ಪೆಟ್ರೋಲ್ಗೆ ಎಥನಾಲ್ ಮಿಶ್ರಣ ಮಾಡುವ ಯೋಜನೆಯನ್ನು ಈಗಾಗಲೇ ಯಶಸ್ವಿಯಾಗಿ ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರ ಮುಂದಿನ ಹೆಜ್ಜೆಯಾಗಿ, ಡೀಸೆಲ್ಗೆ ಐಸೊಬ್ಯುಟನಾಲ್ ಮಿಶ್ರಣ ಮಾಡುವುದನ್ನು ಕಡ್ಡಾಯಗೊಳಿ ಸಲು ಚಿಂತನೆ ನಡೆಸುತ್ತಿದೆ. ಜಗತ್ತಿನ ಅತಿ ಹೆಚ್ಚು ಇಂಧನ ಬಳಕೆ ಮಾಡುವ ದೇಶಗಳಲ್ಲಿ ಭಾರತವೂ ಒಂದಾಗಿದ್ದು, ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಮತ್ತು ಕೈಗಾರಿಕೀಕರಣದಿಂದಾಗಿ ಕಚ್ಚಾ ತೈಲದ ಆಮದು ದೇಶದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಿದೆ. ಪಳೆಯುಳಿಕೆ ಇಂಧನಗಳ (ಫಾಸಿಲ್ ಫ್ಯುಯೆಲ್ಸ್) ಬಳಕೆಯಿಂದಾಗುವ ವಾಯು ಮಾಲಿನ್ಯ ಮತ್ತು ಹಸಿರುಮನೆ ಅನಿಲಗಳ ಹೊರಸೂಸುವಿಕೆ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತಿದೆ. ಈ ಸವಾಲುಗಳನ್ನು ಎದುರಿಸಲು ಕೇಂದ್ರ ಸರ್ಕಾರ ಈ ಮಹತ್ವಾಕಾಂಕ್ಷಿ ಯೋಜನೆಗೆ ಕೈಹಾಕುತ್ತಿದೆ. ಇದು ಭಾರತದ ಇಂಧನ ವಲಯ, ಪರಿಸರ ಸಂರಕ್ಷಣೆ ಮತ್ತು ಆರ್ಥಿಕತೆಯ ಮೇಲೆ ಬೀರಲಿರುವ ಪರಿಣಾಮಗಳ ಕುರಿತು ವಿವರ ಇಲ್ಲಿದೆ.
ಡೀಸೆಲ್ಗೆ ಐಸೊಬ್ಯುಟನಾಲ್ ಮಿಶ್ರಣ ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ಚಿಂತನೆ ಭಾರತದ ಇಂಧನ ಸ್ವಾವಲಂಬನೆಯ ಕನಸಿಗೆ ಜೀವ ನೀಡುವ ಮತ್ತೊಂದು ಆಶಾದಾಯಕ ಹೆಜ್ಜೆ. ಇದರಿಂದ ತೈಲ ಆಮದು ಕಡಿಮೆ ಆಗುವುದಲ್ಲದೆ, ಪರಿಸರ ಮಾಲಿನ್ಯದ ವಿರುದ್ಧದ ಹೋರಾಟದಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿ ನಿಲ್ಲಿಸಲಿದೆ. ತಾಂತ್ರಿಕ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ, ವ್ಯವಸ್ಥಿತವಾಗಿ ಜಾರಿಗೊಳಿಸಿದರೆ, ಈ ಯೋಜನೆ ದೇಶದ ಆರ್ಥಿಕತೆ, ಪರಿಸರ ಮತ್ತು ಕೃಷಿ ಈ ಮೂರೂ ವಲಯಗಳಿಗೂ ‘ತ್ರಿವೇಣಿ ಸಂಗಮ’ದಂತೆ ಕೆಲಸ ಮಾಡಿ ಲಾಭ ತಂದುಕೊಡಬಲ್ಲದು.
ಏನಿದು ಐಸೊಬ್ಯುಟನಾಲ್?
