ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ
ನವದೆಹಲಿ: ನರೇಗಾ(MGNREGA) ಯೋಜನೆಯನ್ನು ರದ್ದುಗೊಳಿಸಿರುವ ಸರ್ಕಾರದ ಕ್ರಮವು ಒಕ್ಕೂಟ ವ್ಯವಸ್ಥೆ ಮತ್ತು ಬಡವರ ಮೇಲಿನ ದಾಳಿ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಕೇಂದ್ರ ಸರ್ಕಾರದ ಶನಿವಾರ (ಡಿ.27) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯ ನಂತರ ಮಾತನಾಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿ, ನರೇಗಾ ರದ್ದುಗೊಳಿಸಿ ಕೇಂದ್ರವು ಜಾರಿಗೆ ತಂದಿರುವ ಹೊಸ ಕಾನೂನು (VB-G RAM G Act) ರಾಜ್ಯಗಳ ಆರ್ಥಿಕ ಹಕ್ಕನ್ನು ಕಸಿದುಕೊಳ್ಳುತ್ತದೆ. ಅಲ್ಲದೆ, ಇದು ಒಕ್ಕೂಟ ವ್ಯವಸ್ಥೆಯ ಮೇಲೆ ನಡೆದ ಗಂಭೀರ ದಾಳಿ ಎಂದು ಕಿಡಿಕಾರಿದ್ದಾರೆ.
ನರೇಗಾ ಕೇವಲ ಒಂದು ಕೆಲಸ ನೀಡುವ ಕಾರ್ಯಕ್ರಮವಲ್ಲ, ಅದು ಸಂವಿಧಾನಾತ್ಮಕವಾಗಿ ನೀಡಲಾದ ಉದ್ಯೋಗದ ಹಕ್ಕಾಗಿದೆ. ಇದನ್ನು ಪ್ರಧಾನಿಯವರು ಏಕಪಕ್ಷೀಯವಾಗಿ ರದ್ದುಗೊಳಿಸುವ ಮೂಲಕ ಬಡವರ ಬದುಕನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಗಾಂಧಿ ಟೀಕಾಪ್ರಹಾರ ನಡೆಸಿದ್ದಾರೆ.
ನೋಟು ಅಮಾನ್ಯೀಕರಣಕ್ಕೆ ಹೋಲಿಕೆ
ನರೇಗಾ ರದ್ದತಿಯನ್ನು ನೋಟು ಅಮಾನ್ಯೀಕರಣಕ್ಕೆ ಹೋಲಿಸಿದ ರಾಹುಲ್, ಇದರಿಂದ ಗ್ರಾಮೀಣ ಆರ್ಥಿಕತೆ ಕುಸಿಯಲಿದ್ದು, ಸಣ್ಣ ಕಾರ್ಮಿಕರು ಮತ್ತು ಬಡವರು ತೀವ್ರ ನೋವು ಅನುಭವಿಸಲಿದ್ದಾರೆ ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಹಕ್ಕು ಆಧಾರಿತ ಮಾದರಿಯ ಅಂತ್ಯ
ನರೇಗಾ ಎನ್ನುವುದು ಕೇವಲ ಒಂದು ಸರ್ಕಾರಿ ಯೋಜನೆಯಲ್ಲ, ಅದು ಬಡವರಿಗೆ ಸಂವಿಧಾನಾತ್ಮಕವಾಗಿ ನೀಡಲಾದ ಕೆಲಸದ ಹಕ್ಕಾಗಿದೆ. ಹೊಸ ಕಾನೂನು ಈ ಹಕ್ಕು ಆಧಾರಿತ ಚೌಕಟ್ಟನ್ನು ನಾಶಪಡಿಸಿ, ಅದನ್ನು ಕೇವಲ ಕೇಂದ್ರದ ಮರ್ಜಿಯಲ್ಲಿರುವ ರೇಷನ್ ಆಧಾರಿತ ಯೋಜನೆಯನ್ನಾಗಿ ಪರಿವರ್ತಿಸುತ್ತಿದೆ ಎಂದು ರಾಹುಲ್ ಹೇಳಿದ್ದಾರೆ.
ಮಹಾತ್ಮ ಗಾಂಧಿಯವರ ಅವಮಾನ
ಯೋಜನೆಯ ಹೆಸರಿನಿಂದ ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆದುಹಾಕಿರುವುದು ಕೇವಲ ಹೆಸರಿನ ಬದಲಾವಣೆಯಲ್ಲ, ಇದು ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯ ಮೇಲೆ ನಡೆದ ದಾಳಿಯಾಗಿದೆ. ಅಲ್ಲದೆ, ಬಡವರ ಹಕ್ಕುಗಳನ್ನು ಹತ್ತಿಕ್ಕುವ ಮತ್ತು ಶ್ರೀಮಂತ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ಸಂಚು ಇದರ ಹಿಂದೆ ಇದೆ ಎಂದು ರಾಹುಲ್ ಆರೋಪಿಸಿದ್ದಾರೆ.
ನರೇಗಾ ಬಚಾವೋ ಅಭಿಯಾನಕ್ಕೆ ಕರೆ
CWC ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ, 2026 ಜನವರಿ 5 ರಿಂದ ಕಾಂಗ್ರೆಸ್ ಪಕ್ಷವು ದೇಶಾದ್ಯಂತ ನರೇಗಾ ಬಚಾವೋ ಅಭಿಯಾನ ಆರಂಭಿಸಲಿದೆ. ಅಲ್ಲದೆ, ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ಹಿಂಪಡೆದ ಮಾದರಿಯಲ್ಲೇ, ನರೇಗಾವನ್ನು ಮರಳಿ ತರುವವರೆಗೂ ಈ ಹೋರಾಟ ಮುಂದುವರಿಯಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಘೋಷಿಸಿದರು,(ಏಜೆನ್ಸೀಸ್).