No Broker (ಚಿತ್ರ X) 
ದೇಶ

ಟೀಮ್ ವರ್ಕ್‌ಗೆ ಗ್ರ್ಯಾಂಡ್ ಸೆಲ್ಯೂಟ್: ಆಫೀಸ್‌ನಲ್ಲೇ ಬೈಕ್ ಓಡಿಸಿ ಯಶಸ್ಸು ಸಂಭ್ರಮಿಸಿದ ನೋಬ್ರೋಕರ್ ಸಿಇಒ! No Broker

No Broker: ಹೌಸಿಂಗ್ ಪ್ಲಾಟ್‌ಫಾರ್ಮ್ 'ನೋಬ್ರೋಕರ್' ಸಂಸ್ಥೆಯ ಸಂಸ್ಥಾಪಕ ಅಮಿತ್ ಕುಮಾರ್ ಅಗರ್‌ವಾಲ್ ಅವರು ತಮ್ಮ ಉದ್ಯೋಗಿಗಳನ್ನು ಅಭಿನಂದಿಸಲು ಮಾಡಿದ ವಿನೂತನ ಸಾಹಸವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಂಸ್ಥೆಯ ಅತ್ಯುತ್ತಮ ತ್ರೈಮಾಸಿಕ ಸಾಧನೆಯನ್ನು ಸಂಭ್ರಮಿಸಲು ಅಗರ್‌ವಾಲ್ ಅವರು ಹೊಸಬ್ರ್ಯಾಂಡ್ ಸ್ಕೂಟಿಯೊಂದನ್ನು ನೇರವಾಗಿ ಆಫೀಸ್‌ ಒಳಗಡೆಯೇ ಚಲಾಯಿಸಿಕೊಂಡು ಬಂದು ಉದ್ಯೋಗಿಗಳಿಗೆ ಬಂಪರ್​ ಸರ್ಪ್ರೈಸ್ ನೀಡಿದ್ದಾರೆ.

ಸಿಇಒ ಸ್ಕೂಟಿ ರೈಡ್ ಮಾಡಿದ್ದೇಕೆ?

ನೋಬ್ರೋಕರ್ ಸಂಸ್ಥೆಯ 'ಪ್ಯಾಕರ್ಸ್ ಅಂಡ್ ಮೂವರ್ಸ್' ವಿಭಾಗವು ಪ್ರಸಕ್ತ ತ್ರೈಮಾಸಿಕದಲ್ಲಿ ಅಸಾಧ್ಯವೆನಿಸಿದ ಗುರಿಯನ್ನು ಸಾಧಿಸಿ ಭರ್ಜರಿ ಯಶಸ್ಸು ಕಂಡಿತ್ತು. ಈ ಸಾಧನೆಯನ್ನು ಸಂಭ್ರಮಿಸಲು ಹಾಗೂ ಅತ್ಯತ್ತಮ ಪ್ರದರ್ಶನ ನೀಡಿದ ಉದ್ಯೋಗಿಗೆ ಸ್ಕೂಟಿಯನ್ನು ಬಹುಮಾನವಾಗಿ ನೀಡಲು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ, ಕೇವಲ ಔಪಚಾರಿಕವಾಗಿ ಬಹುಮಾನ ಹಸ್ತಾಂತರಿಸುವ ಬದಲಿಗೆ ಕಾರ್ಯಕ್ರಮ ನೆನಪಿನಲ್ಲಿ ಉಳಿಯುವಂತೆ ಮಾಡಲು ಸಿಇಒ ತಾವೇ ಸ್ವತಃ ಸ್ಕೂಟಿ ಏರಿ ಆಫೀಸ್​​ನೊಳಗೆ ರೈಡ್​ ಮಾಡಿದರು.
ಆ ದಿನ ನನಗೆ ಅತ್ಯಂತ ಪ್ರಮುಖ ಕೆಲಸವಿತ್ತು, ಅದೇನೆಂದರೆ ಸ್ಕೂಟಿ ಓಡಿಸುವುದು. ಉದ್ಯೋಗಿಗಳು ತಮ್ಮ ಸಮಯ, ಶ್ರಮ ಮತ್ತು ಶಕ್ತಿಯನ್ನು ಹಾಕಿ ಸಂಸ್ಥೆಗೆ ದೊಡ್ಡ ಯಶಸ್ಸು ತಂದಾಗ, ಅದನ್ನು ಕೇವಲ ವೇದಿಕೆ ಮೇಲೆ ನಾರ್ಮಲ್​ ಪ್ರೆಸೆಂಟೇಶನ್​ ನೀಡಿ ಮುಗಿಸಬಾರದು ಎಂದು ಅಮಿತ್​ ಕುಮಾರ್​ ಅಗರ್​ವಾಲ್​ ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಅಸಾಧ್ಯವನ್ನು ಸಾಧ್ಯವಾಗಿಸಿದ ಟೀಮ್ ವರ್ಕ್!

