OPD ಬುಕಿಂಗ್‌ನಿಂದ Insurance ಕ್ಲೈಮ್‌ವರೆಗೆ: ಇಲ್ಲಿದೆ ಹೊಸ ರೂಪದಲ್ಲಿ ಬರ್ತಿರೋ ಆರೋಗ್ಯ ಸೇತು ಆ್ಯಪ್​ ಕುರಿತ ಕಂಪ್ಲೀಟ್ ಡಿಟೇಲ್ಸ್... Aarogya Setu 2.0 
ದೇಶ

OPD ಬುಕಿಂಗ್‌ನಿಂದ Insurance ಕ್ಲೈಮ್‌ವರೆಗೆ: ಇಲ್ಲಿದೆ ಹೊಸ ರೂಪದಲ್ಲಿ ಬರ್ತಿರೋ ಆರೋಗ್ಯ ಸೇತು ಆ್ಯಪ್​ ಕುರಿತ ಕಂಪ್ಲೀಟ್ ಡಿಟೇಲ್ಸ್... Aarogya Setu 2.0

ಪ್ರಮುಖ ಮುಖ್ಯಾಂಶಗಳು

  • ಜೂನ್ 29 ಕ್ಕೆ ಹೊಸ ರೂಪದಲ್ಲಿ ಬರ್ತಿದೆ AI ತಂತ್ರಜ್ಞಾನದ 'ಆರೋಗ್ಯ ಸೇತು 2.0'
  • ನಾಳೆಯಿಂದ ಬದಲಾಗಲಿದೆ 'ಆರೋಗ್ಯ ಸೇತು' ಚಿತ್ರಣ! ಏನಿದರ ವಿಶೇಷತೆ?
  • ಇನ್ಮುಂದೆ ಸ್ಮಾರ್ಟ್‌ವಾಚ್ ಡೇಟಾ ಮತ್ತು AI ಮೂಲಕ ನಿಮ್ಮ ಆರೋಗ್ಯದ ಮೇಲೆ ಕಣ್ಣಿಡಲಿದೆ ಹೊಸ 'ಆರೋಗ್ಯ ಸೇತು 2.0'!
  • ನಿಮ್ಮ ಎಲ್ಲಾ ವೈದ್ಯಕೀಯ ಅಗತ್ಯಗಳಿಗೆ ಸಿಗಲಿದೆ ಒಂದೇ ಡಿಜಿಟಲ್ ಪರಿಹಾರ
Aarogya Setu 2.0 : ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM) ಅಡಿಯಲ್ಲಿ ಭಾರತದ ಡಿಜಿಟಲ್ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರ ಭರ್ಜರಿ ಸಿದ್ಧತೆ ನಡೆಸಿದ್ದು, ಹೊಸ ತಂತ್ರಜ್ಞಾನ ಹಾಗೂ ಅತ್ಯಾಧುನಿಕ ವೈಶಿಷ್ಟ್ಯಗಳನ್ನೊಳಗೊಂಡ 'ಆರೋಗ್ಯ ಸೇತು' ಆ್ಯಪ್‌ನ ಅಪ್​ಡೇಟೆಡ್​ ಆವೃತ್ತಿಯನ್ನು ಸೋಮವಾರ (ಜೂನ್​ 29) ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಿದೆ. ಇದರೊಂದಿಗೆ ಸಾರ್ವಜನಿಕರ ಆರೋಗ್ಯ ಸೇವೆಗಳನ್ನು ಸುಲಭಗೊಳಿಸುವ ದೃಷ್ಟಿಯಿಂದ ಹತ್ತಾರು ಹೊಸ ಡಿಜಿಟಲ್ ಆರೋಗ್ಯ ಉಪಕ್ರಮಗಳಿಗೂ ಚಾಲನೆ ಸಿಗಲಿದ್ದು, ದೇಶದ ಆರೋಗ್ಯ ವಲಯದಲ್ಲಿ ಇದು ಮಹತ್ವದ ಮೈಲಿಗಲ್ಲಾಗಲಿದೆ.
ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರು ಜೂನ್ 29 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಈ ಎಲ್ಲಾ ನೂತನ ಡಿಜಿಟಲ್ ಆರೋಗ್ಯ ಉಪಕ್ರಮಗಳಿಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಕೇವಲ ಕಾಂಟ್ಯಾಕ್ಟ್-ಟ್ರೇಸಿಂಗ್ (ಸಂಪರ್ಕ ಪತ್ತೆಹಚ್ಚುವ) ಅಪ್ಲಿಕೇಶನ್ ಆಗಿ ಪರಿಚಯಿಸಲ್ಪಟ್ಟಿದ್ದ 'ಆರೋಗ್ಯ ಸೇತು' ಆ್ಯಪ್, ಇದೀಗ ಸಂಪೂರ್ಣ ಹೊಸ ರೂಪ ಪಡೆದುಕೊಂಡಿದ್ದು, ನಾಗರಿಕರ ವೈಯಕ್ತಿಕ ಆರೋಗ್ಯ ದಾಖಲೆಗಳ (PHR) ಅತ್ಯಾಧುನಿಕ ಡಿಜಿಟಲ್ ವೇದಿಕೆಯಾಗಿ ಮರುರೂಪಗೊಂಡಿದೆ. ಈ ನೂತನ ಆವೃತ್ತಿಯ ಮೂಲಕ ಬಳಕೆದಾರರು ತಮ್ಮ 'ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ'ಯನ್ನು (ABHA) ಸುಲಭವಾಗಿ ರಚಿಸಿಕೊಳ್ಳಬಹುದು ಮತ್ತು ನಿರ್ವಹಿಸಬಹುದು. ಅಷ್ಟೇ ಅಲ್ಲದೆ, ಸುರಕ್ಷಿತವಾದ ಒಪ್ಪಿಗೆ ಆಧಾರಿತ ವ್ಯವಸ್ಥೆಯ ಮೂಲಕ ತಮ್ಮ ಡಿಜಿಟಲ್ ಆರೋಗ್ಯ ದಾಖಲೆಗಳನ್ನು ಇಂಟರ್ನೆಟ್‌ನಲ್ಲಿ ಸುರಕ್ಷಿತವಾಗಿ ವೀಕ್ಷಿಸಲು ಮತ್ತು ವೈದ್ಯರೊಂದಿಗೆ ಹಂಚಿಕೊಳ್ಳಲು ಇದು ನೆರವಾಗಲಿದ್ದು, ಸಾಂಕ್ರಾಮಿಕದ ಸಮಯದಲ್ಲಿ ಜನಪ್ರಿಯವಾಗಿದ್ದ ಈ ಆ್ಯಪ್‌ನ ಸಾಮರ್ಥ್ಯವನ್ನು ಕೇಂದ್ರ ಆರೋಗ್ಯ ಸಚಿವಾಲಯ ಈಗ ಗಣನೀಯವಾಗಿ ವಿಸ್ತರಿಸಿದೆ.