ನಾಲ್ಕು ಕಾರ್ಬನ್ ಪರಮಾಣುಗಳನ್ನು ಹೊಂದಿರುವ ಒಂದು ಪ್ರಮುಖ ಆಲ್ಕೋಹಾಲ್ಗೆ ಐಸೊಬ್ಯುಟನಾಲ್ ಎನ್ನುತ್ತಾರೆ. ಇದನ್ನು ಕೂಡ ಎಥನಾಲ್ನಂತೆ ಜೈವಿಕ ಮೂಲಗಳಿಂದಲೇ, ಅಂದರೆ ಕಬ್ಬಿನ ಸಿಪ್ಪೆ, ಜೋಳ, ಕೃಷಿ ತ್ಯಾಜ್ಯ ಮತ್ತು ಇತರ ಜೈವಿಕ ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಉತ್ಪಾದಿಸಲಾಗುತ್ತದೆ. ದ್ವಿತೀಯ ಪೀಳಿಗೆಯ ಜೈವಿಕ ಇಂಧನ -ಸೆಕೆಂಡ್ ಜನರೇಷನ್ ಬಯೋ ಫ್ಯುಯೆಲ್- ಎಂಬ ಹೆಸರೂ ಇದಕ್ಕಿದೆ. ಎಥನಾಲ್ಗೆ
ಹೋಲಿಸಿದರೆ ಐಸೊಬ್ಯುಟನಾಲ್ ಹೆಚ್ಚಿನ ಇಂಧನ ಸಾಂದ್ರತೆ ಮತ್ತು ಕಡಿಮೆ ತೇವಾಂಶ ಹೀರಿಕೊಳ್ಳುವ ಗುಣವನ್ನು ಹೊಂದಿದೆ. ಹೀಗಾಗಿ, ಇದನ್ನು ಡೀಸೆಲ್ ಜತೆ ಸುಲಭವಾಗಿ ಮಿಶ್ರಣ ಮಾಡಬಹುದು. ಇದು ಎಂಜಿನ್ಗಳ ದಕ್ಷತೆ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.
ರೇಸಿಂಗ್ ಕಾರುಗಳ ಇಂಧನ!
ಐಸೊಬ್ಯುಟನಾಲ್ ಸಾಮಾನ್ಯ ವಾಹನಗಳಿಗಷ್ಟೇ ಅಲ್ಲ, ಜಗತ್ತಿನ ಅತ್ಯಂತ ವೇಗದ ರೇಸಿಂಗ್ ಕಾರುಗಳಿಗೂ ಸೂಕ್ತ ಇಂಧನ. ಇದರ ಗರಿಷ್ಠ ಆಕ್ಟೇನ್ ಮತ್ತು ಸೆಟೇನ್ ರೇಟಿಂಗ್ ಗುಣಲಕ್ಷಣಗಳಿಂದಾಗಿ ಪ್ರಮುಖ ಅಂತಾರಾಷ್ಟ್ರೀಯ ರೇಸ್ಗಳಲ್ಲಿ ಇದನ್ನು ಹೈ ಪರ್ಫಾರ್ವೆನ್ಸ್ ಇಂಧನವಾಗಿ ಬಳಸಲಾಗುತ್ತಿದೆ.
ಪರಿಸರದ ಮೇಲೇನು ಪರಿಣಾಮ?
ಡೀಸೆಲ್ ವಾಹನಗಳು ಪ್ರಮುಖವಾಗಿ ಕಣರೂಪದ ದ್ರವ್ಯಗಳನ್ನು (ಪಾರ್ಟಿಕ್ಯುಲೇಟ್ ಮ್ಯಾಟರ್ - ಪಿಎಂ 2.5) ಮತ್ತು ನೈಟ್ರೋಜನ್ ಆಕ್ಸೈಡ್ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೊರಸೂಸುತ್ತವೆ. ಇದು ನಗರ ಪ್ರದೇಶಗಳಲ್ಲಿ ತೀವ್ರ ವಾಯು ಮಾಲಿನ್ಯ ಮತ್ತು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
1.ಹಸಿರುಮನೆ ಅನಿಲ ಕಡಿತ: ಐಸೊಬ್ಯುಟನಾಲ್ ಮಿಶ್ರಿತ ಡೀಸೆಲ್ ಬಳಕೆಯಿಂದ ಕಾರ್ಬನ್ ಮೊನಾಕ್ಸೈಡ್ ಮತ್ತು ಹೈಡ್ರೋಕಾರ್ಬನ್ ಹೊರಸೂಸುವಿಕೆ ಗಣನೀಯವಾಗಿ ಕಡಿಮೆಯಾಗುತ್ತದೆ.