ಆದಾಗ್ಯೂ, ಸಿಎಒ ಆಫೀಸ್​ ಒಳಗೆ ಸ್ಕೂಟಿ ರೈಡ್​ ಮಾಡಿದ್ದನ್ನು ಕಂಡ ಪ್ರತಿಯೊಬ್ಬರೂ ರೋಮಾಂಚನಗೊಂಡಿದ್ದರು. ಆದರೆ, ಈ ರೈಡ್‌ಗಿಂತಲೂ ತಮ್ಮ ತಂಡದ ಶ್ರಮವೇ ತಮಗೆ ನಿಜವಾದ ಹೈಲೈಟ್ ಎಂದು ಸಿಇಒ ಬಣ್ಣಿಸಿದ್ದಾರೆ.
ಸೇಲ್ಸ್, ಸರ್ವಿಸಿಂಗ್ ಹಾಗೂ ಪಾರ್ಟ್ನರ್ ಮ್ಯಾನೇಜ್‌ಮೆಂಟ್ ವಿಭಾಗಗಳು ಒಟ್ಟಾಗಿ ಶ್ರಮಿಸಿದ್ದರಿಂದಲೇ ಈ ಬೃಹತ್ ಮೈಲಿಗಲ್ಲು ತಲುಪಲು ಸಾಧ್ಯವಾಯಿತು. ಸೇಲ್ಸ್ ತಂಡವು ಹೆಚ್ಚಿನ ಗ್ರಾಹಕರನ್ನು ತಂದರೆ, ಸರ್ವಿಸಿಂಗ್ ತಂಡ ಸೇವೆಯ ಗುಣಮಟ್ಟ ಕಾಯ್ದುಕೊಂಡಿತು. ಈ ಯಾವ ವಿಭಾಗಗಳ ಬೆಂಬಲವಿಲ್ಲದಿದ್ದರೆ ಈ ಗುರಿ ಸಾಧನೆ ಕೇವಲ ಕನಸಾಗಿಯೇ ಉಳಿಯುತ್ತಿತ್ತು ಎಂಬುದನ್ನು ಅವರು ನೆನಪಿಸಿಕೊಂಡರು.
ತಮ್ಮ ಪೋಸ್ಟ್‌ನ ಕೊನೆಯಲ್ಲಿ, ದಿನವಿಡೀ ಶ್ರದ್ಧೆಯಿಂದ ದುಡಿಯುವ ಸಿಬ್ಬಂದಿಗೆ ಧನ್ಯವಾದ ಹೇಳಲು ಬೋರಿಂಗ್ ಅಧಿಕೃತ ಕಾರ್ಯಕ್ರಮಗಳಿಗಿಂತ, ಅವರ ಮುಖದಲ್ಲಿ ನಗು ತರಿಸುವ ಇಂತಹ ಸಣ್ಣ ತಮಾಷೆಯ ಕ್ಷಣಗಳೇ ಸೂಕ್ತ. ಅಂದಹಾಗೆ, ನಾನು ಸ್ವಲ್ಪ ಹೊತ್ತು ಮಜಾ ಮಾಡಿದ ಮೇಲೆ ಸ್ಕೂಟಿಯನ್ನು ಅದನ್ನು ಗೆದ್ದ ಅರ್ಹ ಉದ್ಯೋಗಿಗೆ ಹಸ್ತಾಂತರಿಸಿದೆ ಎಂದು ಬರೆದು ಪೋಸ್ಟ್​ ಹಂಚಿಕೊಂಡಿದ್ದಾರೆ.
ಸಿಇಒ ಅವರ ಈ ಸರಳತೆ ಹಾಗೂ ಉದ್ಯೋಗಿಗಳನ್ನು ಪ್ರೋತ್ಸಾಹಿಸುವ ರೀತಿಯನ್ನು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ (ಏಜೆನ್ಸೀಸ್​).