- ಐತಿಹಾಸಿಕ ರಾಮ ಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ
- ಶತಮಾನಗಳ ಹಿಂದಿನ ಗಾಯಗಳು ಇಂದು ವಾಸಿಯಾಗುತ್ತಿದೆ ಎಂದು ಭಾವುಕರಾದ ನಮೋ
- ರಾಮ ಮಂದಿರ ನಿರ್ಮಾಣ ಹಿಂದಿನ ಹೋರಾಟದ ಹಾದಿಯನ್ನು ಸ್ಮರಿಸಿದ ಪ್ರಧಾನಿ ಮೋದಿ
ಅಯೋಧ್ಯೆ: ಐತಿಹಾಸಿಕ ರಾಮ ಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ( PM Modi ), ಶತಮಾನಗಳ ಹಿಂದಿನ ಗಾಯಗಳು ಇಂದು ವಾಸಿಯಾಗುತ್ತಿದೆ ಎಂದು ಭಾವುಕರಾದರು.
ಧ್ವಜಾರೋಹಣ ಮಾಡಿ, ಪೂಜಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಪ್ರಧಾನಿ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ರಾಮಮಂದಿರದಲ್ಲಿ ಹಾರಿಸಲಾದ ಈ ಧ್ವಜವು ಭಾರತದ ಸಾಂಸ್ಕೃತಿಕ ಪುನರುಜ್ಜೀವನವನ್ನು ಸಂಕೇತಿಸುತ್ತದೆ. ಇಂದು, ಅಯೋಧ್ಯಾ ನಗರವು ಭಾರತದ ಸಾಂಸ್ಕೃತಿಕ ಪ್ರಜ್ಞೆಯ ಮತ್ತೊಂದು ಪರಾಕಾಷ್ಠೆಗೆ ಸಾಕ್ಷಿಯಾಗುತ್ತಿದೆ. ಇಂದು ಇಡೀ ಭಾರತ ಮತ್ತು ಇಡೀ ಜಗತ್ತು ರಾಮನಿಂದ ತುಂಬಿದೆ. ಪ್ರತಿಯೊಬ್ಬ ರಾಮ ಭಕ್ತನ ಹೃದಯದಲ್ಲಿ, ಅಪ್ರತಿಮ ತೃಪ್ತಿ, ಅಪರಿಮಿತ ಕೃತಜ್ಞತೆ ಹಾಗೂ ಅಪಾರ ಸಂತೋಷವಿದೆ ಎಂದು ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ಹೇಳಿದರು.
ಶತಮಾನಗಳಷ್ಟು ಹಳೆಯದಾದ ಗಾಯಗಳು ಇಂದು ವಾಸಿಯಾಗುತ್ತಿವೆ. ಶತಮಾನಗಳಷ್ಟು ಹಳೆಯದಾದ ನೋವು ಇಂದು ಮಾಯವಾಗುತ್ತಿವೆ. ಶತಮಾನಗಳ ಹಿಂದಿನ ಸಂಕಲ್ಪ ಇಂದು ಈಡೇರುತ್ತಿದೆ. 500 ವರ್ಷಗಳ ಕಾಲ ಉರಿಯುತ್ತಿದ್ದ ಆ ಯಜ್ಞದ ಬೆಂಕಿ ಇಂದು ತನ್ನ ಪರಾಕಾಷ್ಠೆಯನ್ನು ತಲುಪಿದೆ. ಆ ಒಂದು ಯಜ್ಞವು ಒಂದೇ ಒಂದು ಕ್ಷಣವೂ ನಂಬಿಕೆಯಿಂದ ವಿಚಲಿತವಾಗಲಿಲ್ಲ, ಒಂದೇ ಒಂದು ಕ್ಷಣವೂ ನಂಬಿಕೆಯಿಂದ ಮುರಿದುಹೋಗಲಿಲ್ಲ ಎನ್ನುವ ಮೂಲಕ ರಾಮ ಮಂದಿರ ನಿರ್ಮಾಣ ಹಿಂದಿನ ಹೋರಾಟದ ಹಾದಿಯನ್ನು ಪ್ರಧಾನಿ ಮೋದಿ ಸ್ಮರಿಸಿದರು.
ಈ ಧಾರ್ಮಿಕ ಧ್ವಜ ಕೇವಲ ಧ್ವಜವಲ್ಲ. ಇದು ಭಾರತೀಯ ನಾಗರಿಕತೆಯ ಪುನರುಜ್ಜೀವನದ ಧ್ವಜವಾಗಿದೆ. ಇದರ ಕೇಸರಿ ಬಣ್ಣ, ಅದರ ಮೇಲೆ ಚಿತ್ರಿಸಲಾದ ಸೂರ್ಯನ ಚಿತ್ರ, ಓಂ ಪದ ಮತ್ತು ಉಬ್ಬು ಆಕಾರದ ಕೋವಿದರ್ ಮರವು ರಾಮ ರಾಜ್ಯದ ವೈಭವವನ್ನು ಸಂಕೇತಿಸುತ್ತವೆ. ಅಲ್ಲದೆ, ಜೀವ ಹೋಗಬಹುದು ಆದರೆ, ಕೊಟ್ಟ ಮಾತು ತಪ್ಪಲ್ಲ ಎಂಬ ಮಾತಿಗೆ ಸ್ಫೂರ್ತಿಯಾಗಿ ಈ ಧರ್ಮಧ್ವಜವು ಕಾರ್ಯನಿರ್ವಹಿಸುತ್ತದೆ. ಈ ಧರ್ಮಧ್ವಜವು ಕರ್ಮಪ್ರಧಾನ ವಿಶ್ವ ರಚಿ ರಖ, ಅಂದರೆ ಜಗತ್ತಿನಲ್ಲಿ ಕ್ರಿಯೆ ಮತ್ತು ಕರ್ತವ್ಯದ ಪ್ರಾಮುಖ್ಯತೆ ಎಂಬ ಸಂದೇಶವನ್ನು ಜಗತ್ತಿಗೆ ನೀಡುತ್ತದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
ಪ್ರತಿಯೊಬ್ಬ ನಾಗರಿಕರು ರಾಮ ಮಂದಿರಕ್ಕೆ ಬಂದಾಗ ಸಪ್ತ ಮಂಟಪಕ್ಕೆ ಭೇಟಿ ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ. ಈ ಮಂಟಪಗಳು ನಂಬಿಕೆ, ಸ್ನೇಹ, ಕರ್ತವ್ಯ ಮತ್ತು ಸಾಮಾಜಿಕ ಸಾಮರಸ್ಯದ ಮೌಲ್ಯಗಳನ್ನು ಬಲಪಡಿಸುತ್ತವೆ. ನಮ್ಮ ರಾಮನು, ಭಾವನೆಗಳ ಮೂಲಕ ಒಂದಾಗುತ್ತಾನೆ ಹೊರತು ವಿಭಜನೆಯಿಂದಲ್ಲ. ಅದೇ ರೀತಿ ಅವನಿಗೆ ಮುಖ್ಯವಾದುದು ಭಕ್ತಿಯೇ ಹೊರತು ವಂಶಾವಳಿಯಲ್ಲ ಎಂದು ಪ್ರಧಾನಿ ಹೇಳಿದರು, (ಏಜೆನ್ಸೀಸ್).