ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ 
ದೇಶ

ಕೇಂದ್ರ ಸರ್ಕಾರ ಭೀತಿಗೊಳಗಾಗಿದೆ; ಅದಕ್ಕೆ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡ್ತಿಲ್ಲ: ಪ್ರಿಯಾಂಕಾ ಗಾಂಧಿ | Priyanka Gandhi

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನರಾವಣೆ ಅವರ ಅಪ್ರಕಟಿತ ಪುಸ್ತಕ
  • ಗಡಿ ಕುರಿತಾಗಿ ದೇಶದ ನಾಯಕತ್ವದ ಪ್ರತಿಕ್ರಿಯೆ ಹೇಗಿತ್ತು ಎಂಬುದು ಉಲ್ಲೇಖ
  • ಎಂ.ಎಂ.ನರವಾಣೆ ಪುಸ್ತಕ & ರಾಹುಲ್ ಗಾಂಧಿ ಮಾತಿಗೆ ಕೇಂದ್ರ ಹೆದರಿದೆ
ನವದೆಹಲಿ: ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನರಾವಣೆ ಅವರ ಅಪ್ರಕಟಿತ ಪುಸ್ತಕದಲ್ಲಿ ಚೀನಾ ಮತ್ತು ನಮ್ಮ ಗಡಿ ಕುರಿತಾಗಿ ದೇಶದ ನಾಯಕತ್ವದ ಪ್ರತಿಕ್ರಿಯೆ ಹೇಗಿತ್ತು ಎಂಬುದು ದೇಶದ ಜನರ ಮುಂದೆ ಬಹಿರಂಗವಾಗುತ್ತದೆ ಎಂಬ ಭಯದಿಂದಲೇ ಕೇಂದ್ರ ಸರ್ಕಾರ ಸಂಸತ್​ನಲ್ಲಿ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ(Priyanka Gandhi) ಆರೋಪಿಸಿದ್ದಾರೆ.
ಈ ಕುರಿತು ಬುಧವಾರ ಸಂಸತ್​ ಹೊರಗೆ ಮಾತನಾಡಿರುವ ಅವರು, ಬಿಜೆಪಿ ನಾಯಕರು ಮಾತನಾಡುವಾಗಲೂ ಅವರು ಪುಸ್ತಕಗಳು, ನಿಯತಕಾಲಿಕೆಗಳು ಮತ್ತು ವರದಿಗಳನ್ನು ಉಲ್ಲೇಖಿಸುತ್ತಾರೆ. ಅದೇ ರೀತಿ ರಾಹುಲ್ ಗಾಂಧಿಯವರು ತಾವು ಉಲ್ಲೇಖಿಸಲು ಬಯಸಿದ ಲೇಖನವನ್ನು ದೃಢೀಕರಿಸಿ ಮಾತನಾಡಲು ಬಯಸಿದ್ದಾರೆ. ಆದರೆ ಅವರಿಗೆ ಮಾತನಾಡು ಅವಕಾಶ ನೀಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ. 
ಯಾರಾದರೂ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರೆ ಏನು ಸಮಸ್ಯೆ?, ಅದರಿಂದ ಏನಾಗುತ್ತದೆ. ಅವರು ಯಾಕೆ ಹೆದರುತ್ತಿದ್ದಾರೆ. ಈ ಮೊದಲು ಆ ಪುಸ್ತಕವನ್ನು ಪ್ರಕಟಿಸಲು ಅವಕಾಶ ನೀಡಲಿಲ್ಲ. ನನಗೆ ತಿಳಿದಿರುವಂತೆ ಅದರಲ್ಲಿ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ, ಗೃಹ ಸಚಿವ ಮತ್ತು ರಕ್ಷಣಾ ಸಚಿವರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ತೋರಿಸುವ ವಿಷಯಗಳನ್ನು ಅದು ಹೊಂದಿದೆ ಎನ್ನಲಾಗಿದೆ.
ದೇಶದ ಮೇಲೆ ದಾಳಿಯಾದಾಗ ಮತ್ತು ಚೀನಾದ ಪಡೆಗಳು ನಮ್ಮ ಗಡಿಗೆ ಬಂದಾಗ, ಅವರು ಹೇಗೆ ಪ್ರತಿಕ್ರಿಯಿಸಿದ್ದಾರೆ. ಎಪ್ಸ್ಟೀನ್ ಫೈಲ್ಸ್ ಬಿಡುಗಡೆಯಾಗಿದೆ. ಲೈಂಗಿಕ ಕಳ್ಳಸಾಗಾಣಿಕೆದಾರ ಮತ್ತು ಮಕ್ಕಳ ಲೈಂಗಿಕ ಅಪರಾಧಿಯನ್ನು ಸರ್ಕಾರ ಯಾಕೆ ಸಂಪರ್ಕಿಸಿದೆ. ಇದೆಲ್ಲವೂ ದೃಢೀಕೃತ ದಾಖಲೆಯಾಗಿದೆ. ಸಂಸತ್​ನಲ್ಲಿ ಅಲ್ಲದಿದ್ದರೆ ಮತ್ತೆಲ್ಲಿ ಇದನ್ನು ಚರ್ಚಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