ಆ್ಯಪ್​ಗೆ ಎಐ ಲಿಂಕ್​

ಅಪ್​ಡೇಟ್​ ಮಾಡಲಾದ 'ಆರೋಗ್ಯ ಸೇತು' ಆ್ಯಪ್ ಇನ್ಮುಂದೆ ಕೃತಕ ಬುದ್ಧಿಮತ್ತೆ (AI) ಆಧಾರಿತ ಆರೋಗ್ಯ ಒಳನೋಟಗಳನ್ನು ನೀಡಲಿದ್ದು, ಬಳಕೆದಾರರು ಧರಿಸುವ ಸ್ಮಾರ್ಟ್‌ವಾಚ್‌ಗಳಂತಹ ಸಾಧನಗಳ ಡೇಟಾವನ್ನು ತನ್ನೊಂದಿಗೆ ಸಂಯೋಜಿಸಿಕೊಳ್ಳಲಿದೆ. ಇದು ಬಳಕೆದಾರರ ಸಂಪೂರ್ಣ ಆರೋಗ್ಯದ ಪ್ರೊಫೈಲ್ ಅನ್ನು ನಿಖರವಾಗಿ ಪತ್ತೆಹಚ್ಚಲು ನೆರವಾಗಲಿದೆ. ಇದರೊಂದಿಗೆ ಆಸ್ಪತ್ರೆಗಳ ಹೊರರೋಗಿ ವಿಭಾಗದ (OPD) ಸೇವೆಗಳಿಗೆ ನೋಂದಾಯಿಸಿಕೊಳ್ಳಲು, ಆ್ಯಪ್‌ನಲ್ಲಿರುವ ಸ್ಕ್ಯಾನ್ ವೈಶಿಷ್ಟ್ಯ ಬಳಸಿ ಆಸ್ಪತ್ರೆಯ ಬಿಲ್ ಪಾವತಿಸಲು ಹಾಗೂ ಹತ್ತಿರದ ಆಸ್ಪತ್ರೆಗಳು, ವೈದ್ಯರು, ರಕ್ತನಿಧಿಗಳು ಮತ್ತು ಆಂಬ್ಯುಲೆನ್ಸ್ ಸೇವೆಗಳನ್ನು ಸುಲಭವಾಗಿ ಪತ್ತೆಹಚ್ಚಲು ಇದು ಸಹಕಾರಿಯಾಗಲಿದೆ.
ಈ ಆ್ಯಪ್ ಮೂಲಕ ನಾಗರಿಕರು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PM-JAY) ಅಡಿಯಲ್ಲಾಗುವ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಮತ್ತು ಯೋಜನೆಗೆ ಒಳಪಟ್ಟಿರುವ ಆಸ್ಪತ್ರೆಗಳ ಪಟ್ಟಿಯನ್ನು ಹುಡುಕಬಹುದು. ಇದರೊಂದಿಗೆ ಡಿಜಿಟಲ್ ವಿಮಾ ವಾಲೆಟ್ ಸೌಲಭ್ಯವನ್ನೂ ಇದು ಒಳಗೊಂಡಿರಲಿದೆ. ಇದಲ್ಲದೆ, ಅರ್ಹ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (CAPF) ಸಿಬ್ಬಂದಿ ಮತ್ತು ಅವರ ಅವಲಂಬಿತರಿಗಾಗಿ ಇರುವ 'ಆಯುಷ್ಮಾನ್ ಸಿಎಪಿಎಫ್' ಯೋಜನೆಗೆ ಸಂಬಂಧಿಸಿದ ಪಾಲಿಸಿ ಮಾಹಿತಿಗಳನ್ನು ಸಹ ಈ ವೇದಿಕೆಯಲ್ಲಿ ಪ್ರವೇಶಿಸಬಹುದಾಗಿದೆ.

ಮೇಲ್ದರ್ಜೆಗೇರಿದ ಆಯುಷ್ಮಾನ್ ಆ್ಯಪ್

ಪಿಎಮ್-ಜಯ್ (PM-JAY) ಫಲಾನುಭವಿಗಳಿಗಾಗಿಯೇ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಸುಧಾರಿತ 'ಆಯುಷ್ಮಾನ್ ಆ್ಯಪ್' ಅನ್ನು ಸಹ ಸರ್ಕಾರ ಬಿಡುಗಡೆ ಮಾಡಲಿದೆ. ಈ ಆ್ಯಪ್ ಮೂಲಕ ಬಳಕೆದಾರರು ತಮ್ಮ ಅರ್ಹತೆಯನ್ನು ಪರಿಶೀಲಿಸಬಹುದು, ಚಿಕಿತ್ಸೆಯ ಇತಿಹಾಸವನ್ನು ನೋಡಬಹುದು, ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳನ್ನು ಪತ್ತೆಹಚ್ಚಬಹುದು ಮತ್ತು ತಮ್ಮ ಕುಂದುಕೊರತೆಗಳನ್ನು ಸಲ್ಲಿಸಬಹುದಾಗಿದೆ. ಇವೆಲ್ಲವನ್ನೂ ಇನ್ನಷ್ಟು ಸುಲಭಗೊಳಿಸಲು 'ಆಯುಷ್ಮಾನ್ ಸಾರಥಿ' ಎಂಬ ವಾಟ್ಸ್​ಆ್ಯಪ್ ಚಾಟ್‌ಬಾಟ್ ಅನ್ನು ಪರಿಚಯಿಸಲಾಗುತ್ತಿದ್ದು, ಫಲಾನುಭವಿಗಳು ಕೇವಲ ಚಾಟ್ ಮಾಡುವ ಮೂಲಕವೇ ಈ ಎಲ್ಲಾ ಸೇವೆಗಳನ್ನು ಪಡೆಯಬಹುದು.

