಾರುಕಟ್ಟೆ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಕ್ವಿಕ್ ಕಾಮರ್ಸ್ ಕಂಪನಿಗಳು ದೊಡ್ಡ ಮೊತ್ತ ಖರ್ಚು ಮಾಡುತ್ತಿದ್ದು, ಆದಾಯದ ಮೇಲೆ ಹೊಡೆತ ಬಿದ್ದಿದೆ. ಹೀಗಾಗಿ ಹೂಡಿಕೆದಾರರು ಹಿಂಜರಿಯುತ್ತಿದ್ದಾರೆ. ಆದಾಯ ಕಡಿಮೆಯಾಗುತ್ತಿದೆ. ಇದೆಲ್ಲದರ ಪರಿಣಾಮ ಏನು? ಇಲ್ಲಿದೆ ಅವಲೋಕನ.
ಉದ್ಯಮ ಸಣ್ಣದಿರಲಿ, ದೊಡ್ಡದಿರಲಿ ಕಾಲಕಾಲಕ್ಕೆ ಕಾರ್ಯತಂತ್ರದಲ್ಲಿ ಬದಲಾವಣೆ ಅತ್ಯಗತ್ಯ. ಇದೇ ಮಾದರಿಯಲ್ಲಿ ಮಹತ್ವದ ಸಂದೇಶವೊಂದನ್ನು ಇತ್ತೀಚೆಗೆ ನೀಡಿದ್ದಾರೆ ಬ್ಲಿಂಕಿಟ್ ಕಂಪನಿಯ ಸಿಇಒ ಅಲ್ಬಿಂದರ್ ಧಿಂಡ್ಸಾ. ‘ಭಾರತದಲ್ಲಿ ಕ್ವಿಕ್ ಕಾಮರ್ಸ್ ವಲಯ ವೇಗವಾಗಿ ಬೆಳೆಯುತ್ತಿದೆ. ಆದರೆ, ಈ ಕಂಪನಿಗಳು ಬಿಜಿನೆಸ್ ಮಾಡೆಲ್ನಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ, ನೀರಿನ ಮೇಲಿನ ಗುಳ್ಳೆಯಂತೆ ಮಾಯವಾಗುತ್ತವೆ. ಹೆಚ್ಚುತ್ತಿರುವ ವೆಚ್ಚಗಳಿಗೆ ಈ ಕಂಪನಿಗಳು ಕಡಿವಾಣ ಹಾಕಲೇ ಬೇಕು’ ಎಂದಿದ್ದಾರೆ ಧಿಂಡ್ಸಾ. ಕ್ವಿಕ್ ಕಾಮರ್ಸ್ ವಲಯದಲ್ಲಿ ಆದಾಯವೇನೋ ಹೆಚ್ಚುತ್ತಿದೆ. ಆದರೆ, ಉದ್ಯಮ ವಿಸ್ತಾರದ ಸ್ಪರ್ಧೆಯಲ್ಲಿ ಖರ್ಚುಗಳು ಮೀತಿಮೀರಿವೆ. ಹಾಗಾಗಿ, ಕ್ವಿಕ್ ಕಾಮರ್ಸ್ನ ಬಹುತೇಕ ವೇದಿಕೆಗಳು ನಷ್ಟದಲ್ಲಿವೆ. ಅಲ್ಲದೆ, ‘ಹತ್ತು-ಹದಿನೈದು ನಿಮಿಷಗಳಲ್ಲಿ ಮನೆಬಾಗಿಲಿಗೆ ತಲುಪಿಸುತ್ತೇವೆ’ ಎಂಬ ಘೋಷಣೆ ಕಂಪನಿಗಳ ನಡುವಿನ ಸ್ಪರ್ಧೆಯನ್ನು