2.ತ್ಯಾಜ್ಯ ನಿರ್ವಹಣೆ: ಕೃಷಿ ತ್ಯಾಜ್ಯಗಳನ್ನು ಸುಡುವುದರಿಂದ (ಉದಾಹರಣೆಗೆ, ಪಂಜಾಬ್ ಮತ್ತು ಹರಿಯಾಣದಲ್ಲಿ ಭತ್ತದ ಕಡ್ಡಿ ಸುಡುವುದು) ಉಂಟಾಗುವ ವಾಯು ಮಾಲಿನ್ಯದ ಬಗ್ಗೆ ನಿಮಗೆ ಗೊತ್ತೇ ಇದೆ. ಈ ತ್ಯಾಜ್ಯಗಳನ್ನು ಐಸೊಬ್ಯುಟನಾಲ್ ಉತ್ಪಾದನೆಗೆ ಬಳಸಿಕೊಳ್ಳುವ ಮೂಲಕ ವಾಯುಮಾಲಿನ್ಯ ತಡೆಯಬಹುದು.
3.ಸ್ವಚ್ಛ ನಗರಗಳು: ಮೆಟ್ರೋ ನಗರಗಳಲ್ಲಿ ವಾಯು ಗುಣಮಟ್ಟದ ಸೂಚ್ಯಂಕ (ಎಕ್ಯೂಐ) ಸುಧಾರಿಸಲು ಇದು ದೀರ್ಘಾವಧಿಯಲ್ಲಿ ನೆರವಾಗಲಿದೆ.
ಕೇಂದ್ರ ಸರ್ಕಾರದ ಉದ್ದೇಶ
ಭಾರತದಲ್ಲಿ ಬಳಕೆಯಾಗುವ ಒಟ್ಟು ಸಾರಿಗೆ ಇಂಧನದಲ್ಲಿ ಡೀಸೆಲ್ ಸಿಂಹಪಾಲು ಹೊಂದಿದೆ. ಟ್ರಾ್ಯಕ್ಟರ್ ಮತ್ತಿತರ ಕೃಷಿ ಉಪಕರಣಗಳು, ಸರಕು ಸಾಗಣೆ ಲಾರಿಗಳು, ಬಸ್ಗಳು, ರೈಲ್ವೆ ಮುಂತಾದವು ಪ್ರಮುಖವಾಗಿ ಡೀಸೆಲ್ಅನ್ನೇ ಅವಲಂಬಿಸಿವೆ. ಆದ್ದರಿಂದ, ಡೀಸೆಲ್ ಬಳಕೆಯನ್ನು ಪರಿಸರಸ್ನೇಹಿಯಾಗಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.
ವಿವಿಧ ಪ್ರಯೋಜನಗಳು
ಆಮದು ವೆಚ್ಚ ಕಡಿತ: ಭಾರತ ತನಗಾಗುವ ಕಚ್ಚಾ ತೈಲದ ಅವಶ್ಯಕತೆಯಲ್ಲಿ ಶೇ. 80ಕ್ಕಿಂತ ಹೆಚ್ಚು ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಡೀಸೆಲ್ಗೆ ಐಸೊಬ್ಯುಟನಾಲ್ ಮಿಶ್ರಣ ಮಾಡುವುದರಿಂದ ಪ್ರತಿ ವರ್ಷ ಸಾವಿರಾರು ಕೋಟಿ ರೂ.ಗಳ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ.
ಕಾರ್ಬನ್ ಹೊರಸೂಸುವಿಕೆ ನಿಯಂತ್ರಣ: ಜಾಗತಿಕ ಹವಾಮಾನ ಬದಲಾವಣೆ ಸಮ್ಮೇಳನಗಳಲ್ಲಿ ಭಾರತ ನೀಡಿದ ಭರವಸೆಯಂತೆ, 2070ರ ವೇಳೆಗೆ ನೆಟ್ ಜೀರೋ ಕಾರ್ಬನ್ ಹೊರಸೂಸುವಿಕೆ ಗುರಿಯನ್ನು ತಲುಪಲು ಈ ಯೋಜನೆ ಸಹಕಾರಿಯಾಗಿದೆ.
ರೈತರ ಆದಾಯ ವೃದ್ಧಿ: ಐಸೊಬ್ಯುಟನಾಲ್ ಉತ್ಪಾದನೆಗೆ ಕೃಷಿ ತ್ಯಾಜ್ಯ, ಒಣ ಗಿದ ಹುಲ್ಲು, ಕಬ್ಬಿನ ಉಪ ಉತ್ಪನ್ನಗಳನ್ನು ಬಳಸುವುದರಿಂದ ಕೃಷಿ ತ್ಯಾಜ್ಯಕ್ಕೂ ಉತ್ತಮ ಬೆಲೆ ಸಿಕ್ಕಂತಾಗುತ್ತದೆ. ಗ್ರಾಮೀಣ ಆರ್ಥಿಕತೆ ಬಲಗೊಳ್ಳುತ್ತದೆ.
ಪ್ರಮುಖ ಸವಾಲುಗಳು
ಯೋಜನೆ ಆಕರ್ಷಕವಾಗಿದ್ದರೂ, ಇದನ್ನು ತಳಮಟ್ಟದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸರ್ಕಾರ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಉತ್ಪಾದನಾ ವೆಚ್ಚ: ಪ್ರಸ್ತುತ ಐಸೊಬ್ಯುಟನಾಲ್ ಉತ್ಪಾದನಾ ತಂತ್ರಜ್ಞಾನ ಎಥನಾಲ್ಗಿಂತ ಸ್ವಲ್ಪ ದುಬಾರಿ ಯಾಗಿದೆ. ವಾಣಿಜ್ಯಿಕವಾಗಿ ಇದನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ತಂತ್ರಜ್ಞಾನದ ಸುಧಾರಣೆ ಅಗತ್ಯವಿದೆ.
ಕಚ್ಚಾ ವಸ್ತುವಿನ ನಿರಂತರ ಪೂರೈಕೆ: ವರ್ಷದ ಎಲ್ಲ ದಿನಗಳಲ್ಲೂ ಜೈವಿಕ ತ್ಯಾಜ್ಯ ಮತ್ತು ಕೃಷಿ ಉತ್ಪನ್ನಗಳು ಒಂದೇ ಪ್ರಮಾಣದಲ್ಲಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಬಲವಾದ ಪೂರೈಕೆ ಸರಪಳಿ ವ್ಯವಸ್ಥೆ ಬೇಕಾಗುತ್ತದೆ.
ತೈಲ ಕಂಪನಿಗಳ ಸಿದ್ಧತೆ: ದೇಶದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳಾದ ಐಒಸಿಎಲ್, ಬಿಪಿಸಿಎಲ್, ಎಚ್ಪಿಸಿಎಲ್ ತಮ್ಮ ಸಂಗ್ರಹಣಾ ಗೋದಾಮುಗಳು ಮತ್ತು ಬ್ಲೆಂಡಿಂಗ್ (ಮಿಶ್ರಣ) ಘಟಕಗಳನ್ನು ಆಧುನೀಕರಿಸಬೇಕಾಗುತ್ತದೆ.
ಬೆಲೆ ನಿಗದಿ: ಗ್ರಾಹಕರಿಗೆ ಹೊರೆಯಾಗದಂತೆ ಮತ್ತು ಉತ್ಪಾದಕರಿಗೂ ನಷ್ಟವಾಗದಂತೆ ಐಸೊಬ್ಯುಟನಾಲ್ ಮಿಶ್ರಿತ ಡೀಸೆಲ್ನ ಬೆಲೆಯನ್ನು ನಿಯಂತ್ರಿಸುವುದು ಸರ್ಕಾರಕ್ಕೆ ಸವಾಲಿನ ಕೆಲಸವಾಗುತ್ತದೆ.