ವೇಗದ ಆರೋಗ್ಯ ವಿಮೆ ಕ್ಲೈಮ್‌ಗಳಿಗಾಗಿ ಹೊಸ ವೇದಿಕೆ

ಆಸ್ಪತ್ರೆಗಳು ಮತ್ತು ವಿಮಾ ಕಂಪನಿಗಳ ನಡುವೆ ಕ್ಲೈಮ್‌ಗಳ ಡೇಟಾ ವಿನಿಮಯವನ್ನು ಸುಗಮಗೊಳಿಸಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು (NHA) 'ನ್ಯಾಷನಲ್ ಹೆಲ್ತ್ ಕ್ಲೈಮ್ಸ್ ಎಕ್ಸ್‌ಚೇಂಜ್' (NHCX) ಎಂಬ ಹೊಸ ವೇದಿಕೆಯನ್ನು ಪರಿಚಯಿಸುತ್ತಿದೆ. ಈ ವ್ಯವಸ್ಥೆಯು ದಾಖಲೆಗಳ ಕೆಲಸವನ್ನು ಕಡಿಮೆ ಮಾಡಿ, ವಿಮಾ ಹಣದ ಸೆಟಲ್ಮೆಂಟ್ ಅನ್ನು ವೇಗಗೊಳಿಸುತ್ತದೆ ಮತ್ತು ಆಡಳಿತಾತ್ಮಕ ವಿಳಂಬವನ್ನು ತಪ್ಪಿಸುತ್ತದೆ. ಇದರೊಂದಿಗೆ ವಿಮಾದಾರರ ಆರೋಗ್ಯ ಯೋಜನೆಗಳನ್ನು ಜಾಗತಿಕವಾಗಿ ಮನ್ನಣೆ ಪಡೆದ FHIR ಫಾರ್ಮ್ಯಾಟ್‌ಗೆ ಪರಿವರ್ತಿಸುವ ಉಪಯುಕ್ತ ತಂತ್ರಜ್ಞಾನವನ್ನು ಎನ್‌ಹೆಚ್‌ಎ ಬಿಡುಗಡೆ ಮಾಡಲಿದ್ದು, ಇದು ವಿಮಾ ಕ್ಲೈಮ್ ಪ್ರಕ್ರಿಯೆಯಲ್ಲಿ ಆಗುವ ತಪ್ಪುಗಳನ್ನು ತಡೆಯುತ್ತದೆ.
ವೈದ್ಯಕೀಯ ವಲಯದ ಪೂರೈಕೆದಾರರಿಗಾಗಿ ಸರ್ಕಾರವು 'ಇ-ಸುಶ್ರುತ್ ಕ್ಲಿನಿಕ್' (e-Sushrut Clinic) ಎಂಬ ಪ್ಲಗ್-ಅಂಡ್-ಪ್ಲೇ ಡಿಜಿಟಲ್ ಪರಿಹಾರವನ್ನು ತರುತ್ತಿದೆ. ಇದು ಸಣ್ಣ ಕ್ಲಿನಿಕ್‌ಗಳು ರೋಗಿಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ವ್ಯವಸ್ಥೆಯೊಂದಿಗೆ ಜೋಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಇತರ ಉಪಕ್ರಮಗಳ ಭಾಗವಾಗಿ, ಔಷಧಗಳಿಗೆ ಪ್ರಮಾಣಿತ ಕೋಡ್‌ಗಳನ್ನು ನೀಡುವ 'ಡ್ರಗ್ ರಿಜಿಸ್ಟ್ರಿ', ಪ್ರಯೋಗಾಲಯದ ಡೇಟಾ ಗುಣಮಟ್ಟಕ್ಕಾಗಿ 'ಕಾಮನ್ ಲೋಯಿಂಕ್ ಕೋಡ್ಸ್' ಮತ್ತು ಡಿಜಿಟಲ್ ಆರೋಗ್ಯ ವ್ಯವಸ್ಥೆಗಳ ನಡುವಿನ ಸಂವಹನ ಸುಧಾರಿಸಲು 'ಭಾರತ್ ಹೆಲ್ತ್ ಟರ್ಮಿನಾಲಜಿ ಸರ್ವಿಸ್' ಅನ್ನು ಪ್ರಾರಂಭಿಸಲಾಗುತ್ತಿದೆ.

ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯ ಬಲವರ್ಧನೆ

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಈ ಎಲ್ಲಾ ಅದ್ಭುತ ಉಪಕ್ರಮಗಳು ಸರ್ಕಾರದ ಪ್ರಮುಖ ಕಾರ್ಯಕ್ರಮವಾದ 'ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್' (ABDM) ನ ಭಾಗವಾಗಿವೆ. ದೇಶದಾದ್ಯಂತ ಅತ್ಯಂತ ಸುರಕ್ಷಿತ, ಸಂಯೋಜಿತ ಮತ್ತು ಪರಸ್ಪರ ಕಾರ್ಯನಿರ್ವಹಿಸಬಲ್ಲ ಸುಭದ್ರ ಡಿಜಿಟಲ್ ಆರೋಗ್ಯ ರಕ್ಷಣಾ ಮೂಲಸೌಕರ್ಯವನ್ನು ನಿರ್ಮಿಸುವ ಮಹತ್ತರ ಉದ್ದೇಶವನ್ನು ಈ ಯೋಜನೆಯು ಹೊಂದಿದೆ, (ಏಜೆನ್ಸೀಸ್​).