- ಜೈಷ್, ಲಷ್ಕರ್ ಜಾಲದ ಮೇಲೆ ಕೇಂದ್ರದ ಮತ್ತೊಂದು ಕ್ರಮ; 23 ಮಂದಿ ಉಗ್ರರ ಪಟ್ಟಿಗೆ
- ಗಡಿಾಚೆಗಿನ ಉಗ್ರ ಜಾಲಕ್ಕೆ ಹೊಡೆತ; 23 ಮಂದಿಯನ್ನು ಉಗ್ರರೆಂದು ಘೋಷಿಸಿದ ಕೇಂದ್ರ
- ಯುಎಪಿಎ ಅಡಿ 23 ಉಗ್ರರ ಪಟ್ಟಿ ಪ್ರಕಟಿಸಿದ ಕೇಂದ್ರ ಗೃಹ ಸಚಿವಾಲಯ
ನವದೆಹಲಿ: ಗಡಿಾಚೆಗಿನ ಭಯೋತ್ಪಾದನಾ ಜಾಲದ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರಿಸಿರುವ ಕೇಂದ್ರ ಸರ್ಕಾರ, ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (UAPA), 1967ರ ಸೆಕ್ಷನ್ 35ರ ಅಡಿಯಲ್ಲಿ 23 ಮಂದಿಯನ್ನು ಉಗ್ರರೆಂದು ಘೋಷಿಸಿದೆ.
ಈ ಕುರಿತು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಘೋಷಿತ ವ್ಯಕ್ತಿಗಳು ಜೈಷ್-ಎ-ಮೊಹಮ್ಮದ್ (JeM) ಹಾಗೂ ಲಷ್ಕರ್-ಎ-ತೊಯ್ಬಾ (LeT) ಸೇರಿದಂತೆ ವಿವಿಧ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ತಿಳಿಸಿದೆ.
ಕೇಂದ್ರ ಸರ್ಕಾರದ ಪ್ರಕಾರ, ಈ ವ್ಯಕ್ತಿಗಳು ಉಗ್ರರ ನೇಮಕಾತಿ, ತರಬೇತಿ, ಹಣಕಾಸು ನೆರವು, ಶಸ್ತ್ರಾಸ್ತ್ರ ಪೂರೈಕೆ, ಭಾರತದಲ್ಲಿ ಉಗ್ರ ದಾಳಿಗಳಿಗೆ ನೆರವು ನೀಡುವುದು ಸೇರಿದಂತೆ ವಿವಿಧ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು.
ಉಗ್ರರೆಂದು ಘೋಷಿಸಲಾದವರಲ್ಲಿ ಪ್ರಮುಖರು
ಕೇಂದ್ರ ಗೃಹ ಸಚಿವಾಲಯದ ಅಧಿಸೂಚನೆ ಪ್ರಕಾರ, ಜೈಷ್-ಎ-ಮೊಹಮ್ಮದ್‌ಗೆ ಸೇರಿದ ಮಸೂದ್ ಇಲ್ಯಾಸ್ ಕಾಶ್ಮೀರಿ 2022ರ ಸುಂಜ್ವಾನ್ ಸೇನಾ ಶಿಬಿರದ ಮೇಲಿನ ದಾಳಿಗೆ ಸಂಬಂಧಿಸಿದ ಆರೋಪಿಯಾಗಿದ್ದಾನೆ. ಪ್ರಧಾನಿ ಭೇಟಿ ಅಡ್ಡಿಪಡಿಸುವ ಉದ್ದೇಶದಿಂದ ಈ ಸಂಚು ರೂಪಿಸಲಾಗಿತ್ತು ಎಂದು ಎನ್‌ಐಎ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಮೊಹಮ್ಮದ್ ಮುಸ್ಸದಿಕ್ ಕೂಡ 2022ರ ಸುಂಜ್ವಾನ್ ದಾಳಿಗೆ ಸಂಬಂಧ ಹೊಂದಿದ್ದಾನೆ ಎಂದು ಅಧಿಸೂಚನೆ ತಿಳಿಸಿದೆ. ಗಡಿಯಾಚೆಯಿಂದ ಸುರಂಗ ಮಾರ್ಗದ ಮೂಲಕ ಉಗ್ರರನ್ನು ಭಾರತಕ್ಕೆ ನುಸುಳಿಸಿ, ಪಾಕಿಸ್ತಾನದಿಂದಲೇ ಕಾರ್ಯಾಚರಣೆ ನಡೆಸಿದ್ದ ಆರೋಪ ಅವನ ಮೇಲಿದೆ.