ಇನ್ನಷ್ಟು ಹೆಚ್ಚಿಸಿದೆ. ಮಾತ್ರವಲ್ಲ, ಡೆಲಿವರಿ ಬಾಯ್ಗಳಿಗೆ ಇದು ಒತ್ತಡವನ್ನು ಉಂಟುಮಾಡುತ್ತಿದೆ. ಉತ್ಪನ್ನಗಳನ್ನು ಬೇಗ ತಲುಪಿಸುವ ಭರದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು, ಅಪಘಾತಕ್ಕೆ ಈಡಾಗುವಂಥ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಹೀಗಾಗಿ, ಅಮೆರಿಕದಲ್ಲಿ ಕೂಡ ಪರಿಕಲ್ಪನೆ ಬದಲಾಗಿದ್ದು, 10-15 ನಿಮಿಷಗಳ ಬದಲಿಗೆ ‘ಸೇಮ್ ಡೇ ಡೆಲಿವರಿ’ ಪ್ರಚಲಿತಕ್ಕೆ ಬಂದಿದೆ. ಹಾಗಾಗಿ, ಭಾರತದಲ್ಲಿ ಇ-ಕಾಮರ್ಸ್ ಕಂಪನಿಗಳು ಏಕಾಂಗಿಯಾಗಿ ಕಾರ್ಯನಿರ್ವಹಿಸುವುದಕ್ಕಿಂತ, ಸಮೂಹವಾಗಿ ಕಾರ್ಯಾಚರಣೆಗೆ ಇಳಿಯಬೇಕು. ಕೆಲವೇ ನಿಮಿಷಗಳ ಬದಲು ಅದೇ ದಿನ ಅಥವಾ ಮರುದಿನ ಉತ್ಪನ್ನ ತಲುಪಿಸುವ ವ್ಯವಸ್ಥೆ ಮಾಡಬೇಕು. ಹೀಗಾದಲ್ಲಿ, ಭವಿಷ್ಯದಲ್ಲಿ ಈ ಕಂಪನಿಗಳು ಸುಸ್ಥಿರವಾಗಿ ಕಾರ್ಯನಿರ್ವಹಣೆ ಮಾಡಲು ಸಾಧ್ಯ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಭಾರತದ ಕ್ವಿಕ್ ಕಾಮರ್ಸ್ ಮಾರುಕಟ್ಟೆ ವಿಶಾಲವಾಗಿದ್ದರೂ, ಪೂರೈಕೆ ಸರಪಳಿ ದುರ್ಬಲವಾಗಿದೆ. ಡಾರ್ಕ್ ಸ್ಟೋರ್ಗಳ ಸಂಖ್ಯೆ ಹೆಚ್ಚಬೇಕಿದೆ. ಅಲ್ಲದೆ, ಹಾಲು, ಮೊಸರು, ತರಕಾರಿಯಂಥ ಉತ್ಪನ್ನಗಳನ್ನು ಶೇಖರಿಸಿಡಲು ಹಾಗೂ ಇದರ ಸಾಗಾಣಿಕೆಗೆ ಪೂರಕ ವ್ಯವಸ್ಥೆಗಳಿಲ್ಲ. ಇದರಿಂದ ಉತ್ಪನ್ನಗಳ ಹಾನಿ ಪ್ರಮಾಣ ಜಾಸ್ತಿಯಾಗಿದ್ದು, ಆದಾಯಕ್ಕೆ ಹೊಡೆತ ನೀಡಿದೆ.