ಮುಂದಿನ ಕಾರ್ಯತಂತ್ರಗಳು
ಈ ಯೋಜನೆಯನ್ನು ಯಶಸ್ವಿಗೊಳಿಸಲು ಕೇಂದ್ರ ಸರ್ಕಾರ ಹಂತಹಂತವಾಗಿ ಕಾರ್ಯಪ್ರವೃತ್ತವಾಗಲು ಯೋಜಿಸಿದೆ.
1.ಪ್ರಾಯೋಗಿಕ ಯೋಜನೆಗಳು: ದೇಶದ ಆಯ್ದ ಕೆಲವು ನಗರಗಳಲ್ಲಿ ಅಥವಾ ಸರ್ಕಾರಿ ಸಾರಿಗೆ ಸಂಸ್ಥೆಗಳ ಬಸ್ಗಳಲ್ಲಿ ಮೊದಲ ಹಂತದಲ್ಲಿ ಐಸೊಬ್ಯುಟನಾಲ್ ಮಿಶ್ರಿತ ಡೀಸೆಲ್ ಬಳಸಿ ಅದರ ಕಾರ್ಯಕ್ಷಮತೆಯನ್ನು ಪರೀಕ್ಷಿಸುವುದು.
2.ಸಬ್ಸಿಡಿ ಮತ್ತು ಪೋ›ತ್ಸಾಹಕಗಳು: ಐಸೊಬ್ಯುಟನಾಲ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಉದ್ಯಮಿಗಳಿಗೆ ತೆರಿಗೆ ವಿನಾಯಿತಿ ಮತ್ತು ಹಣಕಾಸಿನ ನೆರವು ನೀಡುವುದು.
3.ಸಂಶೋಧನೆ ಮತ್ತು ಅಭಿವೃದ್ಧಿ: ಕಡಿಮೆ ವೆಚ್ಚದಲ್ಲಿ ಐಸೊಬ್ಯುಟನಾಲ್ ಉತ್ಪಾದಿಸಲು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಮತ್ತು ವೈಜ್ಞಾನಿಕ ಸಂಸ್ಥೆಗಳೊಂದಿಗೆ ಜಂಟಿ ಸಂಶೋಧನೆ ನಡೆಸುವುದು.
ಆರ್ಥಿಕತೆ, ಕೃಷಿ ಮೇಲಿನ ಪ್ರಭಾವ
ಕೇಂದ್ರದ ಈ ನಿರ್ಧಾರದಿಂದಾಗುವ ಪ್ರಭಾವ ಕೇವಲ ಇಂಧನ ವಲಯಕ್ಕೆ ಸೀಮಿತವಾಗಿರದೆ, ದೇಶದ ಒಟ್ಟಾರೆ ಆರ್ಥಿಕತೆಯ ಮೇಲೆ ಬಹುಮುಖಿ ಪರಿಣಾಮ ಬೀರಲಿದೆ.
ರೈತರು ಕೇವಲ ಅನ್ನದಾತರಲ್ಲ, ಇನ್ನು ಮುಂದೆ ಅವರು ಇಂಧನದಾತರೂ ಹೌದು. ಜೈವಿಕ ಸಂಸ್ಕರಣಾಗಾರಗಳ (ಬಯೋ ರಿಫೈನರ್ಸ್) ಸ್ಥಾಪನೆ: ದೇಶದಾದ್ಯಂತ ಹೊಸ ಐಸೊಬ್ಯುಟನಾಲ್ ಉತ್ಪಾದನಾ ಘಟಕಗಳು ಸ್ಥಾಪನೆಯಾಗುವುದರಿಂದ ಕೈಗಾರಿಕಾ ವಲಯದಲ್ಲಿ ಹೂಡಿಕೆ ಹೆಚ್ಚುತ್ತದೆ.
