- ರಾಷ್ಟ್ರಧ್ವಜ ಸಂಹಿತೆ ಪಾಲಿಸುವಂತೆ ರಾಜ್ಯಗಳಿಗೆ ಕೇಂದ್ರದ ಸೂಚನೆ
- ಸ್ವಾತಂತ್ರ್ಯ ದಿನದ ಹಿನ್ನೆಲೆ ಗೃಹ ಸಚಿವಾಲಯದಿಂದ ಸಂದೇಶ
- ತ್ರಿವರ್ಣ ಧ್ವಜಕ್ಕೆ ಸದಾ ಗೌರವಯುತ ಸ್ಥಾನ ನೀಡುವಂತೆ ಮನವಿ
ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ
ದಿನಗಣನೆ ಆರಂಭವಾದ ಬೆನ್ನಲ್ಲೇ ರಾಷ್ಟ್ರಧ್ವಜದ ಗೌರವ ಕಾಪಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಭಾರತದ ಧ್ವಜ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಂದೇಶ ರವಾನಿಸಿದೆ.
ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾಕೂಟಗಳ ವೇಳೆ ಬಳಸುವ ಕಾಗದದ ಭಾವುಟವನ್ನು ಕಾರ್ಯಕ್ರಮ ಮುಗಿದ ಬಳಿಕ ನೆಲದ ಮೇಲೆ ಬೀಸಾಡುವುದು, ಎಲ್ಲೆಂದರಲ್ಲಿ ಎಸೆಯದಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಸೂಚಿಸಲಾಗಿದೆ.
ಧ್ವಜ ಸಂಹಿತೆ ಬಗ್ಗೆ ಅರಿವು ಮೂಡಿಸಿ
ರಾಷ್ಟ್ರಧ್ವಜವನ್ನು ಬಳಸುವ ನಿಯಮಗಳು ಹಾಗೂ ಕಾನೂನುಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಹೇಳುವ ಅಗತ್ಯವಿದೆ. ಸರ್ಕಾರಿ ಸಂಸ್ಥೆಗಳಲ್ಲಿ ಈ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಮಾಧ್ಯಮಗಳ ಮೂಲಕ ಧ್ವಜ ಸಂಹಿತೆಯ ನಿಯಮಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು. ಧ್ವಜ ಎಂದರೆ ಅದು ದೇಶದ ಜನರ ಆಶೋತ್ತರಗಳನ್ನು ಪ್ರತಿನಿಧಿಸುತ್ತೆ. ಹೀಗಾಗಿ ಅದಕ್ಕೆ ಸದಾ ಗೌರವ ನೀಡಬೇಕು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಯಾವ ರೀತಿಯ ಧ್ವಜ ಬಳಸಬೇಕು?
ಧ್ವಜ ಸಂಹಿತೆಯ ಪ್ರಕಾರ ಕೈಮಗ್ಗದಲ್ಲಿ ನೇಯ್ದ ರಾಷ್ಟ್ರಧ್ವಜ ಬಳಸಿದರೆ ಉತ್ತಮ. ಯಂತ್ರದಿಂದ ತಯಾರಿಸಿದ್ದಾದರೂ ಬಟ್ಟೆಯದ್ದಾಗಿರಬೇಕು. ಹತ್ತಿ, ಪಾಲಿಯೆಸ್ಟರ್, ಉಣ್ಣೆ, ರೇಷ್ಮೆ ಅಥವಾ ಖಾದಿಗಳಿಂದ ತಯಾರಿಸಿದ ಭಾವುಟವನ್ನೂ ಬಳಸಬಹುದು. 2022ರ ಜುಲೈ 19ರ ತಿದ್ದುಪಡಿಯ ಬಳಿಕ, ಸಾರ್ವಜನಿಕರು, ಖಾಸಗಿ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ರಾಷ್ಟ್ರಧ್ವಜದ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗದಂತೆ ಯಾವುದೇ ದಿನ ಮತ್ತು ಯಾವುದೇ ಸಮಾರಂಭದಲ್ಲಿ ಧ್ವಜ ಹಾರಿಸಬಹುದು.
ರಾಷ್ಟ್ರಧ್ವಜವನ್ನು ಹಾರಿಸುವಾಗ ಅದಕ್ಕೆ ತಕ್ಕ ಗೌರವ ನೀಡಬೇಕು. ಧ್ವಜವು ಸ್ಪಷ್ಟವಾಗಿ ಕಾಣಬೇಕು. ಹರಿದ ಅಥವಾ ಅಸ್ತವ್ಯಸ್ತ ಸ್ಥಿತಿಯಲ್ಲಿರುವ ರಾಷ್ಟ್ರಧ್ವಜವನ್ನು ಹಾರಿಸಬಾರದು. ಅಲ್ಲದೆ, ಒಂದೇ ಕಂಬದ ಮೇಲೆ ರಾಷ್ಟ್ರಧ್ವಜದ ಜೊತೆಗೆ ಬೇರೆ ಯಾವುದೇ ಧ್ವಜವನ್ನು ಏಕಕಾಲದಲ್ಲಿ ಹಾರಿಸುವಂತಿಲ್ಲ.
ವಾಹನಗಳ ಮೇಲೂ ಧ್ವಜ ಹಾರಿಸುವುದಕ್ಕೆ ನಿಯಮ
ರಾಷ್ಟ್ರಧ್ವಜವನ್ನು ಯಾವುದೇ ವಾಹನದ ಮೇಲೆ ಬೇಕಾಬಿಟ್ಟಿಯಾಗಿ ಹಾರಿಸುವಂತಿಲ್ಲ. ಧ್ವಜ ಸಂಹಿತೆಯ ನಿಯಮಗಳ ಪ್ರಕಾರ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲರು ಸೇರಿದಂತೆ ನಿರ್ದಿಷ್ಟ ಗಣ್ಯರ ವಾಹನಗಳಿಗೆ ಮಾತ್ರ ಧ್ವಜ ಹಾರಿಸಲು ಅವಕಾಶವಿದೆ. ಅದೇ ರೀತಿ ರಾಷ್ಟ್ರಧ್ವಜದ ಅಕ್ಕ-ಪಕ್ಕದಲ್ಲಿ ಅದಕ್ಕಿಂತ ಎತ್ತರದಲ್ಲಿ, ಬೇರೆ ಯಾವುದೇ ಭಾವುಟವನ್ನು ಇರಿಸಬಾರದು.
ಎಲ್ಲೆಡೆ ತ್ರಿವರ್ಣ ಧ್ವಜಗಳು ರಾರಾಜಿಸಲಿದ್ದು, ಧ್ವಜದ ಗೌರವ ಮತ್ತು ಘನತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕಾರ್ಯಕ್ರಮ ಮುಗಿದ ಬಳಿಕ ಕಾಗದದ ಧ್ವಜಗಳನ್ನು ರಸ್ತೆ, ಮೈದಾನ ಅಥವಾ ಇತರೆ ಸ್ಥಳಗಳಲ್ಲಿ ಎಸೆಯದೆ, ಗೌರವಯುತವಾಗಿ ವಿಲೇವಾರಿ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ,(ಏಜೆನ್ಸೀಸ್).