ಭಾರತದ ಕ್ವಿಕ್ ಕಾಮರ್ಸ್ ಕಂಪನಿಗಳ ನಡುವೆ ತೀವ್ರಥರದ ಸ್ಪರ್ಧೆ ಏರ್ಪಟ್ಟಿದೆ. ಆರೋಗ್ಯಕರ ಸ್ಪರ್ಧೆ ಪೂರಕವೇ ಹೌದಾದರೂ, ಅತಿಯಾದ ಸ್ಪರ್ಧೆ ಅಪಾಯಕಾರಿ. ಮಾರುಕಟ್ಟೆಯ ಮೇಲೆ ನಿಯಂತ್ರಣ ಸಾಧಿಸಲು ಪೈಪೋಟಿಯೇ ಏರ್ಪಟ್ಟಿದೆ. ಹೊಸ ಗ್ರಾಹಕರನ್ನು ಒಳಗೊಳ್ಳಲು ದೊಡ್ಡ ಪ್ರಮಾಣದಲ್ಲಿ ಹಣವನ್ನು ಖರ್ಚು (ಕ್ಯಾಶ್ಬರ್ನ್) ಮಾಡಲಾಗುತ್ತಿದೆ. ಪ್ರತಿ ತ್ರೖೆಮಾಸಿಕಕ್ಕೆ ಸರಾಸರಿ 2 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ. ಗ್ರಾಹಕರನ್ನು ಒಳಗೊಳ್ಳಲು ಇತರ ಕ್ಷೇತ್ರಗಳು ಮಾಡುವ ವೆಚ್ಚಕ್ಕೆ ಹೋಲಿಸಿದರೆ ಇದು ತುಂಬ ಜಾಸ್ತಿ. ವೆಚ್ಚ ಅಧಿಕವಾಗಿರುವುದರಿಂದ ಪ್ರತಿ ಆರ್ಡರ್ ಮೇಲಿನ ಆದಾಯ (ಯೂನಿಟ್ ಇಕನಾಮಿಕ್ಸ್) ತಗ್ಗುತ್ತಿದೆ. ಈ ಸವಾಲೇ ಈಗ ಕ್ವಿಕ್ ಕಾಮರ್ಸ್ ಕ್ಷೇತ್ರದ ಅಸ್ತಿತ್ವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಬ್ಲಿಂಕಿಟ್
ಬ್ಲಿಂಕಿಟ್ ಕಂಪನಿಯ ಆದಾಯ ಹೆಚ್ಚಿದ್ದರೂ, ಖರ್ಚು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ವಿತ್ತ ವರ್ಷ 2023-2024ರಲ್ಲಿ 1,934 ಕೋಟಿ ರೂ. ಇದ್ದ ಆದಾಯ 2024-2025ರಲ್ಲಿ 4,389 ಕೋಟಿ ರೂ.ಗೆ ಏರಿಕೆಯಾಗಿದೆ. ಆದರೆ, ಕಂಪನಿಯ ಖರ್ಚು 5,318 ಕೋಟಿ ರೂ.ಗೆ ತಲುಪಿದೆ. ಹೊಸ ಸ್ಟೋರ್ಗಳ ನಿರ್ವಣಕ್ಕಾಗಿ ಹೆಚ್ಚಿನ ಮೊತ್ತವನ್ನು ವಿನಿಯೋಗಿಸಲಾಗಿದೆ.
ಭವಿಷ್ಯ ಆಶಾದಾಯಕ: ಬ್ಲಿಂಕಿಟ್ ಕಂಪನಿಯ ಖರ್ಚು ಹೆಚ್ಚಿದ್ದರೂ, ಈ ಖರ್ಚು ಉದ್ಯಮ ವಿಸ್ತರಣೆ ನಿಟ್ಟಿನಲ್ಲಿ ಮಾಡಿರುವುದರಿಂದ ಮುಂಬರುವ ದಿನಗಳಲ್ಲಿ ಪೂರಕವಾಗಿಯೇ ಪರಿಣಮಿಸಲಿದೆ ಎನ್ನುತ್ತಾರೆ ತಜ್ಞರು. ಯುಬಿಎಸ್ನ ಇತ್ತೀಚಿನ ವರದಿಯ ಪ್ರಕಾರ, ಭಾರತದ ಕ್ವಿಕ್ ಕಾಮರ್ಸ್ನಲ್ಲಿ ಶೇಕಡ 45 ಪಾಲು ಬ್ಲಿಂಕಿಟ್ನದ್ದೇ ಆಗಿದೆ. ಜೊಮ್ಯಾಟೋದ ಬೆಂಬಲ ಕೂಡ ಬ್ಲಿಂಕಿಟ್ಗೆ ಇದೆ.