ನಾಗ್ರೋಟಾ ದಾಳಿಗೆ ಸಂಬಂಧಿಸಿದ ಆರೋಪಿಗಳು
ಮುಫ್ತಿ ಮೊಹಮ್ಮದ್ ಅಸ್ಗರ್ ಖಾನ್ 2016ರ ನಾಗ್ರೋಟಾ ಸೇನಾ ಶಿಬಿರದ ಮೇಲಿನ ದಾಳಿಗೆ ಸಂಬಂಧಿಸಿದ ಉಗ್ರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದನೆಂದು ಎನ್‌ಐಎ ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.
ಹಫೀಜ್ ಅಬ್ದುಲ್ ಶಕೂರ್ (ಖಾರಿ ಜರಾರ್ ಎಂದೂ ಗುರುತಿಸಲಾಗುತ್ತದೆ) ನಾಗ್ರೋಟಾ ದಾಳಿಗೂ ಮುನ್ನ ಸ್ಥಳೀಯ ಸಹಚರರೊಂದಿಗೆ ಸಂಪರ್ಕದಲ್ಲಿದ್ದ ಜೈಷ್‌ನ ಪ್ರಮುಖ ಕಮಾಂಡರ್ ಎಂದು ತನಿಖಾ ಸಂಸ್ಥೆ ಹೇಳಿದೆ.
ಅಬ್ದುಲ್ಲಾ ಜಿಹಾದಿ ನಾಗ್ರೋಟಾ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರಿಗೆ ನೆರವು ನೀಡಿದ್ದು, ಜೈಷ್‌ನ ಹಲವು ತರಬೇತಿ ಶಿಬಿರಗಳ ನಿರ್ವಹಣೆಯಲ್ಲೂ ತೊಡಗಿದ್ದಾನೆ ಎಂದು ಆರೋಪಿಸಲಾಗಿದೆ.
ಲಷ್ಕರ್, ಟಿಆರ್‌ಎಫ್ ಸಂಪರ್ಕ
ಲಷ್ಕರ್-ಎ-ತೊಯ್ಬಾದ ಫಿರ್ದೌಸ್ ಅಹ್ಮದ್ ಭಟ್ ಗಡಿಯಾಚೆ ನುಸುಳುವಿಕೆ ಹಾಗೂ ಲಾಜಿಸ್ಟಿಕ್ಸ್ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಕೇಂದ್ರ ತಿಳಿಸಿದೆ.
ಬಿಲಾಲ್ ಅಹ್ಮದ್ ಮಿರ್ ಲಷ್ಕರ್-ಎ-ತೊಯ್ಬಾ ಹಾಗೂ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದು, ಭಾರತದಲ್ಲಿ ಉಗ್ರ ಚಟುವಟಿಕೆಗಳಿಗೆ ಸಂಚು ರೂಪಿಸುವುದು ಹಾಗೂ ಶಸ್ತ್ರಾಸ್ತ್ರ ಪೂರೈಕೆಗೆ ವ್ಯವಸ್ಥೆ ಮಾಡಿದ್ದ ಆರೋಪ ಎದುರಿಸುತ್ತಿದ್ದಾನೆ.
ಯುಎಪಿಎ ಕಾಯ್ದೆಯಡಿ ಕ್ರಮ
ಭಯೋತ್ಪಾದನೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಯುಎಪಿಎ ಕಾಯ್ದೆ ಜಾರಿಯಲ್ಲಿದೆ. 2019ರಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಸಂಘಟನೆಗಳಷ್ಟೇ ಅಲ್ಲದೆ ವ್ಯಕ್ತಿಗಳನ್ನೂ ನೇರವಾಗಿ ಉಗ್ರರೆಂದು ಘೋಷಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ.
'ಪ್ರಹಾರ್' ನೀತಿ ಜಾರಿ
ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಭಾರತ ಅನುಸರಿಸುತ್ತಿದೆ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಇದೇ ವರ್ಷ ದೇಶದ ಮೊದಲ ಸಮಗ್ರ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ನೀತಿ ಮತ್ತು ಕಾರ್ಯತಂತ್ರ 'ಪ್ರಹಾರ್' (PRAHAAR) ಅನ್ನು ಕೇಂದ್ರ ಅನಾವರಣಗೊಳಿಸಿದೆ.
ಈ ನೀತಿಯಡಿ ಭಯೋತ್ಪಾದನೆಗೆ ಯಾವುದೇ ಧರ್ಮ, ಜಾತಿ ಅಥವಾ ರಾಷ್ಟ್ರೀಯತೆಯ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಲಾಗಿದ್ದು, ಉಗ್ರ ಬೆದರಿಕೆಗಳನ್ನು ಪರಿಣಾಮಕಾರಿಯಾಗಿ ತಡೆಯಲು ರಾಷ್ಟ್ರೀಯ ಹಾಗೂ ಜಾಗತಿಕ ಸಹಕಾರಕ್ಕೆ ಒತ್ತು ನೀಡಲಾಗಿದೆ,(ಏಜೆನ್ಸೀಸ್).