ಜಂತರ್​ ಮಂತರ್​ನಲ್ಲಿ ಮುಂದುವರಿದ ಸಿಜೆಪಿ ಪ್ರತಿಭಟನೆ  
ದೇಶ

4ರಲ್ಲಿ 2 ಬೇಡಿಕೆಗಷ್ಟೇ ಕೇಂದ್ರ ತಲೆದೂಗಿದೆ! ಇವತ್ತೇ ಸಿಜೆಪಿ ತಂಡ ಅರೆಸ್ಟ್ ಆದರೂ ಹೋರಾಟ ಮಾತ್ರ ನಿಲ್ಲಿಸಬೇಡಿ: ​ದೀಪ್ಕೆ

ಪ್ರಮುಖ ಮುಖ್ಯಾಂಶಗಳು

  • ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಯಾವುದೇ ರಾಜಿ ಇಲ್ಲ ಎಂದ ಸಿಜೆಪಿ
  • ಎರಡು ಬೇಡಿಕೆಗಳಿಗೆ ಮಾತ್ರ ಕೇಂದ್ರ ಸರ್ಕಾರ ಅಸ್ತು
  • ಧರ್ಮೇಂದ್ರ ಪ್ರಧಾನ್​ ಸಚಿವ ಸ್ಥಾನಕ್ಕೆ ರಾಜೀನಾಮೆ ಹೇಳುವವರೆಗೆ ಹೋರಾಟ ನಿಲ್ಲಲ್ಲ
ನವದೆಹಲಿ: ವಿಪಕ್ಷಗಳು ಹಾಗೂ ವಿವಿಧ ಸಂಘಟನೆಗಳ ಬೆಂಬಲದ ಬೆನ್ನಲ್ಲೇ ಕಾಕ್ರೋಚ್ ಜನತಾ ಪಾರ್ಟಿ (CJP), ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದ್ದು, ಇವತ್ತೇ ನಮ್ಮ ಇಡೀ ತಂಡ ಬಂಧನವಾದರೂ ಹೋರಾಟ ಮಾತ್ರ ನಿಲ್ಲಿಸಬೇಡಿ ಎಂದು ಪ್ರತಿಭಟನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಕರೆ ನೀಡಿದೆ.   
ನೀಟ್ಟ್​ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಘೋಷಿಸುವವರೆಗೂ ನಮ್ಮ ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಬದಲಿಗೆ ಮುಂದುವರಿಯುತ್ತದೆ ಎಂದು ಸಿಜೆಪಿ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದೆ. ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡುವವರೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ನಿಲ್ಲುವ ಮಾತಿಲ್ಲ ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಅಭಿಜೀತ್ ದೀಪ್ಕೆ ಹೇಳಿದ್ದಾರೆ.
26 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ತಮ್ಮ ಉಪವಾಸವನ್ನು ಕಡೆಗೂ ಕೊನೆಗೊಳಿಸಿರುವುದು ನಮಗೂ ಸಂತಸ ತಂದಿದೆ. ವಾಂಗ್ಚುಕ್ ಅವರ ಜೀವ ದೇಶಕ್ಕೆ ಬಹಳ ಅಮೂಲ್ಯವಾದುದು. ಅವರ ಸತ್ಯಾಗ್ರಹ ನಿಂತಿರಬಹುದು. ಆದ್ರೆ, ನಮ್ಮ ಹೋರಾಟವಲ್ಲ. ಕೇಂದ್ರ ಸರ್ಕಾರ ನಮ್ಮ ನಾಲ್ಕು ಬೇಡಿಕೆಗಳಲ್ಲಿ ಎರಡನ್ನು ಮಾತ್ರ ಒಪ್ಪಿಕೊಂಡಿದೆ. ಏನೇ ಹೇಳಿದರೂ ಪ್ರಧಾನ್​ ರಾಜೀನಾಮೆಯೇ ನಮ್ಮ ಮುಖ್ಯ ಹಾಗೂ ದೊಡ್ಡ ಡಿಮಾಂಡ್​ ಎಂದಿದ್ದಾರೆ. 