ಉದ್ಯೋಗ ಸೃಷ್ಟಿ: ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ ಕೃಷಿ ತ್ಯಾಜ್ಯ ಸಂಗ್ರಹಣೆ, ಸಾಗಣೆ ಮತ್ತು ಸಂಸ್ಕರಣಾ ಘಟಕಗಳಲ್ಲಿ ಲಕ್ಷಾಂತರ ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಸಕ್ಕರೆ ಕಾರ್ಖಾನೆಗಳಿಗೆ ವರ: ಕಬ್ಬಿನಿಂದ ಸಕ್ಕರೆ ಉತ್ಪಾದನೆ ಮಾತ್ರವಲ್ಲದೆ, ಉಪಉತ್ಪನ್ನಗಳಿಂದ ಐಸೊಬ್ಯುಟನಾಲ್ ತಯಾರಿಸುವುದರಿಂದ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಿ, ರೈತರಿಗೆ ಸಕಾಲದಲ್ಲಿ ಬಾಕಿ ಹಣ ಪಾವತಿಸಲು ಸಾಧ್ಯವಾಗುತ್ತದೆ.
ಎಥನಾಲ್ ನೀರನ್ನು ಬೇಗನೆ ಹೀರಿಕೊಳ್ಳುವು ದರಿಂದ ಅದನ್ನು ಹೆಚ್ಚು ದಿನಗಳ ಕಾಲ ಇಡಲಾಗುವುದಿಲ್ಲ. ಆದರೆ, ಐಸೊಬ್ಯುಟನಾಲ್ ನೀರಿನೊಂದಿಗೆ ಬೆರೆಯದ ಗುಣ (ಹೈಡ್ರೋಫೋಬಿಕ್) ಹೊಂದಿರುವುದರಿಂದ, ಇದನ್ನು ವರ್ಷಗಟ್ಟಲೆ ಶೇಖರಿಸಿಟ್ಟರೂ ಇಂಧನದ ಗುಣಮಟ್ಟ ಕೆಡುವುದಿಲ್ಲ.
ಜೆಟ್ ಇಂಧನವಾಗಿಯೂ ಪರಿವರ್ತನೆ ಸಾಧ್ಯ
ಐಸೊಬ್ಯುಟನಾಲ್ಅನ್ನು ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಬಯೋ-ಜೆಟ್ ಫ್ಯುಯೆಲ್ ಆಗಿ ಸುಲಭವಾಗಿ ಪರಿವರ್ತಿಸ ಬಹುದು. ಇದರಿಂದ ಭವಿಷ್ಯದಲ್ಲಿ ವಿಮಾನಯಾನ ವಲಯದಲ್ಲೂ ಈ ಇಂಧನವನ್ನು ಬಳಸಬಹುದಾಗಿದೆ.
ಬ್ಯಾಕ್ಟೀರಿಯಾಗಳ ಕೆಲಸ
ಅತ್ಯಾಧುನಿಕ ಬಯೋಟೆಕ್ನಾಲಜಿ ನೆರವಿನಿಂದ ವಿಶೇಷವಾಗಿ ವಿನ್ಯಾಸಗೊಳಿಸಿದ ಇ-ಕೋಲಿ ಬ್ಯಾಕ್ಟೀರಿಯಾಗಳನ್ನು ಬಳಸಿ ಕೃಷಿ ತ್ಯಾಜ್ಯದಿಂದ ಅತ್ಯಂತ ವೇಗವಾಗಿ ಐಸೊಬ್ಯುಟನಾಲ್ ಉತ್ಪಾದಿಸುವ ಸಂಶೋಧನೆಗಳು ಪ್ರಗತಿಯಲ್ಲಿವೆ.
ಪ್ಲಾಸ್ಟಿಕ್ ಮುಕ್ತ ಜಗತ್ತಿಗೆ ಮುನ್ನುಡಿ
ಐಸೊಬ್ಯುಟನಾಲ್ಅನ್ನು ಕೇವಲ ಇಂಧನವಾಗಿ ಮಾತ್ರವಲ್ಲದೆ, ಪೆಟ್ರೋಕೆಮಿಕಲ್ ಉದ್ಯಮದಲ್ಲಿ ಪರಿಸರಸ್ನೇಹಿ ಪ್ಲಾಸ್ಟಿಕ್ (ಬಯೋ-ಪ್ಲಾಸ್ಟಿಕ್), ರಬ್ಬರ್ ಮತ್ತು ನೂಲು ತಯಾರಿಸಲು ಪ್ರಮುಖ ಕಚ್ಚಾವಸ್ತುವಾಗಿ ಬಳಸಬಹುದು.