8 ಕಾಂಗ್ರೆಸ್ ಸಂಸದರು ಅಮಾನತು

ಲೋಕಸಭೆಯಲ್ಲಿ ಮಂಗಳವಾರ(ಫೆ. 03) ಅಶಿಸ್ತು ತೋರಿದ ಆರೋಪದ ಮೇಲೆ ಕಾಂಗ್ರೆಸ್​​ನ ಎಂಟು ಮಂದಿ ಸಂಸದರನ್ನು ಈ ಅಧಿವೇಶನದ ಅವಧಿ ಮುಗಿಯುವವರೆಗೂ ಲೋಕಸಭೆಯಿಂದ ಅಮಾನತು ಮಾಡಿ ಸ್ಪೀಕರ್ ಓಂ ಬಿರ್ಲಾ ಆದೇಶ ಹೊರಡಿಸಿದ್ದಾರೆ.
ಲೋಕಸಭೆಯಲ್ಲಿ ತಮ್ಮ ನಾಯಕ ರಾಹುಲ್ ಗಾಂಧಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಪ್ರತಿಭಟಿಸಿದ ಸಂಸದರು ಸ್ಪೀಕರ್ ಚೇರ್​ನತ್ತ ಪೇಪರ್ ಎಸೆದಿದ್ದರು. ಈ ಹಿನ್ನೆಲೆ ಸಂಸದರಾದ ಗುರ್ಜೀತ್ ಸಿಂಗ್ ಔಜ್ಲಾ, ಹಿಬಿ ಈಡನ್, ಸಿ ಕಿರಣ್ ಕುಮಾರ್ ರೆಡ್ಡಿ, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಮಾಣಿಕ್ಕಂ ಟ್ಯಾಗೋರ್, ಪ್ರಶಾಂತ್ ಪಡೋಲೆ, ಡೀನ್ ಕುರಿಯಾಕೋಸ್ಹಾಗೂ ಓರ್ವ ಸಿಪಿಐಎಂ ಸಂಸದ ಸ್ ವೆಂಟಕೇಸನ್ ಅಮಾನತು ಮಾಡಲಾಗಿದೆ.

ಸ್ಪೀಕರ್ ಓಂ ಬಿರ್ಲಾಗೆ ರಾಹುಲ್ ಗಾಂಧಿ ಪತ್ರ

ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆ ಕುರಿತು ಲೋಕಸಭೆಯಲ್ಲಿ ಮಾತನಾಡಲು ಅಡ್ಡಿಪಡಿಸಿದ ಮತ್ತು ಮಾತನಾಡಲು ಅವಕಾಶ ನೀಡದಿದ್ದಕ್ಕೆ ಮಂಗಳವಾರ(ಫೆ. 03) ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ತೀವ್ರ ಪ್ರತಿಭಟನೆ ದಾಖಲಿಸಿದ್ದಾರೆ.
ಸ್ಪೀಕರ್ ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ನೀಡದಿರುವುದು, ಸಂಪ್ರದಾಯದ ಉಲ್ಲಂಘನೆ ಮಾತ್ರವಲ್ಲದೇ, ಉದ್ದೇಶಪೂರ್ವಕವಾಗಿ ತಡೆಯುವ ಪ್ರಯತ್ನ. ಇದು ನಮ್ಮ ಪ್ರಜಾಪ್ರಭುತ್ವದ ಮೇಲಿನ ಕಪ್ಪು ಚುಕ್ಕೆ ಎಂದು ಬಣ್ಣಿಸಿದ್ದಾರೆ (ಏಜೆನ್ಸೀಸ್).