ಸಚಿವರ ಸ್ಥಾನ ತ್ಯಾಗ

ನಮಗೆ ಬೇಕಿರುವುದು ಧರ್ಮೇಂದ್ರ ಪ್ರಧಾನ್ ಅವರು​ ಕೇಂದ್ರ ಶಿಕ್ಷಣ ಸಚಿವ ಸ್ಥಾನದಿಂದ ಕೆಳಗಿಳಿಯುವುದು ಅಷ್ಟೇ ಎಂದು ಸಿಜೆಪಿ ಪಟ್ಟು ಹಿಡಿದಿದೆ. ಪ್ರಧಾನ್ ರಾಜೀನಾಮೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಶಿಕ್ಷಣ ಸಚಿವರ ಸ್ಥಾನ ತ್ಯಾಗ ಹೊರತುಪಡಿಸಿ ಬೇರೆ ಯಾವುದೇ ಪರಿಹಾರವನ್ನು ನಾವು ಸ್ವೀಕರಿಸುತ್ತಿಲ್ಲ ಎಂದು ದೀಪ್ಕೆ ಸ್ಪಷ್ಟಪಡಿಸಿದ್ದಾರೆ. ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಸಿಜೆಪಿ ಕಾರ್ಯಕರ್ತರ ವಿರುದ್ಧ ಯಾವುದೇ ಕಾನೂನು ಪ್ರಕರಣಗಳನ್ನು ದಾಖಲಿಸುವುದಿಲ್ಲ ಮತ್ತು ನೀಟ್ ಪತ್ರಿಕೆ ಸೋರಿಕೆಯಿಂದ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಈ ಎರಡು ಬೇಡಿಕೆಗಳಿಗೆ ಮಾತ್ರ ಕೇಂದ್ರ ಅಸ್ತು ಎಂದಿದೆ ಎಂದರು. 

ಶಾಂತಿಯುತ ಪ್ರತಿಭಟನೆಗೆ ಕರೆ

ಮತ್ತೊಂದೆಡೆ, ದೇಶಾದ್ಯಂತ ಶಾಂತಿಯುತ ಪ್ರತಿಭಟನೆಗಳನ್ನು ಮುಂದುವರಿಸಲು ಸಿಜೆಪಿ ಕರೆ ನೀಡಿದೆ. ಕಾನೂನು ಅನುಮತಿಗಳೊಂದಿಗೆ ಪ್ರತಿಭಟನೆಗಳನ್ನು ಆಯೋಜಿಸಲು ವಿದ್ಯಾರ್ಥಿ ಸಂಘಗಳು ಮತ್ತು ಸಾರ್ವಜನಿಕ ಸಂಘಟನೆಗಳನ್ನು ಕೇಳಿಕೊಂಡಿದೆ. ವಿದ್ಯಾರ್ಥಿಗಳ ಬೇಡಿಕೆಗಳನ್ನು ಜನರ ಬಳಿಗೆ ಕೊಂಡೊಯ್ಯಬೇಕೆಂದು ಪಕ್ಷದ ನಾಯಕತ್ವ ಸೂಚಿಸಿದೆ. ಕೇಂದ್ರ ಸರ್ಕಾರದ ಜತೆ ಮುಂಬರುವ ಮಾತುಕತೆಯಲ್ಲಿ ಅಭಿಜೀತ್ ದೀಪ್ಕೆ ಏನು ಚರ್ಚಿಸಲಿದ್ದಾರೆ ಎಂಬುದು ಬಹಳ ಕುತೂಹಲ ಮೂಡಿಸಿದೆ. ಆದಾಗ್ಯೂ, ಮುಖ್ಯ ಬೇಡಿಕೆಯಾದ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಈಡೇರುವವರೆಗೆ ಜಂತರ್ ಮಂತರ್‌ನಲ್ಲಿ ತಮ್ಮ ಆಂದೋಲನವನ್ನು ಮುಂದುವರಿಸುವುದಾಗಿ ಸಿಜೆಪಿ ನಿರ್ಧರಿಸಿರುವುದು ಸದ್ಯ ಕೇಂದ್ರಕ್ಕೆ ದೊಡ್ಡ ತಲೆಬಿಸಿಯಾಗಿದೆ,(ಏಜೆನ್ಸೀಸ್).