ಕರ್ನಾಟಕ ಮಾಧ್ಯಮ, ಮನರಂಜನಾ ವಲಯದ ಬಲವರ್ಧನೆಗೆ ಕೇಂದ್ರ-ರಾಜ್ಯ ಸರ್ಕಾರದ ಉನ್ನತ ಮಟ್ಟದ ಸಭೆ 
ದೇಶ

ಕರ್ನಾಟಕ ಮಾಧ್ಯಮ, ಮನರಂಜನಾ ವಲಯದ ಬಲವರ್ಧನೆಗೆ ಕೇಂದ್ರ-ರಾಜ್ಯ ಸರ್ಕಾರದ ಉನ್ನತ ಮಟ್ಟದ ಸಭೆ

ಬೆಂಗಳೂರು: ಕರ್ನಾಟಕದ ಮಾಧ್ಯಮ ಮತ್ತು ಮನರಂಜನಾ ವಲಯವನ್ನು ಬಲಪಡಿಸುವುದು, ಸಾಂಸ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ಸುಗಮ ವ್ಯವಹಾರಕ್ಕೆ ಅನುಕೂಲಕರ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಚಂಚಲ್ ಕುಮಾರ್ ಹಾಗೂ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನಡುವೆ ಪ್ರಮುಖ ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಪ್ರಮುಖ ನಿರ್ಧಾರಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

ವೇವ್ಸ್ 2027 ಮತ್ತು ನವೋದ್ಯಮಗಳಿಗೆ ಆದ್ಯತೆ

'ವೇವ್ಸ್ 2027' (ವಿಶ್ವ ಶ್ರವ್ಯ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ) ಕಾರ್ಯಕ್ರಮದಲ್ಲಿ ಕರ್ನಾಟಕದ ಸೃಜನಶೀಲ ಪ್ರತಿಭೆಗಳು, ಹೂಡಿಕೆ ಅವಕಾಶಗಳು ಹಾಗೂ ಮಾಧ್ಯಮ ಉದ್ಯಮಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು 'ವಿಶೇಷ ರಾಜ್ಯ ಪೆವಿಲಿಯನ್‌' ಸ್ಥಾಪಿಸುವ ಬಗ್ಗೆ ಚರ್ಚಿಸಲಾಯಿತು. ‘ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜಸ್–ಸೀಸನ್ 2’ ಮತ್ತು ವೇವ್ಸ್‌ನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸೃಜನಶೀಲ ಕ್ಷೇತ್ರದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಉತ್ತೇಜಿಸಲು ತೀರ್ಮಾನಿಸಲಾಯಿತು.

ಅಲ್ಲದೆ, 'ವೇವ್ ಎಕ್ಸ್' ಕಾರ್ಯಕ್ರಮದ ಮೂಲಕ ಕರ್ನಾಟಕ ಮೂಲದ ನವೋದ್ಯಮಗಳಿಗೆ ಆಂತರಿಕ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೇಶಿಸಲು ಅಗತ್ಯ ಸೌಲಭ್ಯ ಒದಗಿಸಲು ಮತ್ತು 'ವೇವ್ಸ್ ಬಜಾರ್'ನಲ್ಲಿ ಸ್ಥಳೀಯ ಕಂಟೆಂಟ್‌ ನಿರ್ಮಾಪಕರು, ಸ್ಟುಡಿಯೋಗಳು ಹಾಗೂ ವಿತರಕರನ್ನು ಒಳಗೊಳ್ಳಲು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲಾಯಿತು.

ಚಿತ್ರಮಂದಿರ ಹಾಗೂ ಡಿಜಿಟಲ್ ನೋಂದಣಿಗೆ ವೇಗ

ಪ್ರಾದೇಶಿಕ ಭಾಷೆಯ ಚಲನಚಿತ್ರಗಳು ಹೆಚ್ಚಿನ ಜನರನ್ನು ತಲುಪಲು ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಭಾಗಗಳಲ್ಲಿ ಕಡಿಮೆ ವೆಚ್ಚದ ಚಿತ್ರಮಂದಿರಗಳ ನಿರ್ಮಾಣವನ್ನು ಉತ್ತೇಜಿಸುವ ಕುರಿತು ಚರ್ಚೆ ನಡೆಯಿತು.

ಪ್ರೆಸ್ ಸೇವಾ ಪೋರ್ಟಲ್: ಪತ್ರಿಕಾ ಮತ್ತು ನಿಯತಕಾಲಿಕಗಳ ನೋಂದಣಿ ಕಾಯ್ದೆ-2023ರ ಅಡಿಯಲ್ಲಿ ಡಿಜಿಟಲ್ ವ್ಯವಸ್ಥೆಯ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡುವುದು.

ಐಐಎಂಸಿ ತರಬೇತಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಡಿಐಪಿಆರ್) ಅಧಿಕಾರಿಗಳಿಗೆ ಐಐಎಂಸಿ ಸಹಯೋಗದೊಂದಿಗೆ ವ್ಯವಸ್ಥಿತ ತರಬೇತಿ ನೀಡುವ ಮೂಲಕ ಸರ್ಕಾರಿ ಸಂವಹನ ವ್ಯವಸ್ಥೆ ಬಲಪಡಿಸುವುದು.

ರೈಟ್ ಆಫ್ ವೇ (Right of Way): ಕೇಬಲ್ ಆಪರೇಟರ್‌ಗಳಿಗೆ ಪಾರದರ್ಶಕ ಮತ್ತು ನಿಗದಿತ ಕಾಲಮಿತಿಯೊಳಗಿನ 'ರೈಟ್ ಆಫ್ ವೇ' ನಿಯಮ ರೂಪಿಸುವುದು.

ಸರ್ಕಾರಿ ಯೋಜನೆ ತಲುಪಿಸಲು ಡಿಜಿಟಲ್ ಮಾಧ್ಯಮ

ಇದೇ ವೇಳೆ, ಬೆಂಗಳೂರಿನ ಆಕಾಶವಾಣಿ ಕೇಂದ್ರದಲ್ಲಿ ಸಚಿವಾಲಯದ ಅಧೀನದ ವಿವಿಧ ಮಾಧ್ಯಮ ಘಟಕಗಳ ಮುಖ್ಯಸ್ಥರೊಂದಿಗೆ ಸಂವಾದ ನಡೆಸಿದ ಚಂಚಲ್ ಕುಮಾರ್ ಅವರು, "ಸರ್ಕಾರದ ಕಲ್ಯಾಣ ಯೋಜನೆಗಳು ಮತ್ತು ಸಾರ್ವಜನಿಕ ನಿಕಟ ಮಾಹಿತಿಯನ್ನು ಸಮಾಜದ ಕೊನೆಯ ವ್ಯಕ್ತಿಗೂ ತಲುಪಿಸಲು ಡಿಜಿಟಲ್ ಮಾಧ್ಯಮಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಬೇಕು" ಎಂದು ಕರೆ ನೀಡಿದರು.

ಮಾಧ್ಯಮ ಘಟಕಗಳ ಕಾರ್ಯವೈಖರಿಗೆ ಹೊಸ ದೃಷ್ಟಿಕೋನ ಮತ್ತು ನವೀನ ಆಲೋಚನೆಗಳನ್ನು ತರಲು ಯುವ ಪ್ರತಿಭೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು. ಈ ಸಭೆಯಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಕೃಷ್ಣ ಕುಮಾರ್ ನಿರಾಲಾ ಸೇರಿದಂತೆ ಇತರ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.