ಜೆಪ್ಟೋ
ಜೆಪ್ಟೋ ಕಂಪನಿ ತಾನು ಎಷ್ಟು ನಷ್ಟ ಅನುಭವಿಸಿದೆ ಎಂಬುದರ ಅಧಿಕೃತ ಅಂಕಿಅಂಶ ಬಿಡುಗಡೆ ಮಾಡಿಲ್ಲ. ಆದರೆ, ಕಂಪನಿಯು ತನ್ನ ನಷ್ಟವನ್ನು ಕಳೆದ ಆರ್ಥಿಕ ವರ್ಷಕ್ಕಿಂತ ಶೇಕಡ 50ರಷ್ಟು ಕಡಿಮೆ ಮಾಡಿಕೊಂಡಿದೆ ಎಂದು ಜೆಪ್ಟೋ ಸಿಇಒ 2025ರ ಏಪ್ರಿಲ್ನಲ್ಲಿ ತಿಳಿಸಿದ್ದರು. ಕಳೆದ ಆರ್ಥಿಕ ವರ್ಷದಲ್ಲಿ 1,249 ಕೋಟಿ ರೂ.ಗಳ ನಷ್ಟ ಅನುಭವಿಸಿತ್ತು.
ಭಯವಿಲ್ಲ: ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಶೇ.20 ಪಾಲು ಹೊಂದಿರುವ ಜೆಪ್ಟೋ ಇತ್ತೀಚೆಗಷ್ಟೇ ಹೊಸದಾಗಿ ಬಂಡವಾಳವನ್ನು ಸಂಗ್ರಹಿಸಿದ್ದು, ಉದ್ಯಮ ವಿಸ್ತರಣೆಗೆ ಮುಂದಾಗಿದೆ.
ಸ್ವಿಗ್ಗಿ ಇನ್ಸ್ಟಾಮಾರ್ಟ್
ಆರ್ಥಿಕ ವರ್ಷ 2024-25ರಲ್ಲಿ ಸ್ವಿಗ್ಗಿ ಇನ್ಸ್ಟಾಮಾರ್ಟ್ 840 ಕೋಟಿ ರೂ.ಗಳ ನಷ್ಟ ಅನುಭವಿಸಿದೆ. ಎದುರಾಳಿ ಕಂಪನಿಯೊಂದಿಗೆ ಪ್ರತಿಸ್ಪರ್ಧೆ ನೀಡಲು ನಗರಗಳಲ್ಲಿ ಹೊಸ ಸ್ಟೋರ್ಗಳನ್ನು ತೆರೆದಿರುವುದು ಮತ್ತು ಮಾರ್ಕೆಟಿಂಗ್ಗಾಗಿ ದೊಡ್ಡ ಮೊತ್ತವನ್ನು ವಿನಿಯೋಗಿಸಿರುವುದು ಈ ನಷ್ಟಕ್ಕೆ ಕಾರಣ. ಕಳೆದ ತ್ರೖೆಮಾಸಿಕದಲ್ಲೇ ಹೊಸದಾಗಿ 316 ಡಾರ್ಕ್ ಸ್ಟೋರ್ಗಳನ್ನು ನಿರ್ವಿುಸಿದೆ.
ಮುಂದೇನು?: ಸ್ವಿಗ್ಗಿ ಇನ್ಸ್ಟಾಮಾರ್ಟ್ ಕಂಪನಿಯ ಬಳಿ ಡೆಲಿವರಿ ಬಾಯ್ಗಳ ದೊಡ್ಡ ಪಡೆಯೇ ಇದೆ. ಈಗ ಸ್ಟೋರ್ಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿಸಿಕೊಂಡಿರುವುದರಿಂದ ಮುಂಬರುವ ದಿನಗಳಲ್ಲಿ ವಹಿವಾಟು ಪ್ರಮಾಣ ಹೆಚ್ಚಲಿದೆ. ಆದ್ದರಿಂದ, ಕಂಪನಿ ನಷ್ಟದಿಂದ ಹೊರಬರಲು ತುಂಬ ಸಮಯ ಬೇಕಾಗುವುದಿಲ್ಲ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಅಲ್ಲದೆ, ಇ-ಕಾಮರ್ಸ್ನಲ್ಲಿ ಶೇಕಡ 27 ಮಾರುಕಟ್ಟೆ ಪಾಲನ್ನು ಹೊಂದಿದೆ. ಇತ್ತೀಚೆಗೆ ಐಪಿಒ ಮೂಲಕ ಹಣ ಸಂಗ್ರಹಿಸಿದ್ದು, ದೀರ್ಘಾವಧಿಯ ಯೋಜನೆಗಳನ್ನು ರೂಪಿಸಿಕೊಂಡಿದೆ.