ನವದೆಹಲಿ: ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಅವರ ಪ್ರತಿಭಟನೆಗೆ ಆಡಳಿತರೂಢ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಣಿದಿದ್ದು, ಜುಲೈ 20ರಂದು ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಪೆಲೆಟ್ ಗನ್ ಬಳಸಿದ ಆರೋಪದ ಮೇಲೆ ಅಪರಿಚಿತರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಗಾಯಾಳು ಯುವಕ ಸಾಹಿಲ್ ಲೋಚಬ್ ಸಲ್ಲಿಸಿದ ದೂರಿನ ಮೇರೆಗೆ ದೆಹಲಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸರು ಪೆಲೆಟ್ ಗನ್ ಗುಂಡು ಹಾರಿಸಿದ ಘಟನೆಗೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲು ವೇಳೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ನಾಯಕರು ಠಾಣೆಯಲ್ಲಿದ್ದರು ಎನ್ನಲಾಗಿದೆ.
ಬೆಳಗ್ಗೆ ಪೆಲೆಟ್ ಗನ್ ಬಳಕೆಯ ವಿರುದ್ಧ ಗಾಯಾಳು ಸಾಹಿಲ್ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಲು ನಿರಾಕರಿಸಿದರ ಬಳಿಕ ಸ್ಥಳಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ, ಎಫ್‌ಐಆರ್ ದಾಖಲಿಸದಿದ್ದರೆ ತಿಂಗಳಲ್ಲ, ಆರು ತಿಂಗಳಾಗಲಿ, ಠಾಣೆಯ ಹೊರಗಡೆಯೇ ಕೂರುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಇದಾಗ ಬಳಿಕ ಗಾಯಾಳು ನೀಡಿದ ವೈದ್ಯಕೀಯ ವರದಿ ಮತ್ತು ಇತರ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ರಾಹುಲ್ ಗಾಂಧಿ ಧರಣಿ
ಜುಲೈ 20ರಂದು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಶಿಕ್ಷಣ ಸಚಿವರ ರಾಜೀನಾಮೆ ಅಗ್ರಹಿಸಿ ಸಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಮತ್ತು ಸಂಸತ್ ಚಲೋ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಸಂಸತ್ತಿನತ್ತ ಪ್ರಯಾಣ ಆರಂಭಿಸಿದಾಗ ದೆಹಲಿ ಪೊಲೀಸರು ಲಾಠಿ ಚಾರ್ಜ್ ಮಾಡಿ, ಬಳಿಕ ಪೆಲೆಟ್ ಗನ್ ಬಳಸಿದ್ದರು ಎನ್ನಲಾಗಿದೆ.
ಪೆಲೆಟ್ ಗನ್ ಬಳಕೆಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರಾಹುಲ್ ಗಾಂಧಿ, ಗಾಯಗೊಂಡಿರುವ 19 ವರ್ಷದ ಸಾಹಿಲ್ ಲೋಚಬ್ ಕರೆದುಕೊಂಡು ಮೊದಲು ಮಂದಿರ ಮಾರ್ಗ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಕರಣ ದಾಖಲಿಸುವಂತೆ ವಿನಂತಿಸಿದ್ದರು. ಆದರೆ ಪೊಲೀಸರು ದೂರು ಸ್ವೀಕರಿಸಲು ಹಿಂದೇಟು ಹಾಕಿದ ನಂತರ, ಅವರು ಡಿಸಿಪಿ(ಕೇಂದ್ರ) ಅವರನ್ನು ಭೇಟಿಯಾದರು. ಅಲ್ಲೂ ಮಾತುಕತೆ ವಿಫಲವಾದ ಬಳಿಕ ಗಾಯಾಳು ಜೊತೆ ಸೇರಿಕೊಂಡು ಠಾಣೆ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದರು (ಏಜೆನ್ಸೀಸ್).