ಕೇಂದ್ರದ ರಿಫಾರ್ಮ್ ಎಕ್ಸ್‌ಪ್ರೆಸ್ ದಾರಿ ತಪ್ಪಿದೆ; ಸೋಗಿನ ಬಜೆಟ್, ಶೂನ್ಯ ವಿಷನ್: ಮೋದಿ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
- ಬಜೆಟ್ 2026: ಮೋದಿ ಸರ್ಕಾರದ ಐಡಿಯಾಗಳು ಖಾಲಿಯಾಗಿವೆ - ಮಲ್ಲಿಕಾರ್ಜುನ ಖರ್ಗೆ ಗುಡುಗು
- ಅನ್ನದಾತನಿಗೆ ಅನ್ಯಾಯ, ಬಡವರಿಗೆ ಬರಿಗೈ: ಖರ್ಗೆ ದೃಷ್ಟಿಯಲ್ಲಿ ಬಜೆಟ್ 2026 ಫ್ಲಾಪ್
- ಬ್ರಿಟಿಷ್ ರಾಜ್‌ಗಿಂತಲೂ ಭೀಕರ ಅಸಮಾನತೆ: ಕೇಂದ್ರ ಬಜೆಟ್ ವಿರುದ್ಧ ಖರ್ಗೆ ಆಕ್ರೋಶ
ನವದೆಹಲಿ: ಇಂದು ಮಂಡನೆಯಾದ 2026-27ನೇ ಸಾಲಿನ ಕೇಂದ್ರ ಬಜೆಟ್ ಕೇವಲ ಅಂಕಿ-ಅಂಶಗಳ ವ್ಯಾಯಾಮವಾಗಿದ್ದು, ದೇಶದ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಮೋದಿ ಸರ್ಕಾರದ ಬಳಿ ಐಡಿಯಾಗಳೇ ಖಾಲಿಯಾಗಿವೆ ಎಂದು ಅವರು ಕಿಡಿಕಾರಿದ್ದಾರೆ.
ಮಿಷನ್ ಮೋಡ್' ಈಗ ಚಾಲೆಂಜ್ ರೂಟ್'!
ಬಜೆಟ್ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ಸರ್ಕಾರದ ಘೋಷಣೆಗಳನ್ನು ಕಟುವಾಗಿ ಟೀಕಿಸಿದ್ದಾರೆ. ಸರ್ಕಾರದ ಮಿಷನ್ ಮೋಡ್ ಈಗ ಚಾಲೆಂಜ್ ರೂಟ್ ಆಗಿ ಬದಲಾಗಿದೆ. ಇವರ ರಿಫಾರ್ಮ್ ಎಕ್ಸ್‌ಪ್ರೆಸ್ ಯಾವತ್ತೂ ಸುಧಾರಣೆಯ ಜಂಕ್ಷನ್‌ನಲ್ಲಿ ನಿಲ್ಲುವುದೇ ಇಲ್ಲ. ಅಂತಿಮವಾಗಿ ಈ ಬಜೆಟ್‌ನಲ್ಲಿ ಯಾವುದೇ ನೀತಿ ದೃಷ್ಟಿಕೋನವಾಗಲಿ ಅಥವಾ ರಾಜಕೀಯ ಇಚ್ಛಾಶಕ್ತಿಯಾಗಲಿ ಕಾಣುತ್ತಿಲ್ಲ ಎಂದು ಹರಿಹಾಯ್ದಿದ್ದಾರೆ.
ಬ್ರಿಟಿಷರ ಕಾಲಕ್ಕಿಂತಲೂ ಘೋರ ಅಸಮಾನತೆ
ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಬ್ರಿಟಿಷ್ ರಾಜ್‌ಗೆ ಹೋಲಿಸಿರುವ ಖರ್ಗೆ, ಇಂದು ಭಾರತದಲ್ಲಿರುವ ಆರ್ಥಿಕ ಅಸಮಾನತೆ ಬ್ರಿಟಿಷರ ಕಾಲವನ್ನೂ ಮೀರಿದೆ. ಆದರೆ ಬಜೆಟ್‌ನಲ್ಲಿ ಎಸ್‌ಸಿ (SC), ಎಸ್‌ಟಿ (ST), ಓಬಿಸಿ (OBC) ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕೆ ಯಾವುದೇ ಹೊಸ ಮಾರ್ಗಸೂಚಿಗಳಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಖರ್ಗೆ ಎತ್ತಿರುವ ಪ್ರಮುಖ 10 ಪ್ರಶ್ನೆಗಳು
ರೈತರ ನಿರ್ಲಕ್ಷ್ಯ: ಅನ್ನದಾತರಿಗೆ ಆದಾಯ ಭದ್ರತೆಯ ಯೋಜನೆಯೇ ಇಲ್ಲ.
ಉತ್ಪಾದನಾ ಕುಸಿತ: ಜಿಡಿಪಿಯಲ್ಲಿ ಉತ್ಪಾದನಾ ವಲಯದ ಪಾಲು ಶೇ. 13 ರಲ್ಲೇ ಸ್ಥಗಿತಗೊಂಡಿದೆ. ಮೇಕ್ ಇನ್ ಇಂಡಿಯಾದ ಕಥೆಯೇನು ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಉದ್ಯೋಗ ಸಂಕಷ್ಟ: ಯುವಜನತೆಗೆ ಉದ್ಯೋಗ ನೀಡಲು ಅಥವಾ ಮಹಿಳಾ ಕಾರ್ಮಿಕ ಬಲ ಹೆಚ್ಚಿಸಲು ಯಾವುದೇ ಗಂಭೀರ ಯೋಜನೆಯಿಲ್ಲ.
ನರೇಗಾ ಸ್ಥಗಿತ: ನರೇಗಾ (MGNREGA) ಬದಲಿಗೆ ಬಂದಿರುವ ಹೊಸ ಕಾನೂನಿಗೆ ಅನುದಾನದ ಹಂಚಿಕೆ ಬಗ್ಗೆ ಬಜೆಟ್ ಮೌನವಾಗಿದೆ ಏಕೆ ಎಂದು ಖರ್ಗೆ ಗುಡುಗಿದ್ದಾರೆ.
ಸಂಯುಕ್ತ ವ್ಯವಸ್ಥೆಗೆ ಧಕ್ಕೆ: ರಾಜ್ಯ ಸರ್ಕಾರಗಳ ಮೇಲಿನ ಆರ್ಥಿಕ ಒತ್ತಡಕ್ಕೆ ಯಾವುದೇ ಪರಿಹಾರವಿಲ್ಲ.
ವ್ಯಾಪಾರ ಕೊರತೆ: ರಫ್ತು ಕುಸಿತ ಮತ್ತು ಕುಸಿಯುತ್ತಿರುವ ರೂಪಾಯಿ ಮೌಲ್ಯಕ್ಕೆ ಪರಿಹಾರ ಎಲ್ಲಿದೆ?
ಮಧ್ಯಮ ವರ್ಗದ ಸಂಕಷ್ಟ: ಹಣದುಬ್ಬರದಿಂದ ಉಳಿತಾಯ ಕುಸಿದು, ಸಾಲದ ಹೊರೆ ಹೆಚ್ಚುತ್ತಿದೆ.
ಖಾಸಗಿ ಹೂಡಿಕೆ: ಎಫ್‌ಡಿಐ (FDI) ಕುಸಿತ ಮತ್ತು ವೇತನ ಸ್ಥಗಿತದ ಬಗ್ಗೆ ಬಜೆಟ್‌ನಲ್ಲಿ ಉತ್ತರವಿಲ್ಲ.
ಸ್ಮಾರ್ಟ್ ಸಿಟಿ ವೈಫಲ್ಯ: ನಗರಗಳು ವಾಸಕ್ಕೆ ಅಯೋಗ್ಯವಾಗುತ್ತಿದ್ದರೂ ಹಳೆಯ ಭರವಸೆಗಳನ್ನೇ ಪುನರಾವರ್ತಿಸಲಾಗಿದೆ.
ಸಾಮಾಜಿಕ ಭದ್ರತೆ: ಸಮಾಜದ ದುರ್ಬಲ ವರ್ಗದವರಿಗೆ ಯಾವುದೇ ಗಮನಾರ್ಹ ಸಾಮಾಜಿಕ ಭದ್ರತೆ ಘೋಷಿಸಿಲ್ಲ.
ಈ ಬಜೆಟ್‌ನಲ್ಲಿ ನೀತಿಯೂ ಇಲ್ಲ, ಕನಿಷ್ಠ ಘೋಷವಾಕ್ಯಗಳೂ ಇಲ್ಲ ಎಂದು ಹೇಳುವ ಮೂಲಕ ಖರ್ಗೆ ಅವರು ಮೋದಿ ಸರ್ಕಾರವು ಬಡವರು ಮತ್ತು ಮಧ್ಯಮ ವರ್ಗದವರನ್ನು ಸಂಪೂರ್ಣವಾಗಿ ಕೈಬಿಟ್ಟಿದೆ ಎಂದು ಆರೋಪಿಸಿದ್ದಾರೆ. ಬಜೆಟ್ ಘೋಷಣೆಗಳಿಗೂ ವಾಸ್ತವಕ್ಕೂ ಸಂಬಂಧವೇ ಇಲ್ಲ ಎಂಬುದು ಖರ್ಗೆ ವಾದವಾಗಿದೆ,(ಏಜೆನ್ಸೀಸ್).