ಪ್ರಮುಖ ಮುಖ್ಯಾಂಶಗಳು
ನವದೆಹಲಿ: ದೂರದರ್ಶನ ಮತ್ತು ರೇಡಿಯೋ ಪ್ರಸಾರ ಸೇವೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಏಕೀಕೃತ ನಿಯಂತ್ರಣ ವ್ಯವಸ್ಥೆಯನ್ನು ಪ್ರಸ್ತಾಪಿಸಿದೆ. ಇದರ ಅನ್ವಯ, ಖಾಸಗಿ ಟಿವಿ ಚಾನೆಲ್ಗಳು ಹಾಗೂ ರೇಡಿಯೋ ಕೇಂದ್ರಗಳು ರಾಷ್ಟ್ರೀಯ ಮಹತ್ವ ಹಾಗೂ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದನ್ನು ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಶುಕ್ರವಾರ ‘ದೂರಸಂಪರ್ಕ (ಟೆಲಿವಿಷನ್, ರೇಡಿಯೋ ಮತ್ತು ಸಂಬಂಧಿತ ಸೇವೆಗಳು) ನಿಯಮಗಳು-2026’ ಕರಡು ಪ್ರತಿ ಬಿಡುಗಡೆ ಮಾಡಿದೆ. ಹೊಸ ಕರಡು ನಿಯಮಗಳ ಪ್ರಕಾರ, ಟಿವಿ ಚಾನೆಲ್ಗಳು ಪ್ರತಿದಿನ ಬೆಳಗ್ಗೆ 6ರಿಂದ ರಾತ್ರಿ 11 ಗಂಟೆಯೊಳಗೆ ಕನಿಷ್ಠ 30 ನಿಮಿಷಗಳ ಕಾಲ ರಾಷ್ಟ್ರೀಯ ಮಹತ್ವ ಹಾಗೂ ಸಾಮಾಜಿಕ ಕಳಕಳಿ ಕುರಿತಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲೇಬೇಕು.
ಖಾಸಗಿ ಎಫ್ಎಂ ರೇಡಿಯೋ ಕೇಂದ್ರಗಳು ಕೂಡ ನಿತ್ಯ ಒಂದು ಗಂಟೆ ಕಾಲ ಇಂತಹ ಕಾರ್ಯಕ್ರಮಗಳಿಗೆ ಮೀಸಲಿಡಬೇಕಾಗುತ್ತದೆ. ನಿಯಮ ಮತ್ತಷ್ಟು ಬಿಗಿ. 2022ರ ನಿಯಮಾವಳಿಗಳ ಅನ್ವಯ ಟಿವಿ ಚಾನೆಲ್ಗಳಿಗೆ ಈ ಹಿಂದೆಯೇ ಸಾರ್ವಜನಿಕ ಸೇವಾ ಪ್ರಸಾರವನ್ನು ಕಡ್ಡಾಯಗೊಳಿಸಲಾಗಿತ್ತು. ಅದಕ್ಕೆ ನಿರ್ದಿಷ್ಟ ಸಮಯ ನಿಗದಿ ಮಾಡಿರಲಿಲ್ಲ. ಹೊಸ ಕರಡು ಆ ಕೊರತೆಯನ್ನು ನೀಗಿಸಿದೆ. ಅಲ್ಲದೆ, ಸಾರ್ವಜನಿಕ ಹಿತಾಸಕ್ತಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಹುದು ಎಂಬ ಪದವನ್ನು ಬದಲಾಯಿಸಿ, ಕಡ್ಡಾಯವಾಗಿ ಪ್ರಸಾರ ಮಾಡಲೇಬೇಕು ಎಂಬುದಾಗಿ ಸೇರಿಸುವ ಮೂಲಕ ನಿಯಮವನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಕೇವಲ ವಿದೇಶಿ ವೀಕ್ಷಕರಿಗಾಗಿಯೇ ಭಾರತದಿಂದ ಅಪ್ಲಿಂಕ್ ಆಗುವ ಚಾನೆಲ್ಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಆದರೆ, ಅವುಗಳ ಕಂಟೆಂಟ್ ಭಾರತದ ಸಾರ್ವಭೌಮತೆ, ಭದ್ರತೆ ಮತ್ತು ವಿದೇಶಾಂಗ ಸಂಬಂಧಗಳಿಗೆ ಧಕ್ಕೆ ತರುವಂತಿರಬಾರದು ಎಂಬ ಷರತ್ತು ವಿಧಿಸಲಾಗಿದೆ.
ಶಿಕ್ಷಣ ಮತ್ತು ಸಾಕ್ಷರತೆ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ-ತಂತ್ರಜ್ಞಾನ, ಮಹಿಳಾ ಕಲ್ಯಾಣ, ಸಮಾಜದ ದುರ್ಬಲ ವರ್ಗಗಳ ಕಲ್ಯಾಣ, ಪರಿಸರ ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆ ಹಾಗೂ ರಾಷ್ಟ್ರೀಯ ಭಾವೈಕ್ಯತೆಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿರಬೇಕು ಎಂದು ಸೂಚಿಸಲಾಗಿದೆ.
ಖಾಸಗಿ ಎಫ್ಎಂ ರೇಡಿಯೋಗಳಲ್ಲಿ ಸುದ್ದಿ ಪ್ರಸಾರಕ್ಕೆ ಅವಕಾಶ ನೀಡಬೇಕೆಂಬ ಉದ್ಯಮದ ಬಹುಕಾಲದ ಬೇಡಿಕೆ ಈ ಕರಡು ನಿಯಮದಲ್ಲಿಯೂ ಈಡೇರಿಲ್ಲ. ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮವನ್ನೇ ಮುಂದುವರಿಸಲಾಗಿದ್ದು, ಖಾಸಗಿ ರೇಡಿಯೋಗಳು ಕೇವಲ ಆಕಾಶವಾಣಿಯ ಸುದ್ದಿಗಳನ್ನು ಯಾವುದೇ ಬದಲಾವಣೆ ಮಾಡದೆ ಯಥಾವತ್ತಾಗಿ ಪ್ರಸಾರ ಮಾಡಬಹುದು. ಆದರೆ, ಸ್ವಂತ ಸುದ್ದಿಗಳನ್ನು ಪ್ರಸಾರ ಮಾಡುವಂತಿಲ್ಲ. ಕ್ರೀಡೆ, ಸಂಚಾರ ದಟ್ಟಣೆ, ಹವಾಮಾನ, ಪರೀಕ್ಷೆ ಮತ್ತು ಫಲಿತಾಂಶಗಳಂತಹ ಮಾಹಿತಿಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ.