ನವದೆಹಲಿ: ಏಳನೇ ವೇತನ ಆಯೋಗದ ಅವಧಿ ಈ ವರ್ಷದ ಡಿ. 31ಕ್ಕೆ ಮುಕ್ತಾಯಗೊಳ್ಳಲಿದ್ದು, 8ನೇ ವೇತನ ಆಯೋಗ ಮಾಡಬಹುದಾದ ಶಿಫಾರಸುಗಳ ಬಗ್ಗೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಲ್ಲಿ ಕುತೂಹಲ ಮನೆ ಮಾಡಿದೆ.
ಇತ್ತೀಚಿನ ವರದಿಗಳ ಪ್ರಕಾರ, ಒಂದು ವೇಳೆ ಆಯೋಗ 2.15 ಫಿಟ್ಮೆಂಟ್ ಫ್ಯಾಕ್ಟರ್ ಅಂತಿಮಗೊಳಿಸಿದರೆ, ನೌಕರರ ಮೂಲ ವೇತನ ಗಣನೀಯವಾಗಿ ಹೆಚ್ಚಾಗಲಿದ್ದು, ಬಹುತೇಕ ದುಪ್ಪಟ್ಟಾಗುವ ಸಾಧ್ಯತೆಯಿದೆ. 2025ರ ನವೆಂಬರ್ನಲ್ಲಿ ಹಣಕಾಸು ಸಚಿವಾಲಯವು 8ನೇ ವೇತನ ಆಯೋಗಕ್ಕೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. 18 ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಇದರನ್ವಯ, ಆಯೋಗವು ತನ್ನ ಶಿಫಾರಸುಗಳನ್ನು 2027ರ ಜೂನ್ ಅಥವಾ ಜುಲೈ ತಿಂಗಳ ಸುಮಾರಿಗೆ ಸರ್ಕಾರಕ್ಕೆ ಹಸ್ತಾಂತರಿಸಲಿದೆ. ಮೂಲ ವೇತನ ಶೇ. 20ರಿಂದ 35ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.
ಲೆಕ್ಕಾಚಾರ ಹೇಗೆ?: ನೌಕರರ ಸಂಬಳ ಮತ್ತು ಪಿಂಚಣಿಯನ್ನು ನಿರ್ಧರಿಸುವ ಅಂಶ ಫಿಟ್ಮೆಂಟ್ ಫ್ಯಾಕ್ಟರ್. ಉದಾಹರಣೆಗೆ, ಪ್ರಸ್ತುತ ಒಬ್ಬ ನೌಕರನ ಕನಿಷ್ಠ ಮೂಲ ವೇತನ 18,000 ರೂ. ಇದ್ದರೆ, 2.15ರ ಫಿಟ್ಮೆಂಟ್ ಫ್ಯಾಕ್ಟರ್ ಅನ್ವಯಿಸಿದಾಗ ಅದು ನೇರವಾಗಿ 38,700 ರೂ.ಗೆ ಏರಿಕೆಯಾಗಲಿದೆ. ಹಾಗೆಯೇ, 50,000 ರೂ. ಮೂಲ ವೇತನ ಪಡೆಯುವವರ ಸಂಬಳ 1,07,500 ರೂ.ಗೆ ತಲುಪಲಿದೆ. ಇದು ಕೇವಲ ಮೂಲ ವೇತನವಲ್ಲದೆ, ಅದರ ಮೇಲೆ ಲೆಕ್ಕ ಹಾಕಲಾಗುವ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ನಿವೃತ್ತಿ ಸೌಲಭ್ಯಗಳ ಮೇಲೂ ಧನಾತ್ಮಕ ಪರಿಣಾಮ ಬೀರಲಿದೆ.
ಜಾರಿ, ಬಾಕಿ ಹಣ: ಹೊಸ ವೇತನ ಶ್ರೇಣಿ 2026ರ ಜ. 1ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಬಹುದು ಎಂದು ನಿರೀಸಲಾಗಿದೆ. 8ನೇ ವೇತನ ಆಯೋಗ ವರದಿ ಸಲ್ಲಿಸಲು 18 ತಿಂಗಳ ಕಾಲಾವಕಾಶ ಪಡೆದಿರುವುದರಿಂದ, ಸರ್ಕಾರದ ಅಂತಿಮ ಅನುಮೋದನೆ ಸಿಗಲು 2027ರವರೆಗೆ ಸಮಯ ಬೇಕಾಗಬಹುದು. ಅಂತಹ ಸಂದರ್ಭದಲ್ಲಿ, 2026ರಿಂದ ಜಾರಿಯಾಗಬೇಕಿದ್ದ ಹೆಚ್ಚುವರಿ ಹಣವನ್ನು ನೌಕರರಿಗೆ "ಬಾಕಿ ಹಣ' (ಅರಿಯರ್ಸ್) ರೂಪದಲ್ಲಿ ನೀಡಲಾಗುತ್ತದೆ ಎನ್ನುತ್ತಾರೆ ತರು.
50 ಲಕ್ಷ ನೌಕರರಿಗೆ ಲಾಭ
ಈ ನಿರ್ಧಾರದಿಂದ ದೇಶದಾದ್ಯಂತ ಇರುವ ಸುಮಾರು 50 ಲಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು 69 ಲಕ್ಕೂ ಅಧಿಕ ಪಿಂಚಣಿದಾರರಿಗೆ ನೇರ ಲಾಭವಾಗಲಿದೆ. ಹಣದುಬ್ಬರ ಮತ್ತು ಜೀವನ ವೆಚ್ಚದ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಫಿಟ್ಮೆಂಟ್ ಫ್ಯಾಕ್ಟರ್ ನಿರ್ಧರಿಸಲಾಗುತ್ತದೆ. 7ನೇ ವೇತನ ಆಯೋಗದಲ್ಲಿ 2.57ರಷ್ಟು ಏಕರೂಪದ ಫಿಟ್ಮೆಂಟ್ ಫ್ಯಾಕ್ಟರ್ ನೀಡಲಾಗಿತ್ತು, ಆದರೆ ಈ ಬಾರಿ ಕೆಳ ಹಂತದ ನೌಕರರಿಗೆ ಹೆಚ್ಚಿನ ರಿಯಾಯಿತಿ ನೀಡುವ ಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ.