ಸಾಂದರ್ಭಿಕ ಚಿತ್ರ  
ದೇಶ

ನಾಳೆಯಿಂದ ಪೆಟ್ರೋಲ್, ಡೀಸೆಲ್ ಮಾರಾಟಕ್ಕೆ ಮಿತಿ ಇಲ್ಲ! ಖರೀದಿ ನಿರ್ಬಂಧ ತೆಗೆದುಹಾಕಿದ ಕೇಂದ್ರ

ಪ್ರಮುಖ ಮುಖ್ಯಾಂಶಗಳು

  • ಇಂಧನ ಖರೀದಿ ನಿರ್ಬಂಧಗಳನ್ನು ಕಡೆಗೂ ತೆಗೆದ ಕೇಂದ್ರ ಸರ್ಕಾರ
  • ದೇಶಾದ್ಯಂತ ಎಲ್ಲ ಬಂಕ್​ಗಳಲ್ಲಿ ಜು.1ರಿಂದ ಜಾರಿಗೆ
  • ತೈಲ ಪೂರೈಕೆ ಸಾಮಾನ್ಯ ಸ್ಥಿತಿಗೆ ಮರಳಿದ ಬೆನ್ನಲ್ಲೇ ಮಹತ್ವದ ನಿರ್ಧಾರ
ನವದೆಹಲಿ: ದೇಶಾದ್ಯಂತ ಪೆಟ್ರೋಲ್​ ಬಂಕ್​ಗಳಲ್ಲಿ ವಾಣಿಜ್ಯಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಕಡೆಗೂ ಕೇಂದ್ರ ಸರ್ಕಾರ ತೆಗೆದುಹಾಕಿದೆ.
ಅಮೆರಿಕ-ಇರಾನ್​ ನಡುವಿನ ಭೀಕರ ಯುದ್ಧದಿಂದ ಎದುರಾಗಿದ್ದ ತೈಲ ಬಿಕ್ಕಟ್ಟಿನ ಹಿನ್ನೆಲೆ ಜೂ.12ರಂದು ದೇಶಾದ್ಯಂತ ಪೆಟ್ರೋಲ್-ಡಿಸೇಲ್​ ಖರೀದಿ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಆದರೀಗ, ಪಶ್ಚಿಮ ಏಷ್ಯಾದ ಉದ್ವಿಗ್ನತೆ ತಣ್ಣಗಾದ ಕಾರಣ ತಾತ್ಕಾಲಿಕ ನಿರ್ಬಂಧ ಆದೇಶಗಳನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಿಂಪಡೆದಿದೆ. ಈ ಮಹತ್ವದ ನಿರ್ಧಾರವು ನಾಳೆ (ಜುಲೈ 1) ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.
ಈ ಹಿಂದೆ, ಉದ್ವಿಗ್ನತೆಯಿಂದಾಗಿ ತೈಲ ಕೊರತೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿತ್ತು. ಕೃತಕ ಕೊರತೆಯನ್ನು ತಡೆಗಟ್ಟಲು, ಪ್ರತಿ ಗ್ರಾಹಕರಿಗೆ ಅಥವಾ ವಾಹನಕ್ಕೆ ದಿನಕ್ಕೆ 200 ಲೀಟರ್ ಇಂಧನ ಮಿತಿಯನ್ನು ವಿಧಿಸಿತ್ತು. ಇದರೊಟ್ಟಿಗೆ, ಕೈಗಾರಿಕೆಗಳಿಗೆ ಮಾರಾಟವಾಗುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಚಿಲ್ಲರೆ ಬೆಲೆಗಿಂತ 40 ರೂ. ಹೆಚ್ಚಾಗಿತ್ತು. ಕೈಗಾರಿಕಾ ಅಗತ್ಯಗಳಿಗೆ ಹೆಚ್ಚಿನ ಇಂಧನ ಪೂರೈಕೆಯಾದರೆ ಕಷ್ಟದ ಸಮಯ ಎದುರಾಗಬಹುದು ಎಂಬ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.
ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಈಗ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಈ ಸಂದರ್ಭದಲ್ಲಿ, ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಇದುವರೆಗೆ ಜಾರಿಯಲ್ಲಿದ್ದ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಿರುವುದಾಗಿ ಗ್ರಾಹಕರಿಗೆ ತಿಳಿಸಿದೆ,(ಏಜೆನ್ಸೀಸ್).