Ladakh > ಲಡಾಖ್‌ನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಕೇಂದ್ರದ ಗ್ರೀನ್ ಸಿಗ್ನಲ್ 
ದೇಶ

ನ್ಯಾಯಕ್ಕಾಗಿ ಇನ್ಮುಂದೆ ಅಲೆಯುವ ಅಗತ್ಯವಿಲ್ಲ!...ಲಡಾಖ್‌ನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಕೇಂದ್ರದ ಗ್ರೀನ್ ಸಿಗ್ನಲ್ | Ladakh

ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್‌ನ ನೂತನ ಪೀಠವನ್ನು ಲಡಾಖ್‌ನಲ್ಲಿ (Ladakh) ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಗುರುವಾರ ಘೋಷಿಸಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರವು ಲಡಾಖ್‌ನ ದೂರದ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರಿಗೆ ತಮಗೆ ಸಿಗಬೇಕಾದ ಕಾನೂನು ಸೇವೆಗಳನ್ನು ಪಡೆಯಲು ತಗಲುವ ಸಮಯವನ್ನು ಕಡಿಮೆ ಮಾಡಲಿದ್ದು, ನ್ಯಾಯ ಸಮ್ಮತ ಸೇವೆಗಳನ್ನು ಶೀಘ್ರವಾಗಿ ಪಡೆಯಲು ಸಹಾಯ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಈ ನಡೆಯು ಲಡಾಖ್‌ನ ಅತ್ಯಂತ ಕಷ್ಟಕರ ಹಾಗೂ ಭೌಗೋಳಿಕವಾಗಿ ಸವಾಲಿನ ಪ್ರದೇಶಗಳಲ್ಲಿ ವಾಸಿಸುವ ಜನರಿಗಾಗಿ ನ್ಯಾಯದ ಲಭ್ಯತೆಯನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ ಎಂದು ಅಮಿತ್ ಷಾ ತಿಳಿಸಿದ್ದಾರೆ. ಸರ್ಕಾರದ ಈ ನಿರ್ಧಾರದಿಂದಾಗಿ ಲಡಾಖ್ ನಿವಾಸಿಗಳು ಕಾನೂನು ಪರಿಹಾರಗಳನ್ನು ಪಡೆಯಲು ಸುದೀರ್ಘ ಪ್ರಯಾಣ ಬೆಳೆಸುವ ಅಗತ್ಯವಿಲ್ಲದೇ ಹೈಕೋರ್ಟ್‌ ಮೆಟ್ಟಿಲೇರಲು ಹಾದಿ ಸುಗಮವಾಗಲಿದೆ.

ಲಡಾಖ್‌ನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ಮುಖ್ಯವೇಕೆ..?

ಲಡಾಖ್‌ನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗುತ್ತಿರುವುದು ಅತ್ಯಂತ ಮಹತ್ವದ ನಿರ್ಧಾರವಾಗಿದೆ. ಏಕೆಂದರೆ ಲಡಾಖ್ ಅತ್ಯಂತ ವಿಶಾಲವಾದ ಹಾಗೂ ಪರ್ವತಗಳಿಂದ ಕೂಡಿದ ಕೇಂದ್ರಾಡಳಿತ ಪ್ರದೇಶವಾಗಿದೆ. ಇಲ್ಲಿನ ಜನರಿಗೆ ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗಲು ಅಥವಾ ಕಾನೂನು ನೆರವು ಪಡೆಯಲು ಸುದೀರ್ಘ ದೂರ ಪ್ರಯಾಣಿಸುವುದು ದೊಡ್ಡ ಸವಾಲಾಗಿತ್ತು. ಪ್ರಸ್ತುತ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎರಡೂ ಕೇಂದ್ರಾಡಳಿತ ಪ್ರದೇಶಗಳಿಗೆ ಒಂದೇ ಜಂಟಿ ಹೈಕೋರ್ಟ್ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ನ್ಯಾಯಾಂಗ ಇಲಾಖೆಯು ಜಮ್ಮು ಮತ್ತು ಶ್ರೀನಗರವನ್ನು ಈ ಹೈಕೋರ್ಟ್‌ನ ಮುಖ್ಯ ಪೀಠಗಳನ್ನಾಗಿ ನಿಗದಿಪಡಿಸಿದೆ.
ಕೇಂದ್ರದ ಈ ನಿರ್ಧಾರದಿಂದಾಗಿ, ಲಡಾಖ್‌ನಲ್ಲಿ ಪ್ರಸ್ತಾವಿತ ಪೀಠವು ಸ್ಥಾಪನೆಯಾದರೆ, ಹೈಕೋರ್ಟ್ ವ್ಯಾಪ್ತಿಗೆ ಬರುವ ಪ್ರಕರಣಗಳಿಗಾಗಿ ಸ್ಥಳೀಯ ನಿವಾಸಿಗಳು ಕೇಂದ್ರಾಡಳಿತ ಪ್ರದೇಶದಿಂದ ಹೊರಗೆ ಪ್ರಯಾಣಿಸುವ ಅಗತ್ಯವಿರುವುದಿಲ್ಲ.

ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿದ್ದು ಯಾವಾಗ..?

ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿಸಿದ ನಂತರ, 2019 ರ ಅಕ್ಟೋಬರ್ 31 ರಂದು ಲಡಾಖ್ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ಅಸ್ತಿತ್ವಕ್ಕೆ ಬಂದಿತು. ಇದರಿಂದಾಗಿ ಅಸ್ತಿತ್ವದಲ್ಲಿದ್ದ ಹೈಕೋರ್ಟ್, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎರಡಕ್ಕೂ ಜಂಟಿ ಹೈಕೋರ್ಟ್ ಆಯಿತು. ಇಲ್ಲಿಯವರೆಗೆ ಲಡಾಖ್ ತನಗೇ ಆದ ಪ್ರತ್ಯೇಕ ಹೈಕೋರ್ಟ್ ಅನ್ನು ಹೊಂದಿರಲಿಲ್ಲ. ಕೇಂದ್ರ ಸರ್ಕಾರದ ಈ ಇತ್ತೀಚಿನ ನಿರ್ಧಾರವು ಲಡಾಖ್‌ಗೆ ಪ್ರತ್ಯೇಕ ಹೈಕೋರ್ಟ್‌ ರಚಿಸುವ ಬದಲಾಗಿ, ಕೇಂದ್ರಾಡಳಿತ ಪ್ರದೇಶದ ಒಳಗಡೆಯೇ ನ್ಯಾಯಾಂಗದ ಲಭ್ಯತೆಯನ್ನು ಬಲಪಡಿಸಲಿದೆ(ಏಜೆನ್ಸೀಸ್​).