Kerala Renaming 
ದೇಶ

ಚುನಾವಣೆಗೂ ಮುನ್ನ ಕೇರಳಕ್ಕೆ ಹೊಸ ಹೆಸರು?..ಕೇಂದ್ರ ಸಚಿವ ಸಂಪುಟದ ಇಂದಿನ ಸಭೆಯ ಮೇಲಿದೆ ಇಡೀ ದೇಶದ ಕಣ್ಣು! | Kerala Renaming

ತಿರುವನಂತಪುರಂ: ದಕ್ಷಿಣ ಭಾರತದ ಸುಂದರ ರಾಜ್ಯ, ದೇವರ ನಾಡು ಎಂದು ಖ್ಯಾತಿ ಪಡೆದಿರುವ ಕೇರಳದ ಹೆಸರನ್ನು ಕೇರಳಂ ಎಂದು ಅಧಿಕೃತವಾಗಿ ಮರುನಾಮಕರಣ (Kerala Renaming) ಮಾಡುವ ಪ್ರಕ್ರಿಯೆ ನಿರ್ಣಾಯಕ ಹಂತಕ್ಕೆ ಬಂದು ತಲುಪಿದ್ದು, ಮಲಯಾಳಿಗಳ ದಶಕಗಳ ಬೇಡಿಕೆಗೆ ಕೇಂದ್ರ ಸಚಿವ ಸಂಪುಟವು ಹಸಿರು ನಿಶಾನೆ ತೋರಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯ ವಿಧಾನಸಭೆಯಲ್ಲಿ ಕೇರಳದ ಹೆಸರನ್ನು ಬದಲಾಯಿಸುವ ಕುರಿತು ನಿರ್ಣಯವನ್ನು ಮಂಡಿಸಿದ್ದು, ಮಲಯಾಳಂ ಭಾಷೆಯಲ್ಲಿ ರಾಜ್ಯವನ್ನು ಮೊದಲಿನಿಂದಲೂ 'ಕೇರಳಂ' ಎಂದೇ ಕರೆಯಲಾಗುತ್ತದೆ.
ಸಂವಿಧಾನದ ಮೊದಲ ಅನುಸೂಚಿಯಲ್ಲಿ (First Schedule) ಮತ್ತು ಇಂಗ್ಲಿಷ್‌ನಲ್ಲಿ Kerala ಎಂದು ದಾಖಲಾಗಿದೆ. ಇದನ್ನು ಬದಲಾಯಿಸಿ ಎಲ್ಲಾ ಅಧಿಕೃತ ದಾಖಲೆಗಳಲ್ಲಿ 'Keralam' ಎಂದು ದಾಖಲಿಸಬೇಕು ಎಂಬುದು ರಾಜ್ಯ ಸರ್ಕಾರದ ಇಚ್ಛೆಯಾಗಿದ್ದು, ಈ ನಿರ್ಣಯಕ್ಕೆ ವಿರೋಧ ಪಕ್ಷಗಳು ಸಹ ಬೆಂಬಲ ಸೂಚಿಸಿದ್ದವು.

'ಕೇರಳಂ' ಹೆಸರಿನ ಹಿಂದಿದೆ ಸಿದ್ಧಾಂತ ಮತ್ತು ಸಂಸ್ಕೃತಿ

ಕೇರಳಂ ಎಂಬುದು ಮಲಯಾಳಂ ಭಾಷೆಯ ಮೂಲ ಪದ. ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಮಲಯಾಳಂ ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸಿ 'ಐಕ್ಯ ಕೇರಳಂ' ರೂಪಿಸಬೇಕೆಂಬ ಚಳುವಳಿ ನಡೆದಿತ್ತು ಎನ್ನಲಾಗಿದೆ.
ಪ್ರಾಚೀನ ಗ್ರಂಥಗಳು ಮತ್ತು ಶಾಸನಗಳಲ್ಲಿ ಈ ಪ್ರದೇಶವನ್ನು 'ಕೇರಳಂ' ಎಂದೇ ಉಲ್ಲೇಖಿಸಲಾಗಿದೆ. ಬ್ರಿಟಿಷರ ಕಾಲದಲ್ಲಿ ಉಚ್ಚಾರಣೆಯ ಸುಲಭಕ್ಕಾಗಿ ಅದು ಕೇರಳವಾಗಿ ಮಾರ್ಪಟ್ಟಿತ್ತು. ಈಗ ಅದನ್ನು ತನ್ನ ಮೂಲ ರೂಪಕ್ಕೆ ತರುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ.

ಸಿಎಂ ವಿಜಯನ್​ ಹೇಳಿದ್ದೇನು..?

ಕೇರಳಂ ಪದವು ಮಲಯಾಳಂನಲ್ಲಿ ಬಳಸಲ್ಪಡುತ್ತದೆ ಮತ್ತು ಈ ಪ್ರದೇಶದ ಇತಿಹಾಸದಲ್ಲಿ ಬೇರೂರಿದೆ ಎಂದು ಮುಖ್ಯಮಂತ್ರಿ ವಿಜಯನ್ ವಿವರಿಸಿದ್ದು, ಇದು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಹಿಂದಿನಿಂದ ಮಲಯಾಳಂ ಮಾತನಾಡುವ ಸಂಯುಕ್ತ ರಾಜ್ಯದ ಆಕಾಂಕ್ಷೆಯನ್ನು ಉಲ್ಲೇಖಿಸುತ್ತದೆ.
ಈಗಾಗಲೇ ಸಂವಿಧಾನದ ಮೊದಲ ಅನುಸೂಚಿಯಲ್ಲಿ ರಾಜ್ಯದ ಹೆಸರನ್ನು ಕೇರಳ ಎಂದು ಬರೆಯಲಾಗಿದ್ದು, 3 ನೇ ವಿಧಿಯ ಅಡಿಯಲ್ಲಿ ಅದನ್ನು 'ಕೇರಳಂ' ಎಂದು ತಿದ್ದುಪಡಿ ಮಾಡಲು ಮತ್ತು ಸಂವಿಧಾನದ ಎಂಟನೇ ವೇಳಾಪಟ್ಟಿಯಲ್ಲಿ ಉಲ್ಲೇಖಿಸಲಾದ ಎಲ್ಲಾ ಭಾಷೆಗಳಲ್ಲಿ ಕೇರಳಂ ಎಂದು ಮರುನಾಮಕರಣ ಮಾಡಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಈ ಸಭೆ ಕೇಂದ್ರವನ್ನು ವಿನಂತಿಸುತ್ತದೆ ಎಂದು ವಿಜಯನ್ ಹೇಳಿದರು.

ಬಿಜೆಪಿ ಲೆಕ್ಕಾಚಾರವೇನು..?

ಕೇಂದ್ರ ಸರ್ಕಾರವು ಈ ಮಸೂದೆಯನ್ನು ಈಗಲೇ ಪರಿಗಣಿಸಲು ಮುಂಬರುವ ಚುನಾವಣೆಗಳೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಕೇರಳದ ಜನರ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಬೇಡಿಕೆಗೆ ಸ್ಪಂದಿಸುವ ಮೂಲಕ ಅಲ್ಲಿನ ಜನರ ಮನಗೆಲ್ಲಲು ಇದು ಸೂಕ್ತ ವೇದಿಕೆಯಾಗಲಿದೆ.
ಕೇಂದ್ರ ಸಚಿವ ಸಂಪುಟ ಸಭೆಯು ಸೇವಾ ತೀರ್ಥದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಹೊಸ ಕಚೇರಿಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. 140 ಸದಸ್ಯ ಬಲದ ಕೇರಳದಲ್ಲಿ ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕೇಂದ್ರ ಚುನಾವಣಾ ಆಯೋಗವು ಇಲ್ಲಿವರೆಗೂ ಯಾವುದೇ ಅಧಿಕೃತ ದಿನಾಂಕವನ್ನು ಘೋಷಿಸಿಲ್ಲ(ಏಜೆನ್ಸೀಸ್​).