ಸಾಂದರ್ಭಿಕ ಚಿತ್ರ 
ದೇಶ

ಸಾಂವಿಧಾನಿಕ ತಿದ್ದುಪಡಿ ಮೂಲಕ ಲೋಕಸಭೆ ಸ್ಥಾನಗಳನ್ನು 543ರಿಂದ 850ಕ್ಕೆ ಹೆಚ್ಚಿಸಲು ಕೇಂದ್ರ ಪ್ರಸ್ತಾವನೆ | Delimitation bill

ನವದೆಹಲಿ: ಏ. 16ರಿಂದ ಆರಂಭವಾಗುವ ಮೂರು ದಿನಗಳ ವಿಶೇಷ ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯ ತಿದ್ದುಪಡಿ ಮತ್ತು ಕ್ಷೇತ್ರಗಳ ಪುನರ್ವಿಂಗಡಣೆಯ ಪ್ರಕ್ರಿಯೆ ಮಸೂದೆ ಮಂಡಿಸುವ ಮೂಲಕ ಲೋಕಸಭಾ ಸ್ಥಾನಗಳನ್ನು 543ರಿಂದ 850ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ.
ಕೇಂದ್ರದ ಪ್ರಸ್ತಾವನೆ ಪ್ರಕಾರ, ಸರ್ಕಾರ ಮಂಡಿಸಲಿರುವ ಮಸೂದೆಯೂ ಪುನರ್ವಿಂಗಡಣೆ ಪ್ರಕ್ರಿಯೆ ಮತ್ತು 2026ರ ನಂತರದ ಜನಗಣತಿಯ ನಡುವಿನ ಕಡ್ಡಾಯ ಸಂಬಂಧವನ್ನು ತೆಗೆದುಹಾಕಲು ಪ್ರಯತ್ನಿಸುತ್ತದೆ. ಮತ್ತು ಇದು ಕ್ಷೇತ್ರಗಳ ಹಿಂದಿನ ಪುನರ್ರಚನೆಗೆ ಅವಕಾಶ ನೀಡುತ್ತದೆ. ಮುಂಬರುವ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿಯನ್ನು ವೇಗವಾಗಿ ಅನುಷ್ಠಾನಗೊಳಿಸಲು ಈ ಮಸೂದೆ ಅನುವು ಮಾಡಿಕೊಡುತ್ತದೆ ಎನ್ನಲಾಗಿದೆ.
ಈ ಎರಡು ಮಸೂದೆಗಳ ಕರಡು ಪ್ರತಿಯನ್ನು ಕೇಂದ್ರ ಸಂಸದೀಯ ಇಲಾಖೆ ಎಲ್ಲಾ ಸಂಸದರಿಗೆ ಹಂಚಿಕೆ ಮಾಡಿದೆ. ಪ್ರತಿ ಜನಗಣತಿಯ ನಂತರ ಸಂಸದೀಯ ಕ್ಷೇತ್ರಗಳ ಮರು ಹೊಂದಾಣಿಕೆ ಪ್ರಕ್ರಿಯೆಯನ್ನು ನಿಯಂತ್ರಿಸುವ ಸಂವಿಧಾನದ 82ನೇ ವಿಧಿಗೆ ತಿದ್ದುಪಡಿ ಮಾಡಲು ಕೇಂದ್ರ ನಿರ್ಧರಿಸಿದೆ. 2029ರ ಲೋಕಸಭಾ ಚುನಾವಣೆಗೆ ಮುನ್ನವೇ ಈ ಎರಡು ಕಾಯ್ದೆ ಜಾರಿಗೆ ತರಲು ಉದ್ದೇಶಿಸಿದೆ.
ಕೇಂದ್ರ ಉದ್ದೇಶಿತ ಈ ಎರಡೂ ಮಸೂದೆಗಳು ಅಂಗೀಕಾರಗೊಂಡು ಜಾರಿಯಾದ್ರೆ, ರಾಜ್ಯಗಳಲ್ಲಿ 815 ಸ್ಥಾನಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 35 ಸ್ಥಾನಗಳನ್ನು ಹೆಚ್ಚಾಗುವ ಮೂಲಕ ಲೋಕಸಭಾ ಸ್ಥಾನಗಳ ಸಂಖ್ಯೆ 850ಕ್ಕೆ ಏರಿಕೆಯಾಗಲಿದೆ. ಇನ್ನೂ ಶೇ. 33ರಷ್ಟು ಮಹಿಳಾ ಮೀಸಲಾತಿಯಿಂದ ಮಹಿಳೆಯರಿಗೆ 273 ಸ್ಥಾನಗಳನ್ನು ಸಿಗಲಿವೆ ಎನ್ನಲಾಗಿದೆ (ಏಜೆನ್ಸೀಸ್).